ಈವರೆಗೆ ಕರ್ನಾಟಕದ ಜನ ರಿಪಬ್ಲಿಕ್ ಆಫ್ ಬಳ್ಳಾರಿ (Republic Of Bellary) ಬಗ್ಗೆ ಕೇಳಿದ್ದರು! ಈಗ ರಿಪಬ್ಲಿಕ್ ಆಫ್ ಚಿಕ್ಕಬಳ್ಳಾಪುರ (Republic Of Chikkaballapura) ಬಗ್ಗೆ ಕೇಳುವಂತಾಗಿದೆ. ಈ ಜಿಲ್ಲೆಯಲ್ಲಿ ಜನರ ಆಡಳತವಿಲ್ಲ, ಜನರ ಮಾತು ನಡೆಯುವುದಿಲ್ಲ. ಅಧಿಕಾರಿಗಳದ್ದೇ ಎಲ್ಲ. ಅಷ್ಟೇ ಏಕೆ? ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರಕರ್ತರ ಮುಖವನ್ನೂ ನೋಡಲು ಇಷ್ಟವಿಲ್ಲ. ಬೆಂಗಳೂರು ಪಕ್ಕದಲ್ಲಿಯೇ ಒಂದು ಖಾಸಗಿ ಸಾಮ್ರಾಜ್ಯ ಸೃಷ್ಟಿಯಾಗಿದೆ. ಅದೇ ರಿಪಬ್ಲಿಕ್ ಆಫ್ ಚಿಕ್ಕಬಳ್ಳಾಪುರ!!
ಬೆಂಗಳೂರು/ಗುಡಿಬಂಡೆ: ದಿನೇ-ದಿನೆ ಕೋವಿಡ್ ಉಲ್ಬಣವಾಗುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ 3 ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿದ್ದ ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆ ತಾಲೂಕುಗಳಿಗೆ ಹೋಗದೇ ಚಿಕ್ಕಬಳ್ಳಾಪುರದಿಂದಲೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಪೂರ್ವ ನಿಗದಿಯಂತೆ ಸಚಿವರು ಬುಧವಾರದಂದು ಬಾಗೇಪಲ್ಲಿ, ಗುಡಿಬಂಡೆ & ಗೌರಿಬಿದನೂರು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು. ಆದರೆ, ಜಿಲ್ಲೆಯ ಚಿಂತಾಮಣಿ ಆಸ್ಪತ್ರೆಗೆ ಮಾತ್ರ ಭೇಟಿ ನೀಡಿ ಅಲ್ಲಿಂದ ಚಿಕ್ಕಬಳ್ಳಾಪುರಕ್ಕೆ ಬಂದ ಸಚಿವರು ಜಿಲ್ಲೆಯ ಹಿರಿಯ ಅಧಿಕಾರಿಗಳ ಜತೆ ನೆಪಮಾತ್ರಕ್ಕೆ ಸಭೆ ನಡೆಸಿ ಬೆಂಗಳೂರಿಗೆ ಹೊರಟುಬಿಟ್ಟರು.
ಬಾಗೇಪಲ್ಲಿಗೆ ಅಹರಾಹ್ನ 2.30 ಗಂಟೆಗೆ, ಗುಡಿಬಂಡೆಗೆ 3.20ಕ್ಕೆ ಹಾಗೂ ಗೌರಿಬಿದನೂರಿಗೆ 4.15ಕ್ಕೆ ಸಚಿವರು ಬರಬೇಕಾಗಿತ್ತು. ಅಟ್ಲೀಸ್ಟ್ ಸಚಿವರು ಬಾಗೇಪಲ್ಲಿ ಹಾಗೂ ಗುಡಿಬಂಡೆಗಾದರೂ ಭೇಟಿ ಕೊಡಬಹುದಿತ್ತು. ಆದರೆ, ಬೆಂಗಳೂರಿನಲ್ಲಿ ಸಂಜೆ ಮುಖ್ಯಮಂತ್ರಿಗಳ ಜತೆ ಸಭೆ ಇದೆ ಎಂಬ ನೆಪವೊಡ್ಡಿ ಸೀದಾ ರಾಜಧಾನಿಗೆ ಮರಳಿದರು.
ಕಾರಣವೇನು?
ಶಿಢ್ಲಘಟ್ಟ ಮತ್ತು ಗುಡಿಬಂಡೆ ತಾಲೂಕು ಆಸ್ಪತ್ರೆಗಳಲ್ಲಿ ಮೇ 1ರಿಂದಲೇ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಡ್ರೈವ್ ಶುರುವಾಗಿತ್ತು. ಅಲ್ಲಿ ಆನ್ಲೈನ್ ಮೂಲಕ ಸ್ಲಾಟ್ ಬುಕ್ ಮಾಡಿಕೊಂಡು ಬೆಂಗಳೂರು ಜನರು ಸ್ಥಳೀಯರ ಲಸಿಕೆಯನ್ನು ಕಸಿದುಕೊಳ್ಳುತ್ತಿದ್ದಾರೆ.
ಈ ಬಗ್ಗೆ ಎರಡೂ ತಾಲೂಕುಗಳ ಜನರಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಸಚಿವರಿಗೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಸಿದ್ಧವಾಗಿದ್ದರು. ಶಿಡ್ಲಘಟ್ಟದಲ್ಲಿ ಕೆಲ ಸಂಘಟನೆ ಲಸಿಕೆಯನ್ನು ಹೊರಗಿನವರಿಗೆ ನೀಡುತ್ತಿರುವ ಬಗ್ಗೆ ತಹಸಿಲ್ದಾರ್ ಅವರಿಗೆ ದೂರಿದ್ದರು. ಅದೇ ರೀತಿ ಗುಡಿಬಂಡೆಯಲ್ಲೂ ಸಿಪಿಐ (ಎಂ) ಮುಖಂಡರೂ ಸೇರಿದಂತೆ ಕೆಲ ಸಂಘಟನೆಗಳು, ಪತ್ರಕರ್ತರು ತಹಸೀಲ್ದಾರ್ ಅವರಿಗೆ ದೂರಿದ್ದರು. ಆದರೆ, ತಹಸೀಲ್ದಾರ್ಗಳ ಕಳವಳಕ್ಕೆ ಜಿಲ್ಲಾಡಳಿತವಾಗಲಿ ಅಥವಾ ಆಯಾ ತಾಲೂಕು ಟಿಎಚ್ಒಗಳಾಗಲಿ ಕಿಮ್ಮತ್ತು ನೀಡಿರಲಿಲ್ಲ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅದರಲ್ಲೂ ಗುಡಿಬಂಡೆಯಲ್ಲಿ ಸಿಟ್ಟಾಗಿದ್ದ ಜನರು ಸಚಿವರಿಗೆ ʼಬೇರೆಯದ್ದೇʼ ಆದ ರೀತಿಯಲ್ಲಿ ವೆಲ್ಕಂ ಮಾಡಲು ಸಜ್ಜಾಗಿದ್ದರು. ಈ ಮಾಹಿತಿ ಪೊಲೀಸರ ಕಿವಿಗೆ ಬಿದ್ದಿದೆ.
ಪತ್ರಕರ್ತರಿಗೆ ಸಚಿವರ ನಿರ್ಬಂಧ!!
ಸಚಿವರು ಬರುವುದನ್ನೇ ಕಾಯುತ್ತಿದ್ದ ಜನರು ಭಾರೀ ಪ್ರಮಾಣದಲ್ಲಿ ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಇದರ ಸುಳಿವರಿತ ಸ್ಥಳೀಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಮೊದಲೇ ರಾಜ್ಯಾದ್ಯಂತ ವ್ಯಾಕ್ಸಿನ್ ಸಿಗದೆ ಜನರು ಸರಕಾರಕ್ಕೆ ಮಹಾ ಮಂಗಳಾರತಿ ಮಾಡುತ್ತಿದ್ದಾರೆ. ಇನ್ನೂ ಗಡಿ ತಾಲೂಕು ಗುಡಿಬಂಡೆಗೆ ಬಂದು ಮುಜುಗರ ಅನುಭವಿಸುವುದು ಬೇಡವೆಂದು ಸಚಿವರು ಭಾವಿಸಿದರೇನೋ ಗೊತ್ತಿಲ್ಲ, ಆದರೆ ಸಚಿವರು ಗುಡಿಬಂಡೆಯತ್ತ ಹೋಗದೇ ಚಿಕ್ಕಬಳ್ಳಾಪುರದಿಂದ ನೇರ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.
ಇದಲ್ಲದೆ, ಕೋವಿಡ್ ನೆಪವೊಡ್ಡಿ ಸ್ಥಳೀಯ ಪೊಲೀಸರು ಸಚಿವರ ಬಳಿಗೆ ಹೋಗಲು ಪತ್ರಕರ್ತರಿಗೂ ನಿರ್ಬಂಧ ಹಾಕಿದ್ದಾರೆ. ಬೆಳಗ್ಗೆ ಪತ್ರಕರ್ತರಿಗೆ ಮಾಹಿತಿ ಕೊಟ್ಟ ಖಾಕಿಗಳು, ಸಚಿವರ ‘ದರ್ಶನ’ಕ್ಕೆ ಇಡೀ ತಾಲೂಕಿನ ಮೀಡಿಯಾ ಪಟಾಲಂ ಬರುವಂತಿಲ್ಲ ಎಂದು ಫರ್ಮಾನು ಹೊರಡಿಸಿದ್ದಾರೆ.
“ಹೆಚ್ಚು ಪತ್ರಕರ್ತರನ್ನು ಭೇಟಿಯಾಗಲು ಸಚಿವರಿಗೆ ಮನಸ್ಸಿಲ್ಲ, ಇಬ್ಬರು ಮಾತ್ರ ಹೋಗಿ. ಆಮೇಲೆ ನೀವು ಬಂದು ಇತರರಿಗೆ ಆ ಸುದ್ದಿ ಕೊಡಿ. ತಪ್ಪದರೆ ಸಚಿವರ ಮಾಧ್ಯಮ ಅಧಿಕಾರಿಗಳೇ ನಿಮಗೆ ಸುದ್ದಿ ಬಿಡುಗಡೆ ಮಾಡುತ್ತಾರೆ” ಎಂದು ಗುಡಿಬಂಡೆ ಪೊಲೀಸರು ಪತ್ರಕರ್ತರಿಗೆ ಹೇಳಿದ್ದಾರೆ. ಅಲ್ಲಿಗೆ ಇಡೀ ಮೀಡಿಯಾ ಕೆರಳಿ ಕೆಂಡವಾಗಿದೆ. ಪೊಲೀಸರು ಹೇಳಿದ ಕೋವಿಡ್ ನೆಪ ಪತ್ರಕರ್ತರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಈ ಬಗ್ಗೆ ತೀವ್ರ ಬೇಸರ ತೋಡಿಕೊಂಡ ಹಿರಿಯ ಪತ್ರಕರ್ತರೊಬ್ಬರು, “ಸಚಿವರು ಮೀಡಿಯಾದರಿಗೆ ನಿರ್ಬಂಧ ಹಾಕಿದ್ದು ಅಕ್ಷಮ್ಯ. ಪೊಲೀಸರು ತಮ್ಮ ಮಿತಿಯನ್ನು ಮೀರಿ ಇಬ್ಬರೇ ಸಚಿವರನ್ನು ನೋಡಲು ಬನ್ನಿ ಎಂದು ಹೇಳಿದ್ದು ಅಪರಾಧ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಮೊದಲು ಇದನ್ನು ಬದಲಿಸಬೇಕು. ಇನ್ನು, ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕು ಬಾರಿ ಹಿಂಡು ಹಿಂಡು ಸುದ್ದಿವಾಹಿನಿ ಕ್ಯಾಮೆರಾಗಳ ಮುಂದೆ ನಿಂತು ಅಭ್ಯಾಸವಾಗಿರುವ ಸಚಿವರಿಗೆ ಗುಡಿಬಂಡೆಯಂಥ ಚಿಕ್ಕ ತಾಲೂಕಿನ ಪುಟ್ಟ ಪತ್ರಕರ್ತರ ತಂಡವನ್ನು ನೋಡಲು ಇಷ್ಟವಿಲ್ಲದಿರಬಹುದು” ಎಂದಿದ್ದಾರೆ. ಇಂಥದ್ದೇ ಆಕ್ರೋಶವನ್ನು ಇನ್ನೂ ಕೆಲ ಪತ್ರಕರ್ತರು ವ್ಯಕ್ತಪಡಿಸಿದ್ದಾರೆ.