• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಮತ್ತೆ ಮತ್ತೆ ಕಾಡುವ ರಾಜೀವ್‌ ಗಾಂಧಿ ಎಂಬ ಶತಮಾನದ ಮುನ್ನೋಟ ಮತ್ತೂ ಬರೀ ವಿಷಾದ ಉಳಿಸಿಬಿಟ್ಟ ವೇಲುಪಿಳ್ಳೈ ಪ್ರಭಾಕರನೆಂಬ ಪರಮ ಚಾಣಾಕ್ಷನ ಪರಮ ತಪ್ಪು ಹೆಜ್ಜೆಗಳು!

P K Channakrishna by P K Channakrishna
May 21, 2021
in CKPLUS, EDITORS'S PICKS, NATION, STATE
Reading Time: 2 mins read
0
ಮತ್ತೆ ಮತ್ತೆ ಕಾಡುವ ರಾಜೀವ್‌ ಗಾಂಧಿ ಎಂಬ ಶತಮಾನದ ಮುನ್ನೋಟ ಮತ್ತೂ ಬರೀ ವಿಷಾದ ಉಳಿಸಿಬಿಟ್ಟ ವೇಲುಪಿಳ್ಳೈ ಪ್ರಭಾಕರನೆಂಬ ಪರಮ ಚಾಣಾಕ್ಷನ ಪರಮ ತಪ್ಪು ಹೆಜ್ಜೆಗಳು!
938
VIEWS
FacebookTwitterWhatsuplinkedinEmail

Obituary

ಡಿಜಿಟಲ್‌ ಭಾರತದ ಪಿತಾಮಹ ರಾಜೀವ್‌ ಗಾಂಧಿ ಅವರ ಹತ್ಯೆಯಾಗಿ ಇವತ್ತಿಗೆ (ಮೇ 21) 30 ವರ್ಷ. ಈ ಮೂರು ದಶಕಗಳಲ್ಲಿ ಭಾರತ, ಶ್ರೀಲಂಕಾ ಸೇರಿ ಜಗತ್ತಿನ ರಾಜಕಾರಣದಲ್ಲಿ ಅನೇಕ ಪಲ್ಲಟಗಳೇ ಆಗಿಹೋಗಿವೆ. ಆದರೆ, ಅಪರಿಮಿತ ಕಸನುಗಾರನ ದುರಂತ ಸಾವು ಮತ್ತೂ ಲಂಕೆಯ ರಕ್ತದೋಕುಳಿಯಲ್ಲಿ ಕಮರಿಹೋದ ತಮಿಳರ ಕನಸುಗಳ ಪಟ ಅಳಿಯದೇ ಹಾಗೆಯೇ ಉಳಿದಿವೆ. ಒಂದು ಹತ್ಯೆ ಮಾಡಿದ ವ್ಯಾಘ್ರರು ಮಾಡಿದ ಸಾಧನೆಯಾದರೂ ಏನು? ರಾಜೀವ್‌ ನೆನಪಲ್ಲಿ ಟೈಗರುಗಳ ಮೇಲೊಂದು ನೋಟ ಇಲ್ಲಿದೆ…

Lead photo courtesy: Wikipedia

  • ಶ್ರೀ ಪೆರಂಬುದೂರಿನಲ್ಲಿ ರಾಜೀವ್‌ ಸ್ಮಾರಕ / photo coutesy: Wikipedia

ಕೆಲ ಐತಿಹಾಸಿಕ ಪ್ರಮಾದಗಳು, ಕೆಟ್ಟ ನಿರ್ಧಾರಗಳು ತಮ್ಮದೇ ಭವಿಷ್ಯಕ್ಕೆ ಕೊನೆ ಮೊಳೆ ಹೊಡೆಯುತ್ತವೆ. ಹಾಗೆನ್ನುವುದಕ್ಕಿಂತ ಸರ್ವನಾಶ ಮಾಡುತ್ತವೆ ಎನ್ನುವುದೇ ಬೆಸ್ಟು. 21 ಮೇ 1991ರಂದು ಘಟಿಸಿದ ದುರಂತ ಇಂಥದ್ದೇ. ಆವತ್ತು ರಾಜೀವ್ ಗಾಂಧಿ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ʼಐಟಿ ಇಂಡಿಯಾʼಗೆ ಅಂಕುರಾರ್ಪಣೆ ಮಾಡಿದ್ದ ಮಹಾನ್‌ ನಾಯಕತ್ವ ಮಾನವ ಬಾಂಬ್‌ಗೆ ಆಹುತಿಯಾಗಿ ಛಿದ್ರವಾಗಿತ್ತು. ಹಾಗೆನ್ನುವುದಕ್ಕಿಂತ ನವಭಾರತದ ಕನಸುಗಳು ಛಿದ್ರವಾಗಿದ್ದವು ಎನ್ನಬಹುದು. ರೂಪದಲ್ಲಿ ದೇವೇಂದ್ರನಿಗೂ ಹೊಟ್ಟೆ ಉರಿಸುವಂತಿದ್ದ ಅವರು ಮಾಂಸದ ತಣುಕುಗಳಾಗಿ ಚೆಲ್ಲಿಬಿದ್ದಿದ್ದನ್ನು ಕಂಡು ಇಡೀ ದೇಶವೇಕೆ ಜಗತ್ತೇ ರೋಧಿಸಿತ್ತು. ನಿಜಕ್ಕಾದರೆ ಅದು ರಾಜೀವ್ ಸಾವಲ್ಲ! ಭವಿಷ್ಯದ ಸಾವು.

ಭಾರತದೊಂದಿಗೇ ದ್ವೀಪದೇಶ ಶ್ರೀಲಂಕಾ ಶ್ರೇಯಸ್ಸನ್ನು ಬಲವಾಗಿ ಪ್ರತಿಪಾದಿಸಿದವರು ರಾಜೀವ್. ಅಲ್ಲಿನ ಮುಖ್ಯವಾಹಿನಿಯಲ್ಲಿ ಎಲ್ಟಿಟಿಈಯನ್ನೂ ಬೆರೆಯವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದವರು. ತಮಿಳುನಾಡಿನ ರಾಮೇಶ್ವರಂ ದ್ವೀಪದ ಕೊನೆಯ ಕೊಂಡಿ ಧನುಷ್ಕೋಡಿಯಿಂದ ಕೆಲವೇ ಮೈಲು ದೂರದ ಜಾಫ್ನಾ ನಡುಗಡ್ಡೆಗಳ ಉದ್ದಗಲಕ್ಕೂ ಚಾಚಿಕೊಂಡು ಬದುಕು ಕಟ್ಟಿಕೊಂಡಿದ್ದ ತಮಿಳರಿಗೆ ಕೊಟ್ಟ ಕಿರುಕುಳ ಮನುಕುಲದ ಒಂದು ಕಪ್ಪುಚುಕ್ಕೆ. ಆ ವಿಷಯದಲ್ಲಿ ಲಂಕಾ ಸರಕಾರಗಳು ಮಾಡಿದ ಪಾಪಗಳು ಅನೇಕ. 70ರ ದಶಕದಿಂದ ಮೊದಲಾಗಿ ಎಲ್ಟಿಟಿಈ ಅಂತ್ಯದವರೆಗೂ ಈ ಅನ್ಯಾಯಕ್ಕೆ ಅಂಕೆಯೇ ಇರಲಿಲ್ಲ. ಇಂಥ ಸ್ಥಿತಿಯಿಂದ ಹೊರಬರಲು ಹಿಂಸೆಯನ್ನೇ ಆಯ್ಕೆ ಮಾಡಿಕೊಂಡ ತಮಿಳು ಟೈಗರುಗಳು ತುಸು ಉದಾತ್ತವಾಗಿ ಯೋಚನೆ ಮಾಡಿದ್ದಿದ್ದರೆ ರಾಜೀವ್ ಜೀವಿತಕಾಲದಲ್ಲಿಯೇ ಈ ಬಿಕ್ಕಟ್ಟಿಗೊಂದು ಶಾಶ್ಚತ ರಾಜಕೀಯ ಪರಿಹಾರ ಕಂಡುಕೊಳ್ಳಬಹುದಿತ್ತು. ಅಂಥ ಸುವರ್ಣಾವಕಾಶವನ್ನು ರಾಜೀವ್ ಕಲ್ಪಿಸಿದ್ದರು. ಆದರೆ, ಹಿಂಸೆಯೆಂಬ ಭ್ರಮೆಯ ಮೇಲೆ ಸವಾರಿ ಮಾಡುತ್ತಿದ್ದ ಟೈಗರುಗಳಿಗೆ ಭವಿಷ್ಯದಲ್ಲಿ ಘಟಿಸಲಿದ್ದ ಸಕಾರಾತ್ಮಕ ಪರಿಣಾಮಗಳನ್ನು, ಎದುರಾಗಲಿದ್ದ ಬಂಗಾರದ ದಿನಗಳನ್ನು, ತಮ್ಮ ಮಕ್ಕಳ ಮುಂದಿದ್ದ ಉಜ್ವಲ ಭವಿಷ್ಯವನ್ನು ಅಂದಾಜಿಸುವ ರಾಜಕೀಯ ಪಕ್ವತೆಯೇ ಇರಲಿಲ್ಲ. ಅವರ ಪರವಾಗಿ ತಮಿಳುನಾಡಿನಲ್ಲಿ ಹೋರಾಟ ನಡೆಸುತ್ತಿದ್ದ ವರ್ಚಸ್ವಿ ನಾಯಕರೂ ಮುಂದಿನ ಅಪಾಯವನ್ನು ಊಹಿಸಲಿಲ್ಲ. ಅವರಲ್ಲಿ ಬಹುತೇಕರು ಅವರವರ ವಿಚಾರಗಳ ಮೂಲಕ ಪೇಪರ್ ಟೈಗರುಗಳೇ ಆಗಿಬಿಟ್ಟರೆ ವಿನಾ ಲಂಕೆಯಲ್ಲಿ ನೆಮ್ಮದಿಯ ದಿನಗಳಿಗೆ ತಪಿಸುತ್ತಿದ್ದ ತಮ್ಮವರ ಕ್ಷೇಮವನ್ನು ಪರಿಗಣಿಸಲಿಲ್ಲ. ಜತೆಗೆ, ಭಾರತ ಮತ್ತು ಲಂಕಾ ಸರಕಾರಗಳ ನಡುವೆ ರಚನಾತ್ಮಕ ಮಾತುಕತೆಗೆ ವೇದಿಕೆ ಕಲ್ಪಿಸುವ ಅವಕಾಶವನ್ನು ಕೂಡ ಕೈಚೆಲ್ಲಿಬಿಟ್ಟರು.

ಆಗ ಲಂಕೆಯ ನಾಯಕತ್ವ ಜರ್ಮನಿಯ ಹಿಟ್ಲರ್, ಇಟಲಿಯ ಮುಸೋಲಿನಿಗಿಂತ ಕ್ರೂರವಾಗಿತ್ತು. “ನಿಜವಾಗಿಯೂ ತಮಿಳರು ಹಸಿವಿನಿಂದ ಬಳಲುತ್ತಿದ್ದರೆ, ಸಿಂಹಳೀಯರು ಸಂತೋಷಪಡುತ್ತಾರೆ” ಎಂದು “ಡೈಲಿ ಟೆಲಿಗ್ರಾಫ್” ಪತ್ರಿಕೆಗೆ ಹೇಳಿಕೊಂಡಿದ್ದ ಜಯವರ್ಧನೆಯಂಥ ಕ್ರೂರಿಗೆ ರಾಜತಾಂತ್ರಿಕವಾಗಿ ಬಲವಾದ ಮೂಗುದಾರ ಹಾಕಲು ಯತ್ನಸಿದ ರಾಜೀವ್ ಪ್ರಾಮಾಣಿಕತೆಯನ್ನು ತಮಿಳು ರಾಷ್ಟ್ರೀಯವಾದಿಗಳೆಲ್ಲರೂ ಟೈಗರುಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಲೇ ಇಲ್ಲ. ಅತ್ತ ಜಾಫ್ನಾದಲ್ಲಿ ಸಾವಿರಾರು ತಮಿಳರ ನರಮೇಧ ನಿಲ್ಲಲೂ ಇಲ್ಲ. ಇತ್ತ ತಮಿಳುನಾಡಿನಲ್ಲಿ ಎಗ್ಗಿಲ್ಲದೆ ಆ ಸಾವುಗಳ ಹೆಸರಲ್ಲಿ ಚಂದಾ ವಸೂಲಿಯೂ ನಿಲ್ಲಲಿಲ್ಲ!! ಎಲ್ಟಿಟಿಈ ಸಂಘಟನೆಯ ಈ ಕರ್ಮಕ್ಕೆ ಏನು ಹೇಳುವುದು?

Last Press Meet#rajivGandhi pic.twitter.com/k0QGVlm5oJ

— Tamil Nadu Congress Committee (@INCTamilNadu) May 20, 2021

ಜಯವರ್ಧನೆ ಅಹಂಕಾರಕ್ಕೆ ಅಂಕೆ

ಅಷ್ಟೇ ಏಕೆ? ಅಮೆರಿಕ ಬೆಂಬಲದಿಂದ ಹೆಂಡಕುಡಿದ ಹೋರಿಯಂತಾಗಿದ್ದ ಅಧ್ಯಕ್ಷ ಜಯವರ್ಧನೆಯನ್ನು ಆ ವ್ಯಕ್ತಿಯ ದಾರಿಯಲ್ಲೇ ಮಣಿಸಲು ಇಂದಿರಾ ಗಾಂಧಿ ಅವರು ನಿರ್ಧರಿಸಿದ್ದರು. ಆಗಷ್ಟೇ ಪಾಕಿಸ್ತಾನದಿಂದ ಬಾಂಗ್ಲಾವನ್ನು ವಿಮೋಚನೆಗೊಳಿಸಿದ್ದ ಅವರಿಗೆ ಶ್ರೀಲಂಕಾದಲ್ಲಿ ತಮಿಳರಿಗೆ ಪ್ರತ್ಯೇರ ದೇಶ ಕೊಡಿಸುವ ಅಥವಾ ಜಾಫ್ನಾಕ್ಕೆ ಸ್ವಾಯತ್ತ ಆಡಳಿತ ಕೊಡಿಸುವುದ ದೊಡ್ಡ ವಿಷಯ ಆಗಿರಲಿಲ್ಲ. ಹೀಗೆ ತಮಿಳರಿಗೆ ಪ್ರತ್ಯೇಕ ದೇಶ ಬೇಕೆಂಬ ವಾದಕ್ಕೆ ಇಂದಿರಾ ಬೆನ್ನೆಲುಬಾಗಿ ನಿಂತರು. ಟೈಗರುಗಳಿಗೆ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಕೊಟ್ಟು ತರಬೇತಿಯನ್ನೂ ಕೊಡಿಸಿದ್ದರು. 1983ರಲ್ಲಿ ಅಂತ ಕಾಣುತ್ತೆ, ಶ್ರೀಲಂಕಾದ ಜೈಲೊಂದರಲ್ಲಿ 53 ತಮಿಳು ಪ್ರತಿಭಟನಾಕಾರರನ್ನು ಗುಂಡಿಟ್ಟು ಅಮಾನುಷವಾಗಿ ಕೊಲ್ಲಲಾಯಿತು. ಆ ಕ್ಷಣದಲ್ಲಿ ವ್ಯಘ್ರರಾಗಿಬಿಟ್ಟಿದ್ದ ಇಂದಿರಾ, ರಾಜ್ಯಸಭೆಯಲ್ಲಿ ಮಾತನಾಡುತ್ತ, “ಶ್ರೀಲಂಕಾದಲ್ಲಿ ನಡೆಯುತ್ತಿರುವ ನಮ್ಮವರ ಮಾರಣಹೋಮವನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಅದಕ್ಕೊಂದು ಒತ್ತಾಯದ ಅಂತ್ಯ ಕಾಣಿಸಲಾಗುವುದು” ಎಂದು ಗುಡುಗಿದ್ದರು. ಪರೋಕ್ಷವಾಗಿ ಅವರು ಸೇನಾ ಕಾರ್ಯಾಚರಣೆಯ ಸುಳಿವು ನೀಡಿದ್ದರು. ದುರಾದೃಷ್ಟಕ್ಕೆ ಮರುವರ್ಷವೇ ಅವರು ತಮ್ಮ ಭದ್ರತಾ ಸಿಬ್ಬಂದಿಯಿಂದಲೇ ಹತ್ಯೆಗೀಡಾದರು.

ತಾಯಿಯ ನಂತರ ಅಧಿಕಾರಕ್ಕೆ ಬಂದ ರಾಜೀವ್, ರಾಜತಾಂತ್ರಿಕ ದಾರಿ ಹಿಡಿದರು. ಆವತ್ತಿನ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್, ಸೋವಿಯತ್ ರಷ್ಯದ ಅಧ್ಯಕ್ಷ ಮಿಖಾಯಿಲ್ ಗೊರ್ಬಚೇವ್ ಮೂಲಕ ಜಯವರ್ಧನೆ ಅಟ್ಟಹಾಸಕ್ಕೆ ಕಡಿವಾಣ ಹಾಕಿಯೇಬಿಟ್ಟರು. ಅಲ್ಲಿಗೆ ಮೆತ್ತಗಾದ ಜಯವರ್ಧನೆ ಮಾತುಕತೆಗೆ ಬರುವಂತೆ ಭಾರತಕ್ಕೆ ದುಂಬಾಲು ಬಿದ್ದರು. ಆ ಪರಿಣಾಮವೇ 1987ರ ಭಾರತ-ಶ್ರೀಲಂಕಾ ಶಾಂತಿ ಒಪ್ಪಂದ. ಆ ಮೂಲಕವಾದರೂ ಎಲ್ಟಿಟಿಈಗಳು ಬಂದೂಕುಗಳನ್ನು ತೊರೆದು ಲಂಕೆಯ ಮುಖ್ಯವಾಹಿನಿಗೆ ಬರಲಿ ಎಂಬುದೇ ರಾಜೀವ್ ದೊಡ್ಡ ಆಸೆಯಾಗಿತ್ತು. ಒಂದು ವೇಳೆ ಟೈಗರುಗಳು ಆ ಒಪ್ಪಂದವನ್ನು ಸಮ್ಮತಿಸಿ ನಡೆದಿದ್ದರೆ ಮುಂದೊಂದು ದಿನ ತಮಿಳರು ಅಧಿಕಾರ ಕೇಂದ್ರಸ್ಥಾನದಲ್ಲಿ ವಿರಾಜಮಾನರಾಗುತ್ತಿದ್ದರು. ಆವತ್ತೇ ಸಿವಿಲ್ ವಾರ್ ಮುಗಿದುಹೋಗುತ್ತಿತ್ತು. ಹಾಗೆ ಆಗಲಿಲ್ಲ.

  • courtesy: Wikipedia

ಕೊನೆಪಕ್ಷಕ್ಕೆ ತಮಿಳುನಾಡಿನ ಕೇಂದ್ರಸ್ಥಾನದಲ್ಲೇ ಕಾರ್ಯಾಚರಿಸುತ್ತಿದ್ದ ಟೈಗರುಗಳ ಮಾರ್ಗದರ್ಶಿಗಳು ಉದ್ದಕ್ಕೂ ಲಂಕೆಯ ವಿರುದ್ಧ ಹಿಂಸೆಯನ್ನು ಪ್ರೇರೇಪಿಸಿದರೇ ವಿನಾ ಕೊಲಂಬೋ ಆಡಳಿತವನ್ನು ರಾಜತಾಂತ್ರಿಕವಾಗಿ ಕಟ್ಟಿಹಾಕುವ ತಂತ್ರಗಾರಿಕೆಯನ್ನು ಹಣೆದು ಜಾಫ್ನಾ ತೀರದಲ್ಲಿ ನಿಂತು ಆಸೆ ಕಂಗಳಿಂದ ಭಾರತದತ್ತ ನೋಡುತ್ತಿದ್ದ ಜೀವಗಳ ಬಗ್ಗೆ ಯೋಚಿಸಲಿಲ್ಲ. ಇಂಥ ದಿವ್ಯನಿರ್ಲಕ್ಷ್ಯ, ಅಪರಿಪಕ್ವ ನಿರ್ಧಾರಗಳಿಂದಲೇ ಇಡೀ ಜಗತ್ತಿನಲ್ಲೆ ಸಾರ್ವಭೌಮ ರಾಷ್ಟ್ರವೊಂದಕ್ಕೇ ಸಡ್ಡು ಹೊಡೆದು ಪರ್ಯಾಯವಾಗಿ (ಶ್ರೀಲಂಕಾದ ಒಟ್ಟು ಭೂಪ್ರದೇಶದಲದಲ್ಲಿ ಅಂದಾಜು ಶೇಕಡಾ 30ರಷ್ಟಕ್ಕೂ ಹೆಚ್ಚು ಭೂಭಾಗ ಇವರ ವಶದಲ್ಲೇ ಇತ್ತು.) ಸರಕಾರ ನಡೆಸುವಷ್ಟು ಸಶಕ್ತವಾಗಿದ್ದ ಎಲ್ಟಿಟಿಈ ಎಂಬ ಭಾರೀ ಸಶಸ್ತ್ರ ಸಂಘಟನೆ, ಒಂದಲ್ಲ ಒಂದು ದಿನ ಮುಖ್ಯವಾಹಿನಿಗೆ ಬಂದು ಲಂಕೆಯ ಅಧಿಕಾರದ ಕೇಂದ್ರಸ್ಥಾನವನ್ನೇ ಅಧಿರೋಹಣ ಮಾಡಬಲ್ಲ ಚಾಣಾಕ್ಷತೆ ಇದ್ದ ವೇಲುಪಿಳ್ಳೈ ಪ್ರಭಾಕರನ್ ಎಂಬ ವ್ಯಕ್ತಿಯ ಕ್ಷಮಿಸಲಾರದ ತಪ್ಪುಹೆಜ್ಜೆಗಳು ಮುಖ್ಯವಾಗಿ ಭಾರತಕ್ಕೆ ಭಾರೀ ಬೆಲೆ ತೆರುವಂತೆ ಮಾಡಿದವು. ಅಂತಿಮವಾಗಿ ಆ ಸಂಘಟನೆಯೇ ವಿನಾಶವಾಯಿತು. ಅದರೆ ಜತೆಗೆ ತಮಿಳರ ಕನಸುಗಳೂ ಲಂಕೆಯ ರಕ್ತದೋಕುಳಿಯಲ್ಲಿ ಕಮರಿಹೋದವು.

ಎಲ್ಟಿಟಿಈ ಮಾಡಿದ ಘೋರ ತಪ್ಪುಗಳು

ಹೀಗೆ ನೋಡಿದರೆ, ಎಲ್ಟಿಟಿಈ ಮಾಡಿದ ಘೋರ ತಪ್ಪುಗಳು ಒಂದಲ್ಲ ಎರಡಲ್ಲ. ಅದರಲ್ಲಿ ಮೊದಲನೆಯದು, ಆ ಕಾಲಘಟ್ಟದಲ್ಲಿ ಭಾರತಕ್ಕಷ್ಟೇ ಅಲ್ಲದೆ ಜಗತ್ತಿನ ಅಗ್ರನಾಯಕರಲ್ಲಿ ಒಬ್ಬರಾಗಿದ್ದ, ಭಾರತೀಯರ ಬಹುಮೆಚ್ಚಿನ ಲೀಡರ್ ರಾಜೀವ್ ಗಾಂಧಿ ಅವರ ಹತ್ಯೆ ಮಾಡಿದ್ದು.

ಸಮಸ್ಯೆಗೆ ಈ ಹತ್ಯೆಯೊಂದೇ ಪರಿಹಾರ ಎಂದು ದುಡುಕಿದ ಪ್ರಭಾಕರನ್ ಗಳಿಸಿದ್ದೇನು ತಾಯ್ನಾಡಿನ ಬೆಂಬಲವನ್ನೂ ಶಾಶ್ವತವಾಗಿ ಕಳೆದುಕೊಂಡಿದ್ದು. ಹಾಗೆ ನೋಡಿದರೆ ರಾಜೀವ್ ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಟಿಟಿಈ ಬಗ್ಗೆ ಬಹಳ ಮೃಧು ನಿಲುವೇ ಹೊಂದಿದ್ದರು. 1987ರಲ್ಲಿ ನಿರ್ನಾಮದ ಅಂಚಿಗೆ ಬಂದು ಮುಟ್ಟಿದ್ದ, ಜಾಫ್ನಾದ ಕಾಡುಗಳು, ನಡುಗಡ್ಡೆಗಳಲ್ಲಿ ಲಂಕಾ ಯೋಧರ ಬಂದೂಕುಗಳಿಗೆ ಹೆದರಿ ಅಂಗೈನಲ್ಲಿ ಜೀವ ಇಟ್ಟುಕೊಂಡು ಓಡುತ್ತಿದ್ದ ಟೈಗರುಗಳನ್ನು ಜೀವಸಹಿತ ಉಳಿಸಿದ್ದೇ ರಾಜೀವ್‌ ಗಾಂಧಿ. ಜಯವರ್ಧನೆಯ ನಿರ್ದಯ ಸೇನೆ ನಡೆಸಿದ ಮಾರಣಹೋಮದಲ್ಲಿ ದಿಕ್ಕಾಪಾಲಾಗಿದ್ದ ತಮಿಳಿರಿಗೆ, ಟೈಗರುಗಳಿಗೆ ಜಾಫ್ನಾಗೇ ಹೆಲಿಕಾಪ್ಟರುಗಳನ್ನು ನುಗ್ಗಿಸಿ ಆಹಾರ, ಔಷಧಿ, ಆಯುಧಗಳನ್ನೂ ಪೂರೈಸಿದ್ದರು ಎಂದರೆ ರಾಜತಾಂತ್ರಿಕವಾಗಿ ರಾಜೀವ್‌ ಅದೆಂಥ ರಿಸ್ಕ್ ತೆಗೆದುಕೊಂಡಿದ್ದರು ಎಂಬುದು ಅರ್ಥವಾಗುತ್ತದೆ. ಆ ಕ್ಷಣದಲ್ಲಿ ಹಾವು ಕಡಿದಂತೆ ಆಗಿಬಿಟ್ಟ ಲಂಕಾ ಸರಕಾರ ಹೊಸ ಪ್ರಸ್ತಾವನೆಯೊಂದಿಗೆ ಭಾರತದ ಕದತಟ್ಟಿತು. “ಪ್ರತ್ಯೇಕ ದೇಶ ಕೊಡುವ ಬೇಡಿಕೆಯೊಂದನ್ನು ಹೊರತುಪಡಿಸಿ ತಮಿಳರ ಉಳಿದೆಲ್ಲ ಬೇಡಿಕೆಗಳನ್ನು ಷರತ್ತುರಹಿತವಾಗಿ ಈಡೇರಿಸಲಾಗುವುದು. ಅದಕ್ಕೆ ಪ್ರತಿಯಾಗಿ ಟೈಗರುಗಳ ಬಳಿ ಇರುವ ಭಾರತೀಯ ಆಯುಧಗಳನ್ನು ವಾಪಸ್ ಪಡೆದುಬಿಡಿ” ಎಂದು ಅಲುವತ್ತಕೊಂಡಿತ್ತು. ಈ ಪ್ರಸ್ತಾವನೆ ರಾಜೀವ್ ಗಾಂಧಿ ಅವರಿಗೆ ಸರಿಕಾಣಿಸಿತು. ಅವರ ತಂಡದಲ್ಲಿದ್ದ ವಿದೇಶಿ ನೀತಿ ನಿರೂಪಕರು, ಮುಖ್ಯವಾಗಿ ವಿದೇಶಾಂಗ ಮಂತ್ರಿ, ಸಂಪುಟ ಇದಕ್ಕೆ ಸಹಮತ ವ್ಯಕ್ತಪಡಿಸಿತ್ತು. ತಮ್ಮ ಜೀವಕ್ಕೇ ಎರವಾಗುವಂಥ ರಿಸ್ಕ್ ತೆಗೆದುಕೊಂಡರು ರಾಜೀವ್. ಭಾರತದ ಶಾಂತಿ ಪಾಲನಾ ಪಡೆ ಜಾಫ್ನಾಗೆ ತೆರಳಿತಲ್ಲದೆ ಟೈಗರುಗಳಿಗೆ ತಾನು ಕೊಟ್ಟಿದ್ದ ಆಯುಧಗಳನ್ನು ವಾಪಸ್ ಕೊಡುವಂತೆ ಕೇಳಿತು. ಆದರೆ ಪ್ರಭಾಕರನ್ ನೇತೃತ್ವದ ಟೈಗರುಗಳು ಈ ಒಪ್ಪಂದವನ್ನು ಧಿಕ್ಕರಿಸಿದರು. ಭಾರತೀಯ ಆಯುಧಗಳನ್ನು ಭಾರತದ ವಿರುದ್ಧವೇ ಬಳಸಿದರು. ಎಲ್ಟಿಟಿಈ ಮತ್ತು ಭಾರತಕ್ಕೆ ಎಲ್ಲ ಕೆಟ್ಟಿದ್ದು ಅಲ್ಲಿಯೇ. ಆಮೇಲೆ ಎಲ್ಟಿಟಿಈಗಳು ರಾಜೀವ್ ವಿರುದ್ಧ ಕಟುದ್ವೇಷ ಬೆಳೆಸಿಕೊಂಡರು. ಶರಣಾಗುವಂತೆ ಬಾರತೀಯ ಸೇನೆ ಮಾಡಿದ ಮನವಿಗೆ ಪ್ರಭಾಕರನ್ ಸೊಪ್ಪು ಹಾಕಲಿಲ್ಲ. ಹೇಗಾದರೂ ಮಾಡಿ ಆತನನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸಿ ತಮಿಳರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕೆಂಬ ರಾಜೀವ್ ಗುರಿ ಹೀಗೆ ವಿಫಲವಾಯಿತು.

  • Photo courtesy: Rahul Gandhi @RahulGandhi

ಇಂಥ ಸಮಯದಲ್ಲೇ ರಾಜಕೀಯ ಹಿನ್ನಡೆ ಅನುಭವಿಸಿದ ರಾಜೀವ್ 1989ರ ಚುನಾವಣೆಯಲ್ಲಿ ಸೋತರು. ಆಮೇಲೆ ಪ್ರಧಾನಿಯಾದ ವಿ.ಪಿ.ಸಿಂಗ್ ಅವರು ಲಂಕಾದಿಂದ ಶಾಂತಿಪಾಲನಾ ಪಡೆಗಳನ್ನು ವಾಪಸ್ ಕರೆಸಿಕೊಂಡರು. ಕೇವಲ ಜನಪ್ರಿಯ ರಾಜಕಾರಣದ ಅಮಲಿನಲ್ಲಿದ್ದ ಸಿಂಗ್‌ ಅವರಿಗೆ ಭವಿಷ್ಯದ ಎಲ್‌ಟಿಟಿಈ ಪರಿಣಾಮಗಳ ಬಗ್ಗೆ ಕೊಂಚವೂ ಚಿಂತೆ ಇರಲಿಲ್ಲ. 1991ರಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆ ಬಂದಾಗ ವೇಲುಪಿಳ್ಳೈ ಪ್ರಭಾಕರನ್ ನೇರವಾಗಿ ರಾಜೀವ್ ಕಡೆಗೇ ಗುರಿ ಇಟ್ಟ. ಸಮೀಕ್ಷೆಗಳಲ್ಲಿ ಮತ್ತೊಮ್ಮೆ ರಾಜೀವ್ ಪ್ರಧಾನಿಯಾಗುತ್ತಾರೆಂದು ಹೇಳಲಾಗಿತ್ತು. ಇದು ವೇಲುಪಿಳ್ಳೈಗೆ ಜೀರ್ಣಿಸಿಕೊಳ್ಳಲಾಗಲಿಲ್ಲ. ವಿಶಾಖಪಟ್ಟಣದಲ್ಲಿ ಪ್ರಚಾರ ಮುಗಿಸಿ ರಾತ್ರಿ 10.10ರ ಹೊತ್ತಿಗೆ ತಮಿಳುನಾಡಿನ ಶ್ರೀಪೆರಂಬುದೂರಿಗೆ ಬಂದಿಳಿದ ರಾಜೀವ್ ಈಸಿಯಾಗಿ ಟಾರ್ಗೆಟ್ ಆಗುತ್ತಾರೆಂಬುನ್ನು ಅರಿತುಕೊಂಡ ಪ್ರಭಾಕರನ್ ಅಂದುಕೊಂಡಿದ್ದನ್ನು ಸಾಧಿಸಿಯೇಬಿಟ್ಟ. ಮಾನವ ಬಾಂಬ್‌ಗೆ ರಾಜೀವ್ ಆಹುತಿಯಾಗಿಬಿಟ್ಟರು. (ಹರಿಬಾಬು ಎಂಬ ಪತ್ರಿಕಾ ಫೋಟೋಗ್ರಾಫರ್ ಒಬ್ಬರು ಸೆರೆಹಿಡಿದಿದ್ದ ಚಿತ್ರಗಳು ಹಂತಕಿಯನ್ನು ಗುರುತಿಸಿದ್ದವು. ಆ ಪಾತಕ ಕ್ಷಣಗಳನ್ನು ದಾಖಲಿಸಿದ್ದವು.) ನಿಜಕ್ಕೂ ಪ್ರಭಾಕರನ್ ಎಂಬ ಹಿಂಸಾತ್ಮ ಲಂಕೆಯಲ್ಲಿದ್ದ ಅಷ್ಟೂ ತಮಿಳರ ಕನಸುಗಳನ್ನು ಆ ಸಾವಿನೊಂದಿಗೆ ನುಚ್ಚುನೂರು ಮಾಡಿಬಿಟ್ಟಿತ್ತು. ರಾಜೀವ್‌ ಉಸಿರು ನಿಲ್ಲುವಂತೆ ಮಾಡುವ ಮೂಲಕ ಎಲ್‌ಟಿಟಿಈ ಕೂಡ ತನ್ನ ಕೊನೆಯುಸಿರಿಗೆ ಮುನ್ನುಡಿ ಬರೆದುಕೊಂಡಿತು.

ಅದೇ ಲಾಗಾಯ್ತು. ಎಲ್ಟಿಟಿಈ ಸಂಪೂರ್ಣವಾಗಿ ಭಾರತದ ಬೆಂಬಲ ಕಳೆದುಕೊಂಡುಬಿಟ್ಟಿತು. ಬಳಿಕ ಪ್ರಧಾನಿಯಾದ ಪಿ.ವಿ.ನರಸಿಂಹರಾವ್ ಅವರು ಟೈಗರುಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿ ಅನುಸರಿಸಿದರು.

ಇದಾದ ಮೇಲೆ ಟೈಗರುಗಳ ರಕ್ತದಾಹ ಮತ್ತೂ ಹೆಚ್ಚಿತು. 1993ರಲ್ಲಿ ಶ್ರೀಲಂಕಾ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರನ್ನು ಕೊಲಂಬೋದ ನಡುರಸ್ತೆಯಲ್ಲಿ ನಡು ಮಧ್ಯಾಹ್ನವೇ ಸೈಕಲ್ ಮೇಲೆ ಬಂದ ಎಲ್ಟಿಟಿಈ ಆತ್ಮಾಹುತಿ ಬಾಂಬರ್ ಒಬ್ಬ ಪೈಶಾಚಿಕವಾಗಿ ಹತ್ಯೆ ಮಾಡಿದ್ದ. ನಿಜಕ್ಕಾದರೆ ಲಂಕೆಯಲ್ಲಿ ತಮಿಳರ ವಿರುದ್ಧ ಹೆಪ್ಪುಗಟ್ಟುತ್ತಿದ್ದ ದ್ವೇಷ ರೋಷಾಗ್ನಿಯಾಗಿ ಬದಲಾಗಿದ್ದೇ ಆಗ. ಆ ನಂತರ ಅಧ್ಯಕ್ಷೆಯಾದ ಚಂದ್ರಿಕಾ ಕುಮಾರತುಂಗಾ ಹತ್ಯೆಗೂ 1999ರಲ್ಲಿ ಟೈಗರುಗಳು ವಿಫಲಯತ್ನ ನಡೆಸಿದರು. ದಾಳಿಯಲ್ಲಿ ಚಂದ್ರಿಕಾ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡರು. ಅಲ್ಲಿಗೆ ಸಿಂಹಳೀಯರಲ್ಲಿ ತಮಿಳರ ವಿರುದ್ಧ ಸೇಡಿನ ಕಿಚ್ಚು ಧಗಧಗಿಸತೊಡಗಿತ್ತು. ಆಳದಲ್ಲಿ ಪರಮ ದ್ವೇಷ ಸೃಷ್ಟಿಯಾಯಿತು.

ಅದಾದ ಮೇಲೆ ಕಾಲಚಕ್ರ ಐದೂವರೆ ವರ್ಷಗಳಷ್ಟೇ ಉರುಳಿತ್ತು. ಲಂಕೆಯಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆ ಎದುರಾಯಿತು. ಆಗಲೂ ಟೈಗರುಗಳು ಇತಿಹಾಸದಿಂದ ಪಾಠ ಕಲಿಯಲಿಲ್ಲ. ಮಹಿಂದ ರಾಜಪಕ್ಸೆ ಎಂಬ ಕಟ್ಟಾ ರಾಷ್ಟ್ರೀಯವಾದಿ & ಅತಿಯಾದ ಮಹತ್ವಾಕಾಂಕ್ಷಿಯ ವಿರುದ್ಧ ಉದಾರವಾದಿ, ತಮಿಳರ ಪರ ಹೋರಾಟಕ್ಕೆ ಮೃದುನಿಲವು ಮಾತ್ರವಲ್ಲ, ಸಹೃದಯದ ಪ್ರಾಮಾಣಿಕ ಕಾಳಜಿ ಹೊಂದಿದ್ದ ರನಿಲ್ ವಿಕ್ರಮಸಿಂಘೆ ಎಂಬ ಸಜ್ಜನ-ಸರಳ ವ್ಯಕ್ತಿಗೆ ಮತಹಾಕಿ ಗೆಲ್ಲಿಸಿಕೊಳ್ಳಬೇಕಾಗಿತ್ತು ತಮಿಳರು. ಎಲ್ಟಿಟಿಈ ಪಾಲಿಗೆ ಆ ಚುನಾವಣೆ ನಿರ್ಣಾಯಕವಾಗಿತ್ತು. ಆದರೆ ಅಪ್ರಬುದ್ಧ ವೇಲುಪಿಳ್ಳೈ ಮಾಡದ್ದೇನು? ಚುನಾವಣೆ ಬಹಿಷ್ಕರಿಸುವಂತೆ ತನ್ನವರಿಗೆ ಕರೆಕೊಟ್ಟುಬಿಟ್ಟ. ಒಬ್ಬೇಒಬ್ಬ ತಮಿಳನೂ ಮತಗಟ್ಟೆಯತ್ತ ಸುಳಿಯಲಿಲ್ಲ. ಭಾರೀ ಅಬ್ಬರದ ಪ್ರಚಾರದಿಂದ ನಡೆದ ಈ ಚುನಾವಣೆಯಲ್ಲಿ ಸಿಂಹಿಳೀಯರು ಒಂದಾಗಿದ್ದರು. ರಾಜಪಕ್ಸೆ ಅರೆದುಕುಡಿಸಿದ್ದ ರಾಷ್ಟ್ರೀಯತೆಯ ಅಮಲಿನಲ್ಲಿ ಅವರೆಲ್ಲರೂ ತೇಲಿಹೋಗಿದ್ದರು. ಕೇವಲ ಒಂದು ಲಕ್ಷ ತೊಂಬತ್ತು ಸಾವಿರ (ಶೇಕಡಾ ೫೦.೩ರಷ್ಟು ಮಾತ್ರ) ಮತಗಳ ಅಂತರದಿಂದ ರಾಜಪಕ್ಸೆ ಗೆದ್ದರೆ, ತಮಿಳರಿಗೆ ನಿಜಕ್ಕೂ ಆಪ್ತಬಂಧುವಾಗಿದ್ದ ವಿಕ್ರಮಸಿಂಘೆ ಎಂಬ ಭರವಸೆ ಚಿಕ್ಕ ಅಂತರದಲ್ಲಿ ಸೋತುಹೋಗಿತ್ತು. ಇದೇ ದೊಡ್ಡ ತಿರುವು. ಎಲ್ಟಿಟಿಈ ತನ್ನ ಶವಪೆಟ್ಟಿಗೆಗೆ ಹೊಡೆದುಕೊಂಡ ಕೊನೆ ಮೊಳೆ!!

ಅಧ್ಯಕ್ಷಪಟ್ಟಕ್ಕೆ ಬಂದು ಕೂತೊಡನೆ ರಕ್ಷಣೆ ಖಾತೆಯನ್ನು ತಾವೇ ಇಟ್ಟುಕೊಂಡ ರಾಜಪಕ್ಸೆ, ಇನ್ನೇನು ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಖಡಕ್ ಸೇನಾಧಿಪತಿ ಶರತ್ ಫೋನ್ಸೆಕಾ ಅಧಿಕಾರಾವಧಿಯನ್ನು ವಿಸ್ತರಿಸಿಬಿಟ್ಟರು. ಜತೆಗೆ ತಮ್ಮ ಸಹೋದರ, ದೇಶದ ಈಗಿನ ಅಧ್ಯಕ್ಷ ಗೋಟಬಯಾ ರಾಜಪಕ್ಸೆಯನ್ನು ಬಹುಮುಖ್ಯವಾದ ಡಿಫೆನ್ಸ್ ಸೆಕ್ರೆಟರಿ ಹುದ್ದೆಗೆ ತಂದು ಕೂರಿಸಿಕೊಂಡರು. ಅಲ್ಲಿಗೆ ಎಲ್ಟಿಟಿಈ ಅಂತ್ಯಕ್ಕೆ ಅಂತಿಮ ಷರಾ ಬರೆದುಬಿಟ್ಟಿದ್ದರು ರಾಜಪಕ್ಸೆ. 2006ರಿಂದಲೇ ಟೈಗರುಗಳ ವಿರುದ್ಧ ಆಪರೇಷನ್‌ಗಿಳಿದ ಲಂಕಾಪಡೆ 2009 ಮೇ 18ರ ದಿನಕ್ಕೆ ಟೈಗರುಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿಬಿಟ್ಟಿತ್ತು. ಅದೇ ದಿನ ವೇಲುಪಿಳ್ಳೈ ಪ್ರಭಾಕರನ್ ಎಂಬ ಮೋಸ್ಡ್ ವಾಂಟೆಡ್ ವ್ಯಕ್ತಿಯೂ ಹತನಾಗಿದ್ದ. ಪಾಯಂಟ್ ಬ್ಲಾಂಕ್ ಸಮೀಪದಲ್ಲಿ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ನೇರವಾಗಿ ಹಣೆಗೇ ಗುಂಡು ಹೊಕ್ಕಿತ್ತು. ಅದೆಷ್ಟೋ ಅಮಾಯಕರನ್ನು ಕೊಲ್ಲಿಸಿದ್ದ ಈತ ಸಾವು ಸುತ್ತುವರೆದ ಕೂಡಲೇ ವಿಲವಿಲನೇ ಒದ್ದಾಡಿದ್ದನಂತೆ. ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದನಂತೆ. 33 ವರ್ಷಗಳಿಂದ ಅದೆಷ್ಟೋ ಸವಾಲುಗಳನ್ನು ಮೆಟ್ಟಿ ಸಾಗಿಬಂದಿದ್ದ ಹೋರಾಟಕ್ಕೆ ಹಾಗೆ ಚರಮಗೀತೆ ಹಾಡಲಾಗಿತ್ತು. ಕಣ್ತೆರೆದ ಸ್ಥಿತಿಯಲ್ಲಿಯೇ ಸಿಕ್ಕ ಪ್ರಭಾಕರನ್ ದೇಹ, ಆತನ ಕೊನೆ (ಸತ್ತ ನಂತರದ) ನೋಟದಲ್ಲಿಯೂ ತಮಿಳು ದೇಶದ ಕನಸು ಹಾಗೆಯೇ ಜೀವಂತವಾಗಿತ್ತೇನೋ ಎಂದೆನಿಸಿದರೆ ಅಚ್ಚರಿಯೇನೂ ಇಲ್ಲ. ತನ್ನ ಸಾವಿನೊಂದಿಗೆ ಲಂಕೆಯ ಅಖಂಡ ತಮಿಳರ ಕನಸುಗಳನ್ನೂ ಸಮಾಧಿ ಮಾಡಿಬಿಟ್ಟ ಈ ಮನುಷ್ಯನನ್ನು ಇತಿಹಾಸ ಕ್ಷಮಿಸುತ್ತದೆಯೇ? ಗೊತ್ತಿಲ್ಲ. ಭಾರತವಂತೂ ಕ್ಷಮಿಸುವುದಿಲ್ಲ.

ತಪ್ಪು ಮಾಡಿದ ವೇಲುಪಿಳ್ಳೈ

  • courtesy: Wikipedia

ಎಲ್ಟಿಟಿಈ ಮಾಡಿಕೊಂಡ ಇನ್ನೊಂದು ಕರ್ಮವೆಂದರೆ 2009ರಲ್ಲಿ ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರವೇ ಇತ್ತು. ಅತ್ತ ರಾಜಪಕ್ಸೆ ನಮ್ಮ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಪದತಲಕ್ಕೆ ಬಿದ್ದು ಟೈಗರುಗಳು ವಿರುದ್ಧದ ಯುದ್ಧಕ್ಕೆ ಜಯವಾಗಲಿ ಎಂದು ಬೇಡಿಕೊಂಡು ಹೋದರೂ ಡಾ.ಮನಮೋಹನ್ ಸಿಂಗ್ ಸರಕಾರ ಶ್ರೀಲಂಕಾ ಸಿವಿಲ್ ವಾರ್‌ಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದುಬಿಟ್ಟಿತ್ತು. ಪ್ರಭಾಕರನ್ ಹತನಾದ ಎರಡೇ ದಿನಗಳ ಹಿಂದೆ (2009 ಮೇ 16) ಕಾಂಗ್ರೆಸ್ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಹೊಡೆದು ಮೇ 22ರಂದು ಮನಮೋಹನ್ ಸಿಂಗ್ ಎರಡನೇ ಅವಧಿಗೆ ಪ್ರಧಾನಿಯಾಗಿಬಿಟ್ಟರು. ಮೊದಲೇ ಸಂಭ್ರಮದಲ್ಲಿದ್ದ ಕಾಂಗ್ರೆಸ್ಸಿಗೆ ಚುನಾವಣೆ ರಿಸಲ್ಟ್ ಬಂದ ದಿನ ಡಬಲ್ ಸಂಭ್ರಮ. ತನ್ನ ಶತ್ರು ನಾಮಾವಶೇಷವಾದ ಘಳಿಗೆ. ಅದೇ ಸರಕಾರದ ಕ್ಯಾಬಿನೆಟ್ಟಿನಲ್ಲಿ ಮಂತ್ರಿಗಿರಿಗೆ ಮೇ 16ರಿಂದಲೇ (ಪ್ರಭಾಕರನ್ ಸಾಯುವುದಕ್ಕೆ ಎರಡು ದಿನ ಮೊದಲು) ಚೌಕಾಸಿಗಿಳಿದ ತಮಿಳುನಾಡಿನ ರಾಜಕೀಯ ಪಕ್ಷಗಳ ಪಾಲಿಗೆ ವೇಲುಪಿಳ್ಳೈ ಒಂದು ಅಪಥ್ಯವಾದ ಇತಿಹಾಸದ ಭಾಗವಾಗಿಬಿಟ್ಟಿದ್ದ. ಆತನ ಸಾವು ಭಾರತದ ಪಾಲಿಗೆ ದೊಡ್ಡ ಸುದ್ದಿಯಾಗಲೇ ಇಲ್ಲ.

ಹೀಗೆ ಅಪರಿಮಿತ ಚಾಣಾಕ್ಷ. ಬದ್ಧತೆಯುಳ್ಳ ನಾಯಕ, ಅಸಾಧಾರಣ ಸಂಘಟನಾ ಚತುರ, ತಮಿಳರಿಗಾಗಿಯೇ ಪ್ರತ್ಯೇಕ ಸೇನೆ, ನ್ಯೂಸ್ ಚಾನೆಲ್, ರೇಡಿಯೋ, ಸುದ್ದಿಪತ್ರಿಕೆಯನ್ನು ಆರಂಭಿಸಿದ್ದ ಬುದ್ಧಿವಂತ, ಶಾಂತಿಗಾಗಿ ನೊಬೆಲ್ ಪುರಸ್ಕಾರ ನೀಡುವ ನಾರ್ವೆ ದೇಶದೊಂದಿಗೇ ರಾಜತಾಂತ್ರಿಕ ಸಂಬಂಧ ಬೆಳೆಸಿದ್ದ ವೇಲುಪಿಳ್ಳೈ ಪ್ರಭಾಕರನ್ ಕಾಲಗರ್ಭದಲ್ಲಿ ಹೂತುಹೋಗಿದ್ದಾನೆ. ಅವನನ್ನು ಹೋರಾಟಗಾರನೋ, ಭಯೋತ್ಪಾದಕನೋ ಅಥವಾ ತಮಿಳರ ಹೀರೋ ಎನ್ನಬೇಕೋ ಇಲ್ಲವೇ ಅವರೆಲ್ಲರ ಕನಸುಗಳನ್ನು ತನ್ನೊಬ್ಬನ ಹಠಕ್ಕೆ ಬಲಿಗೊಟ್ಟ ಮೂರ್ಖ ಎನ್ನಬೇಕೋ ತಿಳಿಯುತ್ತಿಲ್ಲ.

ರಾಜೀವ್ ಇಲ್ಲವಾಗಿ ಇಪ್ಪತ್ತೊಂಭತ್ತು ವರ್ಷಗಳೇ ಸಂದಿರುವ ಈ ಹೊತ್ತಿನಲ್ಲಿ ಎದುರಾಗುವ ಪ್ರಶ್ನೆಗಳು, ಕಾಡುವ ನೆನಪುಗಳು ಅನೇಕ. ಸುದ್ದಿಮನೆಯ ಸುದ್ದಿ ಸಂಪಾದಕನಾಗಿದ್ದ ನಾನು ಈ ಟೈಗರ್ ಸಾವಿಗೆ ಕೊಟ್ಟಿದ್ದ ಹೆಡ್ಡಿಂಗು, ಮಾಡಿಸಿದ ಪೇಜುಗಳು ಒಮ್ಮೆ ಸ್ಮೃತಿಪಟಲದಲ್ಲಿ ಹಾದುಹೋಗುತ್ತಿವೆ.

ಅಂತಿಮವಾಗಿ ನನಗೆ ಅನಿಸಿದ್ದಿಷ್ಟು..,
ಪ್ರಭಾಕರನ್ ದುಡುಕಿ ರಾಜೀವ್ ಅವರನ್ನು ಹತ್ಯೆ ಮಾಡಿಸಬಾರದಿತ್ತು. ಅವನೂ ಹಾಗೆ ಸಾಯಬಾರದಿತ್ತು. ಇಬ್ಬರೂ ಬದುಕಿದ್ದಿದ್ದರೆ ಮನುಕುಲಕ್ಕೆ ಒಳ್ಳೆಯದೇ ಆಗುತ್ತಿತ್ತು. ಮುಖ್ಯವಾಗಿ ಭಾರತದ ದಕ್ಷಿಣ ಭಾಗದ ಕೊನೆಯಲ್ಲಿ ಶ್ರೀರಾಮಚಂದ್ರರು ವಾನರ ಸೇನೆಯ ನೆರವಿನೊಂದಿಗೆ ಕಟ್ಟಿದ್ದ ರಾಮಸೇತುವಿನ ಪರಮಾರ್ಥ ಇನ್ನೂ ಅಧಿಕವಾಗುತ್ತಿತ್ತು. ಜಾಫ್ನಾದ ಕಡಲತಡಿಯಲ್ಲಿ ಭಾರತದ ತಿರಂಗವೂ ಹಾರುತ್ತಿತ್ತೇನೋ.


Tags: 30 years agocongress partyliberation tigers of tamil eelamltterajiv gandhirajiv gandhi death anniversarySonia GandhiVelupillai Prabhakaran
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಸುಂದರಲಾಲ ಬಹುಗುಣ: ಗಿರಿಶಿಖರ, ಮಣ್ಣು, ನೀರು, ಕಾಡುಮೇಡಿನ ಮೇಲೆ ಎಣಿ ಇಲ್ಲದ ಪ್ರೀತಿ ಮೂಡಿಸಿದ ಹಿರಿಯಜ್ಜ, ಹೃದಯದಿಂದ ಹಸಿರನ್ನು ನೋಡಿದ ದಾರ್ಶನಿಕ

ಸುಂದರಲಾಲ ಬಹುಗುಣ: ಗಿರಿಶಿಖರ, ಮಣ್ಣು, ನೀರು, ಕಾಡುಮೇಡಿನ ಮೇಲೆ ಎಣಿ ಇಲ್ಲದ ಪ್ರೀತಿ ಮೂಡಿಸಿದ ಹಿರಿಯಜ್ಜ, ಹೃದಯದಿಂದ ಹಸಿರನ್ನು ನೋಡಿದ ದಾರ್ಶನಿಕ

Leave a Reply Cancel reply

Your email address will not be published. Required fields are marked *

Recommended

ಅನಿವಾರ್ಯವಾಗಿ ರಾಜಕಾರಣಕ್ಕೆ ಬಂದು ಹುತಾತ್ಮರಾದರು ರಾಜೀವ್ ಗಾಂಧಿ

ಅನಿವಾರ್ಯವಾಗಿ ರಾಜಕಾರಣಕ್ಕೆ ಬಂದು ಹುತಾತ್ಮರಾದರು ರಾಜೀವ್ ಗಾಂಧಿ

2 years ago
ಬಾಗೇಪಲ್ಲಿಯಲ್ಲಿ ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ, ಅರಣ್ಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ  ಬದುಕುಳಿದ ಮೂಕಜೀವಿ

ಬಾಗೇಪಲ್ಲಿಯಲ್ಲಿ ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ, ಅರಣ್ಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಬದುಕುಳಿದ ಮೂಕಜೀವಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ