ಬೆಂಗಳೂರು: ಸೆಮಿ ಲಾಕ್ಡೌನ್ʼನಿಂದ ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣವೇ ಸಂಪೂರ್ಣ ಲಾಕ್ಡೌನ್ ಘೋಷಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಹೆಚ್.ವಿಶ್ವನಾಥ್ ಸರಕಾರವನ್ನು ಆಗ್ರಹಿಸಿದ್ದಾರೆ.
ಕೊರೋನಾ ಸೋಂಕು ತಡೆಗಟ್ಟಬೇಕು ಎಂದರೆ ಜನರ ಓಡಾಟ ನಿಲ್ಲಿಸಬೇಕು. ಅದನ್ನು ಮಾಡದಿದ್ದರೆ ರೋಗ ತಡೆ ಸಾಧ್ಯವಿಲ್ಲ ಎಂದಿದ್ದಾರೆ.
ಶ್ರಮಿಕ ವರ್ಗದವರಿಗೆ ಹಣಕಾಸು ನೆರವು ನೀಡಿ, ಸಂಪೂರ್ಣ ಲಾಕ್ ಡೌನ್ ಮಾಡಿದರೆ ಕೊರೋನಾ ಹೊಡೆತದಿಂದ ಬಚಾವಾಗಬಹುದು. ಆದರೆ ಬೆಳಗ್ಗೆ ಆರರಿಂದ ಹತ್ತರವರೆಗೆ ಜನರ ತಿರುಗಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಷ್ಟಾದರೂ ಮಧ್ಯಾಹ್ನ ಒಂದರವರೆಗೆ ಮದ್ಯದಂಗಡಿಗಳಿಂದ ಹೋಟೆಲ್ʼವರೆಗೆ ಎಲ್ಲ ತೆರೆದಿರುತ್ತವೆ. ಇಷ್ಟು ಹೊತ್ತು ಜನರನ್ನು ಬೀದಿಯಲ್ಲಿರಲು ಬಿಡುವುದು,ಕೊನೆಗೆ ಬೀದಿಗಿಳಿಯದಂತೆ ಪೋಲೀಸರು ಜನರನ್ನು ಲಾಠಿಯಲ್ಲಿ ಹೊಡೆಯುವುದು ನಿತ್ಯದ ಕೆಲಸವಾಗಿದೆ ಎಂದು ಅವರು ಹೇಳಿದ್ದಾರೆ.
- ವಿಶ್ವನಾಥ್ ಅವರ ಅಭಿಪ್ರಾಯದ ಪೂರ್ಣ ಪಾಠ ಕೇಳಲು ಕೆಳಗಿನ ವಿಡಿಯೋ ಕ್ಲಿಕ್ ಮಾಡಿ..
ಇವತ್ತು ದೇಶದಲ್ಲಿ ಕೊರೋನಾ ಸ್ಪೋಟಗೊಂಡು ನಮ್ಮ ವ್ಯವಸ್ಥೆ ಜಗತ್ತಿನ ಮುಂದೆ ಬೆತ್ತಲಾಗಿ ನಿಂತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡಾ ಕೊರೋನಾ ತಡೆಗಟ್ಟಲು ಸಂಘಟಿತ ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ರೆಡ್ ಕ್ರಾಸ್,ಲಯನ್ಸ್,ರೋಟರಿ ಸೇರಿದಂತೆ ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಪಡೆಯಿರಿ,ಮೆಡಿಕಲ್ ಕಾಲೇಜು,ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ