ಬೆಂಗಳೂರು: ಕೋಲಾರ ಮತ್ತು ಚಾಮನಗರಗಳ ಜಿಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವೈಫಲ್ಯದಿಂದ ಕೋವಿಡ್ ಸೋಂಕಿತರು ಸಾವನ್ನಪ್ಪಿದ ಘಟನೆಯ ನೈತಿಕ ಹೊಣೆಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯ ಮಾಡಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ಪ್ರತ್ಯೇಕವಾಗಿ ಮಾತನಾಡಿದ್ದು, ಕೂಡಲೇ ಡಾ.ಸುಧಾಕರ್ ಪದತ್ಯಾಗ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಸಿದ್ದು ಆಗ್ರಹ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ರೋಗಿಗಳು ಸಾವಿಗೀಡಾದ ದುರ್ಘಟನೆ ಬಹಳ ಆಘಾತಕಾರಿ. ಈ ಘಟನೆಗೆ ಸರಕಾರವೇ ನೇರ ಹೊಣೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ತಕ್ಷಣ ರಾಜೀನಾಮೆ ಪಡೆಯಬೇಕು. ಅಲ್ಲದೆ, ಸಚಿವರು ಪ್ರಕರಣದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಈ ಪ್ರಕರಣದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇದು ಅತ್ಯಂತ ಗಂಭೀರ ಹಾಗೂ ಅಮಾನವೀಯ ಪ್ರಕರಣ. ರಾಜ್ಯದಲ್ಲಿ ಆಡಳಿತಯಂತ್ರ ಕುಸಿದುಬಿದ್ದಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಬಿಜೆಪಿಯ ಅಧಿಕಾರದ ಲಾಲಸೆಗೆ ಇನ್ನಷ್ಟು ಅಮಾಯಕ ಜನರು ಬಲಿಯಾಗುವುದು ಬೇಡ. ಜನರ ಜೀವ ರಕ್ಷಿಸಲಾಗದ ಇಂಥಾ ಸರಕಾರ ಇರುವುದಕ್ಕಿಂತ ತೊಲಗುವುದೇ ಲೇಸು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಾವುಗಳಿಗೆ ಯಾರು ಹೊಣೆ?: ಡಿಕೆಶಿ ಪ್ರಶ್ನೆ
ಆಕ್ಸಿಜನ್ ಕೊರತೆಯಿಂದ 24 ಜನರ ಸಾವಿಗೆ ಹೊಣೆಯಾರು? ಇವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಹೇಗೆ ಧೈರ್ಯ ತುಂಬಬೇಕು ಎಂಬುದೇ ತೋಚುತ್ತಿಲ್ಲ. ಈ ಸರಕಾರ ನಂಬಿಕೆ ಕಳೆದುಕೊಂಡಿದ್ದು, ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಜನರಿಗೆ ವಾಸ್ತವಾಂಶ ತಿಳಿಸಿ ಎಂದು ಮಾಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು:
ಇದು ಪ್ರಚಾರ ಪ್ರಿಯ ಸರಕಾರ. ಆಕ್ಸಿಜನ್ ವಿಚಾರದಲ್ಲಿ ಯಾರೂ ಮೇಲ್ವಿಚಾರಣೆ ಮಾಡುತ್ತಿಲ್ಲ. ನಮ್ಮ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು ಎಂದು ಹೇಳಿದ್ದರು. ಅವರಿಗೆ ಮುಖ್ಯಮಂತ್ರಿಗಳು ಸಮಯಾವಕಾಶ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಈ ಸರ್ಕಾರದಿಂದಾಗಲಿ ಮುಖ್ಯಮಂತ್ರಿಗಳಿಂದಾಗಲಿ, ಮಂತ್ರಿಗಳಿಂದಾಗಲಿ ಈ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಅವರ ಆದ್ಯತೆಗಳೇ ಬೇರೆ. ನಮ್ಮ ಮರ್ಯಾದೆ ಹೋದರೂ ಪರವಾಗಿಲ್ಲ, ಶಾಸಕಾಂಗ ಪಕ್ಷದ ಸಭೆ ನಂತರ ನಾನೇ ಮುಖ್ಯಕಾರ್ಯದರ್ಶಿಗಳ ಸಮಾಯಾವಕಾಶ ಕೇಳಿ ಅವರು ಎಲ್ಲಿರುತ್ತಾರೋ ಅಲ್ಲಿಗೇ ಹೋಗಿ ಭೇಟಿ ಮಾಡಿ ಈ ರಾಜ್ಯದ ಜನತೆಗೆ ವಾಸ್ತವಾಂಶ ಏನಿದೆ ಎಂದು ತಿಳಿಸಲು ಕೇಳಿಕೊಳ್ಳುತ್ತೇನೆ.
ನನಗೆ ಬರುತ್ತಿರುವ ಕರೆಗಳನ್ನು ಸ್ವೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅವರನ್ನು ಎಲ್ಲಿಗೆ ಕಳುಹಿಸಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದು ತೋಚುತ್ತಿಲ್ಲ. ಜನ ಆಕ್ಸಿಜನ್ ಮಟ್ಟದ ಕುಸಿತದಿಂದ ಆತಂಕಕ್ಕೆ ಸಿಲುಕಿದ್ದಾರೆ. ನಮಗೆ ಮುಖ್ಯಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಬದ್ಧತೆ ಬಗ್ಗೆ ಪ್ರಶ್ನೆ ಇಲ್ಲ. ಆದರೆ ಜನರಿಗೆ ವಾಸ್ತವಾಂಶವನ್ನು ನೀವಾದರೂ ತಿಳಿಸಿ. ತಜ್ಞರು ಎಂದು ಇಟ್ಟುಕೊಂಡಿರುವವರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ.
ಈ ಸಮಯದಲ್ಲಿ ನಾನು ಉದ್ಯಮಿಗಳು, ಸಂಘ-ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ಜನರ ಜೀವ ಉಳಿಸಲು ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ.
ಹೊರ ರಾಜ್ಯಗಳಲ್ಲಿ ಅಭಾವ ನೀಗಿಸಲು ಹೊರ ದೇಶಗಳಿಂದ ತರಿಸುತ್ತಿದ್ದಾರೆ. ಹುಟ್ಟಿದ ಮಗುವಿಗೆ ಮೊದಲು ಬೇಕಾಗಿರುವುದು ಉಸಿರಾಡುವ ಗಾಳಿ. ಜನ ಆ ಆಕ್ಸಿಜನ್ ಕೇಳಿದರೆ ಅದನ್ನು ಕೊಡಲು ಈ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ನೋಡುವಂತಹ ಶಿಕ್ಷೆ ಭಗವಂತ ನಮಗೆ ಯಾಕೆ ಕೊಡುತ್ತಿದ್ದಾನೆ ಅಂತಾ ನೋವಾಗುತ್ತಿದೆ.
ಆಕ್ಸಿಜನ್ ಕೊರತೆಯಿಂದ 24 ಜನ ಸತ್ತಿರುವುದಕ್ಕೆ ಯಾರು ಹೊಣೆ? ಈ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು. ಸರ್ಕಾರ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ ಎನ್ನುತ್ತಿದೆ ಎಂದರೆ ಮಾಧ್ಯಮಗಳು ಸುಳ್ಳು ವರದಿ ಪ್ರಸಾರ ಮಾಡಿವೆಯೇ? ನೀವು ತಪ್ಪು ಮಾಡಿದ್ದೀರಾ? ಅಥವಾ ಸರ್ಕಾರ ತಪ್ಪು ಮಾಡುತ್ತಿದೆಯಾ? ಇದೇ ಕಾರಣಕ್ಕೆ ಜನರಿಗೆ ವಾಸ್ತವಾಂಶ ತಿಳಿಸಿ ಎಂದು ಹೇಳುತ್ತಿದ್ದೇನೆ.
ಯಾರಿಗೆ ಆಗಲಿ ಪೂರ್ವ ಸಿದ್ಧತೆ, ಹೊಣೆಗಾರಿಕೆ ಇರಬೇಕು. ಇದ್ಯಾವುದು ಈ ಸರ್ಕಾರದಲ್ಲಿಲ್ಲ. ಆಕ್ಸಿಜನ್ ಕೊರತೆಯಿಂದ ಸತ್ತಿರುವ 24 ಜನರ ಕುಟುಂಬದ ಸದಸ್ಯರಿಗೆ ಯಾವ ರೀತಿ ಶಕ್ತಿ ತುಂಬಬೇಕೋ ತೋಚುತ್ತಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಎಂದು ನಾನು ಪಕ್ಷದ ಜಿಲ್ಲಾ ಸಮಿತಿಗೆ ಮನವಿ ಮಾಡುತ್ತೇನೆ.’
ಚಾಮರಾಜನಗರ ದುರಂತವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಖಂಡಿಸಿದ್ದಾರೆ.
- ಈ ಸುದ್ದಿಯನ್ನುಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..