ಆರಂಭದದಿಂದ ಬಹತೇಕ ತಮ್ಮ ಕೊನೆಗಾಲದವರೆಗೂ ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಭಾವಶಾಲಿ ಪತ್ರಕರ್ತರಾಗಿದ್ದ ಮಹದೇವ್ ಪ್ರಕಾಶ್ ಅವರು ಯಾವ ಹಮ್ಮು-ಬಿಮ್ಮು ತೋರುತ್ತಿದ್ದವರಲ್ಲ. ಸರಳ-ಸಜ್ಜನಿಕೆಯ ಮೂರ್ತರೂಪ. ಸರ್, ಒಂದು ಲೇಖನ ಬೇಕು ಎಂದು ಕೇಳಿದರೆ, ಅದೆಷ್ಟೇ ಬ್ಯುಸಿ ಇದ್ದರೂ ತಪ್ಪದೇ ಬರೆದು ಕಳಿಸುತ್ತಿದ್ದರು. ಎಲ್ಲರನ್ನೂ ನಗುನಗುತ್ತಲೇ ಪ್ರೋತ್ಸಾಹಿಸುತ್ತಿದ್ದ ಅವರು ಅದೇ ನಗುವಿನೊಂದಿಗೆ ನಡೆದುಬಿಟ್ಟಿದ್ದಾರೆ.
ಬೆಂಗಳೂರು: ಕೆಲ ತಿಂಗಳ ಕಾಲ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ, ಅಂಕರಣಕಾರ & ರಾಜಕೀಯ ವಿಶ್ಲೇಷಕ ಮಹದೇವ್ ಪ್ರಕಾಶ್ ಅವರು ಕೋವಿಡ್ ಹೆಮ್ಮಾರಿಗೆ ಬಲಿಯಾಗಿದ್ದಾರೆ.
ಕಳೆದೊಂದು ವಾರದಿಂದ ಕೋವಿಡ್ ಸೋಂಕಿನ ಕಾರಣಕ್ಕೆ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯಿಸಿರೆಳದಿದ್ದಾರೆ.
ಮಹದೇವ ಪ್ರಕಾಶ್ ಅವರಿಗೆ 65 ವರ್ಷವಾಗಿತ್ತು. 1975ರಲ್ಲಿ ʼಲೋಕವಾಣಿʼ ದಿನಪತ್ರಿಕೆ ಮೂಲಕ ಪತ್ರಿಕೋದ್ಯಮ ಆರಂಭಿಸಿದ್ದ ಅವರು, ನಂತರ ತಮ್ಮದೆ ಸಂಪಾದಕತ್ವದ ‘ಈ ಭಾನುವಾರ‘ ಪತ್ರಿಕೆ ಆರಂಭಿಸಿದ್ದರು. ಇದರ ನಡುವೆ ವಿವಿಧ ಪತ್ರಿಕೆಗಳಿಗೆ ಅಂಕಣ ಬರೆಯುವುದರ ಜತೆಗೆ, ಬಹತೇಕ ಎಲ್ಲ ಸುದ್ದಿ ವಾಹಿನಿಗಳಲ್ಲಿ ರಾಜಕೀಯ ವಿಶ್ಲೇಷಣೆ ಮಾಡುತ್ತಿದ್ದರು. ಕರ್ನಾಟಕದ ರಾಜಕೀಯ ಇತಿಹಾಸವನ್ನು ಸಮಗ್ರವಾಗಿ ಅರಿತಿದ್ದ ಕೆಲವೇ ಪತ್ರಕರ್ತರಲ್ಲಿ ಅವರೂ ಒಬ್ಬರಾಗಿದ್ದರು.
ಮಹಾದೇವ್ ಪ್ರಕಾಶ್ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.