Lead Photo by Habib from Pexels / ಇದು ಸಾಂದರ್ಭಿಕ ಚಿತ್ರ ಮಾತ್ರ
ದೇಶ ಸೇವೆ ಮಾಡಿ ನಿವೃತ್ತರಾಗಿದ್ದ ಮಾಜಿ ಯೋಧರೊಬ್ಬರಿಗೆ ಸರಕಾರದಿಂದ ಭೂ ಮಂಜೂರು ಮಾಡುವ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ರಾಜಸ್ವ ನಿರೀಕ್ಷಕರೊಬ್ಬರು ಎಸಿಬಿ ಬಲೆಗೆ ಬಿದ್ದಿದಾರೆ.
ಬೆಂಗಳೂರು: ಮಾಜಿ ಸೈನಿಕರೊಬ್ಬರಿಗೆ ಸರಕಾರಿ ಕೆಲಸ ಮಾಡಿಕೊಡಲು ಎರಡು ಲಕ್ಷ ಡಿಮಾಂಡ್ ಮಾಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ರಾಜಸ್ವ ನಿರೀಕ್ಷಕ (ಕಂದಾಯ ಅಧಿಕಾರಿ-ಆರ್‌ಐ) ಒಬ್ಬರು ಶುಕ್ರವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಏಪ್ರಿಲ್ 22ರಂದು, ಅಂದರೆ ಶುಕ್ರವಾರ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತಂಡ ನಡೆಸಿದ ಕಾರ್ಯಾಚರಣೆ ವೇಳೆ ವೇಣುಗೋಪಾಲ್ ಸಿಕ್ಕಿಬಿದ್ದಿದ್ದು, ಅವರಿಂದ ಸ್ಥಳದಲ್ಲೇ 1 ಲಕ್ಷ ರೂ. ಲಂಚದ ಹಣ ಜಪ್ತಿ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ..
ಏನಿದು ಪ್ರಕರಣ?
ಬೆಂಗಳೂರು ನಗರದ ಕಲ್ಯಾಣ ನಗರದ ಮೂಲದ ಮಾಜಿ ಸೈನಿಕರೊಬ್ಬರು ತಮಗೆ ನ್ಯಾಯಯುತವಾಗಿ ಧಕ್ಕಬೇಕಾದ ಸರಕಾರಿ ಭೂಮಿ ಮಂಜೂರಾತಿ ಮಾಡಿಕೊಡಲು ಕೋರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಆ ಮಾಜಿ ಯೋಧನಿಗೆ ಸರಕಾರದಿಂದ ಜಮೀನು ಮಂಜೂರಾತಿ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವ ಬಗ್ಗೆ ಬಶೆಟ್ಟಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕರಿಗೆ ಅರ್ಜಿಯನ್ನು ಜಿಲ್ಲಾಧಿಕಾರಿ ಕಚೇರಿಯಿಂದ ವರ್ಗಾಯಿಸಲಾಗಿತ್ತು. ಆದರೆ, ಈ ವರದಿ ನೀಡುವ ಕುರಿತು ತಮ್ಮ ಕೆಲಸ ಮಾಡಿಕೊಡಲು ವೇಣುಗೋಪಾಲ್ ಅವರು ದೂರುದಾರರಿಂದ 2 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇದರಿಂದ ಬೇಸತ್ತ ಮಾಜಿ ಯೋಧರು ಅನ್ಯ ಮಾರ್ಗವಿಲ್ಲದೆ ಎಸಿಬಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಎಸಿಬಿಯು ಎಲ್ಲ ದಾಖಲೆಗಳನ್ನು ಕಲೆ ಹಾಕಿತಲ್ಲದೆ, ಶುಕ್ರವಾರ ವೇಣುಗೋಪಾಲ್ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಅವರಿಂದ 1 ಲಕ್ಷ ರೂ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ವೇಣುಗೋಪಾಲ್ ಅವರನ್ನು ಎಸಿಬಿ ವಶಕ್ಕೆ ತೆಗೆದುಕೊಂದಿಡ್ಡು, ಅವರ ವಿರುದ್ಧ ಪ್ರಕರಣ ದಾಖಲು ಮಾಡಿದೆ. ಜತೆಗೆ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸಿಬಿ ಮಾಹಿತಿ ನೀಡಿದೆ.