SPECIAL STORY
DG Pavan Kalyan Bagepalli
ಚಿಕ್ಕಬಳ್ಳಾಪುರ ಜಿಲ್ಲೆ ಐತಿಹಾಸಿಕ ಶ್ರೀಮಂತಿಕೆ ಮತ್ತು ಅವಿಚ್ಛಿನ್ನ ಚರಿತ್ರೆ ಹೊಂದಿರುವ ಅಪರೂಪದ ತಾಣ. ಜಿಲ್ಲೆಯು ಆವತಿ ನಾಡಪ್ರಭುಗಳ ಸಹಕಾರ ಸಹ ಹೊಂದಿತ್ತು ಎಂದು ಇತಿಹಾಸದ ಮೂಲಕ ತಿಳಿದುಬರುತ್ತದೆ. ಆವತಿ ನಾಡಪ್ರಭುಗಳು ವಿಜಯನಗರದ ಅರಸರ ಸಾಮಂತರಾಗಿ ಜಿಲ್ಲೆಯಲ್ಲಿ ಹಲವು ಪಾಳೆಪುಟಗಳನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದರು. ಅದರಲ್ಲಿ ಗುಮ್ಮನಾಯಕನ ಪಾಳ್ಯದ ಕೋಟೆಯೂ ಒಂದು. ಜತೆಗೆ, ನಂದಿಬೆಟ್ಟದ ಕೋಟೆ, ಚಿಕ್ಕಬಳ್ಳಾಪುರ ಕೋಟೆ, ಗುಡಿಬಂಡೆ ಕೋಟೆ, ದೇವಿಕುಂಟೆ ಕೋಟೆ, ಸಾದಲಿ ಕೋಟೆ, ಬುರುಡುಗುಂಟೆ ಕೋಟೆ, ಅಬ್ಲೂರು ಕೋಟೆ, ಸುಗಟೂರು ಕೋಟೆ, ಶಿಡ್ಲಘಟ್ಟ ಕೋಟೆ, ಹರಿಪುರ ಕೋಟೆಗಳು ಕೂಡ ಸೇರಿದ್ದವು.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ತೊಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಮ್ಮನಾಯಕನ ಪಾಳ್ಯ ಕೋಟೆಯು ಪಾಳೇಗಾರರ ಮನೆತನಗಳಲ್ಲಿ ಒಂದು. ಗುಮ್ಮನಾಯಕನ ಪಾಳ್ಯದಲ್ಲಿ ಜಿಲ್ಲೆಯ ಪ್ರಥಮ ಏಳುಸುತ್ತಿನ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಸುಮಾರು 700 ವರ್ಷಗಳ ಕಾಲ ಪಾಳೆಗಾರರು ಆಡಳಿತ ನಡೆಸಿದ್ದಾರೆ. ಇವರು ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಗೆ ಸೇರಿದವರು. ಈ ಕೋಟೆಯು ಕ್ರಿ.ಶ.1242ರಲ್ಲಿ ತಲೆಎತ್ತಿದೆ. ಇದರ ಮೂಲ ಪುರುಷ ʼಖಾದ್ರಿಪತಿ ನಾಯಕʼ ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಇವರ ನಂತರದ ʼಲಕ್ಕ ನಾಯಕʼ ಕ್ರಿ.ಶ.1364ರಲ್ಲಿ ಬೆಟ್ಟದ ಸುತ್ತಲು ಕೋಟೆ & ಬುರುಜುಗಳನ್ನು ಕಟ್ಟುವುದರ ಮೂಲಕ ಊರಿಗೆ ತನ್ನ ಅಣ್ಣ ʼಗುಮ್ಮರೆಡ್ಡಿ ನಾಯಕʼನ ಹೆಸರನ್ನೇ ಇಟ್ಟ. ಪಾತಪಾಳ್ಯದ ಬಳಿ ಇರುವ ಕಾಮಸಾನಪಲ್ಲಿ ಗ್ರಾಮದ ʼಗುಮ್ಮರೆಡ್ಡಿʼ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರಿಂದ ಅವರ ನೆನಪಿಗಾಗಿ ಪಾಳೆಯಗಾರರು ನಿರ್ಮಿಸಿದ ಕೋಟೆಗೆ ʼಗುಮ್ಮನಾಯಕನ ಕೋಟೆʼ ಎಂದು ನಾಮಕರಣ ಮಾಡಿದರು. ಈ ಕೋಟೆಯನ್ನು ಆಳ್ವಿಕೆ ಮಾಡಿದ ಪಾಳೇಗಾರರ ಪೈಕಿ ʼಚಿನ್ನಮ್ಮ ನಾಯಕʼ, ʼಗುಮ್ಮ ನಾಯಕʼ, ʼದೊಡ್ಡ ವಸಂತನಾಯಕʼ, ʼಇಮ್ಮಡಿ ಕದಿರಪ್ಪನಾಯಕʼ, ʼಸಿಂಗಪ್ಪ ನಾಯಕʼರು ಪ್ರಖ್ಯಾತರಾಗಿದ್ದರು ಎಂದು ಚೆರಿತ್ರೆಯ ಪುಟಗಳು ಹೇಳುತ್ತವೆ.
ಏಳುಸುತ್ತಿನ ಕೋಟೆಯ ವೈಭವ
ಮೊದಲನೇ ಕೋಟೆಯ ಪ್ರಾರಂಭದಲ್ಲಿ ಶಾಪಗ್ರಸ್ತ ಬಾವಿಯಿದ್ದು, ವಿಶಾಲವಾಗಿ ನಿರ್ಮಿಸಿ ಸ್ನಾನದ ಗೃಹಗಳನ್ನು ನಿರ್ಮಿಸಿದ್ದಾರೆ. ಈ ಬಾವಿಯ ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿದ್ದು. ಪೂರ್ವದ ಬಾಗಿಲಿಗೆ ವಿಶೇಷವಾದ ಶಿಲ್ಪ ಕಲೆಯಿದೆ. ಪಾಳೆಯಗಾರರ ಧಾರ್ಮಿಕತೆಗೆ ಮತ್ತು ಕಲೆಗೆ ನೀಡಿದ್ದ ಮಹತ್ವದ ಸಾಕ್ಷಿಯೇ ಗುಮ್ಮನಾಯಕನ ಪಾಳ್ಯದಲ್ಲಿರುವ ಐತಿಹಾಸಿಕ ಶ್ರೀ ಸೀತಾರಾಮ ಲಕ್ಷ್ಮಣ ಹನುಮಂತ ದೇವಾಲಯ. ಈ ದೇವಾಲಯದ ಸುತ್ತಲೂ ರಾಮಾಯಣ ಮತ್ತು ಮಹಾ ಭಾರತದ ಘಟನೆಗಳನ್ನು ಸಾರುವ ಕಲ್ಲಿನ ಕೆತ್ತನೆಯ ಉಬ್ಬು ಶಿಲ್ಪಗಳಿಂದ ಕೂಡಿದ್ದ ಪ್ರತಿಮೆಗಳನ್ನು ಒಳಗೊಂಡಿದೆ. ರಾಮ ಮತ್ತು ಸೀತೆಯ ವಿವಾಹ ಮಹೋತ್ಸವ ಚಿತ್ರಗಳು ಎಲ್ಲರನ್ನೂ ಆಕರ್ಷಿಸುತ್ತದೆ.
ಎರಡನೇ ಸುತ್ತಿನ ಕೋಟೆ ವಿವಿಧ ರೀತಿಯ ಸುತ್ತ ಕೋಟೆಯ ಅವಶೇಷಗಳನ್ನು ಮತ್ತು ವಿವಿಧ ಸ್ಮಾರಕಗಳನ್ನು ನೋಡಬಹುದು.
ಮೂರನೇ ಸುತ್ತಿನ ಕೋಟೆಯ ಒಳಗಡೆ ಕಲ್ಲು-ಕಂಬಗಳಿಂದ ನಿರ್ಮಾಣ ಮಾಡಿರುವ ಆಂಜನೇಯ ಸ್ವಾಮಿಯ ದೇವಸ್ಥಾನವಿದೆ. ದೇವರಿಗೆ ಕವಚ ಪಾದಗಳನ್ನು ಪಾಳೆಯಗಾರರ ಕಾಣಿಕೆಯಾಗಿ ನೀಡಿದ್ದು, ದೇವರ ಬಲ ಪಾದ ಮಾತ್ರ ಬೆಟ್ಟದ ಕೆಳಗಿರುವ ಸೇತುವೆ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಕಾಣಬಹುದು.
ನಾಲ್ಕನೇ ಕೋಟೆ ಆವರಣ ವಿಶಾಲವಾಗಿದ್ದು, ಕೋಟೆಯ ಬಳಿ ಉದ್ಭವಮೂರ್ತಿ ಶ್ರೀ ವೆಂಕಟರಮಣ ಸ್ವಾಮಿಯ ಅವತಾರದ ಶಂಕು-ಚಕ್ರ ಮತ್ತು ತಿರುನಾಮಗಳನ್ನು ಕಾಣಬಹುದು. ಈ ಆವರಣದಲ್ಲಿಯೇ ಆನೆ ಕಟ್ಟುತ್ತಿದ್ದ ಲಾಯದ ಸ್ಥಳ, ಮಂತ್ರಿಗಳು ಸಮಾಲೋಚನೆ ನಡೆಸುತ್ತಿದ್ದ ಗುಪ್ತಸ್ಥಳ, ಪಾಳೆಗಾರರು ವಿಹರಿಸುತಿದ್ದ ಬುರುಜು, ಹುಣಸಮಾರಮ್ಮನವರ ದೇವಾಲಯ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆ, ನೀರು ಶೇಕರಿಸುತಿದ್ದ ಟ್ಯಾಂಕ್ ಮತ್ತು ಬಾವಿಗಳನ್ನು ಕಾಣಬಹುದು. ಈ ಕೋಟೆ ಬಾಗಿಲಿಗೆ ಕಿರು ಬಾಗಿಲಿದ್ದು ರಾತ್ರಿ ವೇಳೆ ಕಾವಲು ಕಾಯುವವರಿಗಾಗಿ ಅದನ್ನು ನಿರ್ಮಿಸಲಾಗಿದೆ.
ಐದನೇ ಸುತ್ತಿನ ಕೋಟೆಯಲ್ಲಿ ಪಾಳೆಗಾರರ ಆರಾಧ್ಯ ದೇವರಾದ ಶ್ರೀ ನರಸಿಂಹಸ್ವಾಮಿ ಉದ್ಭವ ಮೂರ್ತಿಯನ್ನು ಕಾಣಬಹುದು. ಅದನ್ನು ವೀಕ್ಷಿಸಲು ಮುಖವಿಟ್ಟಾಗ ಮದ್ದುಗುಂಡಿನ ವಾಸನೆ ಈಗಲೂ ಮೂಗಿಗೆ ಬಡಿಯುತ್ತದೆ. ವಿಶಾಲವಾದ ದೊರಲ ಬಾವಿ ಕಾಣುತ್ತದೆ. ಈ ಬಾವಿಯ ಬಳಿ ಶಾಸನವೂ ಇದೆ.
ಆರನೇ ಸುತ್ತಿನ ಕೋಟೆಯಲ್ಲಿ ಮದ್ದು ಗುದ್ದು ಶೇಖರಣೆ ಮಾಡುತಿದ್ದ ಕೊಠಡಿಯನ್ನು ಕಾಣಬಹುದು. ಅದನ್ನು ವೀಕ್ಷಿಸಲು ಮುಖವಿಟ್ಟಾಗ ಮದ್ದು ಗುಂಡಿನ ವಾಸನೆ ಈಗಲೂ ಮೂಗಿಗೆ ಬಡಿಯುತ್ತದೆ. ವಿಶಾಲ ದೊರಲ ಬಾವಿಯೂ ಕಾಣಿಸುತ್ತದೆ. ಈ ಬಾವಿಯ ಬಳಿ ಬಂಡೆಯ ಮೇಲೆ ಶಾಸನವಿದೆ.
ಏಳನೇ ಕೋಟೆಯಲ್ಲಿ ವಿಶಾಲವಾದ ಬಂಡೆಯ ಮೇಲೆ ಎರಡು ದೊಡ್ಡ ಕಲ್ಲುಗಳಿದ್ದು ಪಾಳೆಯಗಾರರು ಅಲ್ಲಿಂದ ಶತ್ರುಗಳನ್ನು ನೋಡಲು ಆಗಲೇ ಬೈನಾಕ್ಯೂಲರ್ ಉಪಕರಣಗಳನ್ನು ಉಪಯೋಗಿಸುತ್ತಿದ್ದರು. ಈ ಬಂಡೆಯ ಮೇಲೆ ಸೈನಿಕರು ತುಪಾಕಿಗಳಿಗೆ ಮದ್ದು ತಯಾರಿಸಲು ಉಪಯೋಗಿಸುತ್ತಿದ್ದ ತಟ್ಟೆಯಾಕರದ ಅಗಲವಾದ ಕುರುಹುಗಳನ್ನೂ ಕಾಣಬಹುದು.
ಇದರ ಸಮೀಪದಲ್ಲಿ ನೀರಿನ ಕರ್ಣಿಕಲ ದೊಣೆ ಇದೆ. ಬೆಟ್ಟದ ಮೇಲಿನ ಕೋಟೆಯನ್ನು ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಲಾಗಿದೆ. 10 ಹೆಜ್ಜೆಗೆ ಒಬ್ಬರಂತೆ ಸೈನಿಕರು ಪಿರಂಗಿಗಳನ್ನು ಇಟ್ಟು ಕೋಟೆ ಕಾವಲು ಕಾಯುವುದು, ರಂಧ್ರಗಳಿಂದ ಶತ್ರುಗಳನ್ನು ಹಿಮ್ಮೆಟ್ಟಿಸಲು ಅಲ್ಲಲ್ಲಿ 5 ಅಡಿ ಅಗಲ 10 ಅಡಿ ಉದ್ದದ ವಿಸ್ತೀರ್ಣವನ್ನು ಹೊಂದಿದ ರಂಧ್ರಗಳನ್ನೂ ಕಾಣಬಹುದು.
ಟಿಪ್ಪು ಸುಲ್ತಾನನ ದಾಳಿ
ಮೈಸೂರು, ಶ್ರೀರಂಗಪಟ್ಟಣವನ್ನು ಆಳಿದ ಟಿಪ್ಪು ಸುಲ್ತಾನನ ಆಡಳಿತದ ಸಮಯದಲ್ಲಿ ಆತನ ದಾಳಿಗೆ ಸಿಲುಕಿದ ಪಾಳೆಯಗಾರರು ತಮ್ಮಲ್ಲಿದ್ದ ಅಪರೂಪದ ಚಿನ್ನಾಭರಣ, ವಜ್ರವೈಢೂರ್ಯಗಳ ಅಪಾರ ಖಜಾನೆಯನ್ನು ಕೇರಳದ ತಿರುವುನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರಪಡಿಸಿದರು ಎಂದು ದಾಖಲೆ ಇದೆ ಎನ್ನುತ್ತಾರೆ ಗುಮ್ಮನಾಯಕನ ಪಾಳ್ಯ ಕೋಟೆಯ ಪೂರ್ವಿಕರಾದ ಅಹೋರಾತ್ರ.
ಇಂತಹ ಐತಿಹಾಸಿಕ ಮಹತ್ತ್ವ ಹೊಂದಿರುವ ಗುಮ್ಮನಾಯಕನ ಪಾಳ್ಯ ಕೋಟೆಯ ಚರಿತ್ರೆಗೆ ಆಧಾರವಾದ ಹಲವಾರು ಶಾಸನಗಳು ವಿವಿಧ ರೀತಿಯ ಕೆತ್ತನೆಗಳು ಕುರುಹುಗಳು ಸಂಶೋಧನೆಗೆ ಒಳಪಡದೇ ಇರುವುದು ತುಂಬಾ ಬೇಸರ ಸಂಗತಿ. ಇಲ್ಲಿನ ಶಾಸನಗಳು ತೆಲುಗು ಲಿಪಿಯಲ್ಲಿದ್ದು, ಈ ಶಾಸನಗಳನ್ನು ಸಂಶೋಧನೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎನ್ನುತ್ತಾರೆ ಹರೀಶ್ ವಿ.ಪಾಳ್ಯಕೆರೆ ಅವರು.
ಗುಮ್ಮನಾಯಕನ ಪಾಳ್ಯ ಕೋಟೆಯ ರಾಜರು ವಿಜಯನಗರ ಸಾಮ್ರಾಜ್ಯದ ಅರಸರಿಗೆ ಕಪ್ಪ ಕಾಣಿಕೆ ವಸೂಲಿ ಮಾಡಿಕೊಡುತ್ತಿದ್ದುದರ ಜತೆಗೆ ತಮ್ಮದೇ ಆದ ಚಾರಿತ್ರಿಕ, ಸಾಂಸೃತಿಕ ಹಿನ್ನೆಲೆಯನ್ನು ಹೊಂದಿದ್ದರು. ಆ ಚಹರೆಗಳೆಲ್ಲವನ್ನೂ ಗುಮ್ಮನಾಯಕ ಪಾಳ್ಯ ಬಿಂಬಿಸುತ್ತದೆ.
ಇಂದು ಜನ ಪ್ರತಿನಿಧಿಗಳು, ವಿದ್ಯಾವಂತರು ಐತಿಹಾಸಿಕ ಸ್ಥಳಗಳ, ಸ್ಮಾರಕಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವುದು ತುಂಬಾ ಬೇಸರ ಸಂಗತಿಯಾಗಿದೆ. ಅನಕ್ಷರಸ್ಥರೂ ಧಾರ್ಮಿಕವಾಗಿ ಹಾಗೂ ಪುರಾತನ ಸ್ಮಾರಕಗಳನ್ನು ಸಂಪತ್ತನ್ನು ಕಾಪಾಡಲು ಪ್ರಯತ್ನ ಮಾಡುತ್ತಿದ್ದರೆ, ಎಲ್ಲವನ್ನೂ ಬಲ್ಲವರು ಈ ಐತಿಹಾಸಿಕ ಶ್ರೀಮಂತಿಕೆಯನ್ನು ವಿಸ್ಮರಿಸಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಐತಿಹಾಸಿಕ ಸ್ಮಾರಕಗಳನ್ನು ಕಾಪಾಡಬೇಕು ಎನ್ನುತ್ತಾರೆ ವಿಕಾಸ್ ಕಾಲೇಜ್‌ನ ಪ್ರಾಂಶುಪಾಲ ಪಿ.ಎನ್.ಶಿವಣ್ಣ.
ಗುಮ್ಮನಾಯಕನ ಪಾಳ್ಯ ಕೋಟೆಗೆ 12ನೇ ಶತಮಾನದಿಂದ 19ನೇ ಶತಮಾನದ ಮಧ್ಯಕಾಲದವರಗೆ ಇತಿಹಾಸವಿದೆ. ಈ ಅವಿಚ್ಛಿನ್ನವಾದ ಚರಿತ್ರೆ ಹಾಗೂ ಕಲೆ ವಾಸ್ತಶಿಲ್ಪವನ್ನು ಸಂರಕ್ಷಿಸಿಕೊಳ್ಳಬೇಕಾದ ಅಗತ್ಯ ತುಂಬಾ ಇದೆ. ಈ ಜಾಗವನ್ನು ಐತಿಹಾಸಿಕ, ಪಾರಂಪರಿಕ ತಾಣವಾಗಿ ಉಳಿಸಿಕೊಳ್ಳಬೇಕಾದ ಅಗತ್ಯದ ಜತೆಗೆ, ಇದನ್ನು ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿ ಮಾಡಬೇಕಿದೆ ಸ್ಥಳೀಯರೂ ಆದ ಬರಹಗಾರ ಎಂ.ಎಲ್.ನರಸಿಂಹ ಮೂರ್ತಿ.
- ಈ ಲೇಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಡಿ.ಜಿ ಪವನ್ ಕಲ್ಯಾಣ್ I ಓದಿದ್ದು ಇಂಗ್ಲೀಷ್ ಲಿಟರೇಚರ್. ಹವ್ಯಾಸ ಇತಿಹಾಸ ಮತ್ತು ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ ಕೋಟೆಯ ಕುರಿತು ಆಳವಾದ ಶೋಧ ಮಾಡುತ್ತಿದ್ದಾರೆ.
ಗುಮ್ಮಾನಾಯಕನ ಪಾಳ್ಯ ಇತಿಹಾಸ ಸಂಶೋಧನೆಗೆ ಅನುಮತಿ ನೀಡಿ ಇನ್ನು ಮಾಹಿತಿ ಹುಡುಕಿ ಹಿತಿಹಾಸ ಪುಟ್ಟ ಸೇರಿಸಬೇಕು ಸರಕಾರ, ಕರ್ನಾಟಕದಲ್ಲಿ ಇಂತಹ ಹಿತಿಹಾಸ ಎಲೆ ಮರೆ ಕಾಯಿಯಂತೆ ಇವೆ