Special Story
ಸೇವೆ, ಆರೈಕೆ, ಮಾತೃಪ್ರೇಮ, ನಿಸ್ವಾರ್ಥ ಮನೋಭಾವ.. ಇವು ಚಿಕ್ಕಬಳ್ಳಾಪುರದ ಸಿಎಸ್‌ಐ ನಾಲ್ಕು ಸ್ತಂಭಗಳಾಗಿದ್ದವು. ಆದರೆ ಈಗ??
M Krishnappa Chikkaballapura
ಚಿಕ್ಕಬಳ್ಳಾಪುರ: ಮದರ್ ಥೆರೆಸಾ ಅವರ ಆಶಯದಂತೆ ಕಳೆದೊಂದು ಶತಮಾನದಿಂದ ದಕ್ಷಿಣ ಭಾರತದಲ್ಲೇ ಆರೋಗ್ಯ ಸೇವೆಯಲ್ಲಿ ಉನ್ನತ ಹೆಸರು ಮಾಡಿದ್ದ ನಗರದ ಸಿಎಸ್ಐ ಆಸ್ಪತ್ರೆ (ಮಿಷನ್ ಆಸ್ಪತ್ರೆ) ಇದೀಗ ಮೂಲ ಆಶಯವನ್ನೇ ಮರೆತು ಹಣ ದೋಚುವ ಅಡ್ಡೆಯಾಗಿ ಬದಲಾಗಿದೆ.
ಹೌದು. 1913ರಲ್ಲಿ ಸ್ಥಾಪನೆಯಾಗಿ ಚಿಕ್ಕಬಳ್ಳಾಪುರ ಜನರ ಜೀವರಕ್ಷಕ ತಾಣವಾಗಿದ್ದ ಸಿಎಸ್ಐ ಆಸ್ಪತ್ರೆ ಎಂದರೆ ಜನತೆಗೆ ಅಪಾರ ಭರವಸೆ ಇತ್ತು. ಅಲ್ಲಿಗೆ ಹೋದರೆ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಹಾಗೂ ಜೀವವೂ ಉಳಿಯುತ್ತದೆ ಎಂಬ ನಂಬಿಕೆ ಇತ್ತು. ಡಾ.ಹಿಕ್ಲಿಂಗ್, ಡಾ.ಕಟಿಂಗ್, ಡಾ.ರಾಬಿನ್ ಸನ್ ಅವರಂಥ ಶ್ರೇಷ್ಠ ವೈದ್ಯರು ಸೇವೆ ಸಲ್ಲಿಸಿದ್ದ ಆಸ್ಪತ್ರೆ ಇದಾಗಿತ್ತು. ನಿಸ್ವಾರ್ಥತೆಯಿಂದ ಸೇವೆ ಮಾಡುತ್ತಿದ್ದ ಅನೇಕ ಅರೆವೈದ್ಯಕೀಯ ಸಿಬ್ಬಂದಿ, ದಾದಿಯರು ಇದ್ದ ಅತ್ಯುತ್ತಮ ಚಿಕಿತ್ಸಕ ತಾಣವಾಗಿತ್ತು.
ಅಷ್ಟೇ ಅಲ್ಲ, ಚಿಕ್ಕಬಳ್ಳಾಪುರ ಸಿಎಸ್ಐ ಆಸ್ಪತ್ರೆ ಎಂದರೆ ಕರ್ನಾಟಕದ ಎಲ್ಲ ಜಿಲ್ಲೆಗಳೂ ಸೇರಿದಂತೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಭಾಗಗಳಿಂದ ಜನರು ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಿದ್ದರು. ಎಲ್ಲೆಲ್ಲೋ ಹೋದರೂ ಗುಣಮುಖವಾಗದ ಅನೇಕ ಕಾಯಿಲೆಗಳನ್ನು ಇಲ್ಲಿದ್ದ ಸೇವಾತತ್ಪರ ವೈದ್ಯರು ಗುಣಪಡಿಸುತ್ತಿದ್ದರಲ್ಲದೆ, ʼವೈದ್ಯೋ ನಾರಾಯಣೋ ಹರಿʼ ಎಂದ ಮಾತನ್ನು ಸತ್ಯ ಮಾಡಿದ್ದರು.
ನೂರಾರು ಮೈಲು ದೂರದಿಂದ ಇಲ್ಲಿಗೆ ಬರುತ್ತಿದ್ದ ರೋಗಿಗಳು ಕೂಡ ಅನೇಕ ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದು ಸಂಪೂರ್ಣ ಗುಣಮುಖರಾಗಿ ವಾಪಸ್ ಹೋಗುತ್ತಿದ್ದರು. ರೋಗಿಗಳ ಜೊತೆ ಬರುತ್ತಿದ್ದ ಸಂಬಂಧಿಕರನ್ನು ಆಸ್ಪತ್ರೆಯ ಸಿಬ್ಬಂದಿ ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಸೇವೆ, ಆರೈಕೆ, ಮಾತೃಪ್ರೇಮ, ನಿಸ್ವಾರ್ಥ ಮನೋಭಾವ ಈ ಆಸ್ಪತ್ರೆಯ ನಾಲ್ಕು ಸ್ತಂಭಗಳಾಗಿದ್ದವು.
ಅಂಥ ಆಸ್ಪತ್ರೆಗೆ ಏನಾಗಿದೆ?
ಈಗ ಈ ಆಸ್ಪತ್ರೆ ಮೊದಲಿನಂತೆ ಇಲ್ಲ. ರೋಗಿಗಳ ಪಾಲಿಗೆ ಅಕ್ಷರಶಃ ನರಕವಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿಯ ಧನದಾಹ ಜನರನ್ನು ಕಿತ್ತು ತಿನ್ನುತ್ತಿದೆ. ವೈದ್ಯಸೇವೆ ಎಂಬುದು ಮರೀಚಿಕೆಯಾಗಿ ಹೆಣದ ಮೇಲೂ ಹಣ ಮಾಡುವ ನಿಕೃಷ್ಠ ಪರಿಸ್ಥಿತಿಗೆ ತಲುಪಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಇಡೀ ಜಗತ್ತೇ ಕೋವಿಡ್ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಸಾವಿನ ಮನೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಂಕು ಮರಣ ಮೃದಂಗ ಭಾರಿಸುತ್ತಿದೆ. ನಿತ್ಯವೂ ಹೆಣಗಳ ಮೆರವಣಿಗೆ ನಡೆದಿದೆ. ಇಂಥ ಸಂಕಷ್ಟ ಸಮಯದಲ್ಲೂ ಸಿಎಸ್‌ಐ ಆಸ್ಪತ್ರೆ ಹಣ ಮಾಡುವ ದಂಧೆಯಲ್ಲಿ ನಿರತವಾಗಿದೆ.
ಯಾಕೆ ಹೀಗಾಯಿತು?
108 ವರ್ಷಗಳ ಇತಿಹಾಸವುಳ್ಳ ಸಿಎಸ್ಐ ಆಸ್ಪತ್ರೆಯು ಉಚಿತ ಚಿಕಿತ್ಸೆ ಹಾಗೂ ನಿಸ್ವಾರ್ಥ ಸೇವೆಗೆ ಹೆಸರಾಗಿತ್ತು. ಎರಡೂವರೆ ವರ್ಷಗಳ ಹಿಂದೆಯಷ್ಟೆ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿದ್ದ ಡಾ.ರಿತೀಶ್ ಜಾನ್ಸನ್ ಅವರು ವೈಯಕ್ತಿಕ ಆರೋಗ್ಯದ ಸಮಸ್ಯೆಯಿಂದ ರಜೆ ಮೇಲೆ ತೆರಳಿದ್ದೇ ಈ ಆಸ್ಪತ್ರೆಗೆ ಗ್ರಹಣವಾಗಿ ಮಾರ್ಪಟ್ಟಿತು.
ಡಾ.ರಿತೀಶ್ ಜಾನ್ಸನ್ ಅವರ ಜಾಗಕ್ಕೆ ಪ್ರಭಾರಿಯಾಗಿ ನೇಮಕಗೊಂಡ ಡಾ.ಜಾಯ್ ಕ್ರೈಸ್ಟ್ ಅವರು ಈ ಆಸ್ಪತ್ರೆಗೆ ಸಂಭಂದವಿಲ್ಲದ ಅವರ ತಂದೆ ಮತ್ತಿತರರ ಅಣತಿಯಂತೆ ನಡೆದುಕೊಳ್ಳುವ ಮೂಲಕ ಕೋವಿಡ್ ಕಷ್ಟಕಾಲವನ್ನೇ ಹಣ ಮಾಡುವ ಸುಗ್ಗಿಕಾಲವನ್ನಾಗಿ ಮಾರ್ಪಡಿಸಿಕೊಳ್ಳಲು ಮೂಲಗಳ ಪ್ರಕಾರ ಇಲ್ಲಿನ ಇವರು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಬಿಷಪ್ ಅವರ ಗಮನಕ್ಕೂ ತಾರದೆ ಕೊವಿಡ್ ಕೇರ್ ಸೆಂಟರ್ ಮಾಡಲು ಹುನ್ನಾರ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಆಸ್ಪತ್ರೆಯ ಮೂಲ ಆಶಯಗಳನ್ನೆ ಮೂಲೆಗುಂಪಾಗಿದ್ದಾರೆ ಎನ್ನುವ ದೂರುಗಳು ಸಹ ವ್ಯಾಪಕವಾಗಿ ಕೇಳಿಬರುತ್ತಿವೆ. ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಅಲ್ಲಿನ ಸಿಬ್ಬಂದಿ ಹಾಗೂ ಸಮುದಾಯದ ಬಹುತೇಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಖಾಸಗಿ ನರ್ಸಿಂಗ್ ಹೋಂ ಕರಾಮತ್ತು
ಈ ಅವ್ಯವಸ್ಥೆಗೆ ಪೂರಕವಾಗಿ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಸಿಎಸ್ಐ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಜೊತೆ ಕೈಜೋಡಿಸಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಮುಂದಾಗಿದ್ದಾರೆ ಎಂದು ಕ್ರೈಸ್ತ ಮುಖಂಡ ಸ್ಯಾಮ್ಯೂಯೆಲ್ ಸಂದೀಪ್ ಗಂಭೀರ ಆರೋಪ ಮಾಡಿದ್ದಾರೆ.
ದಕ್ಷಿಣ ಭಾರತದಲ್ಲಿಯೇ ಚಿಕ್ಕಬಳ್ಳಾಪುರ ಸಿಎಸ್ಐ ಆಸ್ಪತ್ರೆ ಬಹಳ ಹೆಸರುವಾಸಿಯಾಗಿತ್ತು. ಆಸ್ಪತ್ರೆಯ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಇತಿಹಾಸ ಪ್ರಸಿದ್ಧ ಹಾಗೂ ಉದಾತ್ತ ಸೇವೆಯ ಈ ಆಸ್ಪತ್ರೆಯನ್ನು ಖಾಸಗಿ ಕೊರೊನಾ ಆರೈಕೆ ಕೇಂದ್ರವನ್ನಾಗಿ ಮಾಡಿ ಹಣ ಲೂಟಿ ಮಾಡುವ ಹುನ್ನಾರ ನಡೆಲಾಗುತ್ತಿದೆ ಎಂದು ಸಂದೀಪ್ ದೂರಿದ್ದಾರೆ.
ಇನ್ನು ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಹಣದಾಸೆಗೆ ಬಿದ್ದು ಸಿಎಸ್‌ಐ ಮೇಲೆ ವಕ್ರದೃಷ್ಟಿ ಬೀರಿದ್ದಾರೆ. ತಮ್ಮದೇ ಆದ ಮೂರು ಅಂತಸ್ತಿನ ನರ್ಸಿಂಗ್ ಹೋಂ ಅನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡದೇ, ಅಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಭರ್ತಿ ಹಣ ಮಾಡುತ್ತಿದ್ದಾರೆಂದು ಸ್ವತಃ ಸ್ಯಾಮ್ಯೂಯೆಲ್ ಸಂದೀಪ್ ಮಾಡುವ ಆರೋಪ.
ಈಗ ಸಿಎಸ್ಐ ಆಸ್ಪತ್ರೆಯಲ್ಲಿ ಕೋವಿಡ್ ನೆಪವೊಡ್ಡಿ ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸಿ ವಸೂಲಿ ಮಾಡಲು ವ್ಯವಸ್ಥಿತ ಹುನ್ನಾರ ನಡೆದಿದೆ. ದುರಂತ ಎಂದರೆ ಈ ಆಸ್ಪತ್ರೆ ಕೊವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಲು ಕೆಲ ತಾಂತ್ರಿಕ ಸಮಸ್ಯೆ ಗಳಿದ್ದು, ಅದಕ್ಕಿನ್ನೂ ಪರವಾನಗಿ ಸಿಗಲು ಫೈಲ್ ಹಿಂದೆ ಬಿದ್ದಿದೆ ಆಡಳಿತ ಮಂಡಳಿ. ಹೀಗಿದ್ದರೂ ಪರವಾನಗಿ ಸಿಕ್ಕಿಲ್ಲ ಎಂಬುದು ನಿಶ್ಚಳ. ಚಿಕ್ಕಬಳ್ಳಾಪುರದಲ್ಲಿ ಜನಪ್ರಿಯಗೊಂಡ ಒಂದೆರಡು ಆಸ್ಪತ್ರೆಗಳು ದಿನಕ್ಕೆ ಸಾಮಾನ್ಯ ಕೊಠಡಿಗೆ 10 ಸಾವಿರದಿಂದ 12 ಸಾವಿರ ರೂ., ಹಾಗೂ ಆಕ್ಸಿಜನ್ ಕೊಟ್ಟರೆ 15 ರಿಂದ 22 ಸಾವಿರ ರೂ., ಮತ್ತು ಐಸಿಯು ಆರೈಕೆಗೆ 25 ಸಾವಿರ ರೂ. ನಿಗಧಿಪಡಿಸಿರುವ ಮಾಹಿತಿ ಇಡೀ ನಗರದಲ್ಲಿ ಹಬ್ಬಿದೆ. ಅದರಂತೆ ಈ ಆಸ್ಪತ್ರೆ ಲೂಟಿ ಮಾಡಬಹುದೆಂಬ ಆಸೆಯಿಂದ ಇಲಾಖೆಯೊಂದಕ್ಕೆ ಪರವಾನಗಿ ಪಡೆಯಲು ಎಡತಾಕುತ್ತಿದೆ ಎಂದು ಗೊತ್ತಾಗಿದೆ.
ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ
ಸಿಎಸ್‌ಐ ಆಸ್ಪತ್ರೆಯನ್ನು ಅಗತ್ಯವಾದರೆ ಸರಕಾರಿ ಕೋವಿಡ್ ಆಸ್ಪತ್ರೆಯನ್ನಾಗಿ ರೂಪಿಸಲಿ. ಆದರೆ, ಅಲ್ಲಿ ಖಾಸಗಿಯವರು ಕೋವಿಡ್ ಹೆಸರೇಳಿಕೊಂಡು ಹಣ ದೋಚುವುದಕ್ಕೆ ಅವಕಾಶ ನೀಡಬಾರದು ಎಂದು ಸ್ಯಾಮ್ಯೂಯೆಲ್ ಸಂದೀಪ್ ಜಿಲ್ಲಾಡಳಿತವನ್ನು ಒತ್ತಾಯ ಮಾಡಿದ್ದಾರೆ.
ಒಂದು ವೇಳೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಇದ್ದರೆ ಪ್ರತಿಭಟನೆ ನಡಸುವುದರ ಜತೆಗೆ, ಕ್ರೈಸ್ತ ಸಮುದಾಯದೊಂದಿಗೆ ಧರಣಿ ಕೂರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಿಬ್ಬಂದಿಗೆ ವೇತನ ನೀಡಿಲ್ಲ
ಸಿಕೆನ್ಯೂಸ್ ನೌ ಸಂಗ್ರಹಿಸಿರುವ ಮಾಹಿತಿಯಂತೆ ಆಸ್ಪತ್ರೆಯಲ್ಲಿ 35ಕ್ಕೂ ಹೆಚ್ಚು ಕಾಯಂ ಸಿಬ್ಬಂದಿ ಇದ್ದಾರೆ. ಆದರೆ ಇವರಿಗೆ ಕಳೆದ ಒಂದೂವರೆ ವರ್ಷದಿಂದ ವೇತನವನ್ನೇ ನೀಡಲಾಗಿಲ್ಲ. ಅಲ್ಲಿನ ವ್ಯವಸ್ಥೆ ಸರಿ ಇಲ್ಲದ ಕಾರಣಕ್ಕೆ ರೋಗಿಗಳು ಬರುತ್ತಿಲ್ಲ. ಬೆಂಗಳೂರಿನ ಆರ್ಚ್ ಬಿಷಪ್ ಅವರ ನಿಯಂತ್ರಣಕ್ಕೆ ಈ ಆಸ್ಪತ್ರೆ ಬರಲಿದ್ದು, ಅವರಾದರೂ ಗಮನ ಹರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಏನಂತಾರೆ?
ಸಿಎಸ್‌ಐ ಖಾಸಗಿ ಆಸ್ಪತ್ರೆಯಾದ್ದರಿಂದ ನಾವೇನೂ ಮಾಡಲಾಗದು. ಆದರೆ, ಸಿಬ್ಬಂದಿಗೆ ವೇತನ ನೀಡಿಲ್ಲ ಎಂದರೆ ತಪ್ಪಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ. ಇನ್ನು ಸಿಎಸ್‌ಐಗೆ ಆಸ್ಪತ್ರೆ ಪರವಾನಗಿ ಇಲ್ಲ, ಕೇವಲ ಕ್ಲಿನಿಕ್ ಪರವಾನಗಿಯಷ್ಟೇ ಇದೆ. ಅದಕ್ಕೆ ಕೋವಿಡ್ ಕೇರ್‌ಗೆ ಅನುಮತಿ ಕೊಡಬಹುದು. ಆದರೆ, ಅಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ಅವಕಾಶ ಇಲ್ಲ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅವರು ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಅವರಿಗೆ ಅನುಮತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಏನಾದರೂ ಈ ಆಸ್ಪತ್ರೆ ಅಭಿವೃದ್ಧಿಗೆ ಮುಂದಾದರೆ, ಜಿಲ್ಲಾಡಳಿತ ಖಂಡಿತಾ ಸಹಕಾರ ನೀಡುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.