ನೋಟ್ ಬ್ಯಾನ್ ಬ್ಲಂಡರ್‌ನಿಂದ ಆಗುವ ಅನಾಹುತಗಳ ಬಗ್ಗೆ ನಿಷ್ಠುರವಾಗಿ ಹೇಳಿದ್ದ ಡಾ. ಮನಮೋಹನ್ ಸಿಂಗ್, ಈಗ ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಖಡಕ್ ಸಲಹೆಗಳನ್ನೇ ನೀಡಿದ್ದಾರೆ.
ನವದೆಹಲಿ: ದೇಶದಲ್ಲಿ ಕೋವಿಡ್-19 ಬಿಕ್ಕಟ್ಟು ದಿನೇದಿನೆ ಬಿಗಡಾಯಿಸುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸಲಹೆ ಮಾಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ವಿರುದ್ಧ ನಮ್ಮಲ್ಲಿರುವ ದೊಡ್ಡ ಅಸ್ತ್ರವೆಂದರೆ, ಅದು ವ್ಯಾಕ್ಸಿನ್ ಮಾತ್ರ ಎಂದಿರುವ ಅವರು; ಹೆಚ್ಚು ಸಂಖ್ಯೆಯಷ್ಟು ಜನರಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಕ್ಷಿಪ್ರಗತಿಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಸದ್ಯ ದೇಶದಲ್ಲಿ ಕೋವಿಂಡ್ ಸೋಂಕಿತರ ಪ್ರಮಾಣ ಅಂಕೆಮೀರಿ ಹೆಚ್ಚಾಗುತ್ತಿದೆ. ಕೋವಿಡ್ ವಿರುದ್ದದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿರುವ ಲಸಿಕೆಗೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಬೇಕು. ಲಸಿಕೆಯ ಸಂಖ್ಯೆಯ ಬಗ್ಗೆ ನೋಡದೆ ಪ್ರತಿಯೊಬ್ಬರಿಗೂ ಲಸಿಕೆ ಹಾಕುವತ್ತ ಗಮನ ಹರಿಸಬೇಕು ಎಂದು ಮನಮೋಹನ್ ಅವರು ಪ್ರಧಾನಿಗೆ ಸಲಹೆ ಮಾಡಿದ್ದಾರೆ.
ಭಾರತವು ಸದ್ಯಕ್ಕೆ ಹೊಂದಿರುವ ಜನಸಂಖ್ಯೆಯ ಒಂದು ಸಣ್ಣ ಪ್ರಮಾಣಕ್ಕೆ ಮಾತ್ರ ಲಸಿಕೆ ಕೊಡಲಾಗಿದೆ. ಇನ್ನೂ ಬಹುದೊಡ್ಡ ಜನಸಂಖ್ಯೆಯ ಪ್ರಮಾಣಕ್ಕೆ ಚಿಕಿತ್ಸೆ ಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಕಾರ್ಯತಂತ್ರವನ್ನು ರೂಪಿಸಿಕೊಂಡು ಲಸಿಕೆ ಅಭಿಯಾನವನ್ನು ಮರು ರೂಪಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಎಲ್ಲೆ ಆಗಲಿ, ಲಸಿಕೆ, ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮುಂದಿನ ಆರು ತಿಂಗಳವರೆಗೂ ಲಸಿಕೆಯ ಬೇಡಿಕೆ ಹಾಗೂ ಪೂರೈಕೆ ಮಾಡಲಾಗುವ ಡೋಸ್ ವಿವರವನ್ನು ಕೇಂದ್ರ ಸರಕಾರ ಪ್ರಕಟಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ಕೋವಿಡ್ ಬಗ್ಗೆ ಚರ್ಚೆ ನಡೆಸಲು ದಿಲ್ಲಿಯಲ್ಲಿಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿತ್ತು. ಸಭೆಯ ನಂತರ ಮನಮೋಹನ್ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಸಿಂಗ್ ಸಲಹೆಗಳು ವೈರಲ್
ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಡಾ.ಮನಮೋಹನ್ ಸಿಂಗ್ ಅವರ ಸಲಹೆಗಳ ಪ್ರೆಸ್‌ನೋಟ್ ವೈರಲ್ ಆಗಿದೆ. ಅನೇಕರು ಈ ಹೇಳಿಕೆಯನ್ನು ಪ್ರಧಾನಮಂತ್ರಿ ಕಚೇರಿ ಹಾಗೂ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ, ಹಿರಿಯ ನಾಯಕರಾದ ಮನಮೋಹನ್ ಸಿಂಗ್ ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರಧಾನಿಯನ್ನು ಒತ್ತಾಯ ಮಾಡಿದ್ದಾರೆ.
ರಾಜಕೀಯದ ಹಿನ್ನೆಲೆಯಲ್ಲಿ ಮನಮೋಹನ್ ಅವರ ಸಲಹೆಗಳನ್ನು ನೋಡಬೇಡಿ. ಅವರ ಅನುಭವ ಹಾಗೂ ವಿತ್ತತಜ್ಞರಾಗಿ ದೇಶವನ್ನು ನೋಡುತ್ತಿರವ ಹಿನ್ನೆಲೆಯಲ್ಲಿ ಅವರ ಸಲಹೆಗಳನ್ನು ಗ್ರಹಿಸಿ. ಅವರ ಸಲಹೆಗಳನ್ನು ಪಾಲಿಸಿ ಎಂದು ಇನ್ನೊಬ್ಬರು ಡಿಮಾಂಡ್ ಮಾಡಿದ್ದಾರೆ.
ನೋಟ್ ಬ್ಯಾನ್ ಬಗ್ಗೆ ವಸ್ತುಸ್ಥಿತಿಯನ್ನು ದೇಶದ ಮುಂದೆ ಬಿಚ್ಚಿಟ್ಟ ಏಕೈಕ ನಾಯಕರಾಗಿದ್ದರು ಮನಮೋಹನ್ ಸಿಂಗ್. ಅವರು ಹೇಳಿದ್ದೆಲ್ಲವೂ ನಡೆಯಿತು. ಅವರ ಆತಂಕಗಳು ನಿಜವಾದವು. ಅವರ ಸಲಹೆಗಳನ್ನು ಉಪೇಕ್ಷೆ ಮಾಡಬೇಡಿ ಎಂದು ಟ್ವಿಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
Lead photo from Narendra Modi Facebook