ದಂಧೆಯಲ್ಲಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಶಾಮೀಲಾಗಿರುವುದು ಕೂಡ ಪತ್ತೆಯಾಗಿದೆ ಎಂದ ಗೃಹ ಸಚಿವರು
ಬೆಂಗಳೂರು: ಜನರ ಜೀವ ಉಳಿಸುವ ಕೊರೋನ ಲಸಿಕೆಯನ್ನು ದುಡ್ಡಿನ ಆಸೆಗಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅಂಥವರನ್ನು ಹಿಡಿದು ಜೈಲಿಗಟ್ಟಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಲಸಿಕೆಯನ್ನು ಅಕ್ರಮವಾಗಿ ಸಂಗ್ರಹ ಮಾಡಿರುವುದು, ಸಾಗಾಟ ಮಾಡಿರುವುದು ಕಂಡುಬಂದಿದೆ. ಈ ಅಪರಾಧದಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಶಾಮೀಲಾಗಿರುವುದು ಕೂಡ ಪತ್ತೆಯಾಗಿದೆ. ಇದು ನಿಜಕ್ಕೂ ಅಕ್ಷಮ್ಯ ಅಪರಾಧ. ಜನರ ಜೀವ ಉಳಿಸುವ ಲಸಿಕೆಯನ್ನು ಹಣದ ಆಸೆಗೆ ಅಕ್ರಮವಾಗಿ ಮಾರಾಟ ಮಾಡಿದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ರಾಜ್ಯಕ್ಕೆ ಕೆಲ ದಿನಗಳಲ್ಲಿ ಲಸಿಕೆ ಸರಬರಾಜು ಆಗಲಿದೆ. ಯಾವ ರೀತಿ ರೆಮಿಡಿಸಿವಿರ್ ಬೇಡಿಕೆ ಕಡಿಮೆಯಾಯಿತೋ ಅದೇ ರೀತಿ ಲಸಿಕೆಗೂ ಬೇಡಿಕೆ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳ ಕಾಲ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಅಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಸೂಚಿಸಿದ್ದೇನೆ. ರಾಜ್ಯದ ಶಹರ, ನಗರ ಪ್ರದೇಶ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಿದ್ದೇನೆ. ಬ್ಯಾರಿಕೇಡಿಂಗ್ ವ್ಯವಸ್ಥೆಯನ್ನು ಹೆಚ್ಚು ಮಾಡುವಂತೆ ಸೂಚಿಸಲಾಗಿದೆ. ಕೆಲ ರಸ್ತೆಗಳ ಸಂಚಾರದಲ್ಲಿ ನಿರ್ಬಂಧ ವಿಧಿಸುವಂತೆ ಹೇಳಿದ್ದೇನೆ. ಅನವಶ್ಯಕವಾಗಿ ಓಡಾಡುವುದಕ್ಕೆ ಸಂಪೂರ್ಣವಾಗಿ ನಿರ್ಬಂಧ ಮಾಡಬೇಕು. ವಾಹನ ತಪಾಸಣೆ ಬಿಗಿಗೊಳಿಸಬೇಕು. ವಿನಾಕರಣ ಓಡಾಡುವುದು ಖಚಿತವಾದರೆ ವಾಹನಗಳನ್ನು ಸೀಸ್ ಮಾಡುವ ಕೆಲಸ ಮುಂದುವರಿಯಲಿದೆ ಗೃಹ ಸಚಿವರು ಹೇಳಿದರು.
“ಎರಡನೇ ಹಂತದ ಲಸಿಕೆಗೆ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಬೆಲೆ ನಿಗದಿ ಮಾಡಿರುವ ಹಾಗೂ ದರ ನಿಗದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಟ್ಟದಲ್ಲಿಯೇ ನಿರ್ಧಾರ ಆಗಬೇಕು.
- ಬಸವರಾಜ ಬೊಮ್ಮಾಯಿ / ಗೃಹ & ಕಾನೂನು-ಸಂಸದೀಯ ವ್ಯವಹಾರಗಳ ಖಾತೆ ಸಚಿವ