Special Story
P K CHANNAKRISHNA I D G PAVAN KALYAN
ಬಾಗೇಪಲ್ಲಿ: ಪಾಳುಬಿದ್ದಿರುವ ಶಿಕ್ಷಣ ತಜ್ಞ, ಪದ್ಮಭೂಷಣ ಎಚ್ಎನ್ ಉದ್ಯಾನವನವೂ ಸೇರಿದಂತೆ ಪಟ್ಟಣದಲ್ಲಿರುವ ನಾಲ್ಕೂ ಉದ್ಯಾನವನಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಪುರಸಭೆ ಮುಂದಾಗಿದೆ.
ಈಗಾಗಲೇ ಉದ್ಯಾನವನಗಳ ಸಮಗ್ರ ಯೋಜನೆ ರೂಪಿಸಲಾಗಿದ್ದು, ಅದಕ್ಕೆ ಮಂಜೂರಾತಿಯೂ ದೊರೆತಿದೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಉದ್ಯಾನವನಗಳಿಗೆ ಕಾಯಕಲ್ಪ ನೀಡಲಾಗುತ್ತಿದ್ದು, ಎಚ್ಎನ್ ಉದ್ಯಾನವನವೂ ಹೊಸರೂಪ ಪಡೆದುಕೊಳ್ಳಲಿದೆ. ಈ ಉದ್ಯಾನದಲ್ಲಿ ವಿರೂಪಗೊಂಡಿರುವ ಎಚ್ಎನ್ ಪುತ್ಥಳಿಯನ್ನು ಬದಲಿಸಿ ಹೊಸ ಪುತ್ಥಳಿಯನ್ನು ಇಡಲಾಗುತ್ತಿದೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಬಾಗೇಪಲ್ಲಿ ಪುರಸಭೆಯ ಮುಖ್ಯ ಆಡಳಿತಾಧಿಕಾರಿ ಪಂಕಜಾ ರೆಡ್ಡಿ ಅವರು ಹೇಳಿದ್ದಿಷ್ಟು;
“ಡಿಎಂಎಫ್ಡಿ ಯೋಜನೆ ಅಡಿಯಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ನಾಲ್ಕೂ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಲ್ಲಿ ಎಚ್ಎನ್ ಪಾರ್ಕ್ ಕೂಡ ಸೇರಿದೆ. 26 ಲಕ್ಷ ರೂ.ಗಳ ಟೆಂಡರ್ ಅಂತಿಮವಾಗಿದ್ದು, ಇನ್ನೇನು ಕಾರ್ಯಾದೇಶ ಕೊಡುವುದೊಂದೇ ಬಾಕಿ ಇದೆ. ಕಾರ್ಯಾದೇಶ ಪಡೆಯುವ ಮುನ್ನ ಗುತ್ತಿಗೆದಾರರು ಕೆಲ ಪ್ರಕ್ರಿಯೆಗಳನ್ನು ಪೂರೈಸಬೇಕಿದ್ದು, ಅವು ಮುಗಿದ ನಂತರ ಹಣ ಬಿಡುಗಡೆ ಮಾಡಲಾಗುವುದು. ಎಲ್ಲ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿ ಬಹುಶಃ ಲಾಕ್ಡೌನ್ ಮುಗಿದ ನಂತರ ಆರಂಭವಾಗಬಹುದು”
ಸಂಪೂರ್ಣ ಕಾಯಕಲ್ಪ
“ಮುಂದೆ ದಿನಗಳಲ್ಲಿ ಎಚ್ಎನ್ ಉದ್ಯಾನವನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಮುಳ್ಳಿನ ಗಿಡಗಂಟೆಗಳನ್ನು ತೆರವು ಮಾಡಿ, ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇನ್ನಷ್ಟು ಉತ್ತಮ ಗಿಡಗಳನ್ನು ನೆಡುವುದರ ಜತೆಗೆ, ಈಗಾಗಲೇ ಇರುವ ವಾಕಿಂಗ್ ಟ್ರ್ಯಾಕ್, ಕಾಂಪೌಂಡ್ ವಾಲ್ ಇತ್ಯಾದಿಗಳಿಗೆ ಹಾನಿಯಾಗಿದ್ದರೆ ಸರಿಪಡಿಸಲಾಗುವುದು. ವಿರೂಪವಾಗಿರುವ ಎಚ್ಎನ್ ಪ್ರತಿಮೆಯನ್ನು ತೆರವು ಮಾಡಿ ಹೊಸ ಪ್ರತಿಮೆಯನ್ನು ಇಡಲಾಗುವುದು. ಆ ಪ್ರತಿಮೆ ಸಿಮೆಂಟಿನದ್ದಾಗಿರಬೇಕೆ ಅಥವಾ ಶಿಲೆಯಲ್ಲಿ ಮಾಡಿದ್ದಾಗಿರಬೇಕೆ ಎಂಬುದನ್ನು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.”
“ಉದ್ಯಾನವನದ ಸುತ್ತಲೂ ಪರಿಸರ ಸ್ವಚ್ಛವಾಗಿರುವಂತೆ ಕ್ರಮ ವಹಿಸಲಾಗುತ್ತಿದೆ. ಯಾರೂ ಕೂಡ ಪಾರ್ಕಿನ ಸುತ್ತಮುತ್ತ ಕಸ ಹಾಕದಂತೆ ಬಿಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆ ಪ್ರದೇಶದ ಕಸವನ್ನೆಲ್ಲ ಜನರು ತಂದು ಒಂದೆಡೆ ಸುರಿಯುತ್ತಿದ್ದರು. ಅದನ್ನು ಈಗ ತಡೆಯಲಾಗಿದೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ಈ ಪರಿಸರ ಪ್ರದೇಶವನ್ನು ಅಭಿವೃದ್ಧಿಪಡಿಸುವುದಕ್ಕೆ ಪುರಸಭೆ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವನೆ ಇಡಲಾಗುವುದು. ಎಚ್ಎನ್ ಪಾರ್ಕ್ ಮಾತ್ರವಲ್ಲದೆ ಅದರ ಸುತ್ತಮುತ್ತಲ ಪ್ರದೇಶವು ಸ್ವಚ್ಛವಾಗಿರುವಂತೆ ಕ್ರಮ ವಹಿಸಲಾಗುವುದು.”
“ಬೆಳಗ್ಗೆ & ಸಂಜೆ ಹೊತ್ತು ಜನ ವಾಕಿಂಗ್ ಮಾಡಲು, ಮಕ್ಕಳು ಆಟವಾಡಲು, ವಿದ್ಯಾರ್ಥಿಗಳು ಕೂತು ಓದಿಕೊಳ್ಳಲು ಇಡೀ ಪಾರ್ಕ್ನ್ನು ಸಜ್ಜುಗೊಳಿಸಲಾಗುವುದು. ವರ್ಷದ ಹಿಂದೆಯೇ ಈ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳು ಪೂರ್ಣವಾಗಬೇಕಿತ್ತು. ಕೋವಿಡ್ ಕಾರಣ ತಡವಾಗಿದೆ.”
ಈಗ ಹೇಗಿದೆ ಉದ್ಯಾನವನ?
ಪದ್ಮಭೂಷಣ ಡಾ.ಎಚ್.ಎಚ್.ನರಸಿಂಹಯ್ಯ ಅವರ ಸ್ಮರಣಾರ್ಥ ನಿರ್ಮಿಸಿದ್ದ ಉದ್ಯಾನವು ಪೂರ್ಣವಾಗಿ ಪಾಳು ಬಿದ್ದಿದೆ. ಪಟ್ಟಣದ 20ನೇ ವಾರ್ಡಿನಲ್ಲಿರುವ ಸ್ಮಾರಕ ಉದ್ಯಾನವನವು ಈಗ ಅಕ್ಷರಶಃ ಅದ್ವಾನಗಳ ಆಗರವಾಗಿದೆ.
ಉದ್ಯಾನವನದ ತುಂಬಾ ಮುಳ್ಳಿನ ಗಿಡಗಂಟೆಗಳು ಬೆಳೆದಿವೆ. ರಾಶಿ ರಾಶಿ ಕಸಕಡ್ಡಿ ಬಿದ್ದಿದೆ. ನೆಡಲಾಗಿರುವ ಗಿಡಗಳು ನೀರಿಲ್ಲದೆ ಒಣಗಿ ಹೋಗಿವೆ. ಸಂಜೆಯಾದರೆ ಇದು ಪುಂಡ ಪೋಕರಿಗಳ, ಕುಡುಕರ ಅಡ್ಡೆಯಂತಾಗಿ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿಬಿಟ್ಟಿದೆ.
2017ರಲ್ಲಿ ಪುರಸಭೆ ವತಿಯಿಂದ ಡಾ.ಎಚ್ಎನ್ ಉದ್ಯಾನವನ ನಿರ್ಮಿಸಲಾಗಿತ್ತು. ಪಟ್ಟಣದ ಮುಖ್ಯರಸ್ತೆಯಿಂದ ಗಂಗಮ್ಮನ ಗುಡಿ ರಸ್ತೆ ಮೂಲಕ ದರ್ಗಾ ವೃತ್ತ ಮೂಲಕ ಆಂಧ್ರ ಪ್ರದೇಶದ ಕೊಡಿಕೊಂಡಕ್ಕೆ ಹೋಗುವ ರಸ್ತೆಯಲ್ಲಿ 70 ಗುಂಟೆ ಸರಕಾರಿ ಭೂಮಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿತ್ತು.
ಉದ್ಯಾನವನಕ್ಕೆ ಸುತ್ತಲೂ ಕಾಂಪೌಂಡ್ ಕೂಡ ಇದೆ. ಕೂರಲು ಆಸನಗಳನ್ನು ಹಾಕಲಾಗಿದೆ. ವಾಕಿಂಗ್ ಟ್ರ್ಯಾಕ್ ಇದೆ. ಅರಣ್ಯ ಇಲಾಖೆಯವರು ಗಿಡ ನೆಟ್ಟಿದ್ದಾರೆ. ಕೊಳವೆ ಬಾವಿಯನ್ನೂ ಕೊರೆಸಲಾಗಿದ್ದು, ನೀರಿನ ಸಂಗ್ರಹಗಾರವೂ ಇದೆ. ಇದಾವುದರ ನಿರ್ವಹಣೆಯೂ ಇಲ್ಲದೆ ಉದ್ಯಾನವನ ಪಾಳು ಬಿದ್ದಿದೆ. ಅಲ್ಲದೆ, ಮಳೆ ನೀರು ಇಂಗುವ ವ್ಯವಸ್ಥೆಯನ್ನೂ ಮಾಡಿಲ್ಲ.
ಎಚ್ಎನ್ ಪುತ್ಥಳಿ ವಿರೂಪ
ಉದ್ಯಾನವನದ ಹೃದಯ ಭಾಗದಲ್ಲಿರುವ ಎಚ್ಎನ್ ಅವರ ಎದೆಮಟ್ಟದ ಪುತ್ಥಳಿಯನ್ನು ಸ್ಥಾಪನೆ ಮಾಡಲಾಗಿದೆ. ಯಾರೋ ಕಿಡಿಗೇಡಿಗಳು ಈ ಪುತ್ಥಳಿಯನ್ನು ಕೂಡ ವಿರೂಪಗೊಳಿಸಿದ್ದಾರೆ. ಅದರ ಜತೆಗೆ ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆನೆದ ಕಾರಣಕ್ಕೆ ಆ ಪುತ್ಥಳಿಯೂ ಬಿರುಕುಬಿಟ್ಟು ಶಿಥಿಲವಾಗುತ್ತಿದೆ. ಈಗಲೂ ಮೇಲ್ಛಾವಣಿ ಇಲ್ಲದೆ ಎಚ್ಎನ್ ವಿಗ್ರಹ ಬಿರುಬಿಸಿಲಿನಲ್ಲಿ ಒಣಗುತ್ತಿದೆ. ಉದ್ಯಾನವನಕ್ಕೆ ಸೂಕ್ತ ಭದ್ರತೆ ಹಾಗೂ ನಿರ್ವಹಣೆ ಇಲ್ಲದ ಕಾರಣಕ್ಕೆ ಆ ಪುತ್ಥಳಿಯ ಸುತ್ತಲೂ ಸೇದಿ ಬಿಸಾಡಿದ ಬೀಡಿ-ಸಿಗರೇಟ್ ತುಂಡುಗಳು, ಮದ್ಯದ ಬಾಟಲಿಗಳು ಬಿದ್ದಿವೆ. ಕೊನೆಪಕ್ಷ ಪುತ್ಥಳಿ ಮುಂದೆ ಒಂದು ನಾಮಫಲಕವನ್ನೂ ಹಾಕಿಲ್ಲ.
ನ್ಯಾಷನಲ್ ಕಾಲೇಜ್ ಪ್ರಿನ್ಸಿಪಾಲರು ಏನಂತಾರೆ?
“ಎಚ್ಎನ್ ಉದ್ಯಾನವನ ಪಾಳು ಬಿದ್ದಿರುವ ಸುದ್ದಿ ಕೇಳಿ ಬೇಸರವಾಯಿತು. ಅದಕ್ಕಾಗಿ ಶನಿವಾರ & ಭಾನುವಾರ ಎರಡು ದಿನ ನಾನು ಆ ಪಾರ್ಕ್ಗೆ ಭೇಟಿ ನೀಡಿದ್ದೆ. ಎಲ್ಲವೂ ಅವ್ಯವಸ್ಥೆ, ಪಾಳುಬಿದ್ದಿದೆ. ಎಚ್ಎನ್ ಪುತ್ಥಳಿ ಸುತ್ತಲೇ ಬಿಯರ್ ಬಾಟಲಿಗಳು, ಸಿಗರೇಟ್ ತುಂಡುಗಳು ಬಿದ್ದಿದ್ದನ್ನು ಕಂಡೆ. ಬಹಳ ಬೇಸರವಾಯಿತು. ಈ ಹಿಂದೆಯೇ ಪುರಸಭೆ ಮುಖ್ಯ ಅಧಿಕಾರಿಪಂಕಜಾ ರೆಡ್ಡಿ ಅವರ ಜತೆ ಮಾತನಾಡಿದ್ದೆ. ಕೋವಿಡ್ ಕಾರಣದಿಂದ ಉದ್ಯಾನವನ ಅಭಿವೃದ್ಧಿ ವಿಳಂಬವಾಗಿರಬಹುದು” ಎನ್ನುತ್ತಾರೆ ನ್ಯಾಷನಲ್ ಪದವಿ ಕಾಲೇಜ್ ಪ್ರಾಂಶುಪಾಲ ಡಾ.ರಾಮಯ್ಯ.
ಕಾಲೇಜು ಪುನಾರಂಭ ಆದ ಮೇಲೆ ನಮ್ಮ ಕಾಲೇಜ್ನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳನ್ನು ವಾರಕ್ಕೊಮ್ಮೆಯಾದರೂ ಕರೆದುಕೊಂಡು ಹೋಗಿ ಎಚ್ಎನ್ ಉದ್ಯಾನವನದಲ್ಲಿ ಶ್ರಮದಾನ ಮಾಡಿಸಲಾಗುವುದು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಒಪ್ಪಿಗೆ ಪಡೆಯುತ್ತೇನೆ ಎಂದು ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.