ಏನಿರುತ್ತದೆ? ಏನಿರಲ್ಲ? ಇಲ್ಲಿದೆ ಪೂರ್ಣ ಮಾಹಿತಿ
ಚಿಕ್ಕಬಳ್ಳಾಪುರ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಉಸ್ತುವಾರಿಯ ಚಿಕ್ಕಬಳ್ಳಾಪುರ ಜಿಲ್ಲೆ ಇವತ್ತಿನಿಂದ ನಾಲ್ಕು ದಿನ ಕಂಪ್ಲೀಟ್ ಲಾಕ್ ಆಗಲಿದೆ.
ಜಿಲ್ಲೆಯ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಬಂಡೆ, ಗೌರಿಬಿದನೂರು ತಾಲೂಕುಗಳು ಗುರುವಾರ ಸೂರ್ಯೋದಯದಿಂದಲೇ ಆರಂಭವಾಗುವಂತೆ ಲಾಕ್‌ಡೌನ್ ಆಗಲಿದೆ. ಈಗಾಗಲೇ ಜಿಲ್ಲಾಡಳಿತ ಈ ಬಗ್ಗೆ ಜನರಿಗೆ ಪೂರ್ಣ ಮಾಹಿತಿ ನೀಡಿದೆ. ಈ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಜನರು ಸೋಮವಾರ ಬೆಳಗ್ಗೆವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯತ್ತ ಹೋಗುವಂತಿಲ್ಲ.
ಮೇ 20ರಿಂದ 23ರವರೆಗೆ (ಗುರುವಾರದಿಂದ ಭಾನುವಾರ ವರೆಗೆ) ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿ ಇರುತ್ತದೆ. ವೈದ್ಯ ಸೇವೆ, ಹಾಲು, ಪತ್ರಿಕೆ, ಆಸ್ಪತ್ರೆ ಇನ್ನಿತರೆ ಅತ್ಯಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ಇರುತ್ತದೆ.
ಇನ್ನು ಸಂಚಾರಕ್ಕೂ ಪೂರ್ಣ ನಿರ್ಬಂಧವಿದೆ. ಜಿಲ್ಲೆಯಲ್ಲಿ ಅಂತಾರಾಜ್ಯ ಮತ್ತು ಅಂತರ ಜಿಲ್ಲಾ ಸಂಚಾರವನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಗೂಡ್ಸ್ ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 27 ಪೋಸ್ಟ್‌ಗಳನ್ನು ಹಾಕಲಾಗಿದ್ದು, ಲಾಕ್‌ಡೌನ್‌ಗಾಗಿ ಹೆಚ್ಚಿನ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ಅನವಶ್ಯಕವಾಗಿ ಸಂಚಾರ ಮಾಡುವ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಇನ್ನು ಬೆಂಗಳೂರು ಜನ ಜಿಲ್ಲೆಗೆ ಎಂಟ್ರಿ ಕೊಡುವುದನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚದುಲುಪುರ ಬಳಿ ಬಿಗಿ ಪಹರೆ ಮಾಡಲಾಗಿದೆ. ಜತೆಗೆ ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ. ಇದರ ಜತೆಗೆ, ಆಂಧ್ರ ಪ್ರದೇಶದಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ, ಮತ್ತಿತರೆ ರಸ್ತೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯವಾಗಿ ಬೆಂಗಳೂರಿನಿಂದ ಬರುವವರ ಮೇಲೆ ಹೆಚ್ಚು ನಿಗಾ ಇಡಲಾಗಿದೆ.
ಏನಿರುವುದಿಲ್ಲ?
- ಎಲ್ಲ ರೀತಿಯ ಮದ್ಯದಂಗಡಿಗಳು ಬಂದ್
- ಚಿಂತಾಮಣಿ ಎಪಿಎಂಸಿಯ ಗುರುವಾರ & ಶನಿವಾರದ ಮಾರುಕಟ್ಟೆ ಹೊರತುಪಡಿಸಿ
- 4 ದಿನ ಉಳಿದೆಲ್ಲ ಎಪಿಎಂಸಿ ಮಾರುಕಟ್ಟೆಗಳು ಸಂಪೂರ್ಣ ಬಂದ್
- ಕೋವಿಡ್ ಆಸ್ಪತ್ರೆಗಳ ಹತ್ತಿರದ ಹೋಟೆಲ್‌ಗಳು ಹೊರತುಪಡಿಸಿ ಉಳಿದ ಹೋಟೆಲ್‌ಗಳು ಇರುವುದಿಲ್ಲ
- ಅಂತರ ಜಿಲ್ಲೆ, ಅಂತಾರಾಜ್ಯ ವಾಹನಗಳಿಗೆ ನಿರ್ಬಂಧ
- ಎಟಿಎಂ ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು ಕೂಡ ಸಂಪೂರ್ಣ ಬಂದ್
- ಹಾಲು ಖರೀದಿಗೆ ವಾಹನಗಳ ಬಳಕೆ ಮಾಡುವಂತಿಲ್ಲ
- ನಗರ & ಪಟ್ಟಣಗಳಲ್ಲಿರುವ ಪೆಟ್ರೋಲ್ ಬಂಕ್‌ಗಳು ಇರಲ್ಲ
ಏನಿರುತ್ತದೆ?
- ಬೆಳಗ್ಗೆ 6ರಿಂದ 10ವರೆಗೂ ಹಾಲು ಖರೀದಿಗೆ ಅವಕಾಶ
- ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ತೆರೆದಿರುತ್ತವೆ
- ಗುರುವಾರ, ಶನಿವಾರ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆ
- ಎಟಿಎಂ ಕೇಂದ್ರಗಳು ಇರುತ್ತವೆ
- ಹೆದ್ದಾರಿಗಳಲ್ಲಿರುವ ಪೆಟ್ರೋಲ್ ಬಂಕ್‌ಗಳು
- ಆಸ್ಪತ್ರೆಗಳ ಹತ್ತಿರದ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ
- ಕೃಷಿ ಆಧಾರಿತ ಕೈಗಾರಿಕೆಗಳಿಗೆ ಅವಕಾಶ
- ಫಾರ್ಮಾ ಆಧಾರಿತ ಕೈಗಾರಿಕೆಗಳಿಗೆ ನಿರ್ಬಂಧ ಇಲ್ಲ
- ಆಹಾರ ಸಂಸ್ಕರಣೆ ಘಟಕಗಳಿಗೆ ಅವಕಾಶ
- ಸರಕು ಸಾಗಾಟ ವಾಹನಗಳಿಗೆ ಮುಕ್ತ ಅವಕಾಶ
- ವೈದ್ಯಕೀಯ ಉದ್ದೇಶಕ್ಕಾಗಿ ಹಾಗೂ ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಸೂಕ್ತ ದಾಖಲೆ ತೋರಿಸಿದರೆ ಸಂಚಾರಕ್ಕೆ ಅವಕಾಶ
ಇದರ ಜತೆಗೆ, ಜಿಲ್ಲೆಯ ಎಲ್ಲ ಪ್ರವಾಸಿತಾಣಗಳು ಕೂಡ ಲಾಕ್‌ಡೌನ್ ವೇಳೆ ಬಂದ್ ಆಗಿರುತ್ತವೆ. ಗಿರಿಧಾಮ ನಂದಿ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ. ಈಗಾಗಲೇ ರಾಜ್ಯವ್ಯಾಪಿ ಲಾಕ್‌ಡೌನ್ ಇರುವುದರಿಂದ ಪ್ರವೇಶವನ್ನು ಮುಚ್ಚಲಾಗಿದೆ. ಉಳಿದಂತೆ ನಂದಿ, ರಂಗಸ್ಥಳ, ಕೈವಾರ, ಕೈಲಾಸಗಿರಿ, ಗಡಿದಂ, ಆವಲಬೆಟ್ಟ ಸೇರಿದಂತೆ ಎಲ್ಲ ಪ್ರವಾಸಿ & ಧಾರ್ಮಿಕ ತಾಣಗಳಿಗೆ ಯಾರಿಗೂ ಪ್ರವೇಶ ಇಲ್ಲ.