ಬೆಂಗಳೂರಿನಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ, ಕೊನೆಪಕ್ಷ ಒಂದು ವಾರವಾದರೂ ಹೋಮ್ ಕ್ವಾರಂಟೈನ್ ಕಡ್ಡಾಯ, ಮೆಡಿಕಲ್ ಸ್ಟೋರ್‌ಗಳಲ್ಲಿ ಜ್ವರ, ಕೆಮ್ಮು, ನೆಗಡಿ ಮಾತ್ರೆ ಖರೀದಿ ಮಾಡುವವರ ಮೇಲೆ ಕಣ್ಣಿಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ರೆಮಿಡಿಸಿವಿರ್ ಔಷಧಿ ಸೇರಿದಂತೆ ಕೋವಿಡ್ ಸೋಂಕಿತರಿಗೆ ನೀಡುವ ಇತರೆ ಅಗತ್ಯ ಔಷಧಿಗಳನ್ನು ಕನಿಷ್ಠ 20 ದಿನಗಳಿಗಾಗುವಷ್ಟು ಮುಂಚೆಯೇ ಖರೀದಿಸಿ ಔಷಧದ ದಾಸ್ತಾನನ್ನು ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಹಾಗೂ ಕೋವಿಡ್ ನೋಡೆಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್-19 ಜಿಲ್ಲಾ ಮಟ್ಟದ ಟಾಸ್ಕ್ʼಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರ, ಹೋಮ್ ಐಸೊಲೇಷನ್ʼನಲ್ಲಿರುವವರಿಗೆ ಅಗತ್ಯ ಔಷಧವನ್ನು ವಿಳಂಬ ಮಾಡದೇ ಕೊಡಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ನೀಡುವ ಅಗತ್ಯ ಔಷಧಿಗಳ ಖರೀದಿಗಾಗಿಯೇ ಪ್ರತಿ ತಾಲೂಕಿಗೆ ಹಣ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಅಗತ್ಯ ಔಷಧಿಗಳನ್ನು ತಾಲೂಕು ಆರೋಗ್ಯ ಅಧಿಕಾರಿಗಳು ಮುಂಚೆಯೇ ಖರೀದಿಸಿ ಹೋಮ್ ಐಸೋಲೇಷನ್ʼನಲ್ಲಿರುವ ಕೋವಿಡ್ ಸೋಂಕಿತರಿಗೂ ಸಹ ಅರೋಗ್ಯ ಕಿಟ್ ಅನ್ನು ಉಚಿತವಾಗಿ ಸಕಾಲಕ್ಕೆ ವಿತರಿಸುವ ವ್ಯವಸ್ಥೆ ಮಾಡುವಂತೆ ಡಿಸಿ ಸೂಚಿಸಿದರು.
ರೆಮಿಡಿಸಿವರ್ ಚುಚ್ಚುಮದ್ದು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸಕಾಲಕ್ಕೆ ಸರಬರಾಜು ಮಾಡಿಕೊಳ್ಳಬೇಕು. ಈ ಔಷಧ ಅಗತ್ಯವಿರುವ ರೋಗಿಗಳೆಲ್ಲರಿಗೂ ವೈದ್ಯರು ತಪಾಸಣೆ ಮಾಡಿ ತಪ್ಪದೇ ನೀಡಬೇಕು. ಪ್ರಸ್ತುತ ನಮ್ಮಲ್ಲಿ ರೆಮಿಡಿಸಿವಿರ್ ಔಷಧಿಗೆ ಕೊರತೆ ಇಲ್ಲ ಎಂದರು ಜಿಲ್ಲಾಧಿಕಾರಿ.
ಎಲ್ಲಾ ಸರಕಾರಿ ಸಾರ್ವಜನಿಕ ಕೋವಿಡ್ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೂ ಹೆಚ್ಚಿನ ಜನರು ದಾಖಲಾಗುತ್ತಿದ್ದು, ಅಲ್ಲಿಯೂ ಕೂಡ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಆಯಾ ತಾಲೂಕು ನೋಡೆಲ್ ಅಧಿಕಾರಿಗಳು ಪ್ರತಿನಿತ್ಯವೂ ತಮ್ಮ ತಾಲೂಕುಗಳಲ್ಲಿ ಆಕ್ಸಿಜನ್ ಸಿಲಿಂಡರ್ʼಗಳ ಲಭ್ಯತೆ-ಕೊರತೆ ಬಗ್ಗೆ ಗಮನ ಹರಿಸಬೇಕು, ಕೊರತೆಯಾಗದಂತೆ ಕ್ರಮ ವಹಿಸಬೇಕು. ಆಯಾ ತಾಲೂಕು ನೋಡೆಲ್ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಪ್ರತಿನಿತ್ಯವೂ ಟಾಸ್ಕ್ʼಫೋರ್ಸ್ ಸಮಿತಿ ಸದಸ್ಯರೊಂದಿಗೆ ಜೂಮ್ ಮೀಟಿಂಗ್ ಮಾಡಿ, ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಹೊರಗಿನಿಂದ ಬಂದರೆ ಕೋವಿಡ್ ಪರೀಕ್ಷೆ ಕಡ್ಡಾಯ
ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಂದ ನಮ್ಮ ಜಿಲ್ಲೆಗೆ ಬಂದಿರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಕೊರೊನಾ ನೆಗೆಟೀವ್ ಬಂದರೂ ಅವರನ್ನು ಕಡ್ಡಾಯವಾಗಿ ಕನಿಷ್ಠ 7 ದಿನವಾದರೂ ಹೋಮ್ ಕ್ವಾರಂಟೈನ್ʼನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕೋವಿಡ್ ಕೇರ್ ಕೇಂದ್ರಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರದಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಬೇಕು. ಸ್ವಚ್ಚತೆ, ಕುಡಿಯುವ ನೀರು, ಗುಣಮಟ್ಟದ ಆಹಾರ ಎಲ್ಲವೂ ಸರಿಯಾಗಿ ಇರಬೇಕು. ಹೋಮ್ ಐಸೋಲೇಷನ್ʼನಲ್ಲಿ ಇರುವವರಿಗೆ ಉತ್ತಮವಾಗಿ ಚಿಕಿತ್ಸೆ ಸಿಗಬೇಕು. ಖಾಸಗಿ ಕ್ಲಿನಿಕ್ʼಗಳಲ್ಲಿ ಜ್ವರ, ಕೆಮ್ಮು, ನೆಗಡಿಯಂಥ ಸಾಮಾನ್ಯ ಕಾಯಿಲೆಗಳಿಗೆ ಔಷಧಿ ತೆಗೆದುಕೊಂಡು ಹೋಗುವ ಸಾರ್ವಜನಿಕರ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಹೋಬಳಿಗೊಂದು ಆಂಬ್ಯುಲೆನ್ಸ್
ಪ್ರತಿ ಹೋಬಳಿವಾರು ಒಂದೊಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವ ತಾಲೂಕುಗಳಿಗೆ ಎಷ್ಟು ವಾಹನಗಳ ಅವಶ್ಯಕತೆ ಇದೆ ಎಂಬುದನ್ನು ತಿಳಿಸಿ. ವಾಹನಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಕೋವಿಡ್-19 ತಾಲೂಕು ಮಟ್ಟದ ನೋಡೆಲ್ ಅಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.