ಬೆಂಗಳೂರು: ಇದೇ ಮೇ 10ರಿಂದ 18-44 ವರ್ಷ ವಯೋಮಾನದವರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮೇ 10ರಿಂದ ಬೆಂಗಳೂರಿನ ಕೆ.ಸಿ.ಜನರಲ್, ಜಯನಗರ ಜನರಲ್, ಸರ್ ಸಿ.ವಿ.ರಾಮನ್ ಜನರಲ್, ಇಎಸ್ ಐ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಹಾಗೂ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 18-44 ವರ್ಷದವರಿಗೆ ಕೋವಿಡ್ ಲಸಿಕೆ ವಿತರಿಸಲಾಗುವುದು. ಇತರೆ ಜಿಲ್ಲೆಗಳಲ್ಲಿ ಆರಂಭಿಕವಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಹಾಗೂ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ 18-44 ವಯೋಮಾನದವರಿಗೆ ಲಸಿಕೆ ನೀಡಲಾಗುವುದು. ಲಸಿಕೆ ಪೂರೈಕೆ ಹೆಚ್ಚಾಗುತ್ತಿದ್ದಂತೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆ ಕೇಂದ್ರಗಳಲ್ಲಿ ವಿತರಣೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.
18-44 ವಯೋಮಾನದವರಿಗೆ ಲಸಿಕೆ ವಿತರಿಸುವ ಎಲ್ಲಾ ಕೇಂದ್ರಗಳಲ್ಲಿ ಈ ಗುಂಪಿನವರಿಗೆ ಪ್ರತ್ಯೇಕ ಸ್ಥಳ ಗುರುತಿಸಲಾಗುವುದು. ಕೋವಿಡ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಿಸಿ, ಸಮಯ ನಿಗದಿ ಮಾಡಿಕೊಂಡಿರುವವರಿಗೆ ಮಾತ್ರ ಲಸಿಕೆ ನೀಡಲಾಗುವುದು. ನೋಂದಣಿ ಇಲ್ಲದೆ ನೇರವಾಗಿ ಲಸಿಕೆ ಕೇಂದ್ರಕ್ಕೆ ಬರುವವರಿಗೆ ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರತಿ ವ್ಯಕ್ತಿಗೂ ಆದಷ್ಟು ಶೀಘ್ರದಲ್ಲಿ ಲಸಿಕೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಅಗತ್ಯ ಲಸಿಕೆ ಪೂರೈಕೆ ಮಾಡಿಕೊಳ್ಳಲು ನಿರಂತರ ಪ್ರಯತ್ನ ಸಾಗಿದೆ. ಆದ್ದರಿಂದ ಎಲ್ಲಾ ನಾಗರಿಕರು, ಅದರಲ್ಲೂ ವಿಶೇಷವಾಗಿ ನನ್ನ ಯುವಮಿತ್ರರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯಬೇಕು. ಖಂಡಿತವಾಗಿ ಲಸಿಕೆ ಸಿಗುತ್ತದೆ ಎಂದು ಸಚಿವರು ಮನವಿ ಮಾಡಿದರು.
18-44 ವರ್ಷವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮೇ 1ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಂಕೇತಿಕ ಚಾಲನೆ ನೀಡಿದ್ದರು. ರಾಜ್ಯದಲ್ಲಿ 3.26 ಕೋಟಿ ಈ ವಯೋಮಾನದವರಿದ್ದಾರೆ. ಎಲ್ಲರಿಗೂ 6.52 ಕೋಟಿ ಡೋಸ್ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ 2 ಕೋಟಿ ಕೋವಿಶೀಲ್ಡ್ ಡೋಸ್ ಹಾಗೂ 1 ಕೋಟಿ ಕೋವ್ಯಾಕ್ಸಿನ್ ಡೋಸ್ ಪೂರೈಕೆಗೆ ಬೇಡಿಕೆ ಇಡಲಾಗಿದೆ. ಸೀರಂ ಸಂಸ್ಥೆಯಿಂದ ಈವರೆಗೆ 6.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲಾಗಿದೆ. ಇನ್ನಷ್ಟು ಲಸಿಕೆ ಮೇ 2 ಅಥವಾ ಮೂರನೇ ವಾರ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.