ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಆರ್.ಲತಾ; ಕೋವಿಡ್ ವ್ಯವಸ್ಥೆ ಬಗ್ಗೆ ತೀವ್ರ ಪರಿಶೀಲನೆ
ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕೋವಿಡ್ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಗುರುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ವೈದ್ಯರು ಹಾಗೂ ನಾನ್ ಕೋವಿಡ್ ರೋಗಿಗಳನ್ನು ಮಾತನಾಡಿಸಿದ ಅವರು, ಅಲ್ಲಿನ ಕುಂದು ಕೊರತೆಗಳನ್ನು ತೀವ್ರವಾಗಿ ಪರಿಶೀಲಿಸಿದರು.
ಬಳಿಕ ಅಸ್ಪತ್ರೆಯ ಹಾಗೂ ನಗರಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೇರೆ ರೋಗಿಗಳಿಗೆ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ತೊಂದರೆ, ವಿಳಂಬ ಆಗಬಾರದು. ಆಸ್ಪತ್ರೆಯಲ್ಲಿ ಯಾವುದೇ ಔಷಧಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇನ್ನೂ ಸ್ಟಾಕ್ ಇರುವಾಗಲೇ ಅಗತ್ಯ ಔಷಧಗಳನ್ನು ತರಿಸಿಕೊಳ್ಳಬೇಕು. ಎಲ್ಲಾ ವಾರ್ಡ್‌ಗಳು, ಶೌಚಾಲಯ ಸೇರಿದಂತೆ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತೆ ಕಾಯ್ದುಕೊಳ್ಳಬೇಕು. ಕೊರೊನಾದ ಈ ಸಂದರ್ಭದಲ್ಲಿ ಯಾರಿಗೂ ರಜೆ ನೀಡಬಾರದು. ವೈದ್ಯರು ಸೇರಿದಂತೆ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು ಎಂದು ಜಿಲ್ಲಾಸ್ಪತ್ರೆ ಸರ್ಜನ್ ಅವರಿಗೆ ತಾಕೀತು ಮಾಡಿದರು.
ಕೋವಿಡ್ ಸಾವುಗಳು ಹೆಚ್ಚಾಗದಿರಲಿ
ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರ ಜತೆಗೆ ಜಿಲ್ಲೆಯಲ್ಲಿ ಎಲ್ಲೂ ಕೋವಿಡ್ ಸಾವು ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು. ಜಿಲ್ಲಾಸ್ಪತ್ರೆಗೆ ಬರುವ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೊನಾ ಲಸಿಕೆ ಹಾಕಬೇಕು. ಇದಕ್ಕಾಗಿ ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೂ ಕಡ್ಡಾಯವಾಗಿ ಲಸಿಕೆ ಕೇಂದ್ರ ತೆರೆದಿರಬೇಕು. ಒಂದು ವೇಳೆ ಸಮಯ ಮುಗಿದ ನಂತರ ಬಂದರೆ ಅವರಿಗೂ ಲಸಿಕೆ ಹಾಕಬೇಕು. ಯಾವುದೇ ಕಾರಣಕ್ಕೂ ಯಾರನ್ನೂ ವಾಪಸ್ ಕಳುಹಿಸಬಾರದು. ಚಿಕಿತ್ಸೆ ಲಸಿಕೆಗೆ ಸಂಬಂಧಿಸಿದಂತೆ ಏನೇ ಮಾಹಿತಿ ಇದ್ದರೂ, ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಇದೇ ವೇಳೆ ಆಸ್ಪತ್ರೆಯ ಕೋವಿಡ್(ಸಾರಿ) ವಾರ್ಡ್ ಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ರಮೇಶ್, ಆರ್ʼಎಂಒ ಡಾ.ವಿಜಯಾ, ಫಿಜಿಷಿಯನ್ ಡಾ.ಸಂದೀಪ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.