Special Story
ಚೋಳರು ಕಟ್ಟಿಸಿದ ಕೆರೆ. 96 ಎಕರೆಯಷ್ಟು ವಿಶಾಲ, 3 ಐತಿಹಾಸಿಕ ಕಲ್ಯಾಣಿಗಳು ಸಾವಿರಾರು ವರ್ಷದ ಇತಿಹಾಸಕ್ಕೆ ಸಾಕ್ಷಿ. ಧರ್ಮ-ಐತಿಹಾಸಿಕ ದೃಷ್ಟಿಯಿಂದ ಸೂಕ್ಷ್ಮ ಪಾರಂಪರಿಕ ತಾಣ ರಂಗಸ್ಥಳ. ಬಿಜೆಪಿ ಸರಕಾರದ ಅವಧಿಯಲ್ಲೇ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಯ ನಿರ್ಲಕ್ಷ್ಯವೇ!?
By PK Channakrishna I M Krishnappa
ಚಿಕ್ಕಬಳ್ಳಾಪುರ: ಜಿಲ್ಲೆಯ ಕೆರೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರು ಹರಿಸುವ ಮೂಲಕ ರಾಜ್ಯ ಸರಕಾರವೇ ಮಾಡುತ್ತಿರುವ ವಿಷಪ್ರಾಶನಕ್ಕೆ ಮೀನುಗಳು ಮಾತ್ರವಲ್ಲದೆ, ಇತರೆ ಜಲಚರಗಳ ಮಾರಣಹೋಮ ನಡೆಯುತ್ತಿರುವುದು ಮುಂದುವರಿದಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಒಂದೂವರೆ ಕಿ.ಮೀ ದೂರದಲ್ಲಿರವ ಇತಿಹಾಸ ಪ್ರಸಿದ್ಧ ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ದೇಗುಲಕ್ಕೆ ಅನತಿ ದೂರದಲ್ಲಿರುವ (ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ) ರಂಗಧಾಮ ಕೆರೆಗೆ ಹರಿಯುತ್ತಿರುವ ಅರೆಬರೆ ಸಂಸ್ಕರಣೆಯ ಎಚ್.ಎನ್.ವ್ಯಾಲಿ ನೀರಿನ ಅಪಾಯಕಾರಿ ವಿಷಾಂಶಗಳಿಗೆ ಸಿಕ್ಕಿ ಮೀನುಗಳು ಸಾವನ್ನಪ್ಪಿವೆ. ಚೋಳರ ಕಾಲದಲ್ಲಿ ನಿರ್ಮಾಣವಾದ ಈ ಐತಿಹಾಸಿಕ ಕೆರೆ ಸುಮಾರು 96 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಅಲ್ಲಿಯೇ ಮೂರು ಐತಿಹಾಸಿಕ ಕಲ್ಯಾಣಿಗಳೂ ಇವೆ. ಈ ದೃಷ್ಟಿಯಿಂದ ನೋಡಿದರೆ ಇದು ಪಾರಂಪರಿಕ ಸೂಕ್ಷ್ಮ ತಾಣವಾಗಿದೆ.
ಜಗತ್ತಿನ ನಾನಾ ಮೂಲೆಗಳಿಂದ ಶರತ್ಕಾಲದಲ್ಲಿ ಸಂತಾನೋತ್ಪತ್ತಿಗಾಗಿ ವಿದೇಶಗಳಿಂದ ಬರುತ್ತಿದ್ದ ಪಕ್ಷಿಗಳನ್ನು ನೋಡಲು ಇಲ್ಲಿಯೇ ಯಾವಾಗಲೂ ಜನಜಾತ್ರೆಯೇ ಸೇರುತ್ತಿತ್ತು. ಆದರೆ, ಕಳೆದೊಂದು ವರ್ಷದಿಂದ ಈ ಕೆರೆಗೆ ಬೆಂಗಳೂರು ತ್ಯಾಜ್ಯ ನೀರನ್ನು ಹರಿಸುವುದು ಶುರುವಾದ ಮೇಲೆ ಹೊರ ದೇಶಗಳಿಂದ ಹಕ್ಕಿಗಳು ಬರುವುದಿರಲಿ, ಅಕ್ಕಪಕ್ಕದ ಗ್ರಾಮಗಳ ಜನರೂ ಬರುವುದನ್ನೂ ನಿಲ್ಲಿಸಿದ್ದಾರೆ.
ಅಪಾಯಕಾರಿ ತ್ಯಾಜ್ಯ ನೀರು ಸುತ್ತಮುತ್ತಲ ಜನರು, ಪಶುಪಕ್ಷಗಳಿಗೆ ಮರಣಶಾಸನವಾಗಿ ಪರಿವರ್ತನೆಯಾಗಿದ್ದು, ಮೀನುಗಳ ಸಾವು ಅದಕ್ಕೊಂದು ಮುನ್ನೆಚ್ಚರಿಕೆಯ ಗಂಟೆ. ಕೆರೆಯಲ್ಲಿ ಸತ್ತು ಬಿದ್ದಿರುವ ಮೀನುಗಳನ್ನು ಕಂಡು ಆತಂಕಗೊಂಡ ಅಕ್ಕಪಕ್ಕದ ಗ್ರಾಮಸ್ಥರು, ದುರ್ನಾತ ಬೀರುತ್ತಿರುವ ಕೆರೆ ನೀರಿನ ಹತ್ತಿರಕ್ಕೂ ಸುಳಿಯದಾಗಿದ್ದಾರೆ.
ಸ್ವತಃ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಸ್ವಕ್ಷೇತ್ರಕ್ಕೇ ರಾಜಧಾನಿಯ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡದೇ ನೇರವಾಗಿ ಹರಿಸಲಾಗುತ್ತಿದೆ. ಜನರ ಆರೋಗ್ಯವೂ ಹಾಳಾಗುತ್ತಿರುವುದರ ಜತೆಗೆ, ಪರಿಸರದ ಆರೋಗ್ಯವೂ ಸರ್ವನಾಶವಾಗುತ್ತಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರವಲ್ಲದೆ, ಜಿಲ್ಲಾಡಳಿತವೂ ಮೌನಕ್ಕೆ ಶರಣಾಗಿದೆ. ಒಂದೆಡೆ ಧರ್ಮೋದ್ಧಾರದ ಮಾತನಾಡುವ ಬಿಜೆಪಿ ನಾಯಕರು, ಧಾರ್ಮಿಕ ಪುಣ್ಯಧಾಮವಾದ ರಂಗಸ್ಥಳದ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಳಿದ್ದು ಜಕ್ಕಲಮಡುಗು ನೀರು, ಬಿಟ್ಟಿದ್ದು ಗಲೀಜು ನೀರು
ಪರಿಸರ, ಐತಿಹಾಸಿಕವಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಸೂಕ್ಷ್ಮ ಪ್ರದೇಶವಾದ ರಂಗಸ್ಥಳದ ರಂಗಧಾಮ ಕೆರೆಯನ್ನು ಅತ್ಯಂತ ರಹಸ್ಯವಾಗಿ ಎಚ್‌ಎನ್ ವ್ಯಾಲಿ ಯೋಜನೆಗೆ ಲಿಂಕ್ ಮಾಡಲಾಗಿದೆ. ಈ ಕೆರೆ ಕಲುಶಿತವಾಗಬಾರದು ಎಂಬ ಉದ್ದೇಶದಿಂದ ಜಕ್ಕಲಮಡುಗು ನೀರು ಪೂರೈಕೆ ಮಾಡುವುದಾಗಿ ಮೊದಲು ಪೈಪ್‌ಲೈನ್ ಎಳೆಯಲಾಯಿತು. ಅದರ ಸುತ್ತ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿ ಮಾಡಲಾಯಿತು. ಆದರೆ, ಕೊನೆಗೆ ಬಂದಿದ್ದು ನೋಡಿದರೆ ಬೆಂಗಳೂರಿನ ಅರೆಬರೆ ಸಂಸ್ಕರಣೆ ಮಾಡಿದ ಕೊಳಚೆ ನೀರು ಎಂದು ಹೇಳುತ್ತಾರೆ ಸ್ಥಳೀಯರು.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಸ್ಥಳೀಯರೊಬ್ಬರು, ಕೆರೆಯಲ್ಲಿ ಸತ್ತುಬಿದ್ದಿದ್ದ ಮೀನುಗಳ ಮಾಹಿತಿಯನ್ನು ಹಂಚಿಕೊಂಡರು. ಅವರು ಹೇಳಿದ್ದಿಷ್ಟು.
“ಸೋಮವಾರ ಸಂಜೆಯೇ ಮೀನುಗಳು ನೀರಿನಲ್ಲಿ ಸತ್ತು ಕೆರೆಯ ದಡಕ್ಕೆ ತೇಲಿಬಂದು ಬಿದ್ದಿದ್ದವು. ಒಂದು ಕಡೆ ಕೆರೆಯಲ್ಲಿದ್ದ ಜಲಚರಗಳು ಸಾಯುತ್ತಿದ್ದರೆ, ಇನ್ನೊಂದೆಡೆ ಅಲ್ಲಿ ವಿಷಕ್ರಿಮಿಗಳು ಉತ್ಪತ್ತಿಯಾಗಿವೆ. ಅವು ಕಣ್ಣಿಗೆ ಬಿದ್ದರೆ ತೀವ್ರ ಉರಿಯಾಗುತ್ತದೆ ಮತ್ತೂ ಸಿಕ್ಕಾಪಟ್ಟೆ ನವೆಯಾಗುತ್ತದೆ. ಕಣ್ಣಿಗೆ ತುಂಬಾ ತೊಂದರೆಯಾಗಿ ಕೊನೆಗೆ ಹೈಡ್ರಾಪ್ಸ್ ಹಾಕಿಕೊಂಡು ಸರಿಮಾಡಿಕೊಳ್ಳಬೇಕು” ಎಂದು ಅಳಲು ತೋಡಿಕೊಂಡರು.
ಅಪಾಯಕಾರಿ ಎಂದರೆ, ರಂಗಧಾಮ ಕೆರೆಯು ಚಿಕ್ಕಬಳ್ಳಾಪುರ ನಗರಕ್ಕೆ ಹತ್ತಿರದಲ್ಲಿದೆ. ಇದೇ ರೀತಿ ಮುಷ್ಠೂರು ಕೆರೆ, ಕಂದವಾರ ಕೆರೆಗಳು ಕೂಡ ಸನಿಹದಲ್ಲೇ ಇವೆ. ಮೂರೂ ಕೆರೆಗಳಿಗೂ ಬೆಂಗಳೂರು ನೀರು ಬಿಟ್ಟು ಸಂಪೂರ್ಣವಾಗಿ ಕಲುಶಿತಗೊಳಿಸಲಾಗಿದೆ. ಗಬ್ಬುನಾತದ ಜತೆಗೆ, ಜನರ ಆರೋಗ್ಯವನ್ನೂ ಹಾಳು ಮಾಡುತ್ತಿವೆ. ಚಿಕ್ಕಬಳ್ಳಾಪುರದ ಸುತ್ತಮುತ್ತ ಮೂರು ಬೆಳ್ಳಂದೂರು ಕೆರೆಗಳನ್ನು ಸೃಷ್ಟಿ ಮಾಡಲಾಗಿದೆ. ಕೆರೆಗಳ ತುಂಬಾ ನೊರೆ ಎದ್ದಿದ್ದು, ಆ ನೀರು ಹಸಿರು, ಕಪ್ಪು ಬಣ್ಣದಲ್ಲಿದೆ ಎಂದು ಸ್ಥಳೀಯ ಪರಿಸರ ಪ್ರೇಮಿಯೊಬ್ಬರು ನೊಂದು ಹೇಳಿದ ಮಾತು. ಅವರಗೆ ಹೆಸರು ಹೇಳಲಿಕ್ಕೂ ಭಯವಿದೆ ಎಂದರೆ ʼರಿಪಬ್ಲಿಕ್ ಆಫ್ ಚಿಕ್ಕಬಳ್ಳಾಪುರದ ಪರಿಸ್ಥಿತಿʼಯನ್ನು ಅರ್ಥ ಮಾಡಿಕೊಳ್ಳಬಹುದು.
ಕೇಂದ್ರದ ಮಾರ್ಗಸೂಚಿ ಉಲ್ಲಂಘನೆ
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ಬೆಂಗಳೂರು ಕೊಳಚೆ ನೀರು ಹರಿಸಲು ಜಾರಿಗೆ ತಂದಿರುವ ಎಚ್‌ಎನ್ ವ್ಯಾಲಿ & ಕೆಸಿ ವ್ಯಾಲಿ ಯೋಜನೆಗಳು ಕೇಂದ್ರ ಸರಕಾರದ 2013ರ ಮಾರ್ಗಸೂಚಿಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿವೆ. 3ನೇ ಹಂತದಲ್ಲಿ ಇಂಥ ನೀರನ್ನು ಶುದ್ಧೀಕರಣ ಮಾಡಿದ ಮೇಲೆ ಮಾತ್ರವೇ ಬಳಸಿಕೊಳ್ಳಬೇಕು ಎಂಬುದು ಆ ಮಾರ್ಗಸೂಚಿಯ ಆಶಯ. ಈ ಯೋಜನೆಗಳು ಅನುಷ್ಠಾನಕ್ಕೆ ಬರುವ ಸಂದರ್ಭದಲ್ಲಿ ಈ ಮಾರ್ಗಸೂಚಿಯೂ ಬಂತು. ಅದರ ಆಧಾರದ ಮೇಲೆಯೇ ಇವೆರಡೂ ಯೋಜನೆಗಳ ಸಮಗ್ರ ಯೋಜನಾ ವರದಿ ಸಿದ್ಧವಾಯಿತು. ಆಗ ತಜ್ಞರು ಕೇಂದ್ರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಒತ್ತಿ ಹೇಳುತ್ತಾರೆ. ಆದರೆ, ರಾಜಕೀಯ ನಾಯಕರು, ಗುತ್ತಿಗೆದಾರರು, ಅಧಿಕಾರಿಗಳ ಅನೈತಿಕ ಲಾಬಿಯಿಂದ ಮೂರನೇ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಕೇಂದ್ರದ ಮಾರ್ಗಸೂಚಿಯ ಅತಿಮುಖ್ಯ ಅಂಶವನ್ನು ಬೇಕೆಂದೇ ನಿರ್ಲಕ್ಷ್ಯ ಮಾಡುತ್ತಾರೆ. ಆಗ ಸರಕಾರ ಒಂದು ದೊಡ್ಡ ಸುಳ್ಳು ಹೇಳುತ್ತದೆ. ಅದೇನೆಂದರೆ, ಈ ನೀರನ್ನೂ ಕೃಷಿಗಾಗಲಿ ಅಥವಾ ಕುಡಿಯುವ ಉದ್ದೇಶಕ್ಕೆ ನೇರವಾಗಿ ಬಳಸುವುದಿಲ್ಲ ಎಂದು. ಇಲ್ಲಿ ತಜ್ಞರು ಅಸಹಾಯರಾಗುತ್ತಾರೆ. ಅದರ ಪ್ರತಿಫಲವೇ ಇವತ್ತು ರಂಗಧಾಮ ಕೆರೆಯ ದುಃಸ್ಥಿತಿ ಎನ್ನುತ್ತಾರೆ ಜಿಲ್ಲೆಯ ನೀರಾವರಿ ಹೋರಾಟಗಾರ ಆರ್.ಆಂಜನೇಯ ರೆಡ್ಡಿ.
ನೇರವಾಗಿ ಕೃಷಿ ಮತ್ತು ಕುಡಿಯಲು ತ್ಯಾಜ್ಯ ನೀರನ್ನು ಬಳಸುವುದಿಲ್ಲ ಎನ್ನುವ ಸುಳ್ಳಿನೊಂದಿಗೆ ಈ ನೀರನ್ನು ಚಿಕ್ಕಬಳ್ಳಾಪುರ-ಕೋಲಾರಕ್ಕೆ ಹರಿಸಲಾಗುತ್ತಿದೆ. ಇದರ ಬಗ್ಗೆ ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಈ ಯೋಜನೆಗಳು ಕೇಂದ್ರ ಸರಕಾರದ ಮಾರ್ಗಸೂಚಿ & ಹಸಿರು ನ್ಯಾಯಮಂಡಳಿ ಆದೇಶಗಳ ಸ್ಪಷ್ಟ ಉಲ್ಲಂಘನೆ. ಇದಲ್ಲದೆ, ಮೂರನೇ ಹಂತದ ಸಂಸ್ಕರಣೆ ಬಗ್ಗೆ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ, ಸರಕಾರಕ್ಕೂ ಅದರತ್ತ ಗಮನ ಇಲ್ಲ ಎಂದು ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ವಿಧಿ ಇಲ್ಲದ ಅಸಹಾಯಕ ಸ್ಥಿತಿ ಜನರದ್ದು
ರಂಗಧಾಮ ಕೆರೆಯ ಆಸುಪಾಸಿನಲ್ಲಿ ಅಂಕಣಗೊಂದಿ, ದಿಣ್ಣೆ ಹೊಸಹಳ್ಳಿ ಗ್ರಾಮಗಳಿವೆ. ಜತೆಗೆ ಸುತ್ತಲೂ ಅರಣ್ಯ, ಬೆಟ್ಟಗುಡ್ಡಗಳಿವೆ. ನೋಡಲು ಬಹಳ ಸುಂದರವಾಗಿರುತ್ತದೆ. ಅದೂ ರಂಗನಾಥ ಸ್ವಾಮಿ ದೇವಾಲಯ ಇರುವುದರಿಂದ ಇಡೀ ಪ್ರದೇಶಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಇದೆ. ಇಂಥ ಸಂದರ್ಭದಲ್ಲಿ ರಂಗಧಾಮ ಕೆರೆಯಲ್ಲಿರುವ ತ್ಯಾಜ್ಯ ನೀರು, ದುರ್ನಾತ ಇಡೀ ಪ್ರದೇಶದ ವಾತಾವರಣವನ್ನು ಹಾಳು ಮಾಡುತ್ತಿದೆ. ಅಲ್ಲದೆ, ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯನ್ನೂ ಕೆಡಿಸುತ್ತಿದೆ. ಅಲ್ಲದೆ, ಎರಡೂ ಗ್ರಾಮಗಳ ಜನರ ಆರೋಗ್ಯಕ್ಕೆ ಮಾರಕವೂ ಆಗಿದೆ ಎಂದು ಹೇಳುತ್ತಾರೆ ಚಿಕ್ಕಬಳ್ಳಾಪುರದ ಹಿರಿಯ ವಕೀಲ ನಾರಾಯಣಸ್ವಾಮಿ.
ಬೆಂಗಳೂರಿನಿಂದ ವಿಷಕಾರಿ ನೀರು ಹರಿದುಬಂದು ನಮ್ಮ ಕೆರೆಗಳನ್ನು ಸೇರಿಕೊಳ್ಳುತ್ತಿದೆ. ಆ ನೀರು ಭೂಮಿಯಾಳಕ್ಕೆ ಸೇರುತ್ತಿದೆ. ಜನರು ಬೋರ್‌ವೆಲ್‌ಗಳಿಗೆ ಸೇರುತ್ತಿರುವ ಇದೇ ನೀರನ್ನೇ ಕುಡಿಯುತ್ತಿದ್ದಾರೆ. ವ್ಯವಸಾಯ ಮತ್ತು ಪಶು ಸಂಗೋಪನೆಗೆ ಬೇರೆ ದಾರಿ ಇಲ್ಲದೆ ಈ ನೀರನ್ನೇ ಬಳಕೆ ಮಾಡಲಾಗುತ್ತಿದೆ. ಪಕ್ಷಿಗಳು, ಪಶುಗಳು ಇದೇ ನೀರನ್ನೇ ಕುಡಿಯುತ್ತಿವೆ. ಹೀಗಾಗಿ ಪಶು ಸಂಪತ್ತಿನ ಆರೋಗ್ಯವೂ ಹಾಳಾಗುತ್ತಿದೆ. ನಮ್ಮ ಹಳ್ಳಿಯ ಪಕ್ಕದ ಪೂರ್ಣಸಾಗರ ಕೆರೆಗೆ ಇದೇ ನೀರನ್ನು ಹರಿಸಲಾಗಿದೆ. ನಮ್ಮದೊಂದು ಬೋರ್‌ವೆಲ್ ಇತ್ತು. ಅದರಲ್ಲಿ ಶುದ್ಧ ನೀರು ಬರುತ್ತಿತ್ತು. ಈಗ ಕೆರೆಯಲ್ಲಿ ತ್ಯಾಜ್ಯ ನೀರು ತುಂಬಿದ ಪರಿಣಾಮ ಬೋರ್‌ವೆಲ್‌ನ ಮೇಲಿನ ಗ್ಯಾಪ್‌ಗಳೆಲ್ಲ ಒಪೆನ್ ಆಗಿದ್ದು, ಇದೀಗ ಕೆರೆಯಲ್ಲಿದ್ದ ತ್ಯಾಜ್ಯ ನೀರು ಬೋರ್‌ವೆಲ್‌ನಲ್ಲಿ ಬಂದು ತುಂಬಿದೆ. ಕೆಲವೊಮ್ಮೆ ಬಿಳಿ ನೀರು ಬಂದರೆ, ಇನ್ನೊಮ್ಮೆ ದುರ್ನಾತದಿಂದ ಕೂಡಿದ ತ್ಯಾಜ್ಯ ನೀರು ಬರುತ್ತಿದೆ. ವಾಸ್ತವಾಂಶ ಹೀಗಿದೆ. ಹಣ ಇದ್ದವರು ವಾಟರ್ ಫಿಲ್ಟರ್‌ಗಳನ್ನು ಹಾಕಿಕೊಂಡಿದ್ದಾರೆ. ಇಲ್ಲದವರ ಪರಿಸ್ಥಿತಿ ಏನು ಎಂದು ವಕೀಲ ನಾರಾಯಣಸ್ವಾಮಿ ಅವರು ಪ್ರಶ್ನಿಸುತ್ತಾರೆ.
ಒಟ್ಟಾರೆಯಾಗಿ, ರಂಗಧಾಮ ಕೆರೆಯನ್ನು ಉಳಿಸಿಕೊಳ್ಳಲು ತ್ಯಾಜ್ಯ ನೀರನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಅಥವಾ ಆ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಿ ಬಿಡಬೇಕು. ಇದು ಸ್ಥಳೀಯರ ಒತ್ತಾಯವಾಗಿದೆ.
Comments 1