ಬಾಗೇಪಲ್ಲಿ: ಕೋವಿಡ್ ಲಾಕ್ಡೌನ್ ಕಾಲದಲ್ಲಿ ಜನರ ಮೇಲೆ ಲಾಠಿ ಬೀಸುತ್ತಿರುವ ಪೊಲೀಸರ ನಡುವೆ ಇಲ್ಲೊಬ್ಬ ʼಒಳ್ಳೆಯ ಪೊಲೀಸ್ʼ ಎಲ್ಲರ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.
ಕಠಿಣ ಲಾಕ್ಡೌನ್ ಜಾರಿಯಾದ ಸೋಮವಾರ ಬೆಳಗ್ಗೆ ಬಾಗೇಪಲ್ಲಿಗೆ ಬಿಳ್ಳೂರಿನಿಂದ ಬಂದ ಮಹಿಳೆಯೊಬ್ಬರು ತಲೆ ಸುತ್ತಿ ರಸ್ತೆಯಲ್ಲಿ ಬಿದ್ದಿದ್ದಾಗ ಅವರಿಗೆ ಆರೈಕೆ ಮಾಡಿದ ಬಾಗೇಪಲ್ಲಿ ಪೊಲೀಸ್ ಠಾಣೆಯ ಪೇದೆ ಧನುಂಜಯ, ಆ ಮಹಿಳೆಯನ್ನು ತನ್ನ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ವೈದ್ಯರಿಂದ ಚಿಕಿತ್ಸೆ ಮಾಡಿಸಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?
ಸೋಮವಾರ ಬೆಳಗ್ಗೆ ಆಟೋದಲ್ಲಿ ಬಂದ ಆ ಮಹಿಳೆ ಗೂಳೂರು ವೃತ್ತದಲ್ಲಿ ಇಳಿದುಕೊಂಡಿದ್ದಾರೆ. ಬೆಳಗಿನ ಉಪಾಹಾರ ಸೇವಿಸದೇ ಸುಸ್ತಾಗಿದ್ದ ಆಕೆ ಬಿಸಿಲಿನ ಝಳಕ್ಕೆ ತಾಳಲಾಗದೆ ರಸ್ತೆಯ ಕುಸಿದುಬಿದ್ದಿದ್ದಾರೆ.
ನೂರಾರು ಜನರು ಓಡಾಡುವ ಆ ರಸ್ತೆಯಲ್ಲಿ ಯಾರೊಬ್ಬರೂ ಆ ಮಹಿಳೆಯ ನೆರವಿಗೆ ಬರಲಿಲ್ಲ. ಹಾಗೆ ರಸ್ತೆಯಲ್ಲಿ ಹಾದುಹೋದವರೆಲ್ಲ ನೋಡಿಕೊಂಡು ಹೋದರೆ ಹೊರತು ಆಕೆಗೆ ಗುಟುಕು ನೀರು ಕೊಡಲೂ ಮುಂದೆ ಬರಲಿಲ್ಲ.
ಅಷ್ಟರಲ್ಲಿ ಅದೇ ಮಾರ್ಗದಲ್ಲಿ ಬಂದ ಧನಂಜಯ, ಕೂಡಲೇ ಆ ಮಹಿಳೆಯ ನೆರವಿಗೆ ಧಾವಿಸಿದರು. ಕುಡಿಯಲು ನೀರು ಕೊಟ್ಟು, ಆಕೆ ತುಸು ಸುಧಾರಿಸಿಕೊಂಡ ಮೇಲೆ ತಮ್ಮ ಬೈಕ್ ಮೇಲೆ ಡಾ.ರವೀಂದ್ರ ರೆಡ್ಡಿ ಅವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ವೈದ್ಯರ ಚಿಕಿತ್ಸೆ ನಂತರ ಚೇತರಿಸಿಕೊಂಡ ಮಹಿಳೆ ಪೇದೆ ಧನಂಜಯ ಅವರಿಗೆ ಕೃತಜ್ಞತೆ ಸಲ್ಲಿದ್ದಾರೆ. ಅಲ್ಲಿಗೆ ಒಳ್ಳೆಯ ಕೆಲಸದ ಸಾರ್ಥಕ ಭಾವದೊಂದಿಗೆ ಧನಂಜಯ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪಟ್ಟಣ ಅನೇಕರು ಅವರ ಸೇವಾ ಮನೋಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Good job