ಸರಕಾರ ಎಷ್ಟೇ ಬೊಬ್ಬೆ ಹೊಡೆದರೂ ಜನರು ಕೇಳುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಕೋವಿಡ್ ಸಮುದಾಯದ ಮಟ್ಟದಲ್ಲೂ ವಿಜೃಂಭಿಸುತ್ತಿದೆ. ಇನ್ನು ಉಳಿದಿರುವುದು ಕಠಿಣ ಕ್ರಮ ಮಾತ್ರ.
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕೋವಿಡ್ ಪರಿಸ್ಥಿತಿ ಕೈಮೀರಿದೆ. ಕೊರೋನಾ ಎರಡನೇ ಅಲೆ ಸಿಲಿಕಾನ್ ಸಿಟಿಯಲ್ಲಿ ಸಮುದಾಯಕ್ಕೂ ಹರಡಿದೆ, ಈ ಕಾರಣಕ್ಕಾಗಿಯೇ ನಿತ್ಯವೂ ಶೇ.10ಕ್ಕೂ ಹೆಚ್ಚು ಪಾಸಿಟೀವ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಒಂದು ವೇಳೆ ಕೈಗೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಷಮವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಬೆಂಗಳೂರಿಗೆ ಮಾತ್ರ ವಿಶೇಷ ರೀತಿಯ ಕಠಿಣ ನಿಯಮ ಜಾರಿಗೆ ತರಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಲಾಗಿದೆ. ಸೋವಾರ ಬೆಂಗಳೂರು ನಗರದ ಎಲ್ಲಾ ಶಾಸಕರ ಸಭೆ ಕರೆಯಲಾಗಿದೆ. ಅದರಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಕ್ರಮಕ್ಕೆ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.
ಈಗಾಗಲೇ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ತಾಂತ್ರಿಕ ಸಲಹಾ ಸಮಿತಿಯೂ ತನ್ನ ವರದಿಯಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಲಹೆ ಮಾಡಿದೆ ಎಂದು ಡಾ.ಸುಧಾಕರ್ ಹೇಳಿದರು.
ರೆಮೆಡಿಸಿವಿರ್ ಮತ್ತು ಆಕ್ಸಿಜನ್ ಕೊರತೆ ಇಲ್ಲ
ರಾಜ್ಯದಲ್ಲಿ ರೆಮೆಡಿಸಿವಿರ್ ಔಷಧಿ ಹಾಗೂ ಆಕ್ಸಿಜನ್‌ಗೆ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸುಧಾಕರ್, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಆಕ್ಸಿಜನ್ ಕೊರತೆ ಉಂಟಾಗಿರುವ ಮಾಹಿತಿ ಇದೆ. ಆದರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆಐಾಗಿರುವ ಬಗ್ಗೆ ಯಾವುದೇ ದೂರುಗಳಿಲ್ಲ ಎಂದರು.
ಇನ್ನೊಂದು ಅಂಶವೆಂದರೆ, ಖಾಸಗಿ ಆಸ್ಪತ್ರೆಗಳು ಸಕಾಲಕ್ಕೆ ಹಣ ಪಾವತಿ ಮಾಡದಿರುವುದರಿಂದ ಆಕ್ಸಿಜನ್ ಸೂಕ್ತ ಸಮಯಕ್ಕೆ ಪೂರೈಕೆ ಆಗದಿರಬಹುದು. ಆದರೆ, ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇದಕ್ಕೆ ಕೊರತೆ ಉಂಟಾಗಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ, ರಾಜ್ಯದಲ್ಲಿ ರೆಮೆಡಿಸಿವಿರ್ ಮತ್ತು ಆಕ್ಸಿಜನ್‌ಗೆ ಕೊರತೆ ಆಗಿಲ್ಲ. ಯಾರೂ ವದಂತಿಗಳನ್ನೂ ಇಲ್ಲವೇ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು ಎಂದರು.
ಅಂಕಿ ಅಂಶಗಳನ್ನಿಟ್ಟುಕೊಂಡು ಹೇಳುವುದಾದರೆ, ರಾಜ್ಯದಲ್ಲಿ 800 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯವಿದ್ದು, ಸದ್ಯಕ್ಕೆ 200ರಿಂದ 300 ಮೆಟ್ರಿಕ್ ಟನ್ ಆಮ್ಲಜನಕ ನಮಗೆ ಬೇಕಿದೆ. ಕೇಂದ್ರ ಸರಕಾರದಿಂದ 300 ಮೆಟ್ರಿಕ್ ಟನ್ ಆಮ್ಲಜನಕ ಬಂದಿದೆ. ಇನ್ನೂ ಬೇಕೆಂದು ಕೇಳಿದರೆ ಕೊಡಲು ಕೇಂದ್ರ ಸರಕಾರ ಸಿದ್ಧವಿದೆ ಎಂದರು ಸುಧಾಕರ್.