ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೂತಲಪಾಟಿ ವೆಂಕಟರಮಣ (ಎನ್.ವಿ.ರಮಣ) ಅವರು ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.
ಶನಿವಾರ ಬೆಳಗ್ಗೆ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ರಮಣ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈವರೆಗೆ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ನ್ಯಾ. ಎಸ್.ಎ.ಬೊಬ್ಡೆ ಅವರು ಶುಕ್ರವಾರ ನಿವೃತ್ತಿಯಾಗಿದ್ದರು.
63 ವರ್ಷದ ನ್ಯಾ.ಎನ್.ವಿ.ರಮಣ ಅವರು 26 ಅಗಸ್ಟ್ 2022ರವರೆಗೂ ಅಧಿಕಾರದಲ್ಲಿ ಇರುತ್ತಾರೆ.
ಮೂಲತಃ ಆಂಧ್ರ ಪ್ರದೇಶದವರು
ನ್ಯಾ.ರಮಣ ಅವರು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ವಿರುಲಪಾಡು ಮಂಡಲದ ಪೊನ್ನವರಂ ಗ್ರಾಮದಲ್ಲಿ 1957ರ ಅಗಸ್ಟ್ 27ರಂದು ಜನಿಸಿದ ನ್ಯಾ.ರಮಣ ಅವರು 2000 ಇಸವಿ ಜೂನ್ ತಿಂಗಳಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್ಗೆ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ವಿಶೇಷವೆಂದರೆ, ನ್ಯಾ.ರಮಣ ಅವರ ಜನ್ಮದಿನ ಅಗಸ್ಟ್ 26. ಅವರು 2022 ಅಗಸ್ಟ್ 26ರಂದು, ಅಂದರೆ ತಮ್ಮ ಜನ್ಮದಿನಕ್ಕೆ (ಅಗಸ್ಟ್ 27) ಒಂದು ದಿನ ಮೊದಲು ಮುಖ್ಯ ನ್ಯಾಯಮೂರ್ತಿ ಪದವಿಯಿಂದ ನಿವೃತ್ತರಾಗಲಿದ್ದಾರೆ.
ನಂತರ ಅವರು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2014 ಫೆಬ್ರವರಿಯಲ್ಲಿ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದರು.
ಪತ್ರಕರ್ತರೂ ಹೌದು!
ನ್ಯಾ.ಎನ್.ವಿ.ರಮಣ ಅವರು ಪತ್ರಕರ್ತರೂ ಹೌದು. ತಮ್ಮ ನ್ಯಾಯಾಂಗದ ವೃತ್ತಿಜೀವನ ಆರಂಭಿಸುವ ಮುನ್ನ ಅವರು ತೆಲುಗಿನ ದೈನಿಕ ಈನಾಡು ಪತ್ರಿಕೆಯಲ್ಲಿ ಎರಡು ವರ್ಷ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಮಾತೃಭಾಷೆಯೂ ಆದ ತೆಲುಗಿನ ಮೇಲೆ ಅವರಿಗೆ ಅಗಾಧ ಹಿಡಿತವಿದೆ. ಮಾತೃಭಾಷೆಯಲ್ಲಿ ಸಂಭಾಷಣೆ ನಡೆಸಲು ಅವರು ತುಂಬಾ ಇಷ್ಟಪಡುತ್ತಾರೆ ಎನ್ನಲಾಗಿದೆ. 1983ರಲ್ಲಿ ಅವರು ವಕೀಲಿ ವೃತ್ತಿಗೆ ಬಂದರು.
ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ಅತಿಥಿಗಳು ಮಾತ್ರ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮುಂತಾದವರು ಉಪಸ್ಥಿತರಿದ್ದರು.