ಬೆಂಗಳೂರು: ತೀವ್ರ ಆಮ್ಲಜನಕದ ಕೊರತೆ ಎದುರಿಸಿ ಐವರು ಕೋವಿಡ್ ಸೋಂಕಿತರನ್ನು ಕಳೆದುಕೊಂಡಿದ್ದ ಕೋಲಾರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ದಾನಿಗಳ ಮೂಲಕ ಒದಗಿಸಿದ್ದಾರೆ.
ಮಲ್ಲೇಶ್ವರದಲ್ಲಿ ಭಾನುವಾರ ಸಂಜೆ ನಡೆದ ಆಮ್ಲಜನಕ ಸಾಂದ್ರಕಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಅವರಿಗೆ ಡಿಸಿಎಂ ಅವರು ಈ ಸಾಂದ್ರಕಗಳನ್ನು ಹಸ್ತಾಂತರ ಮಾಡಿದರು.
ಈ ಸಾಂದ್ರಕಗಳನ್ನು ಕೋಲಾರ ಜಿಲ್ಲಾಸ್ಪತ್ರೆ, ಕೆಜಿಎಫ್ ಆಸ್ಪತ್ರೆಯಲ್ಲಿ ಬಳಕೆ ಮಾಡಲಾಗುವುದು ಹಾಗೂ ಅಗತ್ಯಬಿದ್ದರೆ, ಜಿಲ್ಲೆಯ ಯಾವುದೇ ಭಾಗದಲ್ಲಿ ಯಾರೇ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೂ ಒದಗಿಸಲಾಗುವುದು ಎಂದು ಡಿಸಿಎಂ ಹೇಳಿದರು.
ಈ ಸಂದರ್ಭದಲ್ಲಿ ಡಿಸಿಎಂ ಅವರಿಗೆ ಕೃತಜ್ಞತೆ ಸಲ್ಲಿಸಿದ ಮುನಿಸ್ವಾಮಿ, ಇನ್ನಷ್ಟು ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲೆಗೆ ಒದಗಿಸಬೇಕು ಎಂದು ಮನವಿ ಮಾಡಿದರು.
ಏನಿದು ಆಮ್ಲಜನಕ ಸಾಂದ್ರಕ? ಹಂಚಿಕೆ ಹೇಗೆ?
ಇದು ರೆಡಿಮೇಡ್ ಆಮ್ಲಜನಕ ಘಟಕದ ರೀತಿ ಕೆಲಸ ಮಾಡುತ್ತದೆ. ಸಾಗಾಣಿಕೆ ಸುಲಭ. ಮನೆಯಲ್ಲೇ ಸರಳವಾಗಿ ಬಳಸಬಹುದು. ಹೋಮ್ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಆಪದ್ಭಾಂದವನಂತೆ ಕೆಲಸ ಮಾಡುತ್ತದೆ.
ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾರಿಗಾದರೂ ಆಮ್ಲಜನಕದ ಕೊರತೆ ಉಂಟಾದ ತಕ್ಷಣ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿದರೆ ಸಾಕು. ತತ್‌ಕ್ಷಣವೇ ಅವರ ಮನೆ ಬಾಗಿಲಿಗೇ ಆಮ್ಲಜನಕ ಸಾಂದ್ರಕವನ್ನು ಸ್ವಯಂ ಸೇವಕರು ತಲುಪಿಸುತ್ತಾರೆ. ಜತೆಗೆ, ಅದನ್ನು ಬಳಸುವ ಬಗ್ಗೆ ಮಾಹಿತಿಯನ್ನೂ ನೀಡತ್ತಾರೆ. ಆ ಸೋಂಕಿತರು ಸಾಂದ್ರಕದ ಉಪಯೋಗ ಪಡೆದು ಅಪಾಯದಿಂದ ಪಾರಾದ ಮೇಲೆ ಅಥವಾ ಅವರಲ್ಲಿ ಆಮ್ಲಜನಕದ ಸಮಸ್ಯೆ ನೀಗಿದ ನಂತರ ಅದನ್ನು ವಾಪಸ್ ಪಡೆದು, ಸ್ಯಾನಿಟೈಸ್ ಮಾಡಿ ಪುನಾ ಅಗತ್ಯ ಇರುವ ಮತ್ತೊಬ್ಬ ಸೋಂಕಿತರಿಗೆ ನೀಡಲಾಗುವುದು. ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಆದ್ಯತೆಯ ಮೇಲೆ ಇವುಗಳನ್ನು ನೀಡಲಾಗುವುದು.
ಅತ್ಯಾಧುನಿಕವಾದ ಆಮ್ಲಜನಕ ಸಾಂದ್ರಕಗಳನ್ನು ಜಪಾನ್‌ನಿಂದ ತರಿಸಲಾಗಿದ್ದು, ಇವು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಈಗಾಗಲೇ ಕೋಲಾರ ಜಿಲ್ಲೆಗೆ ಒಮ್ಮೆ ಭೇಟಿ ನೀಡಿದ್ದ ಡಿಸಿಎಂ, ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದರು. ಅಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಎಲ್ಲ ಕ್ರಮಗಳಿಗೆ ಸೂಚನೆ ನೀಡಿದ್ದರು. ಮತ್ತೊಮ್ಮೆ ಜಿಲ್ಲೆಯ ಚುನಾಯಿತ ಹಾಗೂ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು. ಅದರ ಪರಿಣಾಮವಾಗಿ ಜಿಲ್ಲೆಯಲ್ಲಿ 300 ಆಕ್ಸಿಜನ್ & 150 ICU ಬೆಡ್ ವ್ಯವಸ್ಥೆ ಸೇರಿದಂತೆ 10 ದಿನದಲ್ಲಿ SNR ಆಸ್ಪತ್ರೆಯಲ್ಲಿ ನಿಮಿಷಕ್ಕೆ 1,000 ಕೆಎಲ್ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗಿದೆ.