ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ವರ್ಗಗಳಿಗೆ ಮೂಲಭೂತ ಹಕ್ಕು ಮತ್ತು ಸೌಲಭ್ಯ ಅವಕಾಶಗಳನ್ನು ದೊರಕಿಸಿಕೊಡಲಾಗುವುದು. ಬಡತನ ನಿವಾರಣೆ ಈ ಯೋಜನೆಯ ಉದ್ದೇಶ.
ಚಿಕ್ಕಬಳ್ಳಾಪುರ: ಸಮಾಜದಲ್ಲಿನ ಬಡತನ ನಿರ್ಮೂಲನೆಗೆ ಸರಕಾರ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಬಡವರು ಅಭಿವೃದ್ಧಿಯಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಬೈರಪ್ಪ ಶಿವಲಿಂಗ ನಾಯಿಕ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ 2015ರಲ್ಲಿ ಬಡತನ ನಿರ್ಮೂಲನೆಗೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ವರ್ಗಗಳಿಗೆ ಮೂಲಭೂತ ಹಕ್ಕು ಮತ್ತು ಸೌಲಭ್ಯ ಅವಕಾಶಗಳನ್ನು ದೊರಕಿಸಿಕೊಡಲಾಗುವುದು. ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾನೂನು ನೆರವು ಮತ್ತು ಸೇವೆಗಳನ್ನು ಬಲಪಡಿಸುವುದು. ಜಿಲ್ಲಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯರು, ನ್ಯಾಯವಾದಿಗಳು, ಸಮಾಜ ಸೇವಕರು, ಅರೆಕಾಲಿಕ ಕಾನೂನು ಸ್ವಯಂ ಸೇವಕರು ಮತ್ತು ಕಾನೂನು ನೆರವು ಕೇಂದ್ರಗಳ ವಿದ್ಯಾರ್ಥಿಗಳ ಮೂಲಕ ಈ ಯೋಜನೆ ಅರಿವು ಮೂಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ನ್ಯಾ.ಬೈರಪ್ಪ ಶಿವಲಿಂಗ ನಾಯಿಕ ಅವರು ತಿಳಿಸಿದರು.
ಬಡತನ ನಿರ್ಮೂಲನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಭಾಗ್ಯಲಕ್ಷ್ಮೀ ಯೋಜನೆ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಸತಿ ರಹಿತ ಜನರಿಗೆ ವಸತಿ ಸೌಲಭ್ಯ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಮೈಕ್ರೋ ಕ್ರೆಡಿಟ್ ಕಿರುಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ, ಉದ್ಯಮ ಶೀಲತಾ ಯೋಜನೆ, ನೇರಸಾಲ ಯೋಜನೆಯಿಂದ ಬಡವರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು ನ್ಯಾಯಾಧೀಶರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರ ಬೇಡಿಕೆಗೆ ಅನುಗುಣವಾಗಿ ಕೂಲಿ ನೀಡಲಾಗುತ್ತಿದೆ. ಈ ಪೈಕಿ ಜಿಲ್ಲೆಯಲ್ಲಿ ಒಟ್ಟು 2,07,669 ಅರ್ಜಿಗಳು ಸ್ವೀಕೃತವಾಗಿದ್ದು, ಎಲ್ಲಾ ಅರ್ಜಿಗಳು ವಿಲೇವಾರಿ ಆಗಿವೆ. ಇದಕ್ಕಾಗಿ ಒಟ್ಟು 25,495 ಲಕ್ಷ ರು. ಬಿಡುಗಡೆಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಸತಿ ಯೋಜನೆ, ತೋಟಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ತೋಟಗಾರಿಕಾ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಮಗ್ರ ತೋಡಗಾರಿಕೆ ಅಭಿವೃದ್ಧಿ ಯೋಜನೆ, ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗ ಸಮಗ್ರ ನಿಯಂತ್ರಣ ಯೋಜನೆ, ಮಧುವನ ಮತ್ತು ಜೇನು ಸಾಕಾಣಿಕೆ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ನ್ಯಾ.ಬೈರಪ್ಪ ಶಿವಲಿಂಗ ನಾಯಿಕ, ನ್ಯಾ.ಎಚ್.ದೇವರಾಜು
ಇದಲ್ಲದೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮೈಕ್ರೋ ಸಾಲ ವೈಯುಕ್ತಿಕ ಕೋವಿಡ್ 19 ಯೋಜನೆ, ಶ್ರಮಶಕ್ತಿ ಯೋಜನೆ, ಮೈಕ್ರೋ ಸಾಲ ಯೋಜನೆ, ಕಾರು, ಟ್ಯಾಕ್ಸಿ ಯೋಜನೆ, ಅರಿವು ಯೋಜನೆ, ವೃತ್ತಿ ಪ್ರೋತ್ಸಾಹ/ ಸ್ವಯಂ ಉದ್ಯೋಗ ಸಹಾಯ ಧನ ಯೋಜನೆ, ಉದ್ಯಮ ಶೀಲತಾ ಯೋಜನೆ, ನೇರ ಸಾಲ, ಗೃಹ ನಿರ್ಮಾಣ ಮಾರ್ಜಿನ್ ಹಣ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಎಲ್ಲಾ ಯೋಜನೆಗಳನ್ನು ಸದುಯೋಗಪಡೆದುಕೊಳ್ಳಬೇಕು ಎಂದು ಅವರು ಕೋರಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೆರೆಗೆ ಸಮಾಜದಲ್ಲಿ ಬಡತನ ನಿರ್ಮೂಲನಾ ಯೋಜನೆ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆಗೆ ಸಭೆ ನಡಸಲಾಗಿದೆ ಎಂದು ಇದೇ ವೇಳೆ ನ್ಯಾಯಾಧೀಶರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಎಚ್.ದೇವರಾಜು ಅವರು ಉಪಸ್ಥಿತರಿದ್ದರು.