ಬೆಂಗಳೂರು: ಕೋವಿಡ್ ಹುಚ್ಚೆದ್ದು ಕುಣಿಯುತ್ತಿರುವ ಹೊತ್ತಿನಲ್ಲಿಯೇ ಹೊರಬಿದ್ದರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಶಾಕ್ ನೀಡಿದೆ.
ರಾಜ್ಯದಲ್ಲಿ ಅನಿಯಂತ್ರಿತವಾಗಿ ಹಬ್ಬುತ್ತಿರುವ ಸೋಂಕಿನ ನಡುವೆಯೂ ನಡೆದ ಮತದಾನವು ಬಹುತೇಕ ಆಡಳಿತಾರೂಢ ಪಕ್ಷಕ್ಕೇ ಅನುಕೂಲವಾಗಿರುತ್ತದೆ ಎಂಬ ʼಕೆಲವರʼ ನಿರೀಕ್ಷೆಗಳ ನಡುವೆಯೇ ಬಿಜೆಪಿ ಸೋತು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗೆಲುವಿನ ನಗೆ ಬೀರಿವೆ.
ಬಳ್ಳಾರಿ ಮಹಾನಗರ ಪಾಲಿಕೆ ಸೇರಿ ರಾಜ್ಯದ 10 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದರೆ, ಜೆಡಿಎಸ್ ಸಾಧನೆ ತೃಪ್ತಿಕರವಾಗಿದೆ. ಬಿಜೆಪಿ ಮಾತ್ರ ನಿರೀಕ್ಷೆಗಳನ್ನು ಹುಸಿ ಮಾಡಿ ಹಿಂದಕ್ಕೆ ಬಿದ್ದಿದೆ.
ಹಾಗಾದರೆ; ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಚುನಾವಣೆ ಮೇಲೆ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಭಾವ ಇರುತ್ತದಾ? ಎಂಬ ಪ್ರಶ್ನೆ ಈಗೆದ್ದಿದೆ. ರಾಜಕೀಯ ಪಕ್ಷಗಳ ಚಿಹ್ನೆಗಳ ಮೇಲೆಯೇ ನಡೆದ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಳೀಯ ಸಂಸ್ಥೆಗಳ ಪೈಕಿ 7 ಕಡೆ ಕಾಂಗ್ರೆಸ್ ಜಯಭೇರಿ ಭಾರಿಸಿದೆ.
ಬಳ್ಳಾರಿ ಮಹಾನಗರ ಪಾಲಿಕೆ
ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್ ಅವರಿರುವ ಬಳ್ಳಾರಿಯ ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. ಒಟ್ಟು 39 ವಾರ್ಡುಗಳ ಪೈಕಿ ಕಾಂಗ್ರೆಸ್ 29ರಲ್ಲಿ ಗೆದ್ದಿದ್ದರೆ, ಬಿಜೆಪಿ 13 ಕಡೆ ಗೆದ್ದಿದೆ. ಇಲ್ಲಿ ಜೆಡಿಎಸ್ ಸಾಧನೆ ಶೂನ್ಯ. ಬಳ್ಳಾರಿಯ ಸೋಲು ಬಿಜೆಪಿಗೆ ದೊಡ್ಡ ಆಘಾತವಾಗಿದೆ ಮಾತ್ರವಲ್ಲದೆ, ಕಾಂಗ್ರೆಸ್ ಪಾಲಿಗೆ ಬಿಗ್ ಬ್ರೇಕ್‌ಥ್ರೂ ಆಗಿದೆ ಎನ್ನಬಹುದು.
ರಾಮನಗರ ನಗರಸಭೆ
ರಾಮನಗರ ನಗರಸಭೆ ನಗರಸಭೆಯಲ್ಲಿ ಬಿಜೆಪಿ ಖಾತೆ ತೆರೆಯಲಾಗಿಲ್ಲ. ಇದು ಕಾಂಗ್ರೆಸ್ ವಶಕ್ಕೆ ಹೋಗಿದೆ. ಕೈಗೆ ಸ್ಪಷ್ಟ ಬಹುತವೂ ಸಿಕ್ಕಿದೆ. ಒಟ್ಟು 31 ವಾರ್ಡ್ಗಳ ಪೈಕಿ ಕಾಂಗ್ರೆಸ್ 19 ಕಡೆ, ಜೆಡಿಎಸ್ 11 ವಾರ್ಡ್ನಲ್ಲಿ ಜಯ ಗಳಿಸಿವೆ. ಇನ್ನು ಒಂದು ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರೆ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಉಸ್ತುವಾರಿಯ ಬಿಜೆಪಿ ಒಂದು ವಾರ್ಡ್ನಲ್ಲೂ ಖಾತೆ ತೆರೆದಿಲ್ಲ.
ಗುಡಿಬಂಡೆಯಲ್ಲಿ ಕಾಂಗ್ರೆಸ್
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರಸ್ ಜಯಭೇರಿ ಸಾಧಿಸಿದೆ. ಈ ಚುನಾವಣೆ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಗುಡಿಬಂಡೆ ಕಡೆ ತಲೆ ಹಾಕಿಲ್ಲ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳೆಲ್ಲವೂ ಉಸ್ತುವಾರಿ ಸಚಿವರ ಹುಟ್ಟೂರು ಪೆರೇಸಂದ್ರ ದಾಟಿಬರದೇ ಇದ್ದದ್ದೂ ಜನರ ಆಕ್ರೋಶಕ್ಕೆ ಕಾರಣ ಆಗಿರಬಹುದು. ಒಟ್ಟು 11 ವಾರ್ಡುಗಳಲ್ಲಿ ಕಾಂಗ್ರೆಸ 6 ಕಡೆ ಗೆದ್ದರೆ, ಜೆಡಿಎಸ್ 2 ವಾರ್ಡುಗಳಲ್ಲಿ ಜಯ ಗಳಿಸಿದೆ.
ಚನ್ನಪಟ್ಟಣದಲ್ಲಿ ಜೆಡಿಎಸ್
ಇನ್ನು ಜೆಡಿಎಸ್ ಭದ್ರಕೋಟೆಗಳಲ್ಲಿ ಒಂದಾಗಿದ್ದ ಚನ್ನಪಟ್ಟಣದಲ್ಲಿ ಜೆಡಿಎಸ್ ಅಧಿಕಾರ ಉಳಿಸಿಕೊಂಡಿದೆ. ಒಟ್ಟು 31 ವಾರ್ಡುಗಳಲ್ಲಿ 16ಕಡೆ ಜೆಡಿಎಸ್ ಗೆಲುವು ಸಾಧಿಸಿದೆ. ಇನ್ನೂ ಬಿಜೆಪಿ 7 ಕಡೆ ಗೆದ್ದರೆ, ಕಾಂಗ್ರೆಸ್ ಕೂಡ 7 ವಾರ್ಡುಗಳಲ್ಲಿ ಜಯ ಗಳಿಸಿದೆ.
ಭದ್ರಾವತಿಯಲ್ಲಿ ಕಾಂಗ್ರೆಸ್
ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 35 ವಾರ್ಡ್ಗಳ ಪೈಕಿ 18 ವಾರ್ಡ್ಗಳಲ್ಲಿ ಜಯ ಗಳಿಸಿದೆ. ಬಿಜೆಪಿ 4 ಕಡೆ ಮಾತ್ರ ಗೆದ್ದಿದೆ. ಇನ್ನು 11 ಕಡೆ ಗೆದ್ದಿರುವ ಜೆಡಿಎಸ್ ಕಮಲ ಪಾಳಯಕ್ಕೆ ಬಲವಾದ ಸಡ್ಡು ಹೊಡೆದಿದೆ.
ತೀರ್ಥಹಳ್ಳಿಯಲ್ಲೂ ಬಿಜೆಪಿ ಇಲ್ಲ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದ ಇನ್ನೊಂದು ತಾಲೂಕು ತೀರ್ಥಹಳ್ಳಿಯಲ್ಲೂ ಬಿಜೆಪಿಗೆ ಶಾಕ್ ಆಗಿದೆ. ಕಳೆದ 25 ವರ್ಷಗಳಿಂದ ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 15 ವಾರ್ಡ್ಗಳ ಪೈಕಿ 9ರಲ್ಲಿ ಕಾಂಗ್ರೆಸ್ ಗೆದ್ದರೆ, ಬಿಜೆಪಿ 6 ವಾರ್ಡ್ಗಳಲ್ಲಿ ಮಾತ್ರ ಗೆದ್ದಿದೆ.
ಬೇಲೂರು ಕೂಡ ಕಾಂಗ್ರೆಸ್‌ಗೆ
ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನ ಜಿಲ್ಲೆಯ ಬೇಲೂರು ಪುರಸಭೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಜಯಭೇರಿ ಭಾರಿಸಿದೆ. 25 ವಾರ್ಡ್ಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು, 5 ವಾರ್ಡ್ʼಗಳಲ್ಲಿ ಮಾತ್ರ ಜೆಡಿಎಸ್ ಗೆಲುವು ಸಿಕ್ಕಿದೆ. ಇನ್ನು, ಒಂದು ಕಡೆಯಷ್ಟೇ ಬಿಜೆಪಿ ಗೆದ್ದಿದೆ.
ಮಡಿಕೇರಿಯಲ್ಲಿ ಮಾತ್ರ ಕಮಲ
ಸಮಾಧಾನಕರ ಸಂಗತಿ ಎಂದರೆ, ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದೆ. 23 ಸ್ಥಾನಗಳ ಪೈಕಿ ಬಿಜೆಪಿ 16 ಕಡೆ ಗೆದ್ದು ಬೀಗಿದೆ. ಆದರೆ ಅಚ್ಚರಿ ಎಂಬಂತೆ ಎಸ್‌ಡಿಪಿಐ 5 ಕಡೆ ಜಯಿಸಿದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಲಾ 1 ಕಡೆ ಮಾತ್ರ ಗೆಲುವು ಸಾಧಿಸಿವೆ.
ಬೀದರ್‌ನಲ್ಲೂ ಹಿಂದೆ ಬಿದ್ದ ಬಿಜೆಪಿ
ಇನ್ನು, ಒಟ್ಟು 35 ಸ್ಥಾನಗಳ ಬೀದರ್ ನಗರಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಆದರೆ, 15 ಕಡೆ ಗೆದ್ದಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 15, ಬಿಜೆಪಿ 8, ಜೆಡಿಎಸ್ 7, ಎಐಎಂಐಎಂ 2 ಮತ್ತೂ ಆಮ್ʼಆದ್ಮಿ ಪಕ್ಷ ಒಂದೆಡೆ ಗೆದ್ದಿದೆ. ಈ ಪೈಕಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನೆರಡು ವಾರ್ಡುಗಳಲ್ಲಿ ಚುನಾವಣೆ ನಡೆದಿಲ್ಲ. ಆದರೆ, ಅಧಿಕಾರಕ್ಕೇರಲು ಕಾಂಗ್ರೆಸ್ ಪ್ರಯತ್ನಗಳನ್ನು ಶುರು ಮಾಡಿದೆ.