ಬೆಂಗಳೂರು: ಕಳೆದ ಬಾರಿ ಸಂಪುಟ ಪುನಾರಚನೆಯಾಗಿ ಖಾತೆ ಹಂಚಿಕೆ ಸಂದರ್ಭದಲ್ಲಿ ಎರಡು ಖಾತೆಗಳಿಗಾಗಿ ರಚ್ಚೆ ಹಿಡಿದು ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸರಕಾರದ ಮಟ್ಟದಲ್ಲಿ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ.
ಚಾಮರಾಜನಗರ ದುರಂತದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಕೋವಿಡ್ ಜವಾಬ್ದಾರಿಗಳನ್ನು ಮರು ಹಂಚಿಕೆ ಮಾಡಿದ್ದು, ಆರೋಗ್ಯ ಸಚಿವ ಸುಧಾಕರ್ ಅವರಿಗೆ ಯಾವ ಹೊಣೆಗಾರಿಕೆಯನ್ನು ವಹಿಸಿಲ್ಲ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಶಿಕ್ಷಣ ಖಾತೆ ಮಂತ್ರಿ ಎಸ್.ಸುರೇಶ್ ಕುಮಾರ್ ಅವರಿಗೆ ಕೂಡ ಯಾವ ಜವಾಬ್ದಾರಿಯನ್ನು ವಹಿಸಿಲ್ಲ. ಆದರೆ, ಈ ಇಬ್ಬರು ಸಚಿವರು ರಾಜ್ಯ ಕೋವಿಡ್ ಕಾರ್ಯಪಡೆಯಲ್ಲಿ ಹೆಸರಿಗಷ್ಟೇ ಸದಸ್ಯರಾಗಿದ್ದಾರೆ.
ಆಮ್ಲಜನಕದ ಘೋರ ವೈಫಲ್ಯದ ಕಾರಣದಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಐವರು ಹಾಗೂ ಚಾಮರಾಜನಗರದಲ್ಲಿ 25 ಕೋವಿಡ್ ಸೋಂಕಿತರು ಧಾರುಣವಾಗಿ ಸಾವನ್ನಪ್ಪಿದ್ದು ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಅನೇಕ ಸಲ ಲಿಮಿಟ್ ಕ್ರಾಸ್ ಮಾಡಿದ ಕಾರಣಕ್ಕೆ ಡಾ.ಸುಧಾಕರ್ ಬೆಲೆ ತೆತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಕ್ರಷರ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿ ಆರು ಕಾರ್ಮಿಕರು ಅಮಾನುಷವಾಗಿ ಸಾವನ್ನಪ್ಪಿದ ಸಂದರ್ಭದಲ್ಲೇ ಬಿಜೆಪಿ ಹೈಕಮಾಂಡ್ ಸುಧಾಕರ್ ಮೇಲೆ ಕಣ್ಣಿಟ್ಟಿತ್ತು. ಆಮೇಲೆ ಕೋವಿಡ್ ನಿರ್ವಹಣೆಯಲ್ಲಿ ಉಂಟಾದ ವೈಫಲ್ಯಗಳು ಹಾಗೂ ಪ್ರತಿಪಕ್ಷ ನಾಯಕರಿಂದ ಕೇಳಿಬಂದ ಆರೋಪಗಳ ಕಾರಣದಿಂದಲೂ ಸುಧಾಕರ್ ರಾಜ್ಯ ಮತ್ತು ರಾಷ್ಟ್ರಮಟ್ಟದ ಬಿಜೆಪಿ ನಾಯಕರ ರೆಡಾರ್‌ನಲ್ಲೇ ಇದ್ದರು. ಮೊದಲ ಹಂತವಾಗಿ ಅವರನ್ನು ಕೋವಿಡ್ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಡಿಸಿಎಂಗೆ ಮಹತ್ವದ ಹೊಣೆ
ಹಿರಿಯ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಬೆಳಗಾವಿ ಜಿಲ್ಲೆ ಉಸ್ತುವಾರಿ ನೀಡಿದ ನಂತರ ಮತ್ತೊಬ್ಬ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿಗಳು ನೇಮಕ ಮಾಡಿದ್ದಾರೆ.
ಇನ್ನೊಂದು ಮಹತ್ವದ ಹೊಣೆಯಾದ ಕೋವಿಡ್ ವಾರ್ ರೂಂ ಉಸ್ತುವಾರಿಯನ್ನು ಸಚಿವ ಅರವಿಂದ ಲಿಂಬಾವಳಿ ಅವರಿಗೆ ನೀಡಲಾಗಿದೆ. ಉಳಿದೆಲ್ಲ ಜವಾಬ್ದಾರಿಗಳಿಗಿಂದ ಮತ್ತೂ ಮಹತ್ವದ್ದಾದ ಆಮ್ಲಜನಕ ಹಂಚಿಕೆ ಜವಾಬ್ದಾರಿಯನ್ನು ಹಿರಿಯ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಕೊಡಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರದ ಜತೆಯೂ ಶೆಟ್ಟರ್ ಅವರೇ ಸಂವಹನ ನಡೆಸಲಿದ್ದಾರೆ.
ಮೇಲಿನ ಎಲ್ಲ ಜವಾಬ್ದಾರಿಗಳಷ್ಟೇ ಪ್ರಾಮುಖ್ಯತೆಯುಳ್ಳ ಸಿಬ್ಬಂದಿ ನಿರ್ವಹಣೆ, ನೇಮಕಾತಿ & ರೆಮಿಡಿಸ್ವೀರ್ ಮತ್ತಿತರೆ ಔಷಧ ಪೂರೈಕೆ ಕಂಪನಿಗಳ ಜತೆಗೆ ಸಮನ್ವಯ ನಡೆಸುವ & ಖರೀದಿ ವ್ಯವಹಾರ ನಡೆಸುವ ಹೊಣೆಯನ್ನು ಡಿಸಿಎಂ ಡಾ. ಅಶ್ವತ್ಥನಾರಾಯಣ ಅವರಿಗೆ ವಹಿಸಲಾಗಿದೆ.
ಅಲ್ಲದೆ, ಡಾ.ಸುಧಾಕರ್ ಉಸ್ತುವಾರಿಯಲ್ಲಿದ್ದ ಎಲ್ಲ ಮೆಡಿಕಲ್ ಕಾಲೇಜುಗಳ ಜಗೆ ಸಂವಹನ ನಡೆಸುವ ಹಾಗೂ ಔಷಧಿ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಹೊಣೆಯನ್ನು ಡಿಸಿಎಂ ಅವರಿಗೇ ಕೊಡಲಾಗಿದೆ.
ಇದಾದ ಮೇಲೆ, ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡುವ ಹೊಣೆಗಾರಿಕೆಯನ್ನು ಮತ್ತೋರ್ವ ಹಿರಿಯ ಸಚಿವದ್ವಯರಾದ ಆರ್.ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಲಾಗಿದೆ. ಬೆಡ್ ಹಂಚಿಕೆಯಲ್ಲಿ ಬಿಬಿಎಂಪಿ ಹಾಗೂ ಖಾಸಗಿ ಆಸ್ಪತ್ರೆಗಳ ವಲಯದಲ್ಲಿ ಭಾರೀ ಅವ್ಯಹಾರ ನಡೆಯುತ್ತಿರುವುದನ್ನು ಸಂಸದ ತೇಜಸ್ವಿ ಸೂರ್ಯ ಪತ್ತೆ ಹಚ್ಚಿದ ಬೆನ್ನಲ್ಲೇ ಬೆಡ್ ಹಂಚಿಕೆ ಹೊಣೆಗಾರಿಕೆಯನ್ನೂ ಈ ಇಬ್ಬರು ಸಚಿವರಿಗೆ ಹಂಚಲಾಗಿದೆ.
ಆರಂಭದಿಂದಲೂ ಆತೃಪ್ತಿ
ಲಾಕ್‌ಡೌನ್ ಹೇರಿಕೆ ಸೇರಿದಂತೆ ಕೋವಿಡ್ ನಿರ್ವಹಣೆಯಲ್ಲಿ ಆರಂಭದಿಂದೂ ಡಾ.ಸುಧಾಕರ್ ವಿರುದ್ಧ ಅತೃಪ್ತಿ ಇದ್ದೇ ಇತ್ತು. ಹಲವಾರು ಶಾಸಕರು, ಸಚಿವರು ಮುಖ್ಯಮಂತ್ರಿಗಳ ಬಳಿ ಅವರ ವಿರುದ್ಧ ಪದೇಪದೆ ದೂರಿದ್ದರು. ಮುಖ್ಯಮಂತ್ರಿ ಅವರ ಆಪ್ತ ಶಾಸಕ ರೇಣುಕಾಚಾರ್ಯ ಅವರು ಬಹಿರಂಗವಾಗಿಯೇ ಸುಧಾಕರ್ ವಿರುದ್ಧ ಗುಡುಗಿದ್ದರಲ್ಲದೆ ನೇರವಾಗಿ ಯಡಿಯೂರಪ್ಪ ಅವರಿಗೂ ದೂರಿದ್ದರು. ಹಾಗೆಯೇ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೂ ಕೆಲ ಶಾಸಕರು ಆರೋಗ್ಯ ಸಚಿವರ ವಿರುದ್ಧ ದೂರಿದ್ದರು.
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್ ನಿರ್ವಹಣೆ ವಿಚಾರದಲ್ಲಿ ಎಲ್ಲ ಸಚಿವರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ಎಲ್ಲ ಉಸ್ತುವಾರಿ ಸಚಿವರೂ ಅವರವರ ಜಿಲ್ಲೆಗಳಲ್ಲೇ ಮೊಕ್ಕಾಂ ಹೂಡಿರಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಇದೇ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಡಿಮಾಂಡ್ ಮಾಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒತ್ತಾಯ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಬಿಎಂಪಿ ಡೆತ್ ಆಡಿಟ್‌ನಲ್ಲಿ 100ಕ್ಕೂ ಹೆಚ್ಚು ಜನ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಮರಣ ಹೊಂದಿದ್ದಾರೆ ಎಂದು ಒಪ್ಪಿಕೊಂಡಿದೆ. ಬೆಂಗಳೂರಿನಲ್ಲಿಯೇ ಇಷ್ಟು, ರಾಜ್ಯಾದ್ಯಂತ ಇನ್ನೆಷ್ಟು? ಇದಕ್ಕೆ ಹೊಣೆಯಾದ ಆರೋಗ್ಯ ಸಚಿವ ಸುಧಾಕರ್ ಅವರ ತಲೆದಂಡ ಯಾವಾಗ ಎಂದು ಪ್ರಶ್ನಿಸಿದೆ.