ಕೊರೋನಾ ಸೋಂಕನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಿಎಂ ಅವರು ಮಹತ್ವದ ಕ್ರಮ ಕೈಗೊಂಡಿದ್ದು, ಕೋವಿಡ್ ಕಾರ್ಯಪಡೆಯನ್ನು ಪುನಾರಚನೆ ಮಾಡಿದ್ದಾರೆ.
ಬೆಂಗಳೂರು: ಕೋಲಾರ ಮತ್ತು ಚಾಮರಾಜನಗರದ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸಿದ ಆಕ್ಸಿಜನ್ ಸಾವುಗಳ ಕಾರಣಕ್ಕೆ ಕೋವಿಡ್ ನಿರ್ವಹಣೆ ವ್ಯವಸ್ಥೆಗೆ ಮುಖ್ಯಮಂತ್ರಿ ಯಡಿಯೂರಪ್ಪ ʼಚಿಕಿತ್ಸೆʼ ಮಾಡಿದ್ದಾರೆ.
ಕೊರೋನಾ ಸೋಂಕನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸಿಎಂ ಅವರು ಮಹತ್ವದ ಕ್ರಮ ಕೈಗೊಂಡಿದ್ದು, ಕೋವಿಡ್ ಕಾರ್ಯಪಡೆಯನ್ನು ಪುನಾರಚನೆ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಾರ್ಯಪಡೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈವರೆಗೂ ಲೋಕೋಪಯೋಗಿ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾಗಿದ್ದರು.
ಪುನಾರಚನೆಗೊಂಡ ಕಾರ್ಯಪಡೆಯಲ್ಲಿ ಅಧ್ಯಕ್ಷರಾಗಿ ಡಾ.ಅಶ್ವತ್ಥನಾರಾಯಣ, ಸದಸ್ಯರಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ಸಚಿವ ಸಿ.ಸಿ.ಪಾಟೀಲ್ ಹಾಗೂ ಆರೋಗ್ಯ & ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ಇದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗಾಗಿ ಇರುವ ಉನ್ನತಮಟ್ಟದ ಸಮಿತಿ ಇದಾಗಿದ್ದು, ಕೋವಿಡ್ ನಿರೂಪಣೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ. ಮುಖ್ಯಮಂತ್ರಿ, ಆಡಳಿತ ಯಂತ್ರದ ಸಮನ್ವಯ ಸಾಧಿಸುವುದು ಮಾತ್ರವಲ್ಲದೆ ಲಾಕ್‌ಡೌನ್, ಕರ್ಫ್ಯೂ ಇತ್ಯಾದಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸಲಹೆ ಮಾಡುವ ಸಮಿತಿಯೂ ಇದಾಗಿದೆ.
ಇದೇ ವೇಳೆ ಗೋವಿಂದ ಕಾರಜೋಳ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.