News & Views
ಬೆಂಗಳೂರು: ಇಡೀ ದೇಶವನ್ನೇ ಗೆದ್ದ ಉಮೇದಿನಲ್ಲಿದ್ದ ಭಾರತೀಯ ಜನತಾ ಪಕ್ಷ ಭಾರತಕ್ಕೆ ಪೂರ್ವದಲ್ಲಿ ಬಂಗಾಳಕೊಲ್ಲಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಮುಗ್ಗರಿಸಿದ್ದು ಯಾಕೆ? ಅದಕ್ಕೆ ಕಾರಣಗಳೇನು?
ಈಗ ದೇಶಾದ್ಯಂತ ಚರ್ಚೆಯಾಗುತ್ತಿರವ ವಿಷಯ ಇದೊಂದೇ. ವಿದುನ್ಮಾನ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆಯೇ ದಿಲ್ಲಿಯ ಬಿಜೆಪಿ ಕಚೇರಿಯಲ್ಲಿ ಅಸೋಮ್ ಗೆಲುವಿನ ಸಂಭ್ರಮವೇ ಇರಲಿಲ್ಲ. ಬಂಗಾಳದ್ದೇ ಚಿಂತೆ. ಒಮ್ಮೆ ಮಾಧ್ಯಮಗಳ ಮುಂದೆ ಗೃಹ ಸಚಿವ ಅಮಿತ್ ಶಾ ಕಾಮೆಂಟ್ ಮಾಡಿ ಹೋಗಿದ್ದು ಬಿಟ್ಟರೆ, ಬಿಜೆಪಿ ನಾಯಕರಾರು ಸೋಲು-ಗೆಲುವುಗಳ ಬಗ್ಗೆ ಚಕಾರ ಎತ್ತಲಿಲ್ಲ.
ಹಾಗಾದರೆ, ಬಿಜೆಪಿ ಎಡವಿದ್ದು ಎಲ್ಲಿ? ಅತಿಯಾದ ಆತ್ಮವಿಶ್ವಾಸ, ಮಮತಾ ಬ್ಯಾನರ್ಜಿ ಅವರನ್ನು ಬೃಹತ್ ಪ್ರತಿಸ್ಫರ್ಧಿ ಎಂದು ತಾನಾಗಿಯೇ ಬಿಂಬಿಸಿದ್ದು ಸೇರಿದಂತೆ ಬಿಜೆಪಿ ಹೆಜ್ಜೆಹೆಜ್ಜೆಗೂ ಮಿಸ್ಟೇಕುಗಳನ್ನೇ ಮಾಡುತ್ತಾ ಹೋಯಿತು. ಸುಮ್ಮನೆ ಪ್ರಚಾರ ಸಭೆಗಳಲ್ಲಿನ ಬಿಜೆಪಿ ನಾಯಕರ ಅಬ್ಬರವನ್ನು ಮೌನವಾಗಿ ಗಮನಿಸುತ್ತಿದ್ದ ಬಂಗಾಳಿಗರು ಮತಯಂತ್ರಗಳಲ್ಲಿ ತಮಗೆ ತೋಚಿದ್ದನ್ನೇ ಮಾಡಿದರು. ಆಮೇಲೆ ಮಕಾಡೆ ಮಲಗುವ ಸರದಿ ಬಿಜೆಪಿಯದ್ದು.
- “ಬಂಗಾಳ ಭಾರತವನ್ನು ಉಳಿಸುತ್ತದೆ ಹಾಗೂ ಉಳಿಸಿದೆ.” ಮಮತಾ ಬ್ಯಾನರ್ಜಿ ಪದೇಪದೆ ಹೇಳುತ್ತಿದ್ದ ಮಾತಿದು. ಆ ಮಾತೇ ನಿಜವಾಗುತ್ತಾ? ಅಥವಾ ಈ ಮಾತಿನ ಗೂಡಾರ್ಥ ಏನು? ಎಂದು ಅನೇಕರು ತಲೆ ಕೆರೆದುಕೊಳ್ಳುತ್ತಿದ್ದಾರೆ. ಅದಾದ ಮೇಲೆ, “ನಾನೀಗ ಒಂದು ಕಾಲಿನಲ್ಲಿ ಬಂಗಾಳವನ್ನು ಗೆದ್ದಿದ್ದೇನೆ, ನಂತರ ಎರಡು ಕಾಲುಗಳಲ್ಲಿ ನಡೆದು ದಿಲ್ಲಿಯನ್ನು ಗೆಲ್ಲುತ್ತೇನೆ” ಎಂದು ಘೋಷಿಸಿದ್ದಾರೆ. ಇದು ನೇರವಾಗಿ ಬಿಜೆಪಿ ಮತ್ತು ನರೇಂದ್ರ ಮೋದಿಗೆ ಬಿಟ್ಟ ಬಾಣ ಎಂದು ಬೇರೆ ಹೇಳಬೇಕಾಗಿಲ್ಲ.
- ಬಂಗಾಳದಲ್ಲಿ ಬಿಜೆಪಿ ಅತಿ ಆತ್ಮವಿಶ್ವಾಸದಲ್ಲಿದ್ದರೂ ಅದಕ್ಕೆ ಗೊತ್ತಿಲ್ಲದೆ ಬಿದ್ದ ಹೊಡೆತಗಳು ಅನೇಕ. ಪ್ರಚಾರದ ಉಮೇದಿನಲ್ಲಿದ್ದ ಆ ಪಕ್ಷಕ್ಕೆ ಒಳಗೇ ಬೀಳುತ್ತಿದ್ದ ಪೆಟ್ಟುಗಳು ಹಾಗೂ ಬಂಗಾಳಿಗರ ಮರ್ಮ ಅರಿವಿಗೆ ಬರಲೇ ಇಲ್ಲ. ಆ ರಾಜ್ಯದ ಬಿಜೆಪಿ ನಾಯಕರೆಲ್ಲ ಪ್ರಧಾನಿ ಮತ್ತು ಅಮಿತ್ ಶಾ ಹಾಗೂ ದಿಲ್ಲಿ ಬಿಜೆಪಿ ದೊರೆಗಳು ಬಂದಾಗ ಅವರ ಸಭೆಗಳಿಗೆ ಜನರನ್ನು ಸೇರಿಸುವ ಕೆಲಸಕ್ಕೆ ಫುಲ್ ಟೈಮೂ ಬಿದ್ದರೇ ಹೊರತು, ಮಮತಾ ಇಡುತ್ತಿದ್ದ ನಿಗೂಢ ಹೆಜ್ಜೆಗಳನ್ನು ಗುರುತಿಸಲಿಲ್ಲ.
- ಬಿಜೆಪಿಗೆ ಆರಂಭಿಕ ಹೊಡೆತ ಕೊಟ್ಟಿದ್ದೇ ಕೋವಿಡ್-19 ಮಹಾಮಾರಿ. ಮೊದಲ ಅಲೆಯನ್ನು ತೃಪ್ತಿಕರವಾಗಿ ನಿಭಾಯಿಸಿದ್ದ ಮೋದಿ ಸರಕಾರ, ಅದೇ ಎರಡನೇ ಅಲೆ ಬರುವಷ್ಟರಲ್ಲಿ ಸಂಪೂರ್ಣವಾಗಿ ಕೈಚೆಲ್ಲಿ ಕೂತಿತ್ತು. ಒಂದೆಡೆ ಸೋಂಕಿನ ರುದ್ರ ನರ್ತನ, ಇನ್ನೊಂದೆಡೆ ದೇಶದ ಉದ್ದಗಲಕ್ಕೂ ಚದುರಿ ಹೋಗಿದ್ದ ಬಂಗಾಳಿಗರೆಲ್ಲ ತವರು ಸೇರಿಕೊಂಡರು. ಉದ್ಯೋಗ ಹಾಗೂ ಆರ್ಥಿಕ ನಷ್ಟದ ತೀವ್ರತೆ ಜೋರಗಿಯೇ ಬಿತ್ತು. ಇದು ಪ್ರತಿ ಕುಟುಂಬದ ಮೇಲೆ ಬಿತ್ತು. ಅದಾದ ಮೇಲೆ ವ್ಯಾಕ್ಸಿನ್ ಅಭಿಯಾನ ನಿರೀಕ್ಷಿತ ಪ್ರಮಾಣದಲ್ಲಿ ಟೇಕಾಫ್ ಆಗಲಿಲ್ಲ. ಇದೆಲ್ಲ ಮಮತಾ ಹೂಡಿದ ಅಸ್ತ್ರಗಳಲ್ಲ, ಬದಲಿಗೆ ಬಂಗಾಳದಲ್ಲಿ ಮಮತಾ ಪರವಾಗಿದ್ದ ಮಾಧ್ಯಮಗಳು ಸಂಧಿಸಿದ ಚೂಪು ಬಾಣಗಳು. ದೇಶದ ಉದ್ದಗಲಕ್ಕೂ ಬಹುತೇಕ ಮಾಧ್ಯಮಗಳು ಬಿಜೆಪಿ ಭಜನೆ ಮಾಡುತ್ತಿದ್ದರೆ, ಬಂಗಾಳ ಮಾಧ್ಯಮಗಳಲ್ಲಿ ಅನೇಕ ಮಾಧ್ಯಮಗಳು ಮಮತಾ ಬೆನ್ನಿಗಿದ್ದವು. ಇದನ್ನು ಪತ್ತೆ ಹಚ್ಚುವಲ್ಲಿ ಅಥವಾ ಮ್ಯಾನೇಜ್ ಮಡುವಲ್ಲಿ ಬಿಜೆಪಿ ವಿಫಲವಾಯಿತು.
- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಅನಿಯಂತ್ರಿತ ಏರಿಕೆ. ಪರಿಣಾಮ ಅಡುಗೆ ಎಣ್ಣೆ, ಅಕ್ಕಿ, ಗೋದಿ, ಬೇಳೆ ಇತ್ಯಾದಿಗಳ ಬೆಲೆ ಗಗನಮುಖಿ ಆದದ್ದು. ಇದು ಬಿಜೆಪಿ ಮರ್ಮಾಘಾತ ಕೊಟ್ಟಿದೆ.
- ಚುನಾವಣೆ ಆಯೋಗದ ಕಾರ್ಯ ನಿರ್ವಹಣೆಯ ಬಗ್ಗೆಯೇ ಚುಣಾವಣೆಯಲ್ಲಿ ಹೆಚ್ಚು ಚರ್ಚೆ ನಡೆಯುತ್ತಿತ್ತು. ಬೀದಿಗಳಲ್ಲಿ ನಿಂತು ಮಮತಾ ಆಯೋಗದ ವಿರುದ್ಧ ಹರಿಹಾಯುತ್ತಿದ್ದರೆ, ಬಿಜೆಪಿ ನಾಯಕರು ಲೇವಡಿ ಮಾಡಿಕೊಂಡು ನಗುತ್ತಿದ್ದರು!!
- ಬಂಗಾಳದಲ್ಲಿ ಬಿಜೆಪಿ 77 ಕ್ಷೇತ್ರಗಳಲ್ಲಿ ಗೆದ್ದಿರಬಹುದು. ಅದಕ್ಕೆ ಬೇರೆ ಕಾರಣಗಳಿವೆ. ಆದರೆ, ಬಂಗಾಳಿಗರು ಬಿಜೆಪಿಯನ್ನು ಹೊರಗಿನ ಪಕ್ಷವೆಂದೇ ಭಾವಿಸಿದರು. ಹೀಗಾಗಿ ಕಮಲ ಪಾಳೆಯ ಎಷ್ಟೇ ಸರ್ಕಸ್ ಮಾಡಿದರೂ ಎರಡಂಕಿ ದಾಟಲು ಸಾಧ್ಯವಾಗಲೇ ಇಲ್ಲ. ತೃಣಮೂಲ ಕಾಂಗ್ರೆಸ್‌ನ ಎಲೆಕ್ಷನ್ ತಂತ್ರಗಾರ ಪ್ರಶಾಂತ್ ಕಿಶೋರ್ ನುಡಿದಿದ್ದ ಭವಿಷ್ಯ ಸತ್ಯವಾಯಿತು. ಇದರ ಮಧ್ಯೆ ಮಮತಾ ʼಐ ಲವ್ ಮದರ್ ಲ್ಯಾಂಡ್ʼ ಎಂದು ಹೇಳುತ್ತಿದ್ದ ಮಾತು ಜನರಿಗೆ ನೇರವಾಗಿ ಕನೆಕ್ಟ್ ಆಯಿತು. ಆದರೆ, ಬಿಜೆಪಿಗೆ ಮಮತಾ ಅವರನ್ನು ಲೇವಡಿ ಮಾಡಿದ್ದು ಬಿಟ್ಟರೆ ಜನರಿಗೆ ಹತ್ತಿರವಾಗುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ.
- ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿದಂತೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ʼಆಪರೇಷನ್ ಆಕರ್ಷ್ʼ ನಡೆಸಿತು. ನಾನಾ ಆಮಿಷಗಳಿಗೆ ಒಳಗಾಗಿ ತೃಣಮೂಲದ ಅನೇಕ ನಾಯಕರು, ಅಪಾರ ಸಂಖ್ಯೆಯ ಕಾರ್ಯಕರ್ತರು ತೃಣಮೂಲಕ್ಕೆ ವಲಸೆ ಹೋದರು. ಒಂದು ಕಾಲದಲ್ಲಿ ಮಮತಾ ಬಲಗೈ ಭಂಟನಾಗಿದ್ದ ಸುಮೇಂದು ಅಧಿಕಾರಿ ಯಂಥ ನಾಯಕರು ಕಮಲದತ್ತ ಜಿಗಿದರು. ಆದರೆ, ಅದೇ ಅಧಿಕಾರಿ, ಮಮತಾ ವಿರುದ್ಧ ಕಣಕ್ಕಿಳಿದಾಗ ಇಡೀ ಬಂಗಾಳದ ಒಳಗೆ ಲೆಕ್ಕಾಚಾರ ಬಿಜೆಪಿಗೆ ಉಲ್ಟಾ ಹೊಡೆಯಿತು. ಬಿಜೆಪಿ ನಂದಿ ಗ್ರಾಮದ ಸುತ್ತಲೇ ಹೆಚ್ಚು ರೌಂಡ್ ಹೊಡೆಯಿತು. ಸೈದ್ಧಾಂತಿಕವಾಗಿ ತನ್ನ ಬದ್ಧತೆಯನ್ನು ಮರೆತ ಬಿಜೆಪಿ ಬಂದ ಬಂದವರೆಲ್ಲರನೂ ತನ್ನೊಳಕ್ಕೆ ಸೇರಿಸಿಕೊಂಡಿತು. ಇದೊಂದು ರೀತಿಯಲ್ಲಿ ಆ ಪಕ್ಷಕ್ಕೆ ಮುಳುವಾಯಿತು.
- ರಾಜ್ಯದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮುಂತಾದವರು ನಡೆಸಿದ ಪ್ರಚಾರ ಸಭೆಗಳಲ್ಲಿ ಮಮತಾ ಬ್ಯಾನರ್ಜಿ ಅವರನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕಿಸಲಾಯಿತು. ಅದು ಎಷ್ಟರ ಮಟ್ಟಿಗೆ ತೃಣಮೂಲಕ್ಕೆ ವರ್ಕೌಟ್ ಆಯಿತೆಂದರೆ, ಮೋದಿ ಬಂಗಾಳದ ಮಹಿಳೆಯರನ್ನು ಹೀನಾಯವಾಗಿ ನಿಂದಿಸುತ್ತಿದ್ದಾರೆಂದು ನಂಬಲಾಯಿತು. ಈ ಬಗ್ಗೆ ಪತ್ರಿಕೆಗಳಲ್ಲಿ ಬಿಜೆಪಿ ವಿರುದ್ಧ ಬಂದ ಸಂಪಾದಕೀಯಗಳನ್ನಾದರೂ ಆ ಪಕ್ಷದ ನಾಯಕರು ಗಮನಿಸಬೇಕಿತ್ತು. ಅವರು ನಿರ್ಲಕ್ಷ್ಯ ಮಾಡಿದರು. ಅದೂ ಮೋದಿ ಅವರ ʼದೀದಿ ಹೋ ದೀದಿʼ ಹೇಳಿಕೆಯಂತು ಮಹಿಳೆಯರಿಗೆ ಸಿಟ್ಟು ತರಿಸಿದ್ದು ಸುಳ್ಳಲ್ಲ. ದೇಶದ ಪ್ರಧಾನಿಯ ಈ ಹೇಳಿಕೆ ಬಂಗಾಳದಲ್ಲಿ ಬಿಜೆಪಿ ಹಣೆಬರಹವನ್ನು ಬದಲಿಸಿತು ಎನ್ನಬಹುದು. ತಮಾಷೆಯ, ಲೇವಡಿಯ ಮಾತೊಂದು ಗೆಲುವಿನ ಸಾಧ್ಯತೆಗಳನ್ನು ಹಾಳು ಮಾಡಿತು.
- ದೊಡ್ಡ ರಾಜ್ಯ ತಮಿಳುನಾಡು ಚುನಾವಣೆಯೇ ಒಂದು ಹಂತದಲ್ಲಿ ನಡೆಯಿತು. ಆದರೆ, ಬಂಗಾಳದ ಚುನಾವಣೆ ಎಂಟು ಹಂತಗಳಲ್ಲಿ ಯಾಕೆ? ಇದಕ್ಕೆ ಚುನಾವಣಾ ಆಯೋಗ ಅಥವಾ ಕೇಂದ್ರ ಸರಕಾರ ಕೊಟ್ಟ ಯಾವುದೇ ಸಮಜಾಯಿಷಿ ಬಂಗಾಳದ ಜನರಿಗೆ ನಂಬಿಕೆ ಹುಟ್ಟಿಸಲಿಲ್ಲ. ತೃಣಮೂಲಕ್ಕೆ ಅನುಕೂಲ ಆಗಿದ್ದೇ ಇಲ್ಲಿ. ಬಿಜೆಪಿಯ ಅಬ್ಬರದ ಟೀಕೆಗಳಿಗೆ ಅಷ್ಟೇ ಆರ್ಭಟದ ಎದಿರೇಟು ಕೊಡುತ್ತಿದ್ದ ಮಮತಾ, ಪ್ರಶಾಂತ್ ಕಿಶೋರ್ ಕೊಡುತ್ತಿದ್ದ ಟಿಪ್ಸ್‌ಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ʼಅಷ್ಟ ಹಂತʼಗಳಲ್ಲಿ ಮೋದಿ ಅಂಡ್ ಟೀಂ ಬರೀ ಭಾರೀ ಪ್ರಚಾರ ಸಭೆಗಳಿಗೆ ಸೀಮಿತವಾದರೆ, ಇದನ್ನೇ ಅವಕಾಶ ಮಾಡಿಕೊಂಡ ಮಮತಾ ಅಂಡ್ ಟೀಂ ಮನೆ ಮನೆಗೂ ತಲುಪಿತು.
- ಎಂಟು ಹಂತಗಳ ಎಲೆಕ್ಷನ್ ಘೋಷಣೆಯಾದಾಗಲೇ ಬಂಗಾಳಿಗರು ಕೆರಳಿ ಕೆಂಡವಾಗಿದ್ದರು. ದಿಲ್ಲಿಯಲ್ಲಿ ಏನೋ ಷಡ್ಯಂತ್ರ ನಡೆದಿದೆ ಎಂದು ಭಾವಿಸಿಕೊಂಡರು. ದಿಲ್ಲಿಯ ಅನೇಕ ಸಂಸ್ಥೆಗಳೆಲ್ಲ ಮಮತಾ ವಿರುದ್ಧ ಪಿತೂರಿ ಹೂಡುತ್ತಿವೆ ಎಂಬ ಅನುಮಾನ ಎಲೆಕ್ಷನ್ ದಿನಾಂಕ ಘೋಷಣೆಯಾದಾಗಿನಿಂದ ಜನರಲ್ಲಿ ಹೆಚ್ಚುತ್ತಲೇ ಹೋಯಿತು. ಆದರೆ, ಈ ಒಳಬೇಗುದಿಯನ್ನು ನೀಗಿಸಿಕೊಂಡು ತಿಳಿಗೊಳಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. ಕೇವಲ ತೃಣಮೂಲದ ತನ್ನ ವಿರೋಧಿಗಳನ್ನು ಹತ್ತಿಕ್ಕಲು ಬಿಜೆಪಿ ಯತ್ನಿಸಿತೇ ಹೊರತು ಬಂಗಾಳದ ಮನೆ ಮನೆಯಲ್ಲು ಹೆಚ್ಚುತ್ತಿದ್ದ ತನ್ನ ವಿರೋಧಿ ಭಾವನೆಗೆ ಮುಲಾಮು ಹಚ್ಚಲಿಲ್ಲ.
- ಬಿಜೆಪಿ ಮೇಲೆ ಬಂಗಾಳಿಗರ ಅಸಹನೆ ಎಷ್ಟಿತ್ತೆಂದರೆ, ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಹೆಸರಿನಲ್ಲಿ ನೊಬೆಲ್‌ನಂಥ ದೊಡ್ಡ ಮೊತ್ತದ ಪ್ರತಿಷ್ಠಿತ ಪ್ರಶಸ್ತಿ ಸ್ಥಾಪಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಇದನ್ನೂ ಜನ ಕಿವಿಗೆ ಹಾಕಿಕೊಳ್ಳಲಿಲ್ಲ.
- ಚುನಾವಣಾ ಆಯೋಗ ಬಿಜೆಪಿ ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂಬ ಬಲವಾದ ಅನುಮಾನ. ಬಿಜೆಪಿ ಪ್ರಚಾರ ಸಭೆಗಳಲ್ಲಿ ಕಾರ್ಯಕರ್ತರು ಮತ್ತು ನಾಯಕರು ಜೈ ಶ್ರೀರಾಂ ಎಂದು ಘೋಷಣೆ ಕೂಗಿದ್ದರ ವಿರುದ್ಧ ದೂರು ಕೊಟ್ಟರೆ ಆಯೋಗ ಕ್ಯಾರೇ ಅನ್ನಲಿಲ್ಲ. ಇದಕ್ಕೆ ಪ್ರತಿಯಾಗಿ ಮಮತಾ ಅವರು ಜೈ ಬಂಗಾಳ ಅಂದರು.
ಈ ಎಲ್ಲ ಕಾರಣದಿಂದ ಬಿಜೆಪಿ ಸೋತಿದೆ ಎಂಬುದರಲ್ಲಿ ಅನುಮಾನವಿಲ್ಲ. ನಂದಿ ಗ್ರಾಮದಲ್ಲಿ ಗೆದ್ದು ಸೋತ ಮಮತಾ ಹೋರಾಟವೂ ನಿಂತಿಲ್ಲ. ಬಂಗಾಳದಲ್ಲಿ ಮಮತಾ-ಬಿಜೆಪಿ ಸಂಘರ್ಷ ಇನ್ನೂ ಬಿಗಡಾಯಿಸುವುದು ಪಕ್ಕ. ಆದರೆ, ಮಮತಾ ಅವರನ್ನು ಮಣಿಸುವ ಆಲೋಚನೆಯನ್ನು ಬಿಟ್ಟು ಮುಂದಿನ ಚುನಾವಣೆ ಹೊತ್ತಿಗೆ ಜನರ ಮನಸ್ಸು ಗೆಲ್ಲಲು ಕಮಲ ಪಾಳೆಯ ಮನಸ್ಸು ಮಾಡಬೇಕು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಕೊನೆ ಮಾತು..
ಒಬ್ಬ ಪಿಎಂ
ಒಬ್ಬ ರಾಜ್ಯ ಪಾಲರು
6 ಮುಖ್ಯಮಂತ್ರಿಗಳು
22 ಕೇಂದ್ರ ಸಚಿವರು
3 ಕೇಂದ್ರ ಸಂಸ್ಥೆಗಳು
10,000ಕ್ಕೊ ಹೆಚ್ಚು ಕೇಂದ್ರ ಪೊಲೀಸ್ ಪಡೆ.
ಮಾಧ್ಯಮಗಳು & ಹಣದ ರಾಶಿ
ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ ಅಂಶಗಳಿವು. ಬಹುಶಃ ಬಂಗಾಳದ ಜನರು ಇದನ್ನೇ ಬಹಳ ಸೀರಿಯಸ್ ಆಗಿ ತೆಗೆದುಕೊಂಡರು ಅನಿಸುತ್ತೆ!!!
Photos from Mamata Banerjee Facebook page