ಬಾಗೇಪಲ್ಲಿ: ಕರ್ನಾಟಕ ಪ್ರಾಂತ್ಯ ಕೃಷಿಕಾರರ ಸಂಘ, ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ತಾಲ್ಲೂಕಿನ ನೆಟ್ಟಕುಂಟಪಲ್ಲಿ, ಚಿನ್ನಗಾನಪಲ್ಲಿ ಮುಂತಾದ ಗ್ರಾಮಗಳಲ್ಲಿ ಮನರೇಗಾ ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದ ಸ್ಥಳದಲ್ಲಿ ಶನಿವಾರ ವಿಶ್ವ ಕಾರ್ಮಿಕ ದಿನಾಚರಣೆಯನ್ನುಆಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ; ಪ್ರಪಂಚದಲ್ಲಿ ಜಮೀನ್ದಾರರು, ಬಂಡವಾಳಶಾಹಿಗಳು, ಕಾರ್ಖಾನೆಗಳ ಯಾಜಮಾನ್ಯದವರು ಶ್ರಮಿಕರನ್ನು ಗುಲಾಮರಂತೆ ನೋಡಿಕೊಳ್ಳುತ್ತಿದ್ದರು. ಅವರ ಶ್ರಮವನ್ನು ದರೋಡೆ ಮಾಡಿ, ಸಂಪತ್ತನ್ನು ವೃದ್ದಿಸಿಕೊಳ್ಳುತ್ತಿದ್ದರು ಎಂದರು.
ಕಾರ್ಮಿಕ ಹಕ್ಕುಗಳನ್ನು ದಮನ ಮಾಡುತ್ತಿದ್ದ ದಮನಕಾರಿ ಶೋಷಣೆಗಳ ವಿರುದ್ದ ಚಿಕಾಗೋ ನಗರದಲ್ಲಿ ಕಾರ್ಮಿಕರೆಲ್ಲರೂ ತಮ್ಮ ಮೇಲಿನ ದೌರ್ಜನ್ಯ ವಿರುದ್ದ ತಿರುಗಿಬಿದ್ದರು. ಶ್ರಮಿಕರ ದಿನಾಚರಣೆ ಮೇ 1ರಂದು ವಿಶ್ವ ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗಿತ್ತಿದೆ ಎಂದರು ಅವರು.
ಕಾರ್ಮಿಕರು 8 ಗಂಟೆ ಮಾತ್ರ ದುಡಿಯಬೇಕು, ಅದಕ್ಕಿಂತ ಹೆಚ್ಚಿನ ಅವಧಿ ದುಡಿಸಿಕೊಂಡರೆ ಹೆಚ್ಚಿನ ವೇತನವನ್ನು ನೀಡಬೇಕು. ಬೆವರು ಹರಿಸಿ ದುಡಿಯವ ಕಾರ್ಮಿಕನಿಗೆ ಗೌರವ ನೀಡಿ, ಶೋಷಣೆ, ದೌರ್ಜನ್ಯಗಳಿಲ್ಲದಂತೆ ನೋಡಿಕೊಳ್ಳುಬೇಕು ಎಂದು ಅವರು ಹೇಳಿದರು.
ಆದರೆ ಈಗಿನ ಬಿಜೆಪಿ ಸರ್ಕಾರ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದಿದ್ದು, ಕಾರ್ಮಿಕರ ಹಕ್ಕುಗಳಿಗೆ ಚ್ಯುತಿ ತರುವಂತಹ ನಿಯಮಗಳನ್ನು ತಂದಿದೆ. ಇದರ ವಿರುದ್ದ ಶ್ರಮಿಕ ವರ್ಗ ಒಗ್ಗಟ್ಟಾಗಿ ಪ್ರತಿರೋಧ ಒಡ್ಡಬೇಕು ಎಂದರು ಮುನಿವೆಂಕಟಪ್ಪ.
ರಾಜ್ಯ ಸರ್ಕಾರವು ಲಾಕ್ಡೌನ್ ಜಾರಿ ಮಾಡಿರುವುದರಿಂದ ದಿನನಿತ್ಯ ಬಡವರು, ನಿರ್ಗತಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರವು ಬಡವರಿಗೆ ಆಹಾರ, ಆರೋಗ್ಯ ಭದ್ರತೆ ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಬಡಜನರ ಬದುಕು ಬರ್ಬರಗೊಂಡಿದೆ. ಆಸ್ಪತ್ರೆಗಳಲ್ಲಿ ಸರಿಯಾದ ಹಾಸಿಗೆ, ಆಕ್ಸಿಜನ್ ದೊರೆಯುತ್ತಿಲ್ಲ. ಬಡಬಗ್ಗರಿಗೆ ಸೋಂಕು ತಗುಲಿದರೆ ರಸ್ತೆಯಲ್ಲೆ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಕೂಡಲೇ ಆರೋಗ್ಯ ಭದ್ರತೆ ಕಲ್ಪಿಸಬೇಕು ಎಂದು ಅವರು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ಸಾವಿತ್ರಮ್ಮ ಮುನಿಸ್ವಾಮಿ, ಡಿವೈಎಫ್ಐ ಸಂಚಾಲಕ ವೈ.ಎನ್.ಹರೀಶ್, ಮುಖಂಡರಾದ ಜಹೀರ್, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.