ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ಭೇಟಿ I ಜಿಲ್ಲೆಯ 1077 ಹೆಲ್ಪ್‌ಲೈನ್‌ಗೆ ಚಾಲನೆ I 24X7 ಇಲ್ಲಿಗೆ ಕಾಲ್ ಮಾಡಬಹುದು
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣ ಮಾಡುವುದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಆರೋಗ್ಯ & ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿಕೊಂಡರು.
ಶುಕ್ರವಾರ ಬಾಗೇಪಲ್ಲಿ ತಾಲೂಕು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಜಿಲ್ಲಾಧಿಕಾರಿ ಆರ್.ಲತಾ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸೋಂಕಿತರ ಪತ್ತೆ, ಚಿಕಿತ್ಸೆಯಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪರಿಸ್ಥಿತಿ ಕೈ ಮೀರದಂತೆ ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಭಾಯಿಸಿದೆ ಎಂದು ಹಾಡಿ ಹೊಗಳಿದರು.
ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳು ಮತ್ತು ಎಲ್ಲಾ ಕೋವಿಡ್ ಕೇರ್ ಕೇಂದ್ರಗಳಲ್ಲಿರುವ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಗುಣಮಟ್ಟದ ಆಹಾರ, ಸ್ವಚ್ಛತೆಯ ಜತೆಗೆ ಕುಡಿಯಲು ಮತ್ತು ಸ್ನಾನಕ್ಕೆ ಬಿಸಿ ನೀರು, ಸ್ವಚ್ಛ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಡಾ.ಸುಧಾಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಆರ್.ಕಬಾಡೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಯಲ್ಲಾ ರಮೇಶ್ ಬಾಬು, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಹಾಗೂ ಬಾಗೇಪಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಹಾಯವಾಣಿಗೆ ಚಾಲನೆ
ಕೋವಿಡ್ ರೋಗಿಗಳಿಗೆ ಮಾರ್ಗದರ್ಶನ ಮತ್ತು ವೈದ್ಯಕೀಯ ಸಲಹೆ ನೀಡಲು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಿರುವ 1077 ಸಂಖ್ಯೆ ಸಹಾಯವಾಣಿಗೆ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
ಸ್ಟೆಪ್ ಒನ್ ಸಂಸ್ಥೆ, ಈಶಾ ಫೌಂಡೇಶನ್, ಶ್ರೀ ಸಾಯಿಕೃಷ್ಣ ಸೇವಾ ಟ್ರಸ್ಟ್ʼಗಳು ಜಿಲ್ಲಾಡಳಿತದ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗಾಗಿ ಆರಂಭಿಸಿದ ಸಹಾಯವಾಣಿಯಿಂದ ಜನರಿಗೆ ಅನುಕೂಲವಾಗಲಿದೆ. ಕೋವಿಡ್ ರೋಗಿಗಳಿಗೆ ನೆರವಾಗಲು ಸ್ಟೆಪ್ ಒನ್ ಕಂಪನಿಯಿಂದ ಈ ಸಹಾಯವಾಣಿ ಆರಂಭಿಸಲಾಗಿದೆ. 178 ಮಂದಿ ವೈದ್ಯರು ಮಾರ್ಗದರ್ಶನ ನೀಡಲಿದ್ದಾರೆ. ಇದಕ್ಕಾಗಿ ಒಟ್ಟು ನೂರು ಲೈನ್ʼಗಳನ್ನು ಪಡೆದುಕೊಳ್ಳಲಾಗಿದೆ. ಯಾರೇ ಆಗಲಿ ಪಾಸಿಟಿವ್ ಬಂದ ಕೂಡಲೇ ಮಾರ್ಗದರ್ಶನ ನೀಡಿ ಔಷಧಿ ಕಿಟ್ ನೀಡುವುದು, ಮನೆಯಲ್ಲೇ ಅವರಿಗೆ ವೈದ್ಯಕೀಯ ಮಾರ್ಗದರ್ಶನವನ್ನು ದಿನದ 24 ಗಂಟೆ ಒದಗಿಸಲಾಗುವುದು. ಮನೆಯಲ್ಲಿ ಆರೈಕೆ ಪಡೆಯುತ್ತಿರುವವರಿಗೆ ಸಲಹೆ, ರೋಗ ಲಕ್ಷಣ ಹೆಚ್ಚಿದರೆ ಆಸ್ಪತ್ರೆಗೆ ದಾಖಲಿಸುವುದು ಸೇರಿದಂತೆ ಎಲ್ಲ ಬಗೆಯ ಮಾರ್ಗದರ್ಶನವನ್ನು ಈ ಸಹಾಯವಾಣಿ ಮೂಲಕ ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ಇಂತಹ ಕ್ರಮಗಳಿಂದ ಕೋವಿಡ್ ಆಸ್ಪತ್ರೆಗಳ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡುವ ಜತೆಗೆ ಅರ್ಹ ರೋಗಿಗಳಿಗೆ ಹಾಸಿಗೆ ದೊರಕಿಸಲು ನೆರವಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದೇ ಮಾದರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚನೆ ನೀಡಲಾಗಿದೆ. ಕೆಲ ಜಿಲ್ಲಾಡಳಿತಗಳು ಈಗಾಗಲೇ ಆರಂಭಿಸಿವೆ ಎಂದು ತಿಳಿಸಿದರು.
ಸಹಾಯವಾಣಿ ಕೇಂದ್ರದಲ್ಲಿ ಸ್ವಯಂಸೇವಾ ಸಂಸ್ಥೆ ವೈದ್ಯರ ಜತೆ ಕೆಲವರಿಗೆ ವೇತನ ನೀಡಿ ನೇಮಕ ಮಾಡಿಕೊಳ್ಳಲಾಗಿದೆ. ಇವರೆಲ್ಲರೂ ಪರಿಣತಿ ಪಡೆದವರಾಗಿದ್ದು ಸೋಂಕಿತರು ಯಾವುದೇ ಭಯ- ಆತಂಕಗಳಿಲ್ಲದೆ ಇವರ ಸಲಹೆ, ಮಾರ್ಗದರ್ಶನ ಪಡೆಯಬಹುದು ಎಂದು ಸಚಿವರು ಕಿವಿಮಾತು ಹೇಳಿದರು.
ಡಿಆರ್ʼಡಿಒ ಔಷಧಿಯನ್ನು ರಾಜ್ಯದಲ್ಲಿ ಪರಿಚಯಿಸಬೇಕಿದೆ. ಈ ಸಂಸ್ಥೆ ಆಕ್ಸಿಜನ್ ಜನರೇಟರ್ ಅನ್ನೂ ಕೂಡ ತಯಾರಿಸಿದೆ. ಬೆಂಗಳೂರಿನ ಸಿ.ವಿ.ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಸಾವಿರ ಕೆಎಲ್ ಸಾಮರ್ಥ್ಯದ್ದನ್ನು ಅಳವಡಿಸಲು ನಿರ್ಧರಿಸಲಾಗಿದೆ. ನಾಳೆ ಅಥವಾ ನಾಳಿದ್ದು ಅದನ್ನು ಉದ್ಘಾಟಿಸಲಾಗುವುದು. ಆಕ್ಸಿಕೇರ್ ಸಿಸ್ಟಮ್ ಅನ್ನು ಸಂಸ್ಥೆ ಸಿದ್ಧಪಡಿಸಿದೆ. ಆ ಬಗ್ಗೆ ಕೂಡ ಚರ್ಚೆ ನಡೆದಿದ್ದು ಮುಂದಿನ ದಿನಗಳಲ್ಲಿ ಅಗತ್ಯತೆಗೆ ಅನುಗುಣವಾಗಿ ಅದನ್ನು ಖರೀದಿ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಕೊರೊನಾ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸಿದರೆ, 3ನೇ ಹಂತವನ್ನೂ ತಡೆಗಟ್ಟಬಹುದು. ಲಸಿಕೆಯ ವಿಚಾರದಲ್ಲಿ ಗೊಂದಲ ಬೇಡ. ಲಸಿಕೆ ಲಭ್ಯವಾದಂತೆಲ್ಲ ಜನರಿಗೆ ನೀಡಲಾಗುವುದು. ಈಗ ಆದ್ಯತೆ ಮೇರೆಗೆ ಮೊದಲ ಡೋಸ್ ನೀಡಿರುವ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ದೇಶದಲ್ಲಿ ಎರಡು ಕಂಪನಿಗಳು ಮಾತ್ರ ಲಸಿಕೆ ತಯಾರಿಸುತ್ತಿವೆ. ಹೀಗಾಗಿ ಇದು ಸ್ವಲ್ಪ ಸವಾಲಿನಿಂದ ಕೂಡಿದೆ. ಒಂದು ತಿಂಗಳಿಗೆ 8 ಕೋಟಿ ಲಸಿಕೆ ತಯಾರಾಗುತ್ತಿದೆ. ಕ್ರಮೇಣ 9 ಕೋಟಿಗೆ ಹೆಚ್ಚಳವಾಗಿ, ಜುಲೈನಿಂದ ಉತ್ಪಾದನೆ ದುಪ್ಪಟ್ಟಾಗಲಿದೆ ಎಂದರು ಸಚಿವರು.
ಲಸಿಕೆಯ ಗುಣಮಟ್ಟದ ಬಗ್ಗೆ ಈ ಹಿಂದೆ ಅನುಮಾನಪಟ್ಟವರು ಈಗ ಲಸಿಕೆ ಕೊರತೆ ಬಗ್ಗೆ ಟೀಕೆಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದ. ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಈ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ನಡೆಸಬೇಕು. ಇದರಲ್ಲಿ ರಾಜಕೀಯ ಮಾಡಬಾರದು. 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವುದಿಲ್ಲ ಎಂದು ಹೇಳಿಲ್ಲ. ಇದನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಇಂದು ಬೆಳಗ್ಗೆ ಬೆಂಗಳೂರಿ ಸ್ವತಂತ್ರ್ಯ ಉದ್ಯಾನವನದ ಬಳಿ ಭುವನಮ್ ಫೌಂಡೇಶನ್ ನಿಂದ ಸಿದ್ಧಪಡಿಸಿರುವ ಆಕ್ಸಿಜನ್ ಬಸ್ ಸೇವೆಗೆ ಸಚಿವ ಸುಧಾಕರ್ ಚಾಲನೆ ನೀಡಿದರು. ನಂತರ ಮಾತನಾಡಿ, ಕಷ್ಟಕಾಲದಲ್ಲಿ ಜನರಿಗೆ ನೆರವಾಗಲು ಭುವನಮ್ ತಂಡ ಆಕ್ಸಿಜನ್ ವ್ಯವಸ್ಥೆ ಮಾಡಿದೆ. ಇದು ಶ್ಲಾಘನೀಯ ಎಂದರು.