ಇಷ್ಟು ದಿನ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಾಸ್ಕ್ ಧರಿಸದವರ ಮೇಲೆ ದಂಡದ ಪ್ರಹಾರ ಬೀಸುತ್ತಿದ್ದ ಅಧಿಕಾರಿಗಳು, ಇನ್ನು ಮುಂದೆ ಹಳ್ಳಿಗಳಿಗೂ ಲಗ್ಗೆ ಇಡಲಿದ್ದಾರೆ. ಅಲ್ಲಿಗೆ, ಹಳ್ಳಿಗಳಲ್ಲಿರುವ ಜನರು ಕೂಡ ಮಾಸ್ಕ್ ಹಾಕಿಕೊಂಡೇ ಓಡಾಡಬೇಕು.
ಚಿಕ್ಕಬಳ್ಳಾಪುರ: ಹಳ್ಳಿಗಳಲ್ಲಿ ಜನರು ಮಾಸ್ಕ್ ಹಾಕುತ್ತಿಲ್ಲ. ಮಾಸ್ಕ್ ಧರಿಸದವರಿಗೆ ಕಡ್ಡಾಯವಾಗಿ ದಂಡ ಹಾಕಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ದಿನ ಕನಿಷ್ಠ 10 ಜನರಿಗೆ ದಂಡ ವಿಧಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್.ಲತಾ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಚಿಂತಾಮಣಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್ 19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಅವರು.
ನಗರ ಪ್ರದೇಶಗಳಲ್ಲಿ ಪ್ರತಿ ವಾರ್ಡಗೊಂದು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಗ್ರಾಮಕ್ಕೆ ಒಂದು ಟಾಸ್ಕ್ ಫೋರ್ಸ್ ಸಮಿತಿ ಮಾಡಲಾಗಿದೆ. ಅಲ್ಲದೆ ಪ್ರತಿ ವಾರ್ಡು ಹಾಗೂ ಪ್ರತಿ ಗ್ರಾಮಕ್ಕೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಟಾಸ್ಕ್ ಫೋರ್ಸ್ ಸಮಿತಿಯು ಯೋಜನೆ ರೂಪಿಸಿಕೊಂಡು ಪ್ರತಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಬೇಕು. ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ? ದಾಖಲಾಗಿರುವ ಕೋವಿಡ್ ಪ್ರಕರಣಗಳು ಎಷ್ಟು? ಸಕ್ರಿಯ ಪ್ರಕರಣಗಳು ಎಷ್ಟು? ಎಂಬ ಎಲ್ಲ ಮಾಹಿತಿಯನ್ನು ಪಡೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್ ಸೋಂಕು ತಗುಲಿದವರ ಸಂಪರ್ಕಕ್ಕೆ ಬಂದ ಪ್ರಥಮ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕ ಹೋಮ್ ಐಸೋಲೇಷನ್ ತಂಡವನ್ನು ರಚಿಸಿ ಪ್ರಥಮ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ವಹಿಸಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು, ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮ ಸಹಾಯಕರು/ಸಿಬ್ಬಂದಿಯನ್ನು ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿಗದಿತ ಗುರಿಯಂತೆ 45 ವರ್ಷ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆ ಹಾಕಿಸಬೇಕು. ಅಧಿಕ ರಕ್ತದೊತ್ತಡ, ಮಧುಮೇಹ ಇನ್ನಿತರೆ ಯಾವುದೇ ಕಾಯಿಲೆಗಳಿದ್ದರೂ ಸಹ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಲಸಿಕೆ ಪಡೆದಿರುವ ಊರಿನ ಹಿರಿಯರು ಜನಪ್ರತಿನಿಧಿಗಳ ಉದಾಹರಣೆ ನೀಡಿ ಲಸಿಕೆ ಪಡೆದುಕೊಳ್ಳಲು ಸ್ವಇಚ್ಛೆಯಿಂದ ಮುಂದೆ ಬರುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು ಜಿಲ್ಲಾಧಿಕಾರಿ.
ಲಸಿಕೀಕರಣದ ಜತೆಗೆ ನಿಗದಿತ ಗುರಿಯಂತೆ ಗಂಟಲು ದ್ರವ ಪರೀಕ್ಷೆಗೆ ಹೆಚ್ಚೆಚ್ಚು ಜನರನ್ನು ನಿಯೋಜಿಸಬೇಕು. ಎಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಬರದಂತೆ ಹಾಗೂ ಯಾವುದೇ ಕಾರಣಕ್ಕೂ ಕೋವಿಡ್ ಸಾವು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಅವರು ಸೂಚಿಸಿದರು.
ಕೋವಿಡ್ ಕರ್ತವ್ಯಕ್ಕೆ ಶಾಲಾ ಶಿಕ್ಷಕರು
ಸ್ಥಳೀಯವಾಗಿ ಶಿಕ್ಷಕರಿಗೆ ಎಲ್ಲ ಮಾಹಿತಿ ಇರುವುದರಿಂದ ಹಾಗೂ 9ನೇ ತರಗತಿಯವರಿಗೆ ಪಠ್ಯ ಚಟುವಟಿಕೆಗಳು ನಡೆಯುತ್ತಿಲ್ಲವಾದ್ದರಿಂದ 10ನೇ ತರಗತಿಗೆ ಪಾಠ ಮಾಡುವ ಶಿಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲ ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಿ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕನಿಷ್ಠ 60 ಜನ ಸರಕಾರಿ ಶಾಲಾ ಶಿಕ್ಷಕರು ಲಭ್ಯವಿದ್ದು, ಆ ಎಲ್ಲಾ ಶಿಕ್ಷಕರನ್ನ ಕೋವಿಡ್ ಜಾಗೃತಿ ಹಾಗೂ ಲಸಿಕೀಕರಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ನೋಟಿಸ್ ನೀಡದೆ ಶಿಸ್ತುಕ್ರಮ
ಜನರ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಆದ್ದರಿಂದ ಕೋವಿಡ್ ನಿಯಂತ್ರಣಕ್ಕೆ ತಮ್ಮೆಲ್ಲರಿಗೆ ಕಾರ್ಯ ಹಂಚಿಕೆ ಮಾಡಿರುವ ರೀತಿಯಲ್ಲಿ ಸಮನ್ವಯತೆ ಸಾಧಿಸಿ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಕೊಟ್ಟಿರುವ ಗುರಿಯನ್ನು ಸಾಧಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಯಾವುದೇ ಮಾಹಿತಿ ಅಥವಾ ನೊಟೀಸ್ ನೀಡದೆ ಶಿಸ್ತು ಕ್ರಮ ಜರುಗಿಸಲಾಗುವುದು, ಅಂತಹ ಸ್ಥಿತಿಯನ್ನು ತಂದುಕೊಳ್ಳಬೇಡಿ ಎಂದು ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಹತ್ತು ದಿನಗಳ ಹಿಂದೆ ಮೂವತ್ತು-ನಲವತ್ತು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಪ್ರಸ್ತುತ ಪ್ರತಿದಿನ ನೂರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇದ್ದರೂ ಸಹ ನಿರ್ಲಕ್ಷಿಸುವಂತಿಲ್ಲ. ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ತಾಲೂಕುಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು ಈ ಭಾಗದಲ್ಲಿ ಹೆಚ್ಚು ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಡಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಸುವರ್ಣ ಅವಕಾಶ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ; “ಟಾಸ್ಕ್ ಫೋರ್ಸ್ ಸಮಿತಿಗಳು ಮತದಾರರ ಪಟ್ಟಿಯನ್ನು ಇಟ್ಟುಕೊಂಡು ಯಾರಿಗೆ ಲಸಿಕೆ ಹಾಕಲಾಗಿದೆ? ಯಾರಿಗೆ ಲಸಿಕೆ ಹಾಕಲಾಗಿಲ್ಲ? ಎಂಬ ಮಾಹಿತಿ ಕಲೆಯಾಕಿ ಲಸಿಕೆ ಪಡೆಯದೆ ಉಳಿದ 45 ವರ್ಷ ಮೇಲ್ಪಟ್ಟವರಿಗೆ 3 ದಿನಗಳ ಒಳಗಾಗಿ ಲಸಿಕೆ ಹಾಕಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಪ್ರತಿಯೊಬ್ಬರೂ ಕೋವಿಡ್ ಕರ್ತವ್ಯವನ್ನು ತಮ್ಮ ಸೇವಾ ಅವಧಿಯಲ್ಲಿ ಸಿಕ್ಕಿರುವ ಸುವರ್ಣ ಅವಕಾಶವೆಂದು ಭಾವಿಸಿ ಕಾರ್ಯ ನಿರ್ವಹಿಸಬೇಕು” ಎಂದರು.
ತಮ್ಮ ಗ್ರಾಮ, ವಾರ್ಡ್ ವ್ಯಾಪ್ತಿಯಲ್ಲಿ ಬರುವ ಅಂಗಡಿ, ಹೋಟೆಲ್ʼಗೆ ಬರುವ ಜನರು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾರ್ಕಿಂಗ್ ಮಾಡಿಸಬೇಕು. ಮೇ ತಿಂಗಳಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಂಭವ ಇರುವುದರಿಂದ ಯಾವುದೇ ಜಾತ್ರೆಗಳು ನಡೆಯದಂತೆ ಕ್ರಮ ವಹಿಸಬೇಕು. ಅನುಮತಿ ಪಡೆದು ನಡೆಯುವ ವಿವಾಹ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕೋವಿಡ್ ನಿಯಮಗಳನ್ನು ಪಾಲಿಸದ ಅಂಗಡಿ, ಹೋಟೆಲ್ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕೇಸು ದಾಖಲಿಸಿ ದಂಡ ವಿಧಿಸಬೇಕು” ಎಂದು ಎಸ್‌ಪಿ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮಾತನಾಡಿ; “ಕೋವಿಡ್ ಕರ್ತವ್ಯವನ್ನು ನಿರ್ವಹಿಸಬೇಕಾದರೆ ಯಾವುದೇ ಪ್ರತಿರೋಧ ಎದುರಾದಲ್ಲಿ ಕೂಡಲೇ ಉನ್ನತ ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆಯನ್ನು ಪರಿಹರಿಸಬೇಕು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ತಹಶೀಲ್ದಾರರುಗಳು ಒಗ್ಗಟ್ಟಿನಿಂದ ಕೆಲಸ ಮಾಡಿ ತಮ್ಮ ಅಧೀನ ಸಿಬ್ಬಂದಿ ಕಾರ್ಯವೈಖರಿ ಕುರಿತು ನಿಗಾವಹಿಸಬೇಕು. ಹೆಚ್ಚು ಜನ ದಟ್ಟಣೆ ಇರುವ ಮಾರ್ಕೆಟ್ʼಗಳು, ಸಂತೆಗಳು, ರಸ್ತೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಕ್ರಮ ವಹಿಸಬೇಕು” ಎಂದರು.
ಸಭೆಯಲ್ಲಿ ಉಪ ವಿಭಾಗಧಿಕಾರಿ ರಘುನಂದನ್, ಚಿಂತಾಮಣಿ ತಹಸಿಲ್ದಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಣಾಧಿಕಾರಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.