Ra Na Gopala Reddy Bagepalli
ಬಾಗೇಪಲ್ಲಿ: ಕೊರೊನಾ ಕಟ್ಟಿ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಘೋಷಣೆ ಮಾಡಿರುವ ವಾರಾಂತ್ಯ (ವೀಕೆಂಡ್) ಲಾಕ್ಡೌನ್ʼಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಾಗೇಪಲ್ಲಿ ತಾಲೂಕಿನ ಬಹುತೇಕ ಕಡೆ ಎಲ್ಲವೂ ಸ್ತಬ್ಧಗೊಂಡಿತ್ತು. ಪಟ್ಟಣದ ಪ್ರಮುಖ ವೃತ್ತ, ರಸ್ತೆ, ಬೀದಿಗಳು ಬಿಕೋ ಎನ್ನುತ್ತಿವೆ. ಬೆಳಗ್ಗೆ 6ರಿಂದ 10ರವರೆಗೂ ಅಗತ್ಯ ವಸ್ತು ಖರೀದಿಗಷ್ಟೇ ಮನೆಯಿಂದ ಹೊರಬಂದಿದ್ದ ಜನರು, ಡೆಡ್ಲೈನ್ ಸಮೀಪಿಸುತ್ತಿದ್ದಂತೆ ಮನೆ ಸೇರಿಕೊಂಡಿದ್ದಾರೆ.
ವಾರಾಂತ್ಯ ಕರ್ಫ್ಯೂ ವೇಳೆ ಅನಗತ್ಯ ಓಡಾಟಕ್ಕೆ ತಡೆ ಹಾಕಲಾಗಿದ್ದು, ಹೊರಗೆ ಬಂದವರ ಬಳಿ ಪೋಲಿಸರು ದಂಡ ವಸೂಲಿ ಮಾಡುತ್ತಿದ್ದರು.
ಹಾಲು, ತರಕಾರಿ ಮುಂತಾದ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆಯವರೆಗೆ ಅವಕಾಶ ಕೊಡಲಾಗಿತ್ತು. ಹೀಗಾಗಿ ಜನರು ಬೆಳಗ್ಗೆಯೇ ಅಗತ್ಯ ಸಾಮಾನುಗಳನ್ನು ಖರೀದಿಸಲು ಸರತಿಯಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಎರಡು ದಿನಗಳ ಅಘೋಷಿತ ಲಾಕ್‌ಡೌನ್‌ನಿಂದ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಬಹುದು, ಇಲ್ಲವೇ ಲಭ್ಯವಾಗದೆ ಇರಬಹುದೆಂಬ ಕಾರಣದಿಂದ ಜನರು ದಿನಸಿ ಅಂಗಡಿ, ತರಕಾರಿ ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು.
ರಸ್ತೆಯಲ್ಲಿ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಅನಗತ್ಯ ಹೊರಬರದಂತೆ ಪೊಲೀಸರು ಎಚ್ಚರಿಕೆ ನೀಡಿ ಕಳಿಸುತ್ತಿರುವ ದೃಶ್ಯ ಕಂಡು ಬಂದಿತು.