ಮಂಚನಬಲೆಯ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ 60 ಹಾಸಿಗೆಗಳ ಸುಸಜ್ಜಿತ ಆರೈಕೆ ಕೇಂದ್ರ
ಚಿಕ್ಕಬಳ್ಳಾಪುರ: ತಾಲೂಕಿನ ಮಂಚನಬಲೆ ಗ್ರಾಮದಲ್ಲಿರುವ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಸ್ಥಾಪನೆ ಮಾಡಲಾಗಿರುವ 60 ಹಾಸಿಗೆಗಳ ಕೊರೊನಾ ಕೇರ್ ಸೆಂಟರ್ ಅನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಂಗಳವಾರ ಉದ್ಘಾಟಿಸಿದರು.
ಚಿಕ್ಕಬಳ್ಳಾಪುರ ಶಾಖಾ ಮಠದಿಂದ ಈ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಲಾಗಿದ್ದು, ಈ ಭಾಗದ ಗ್ರಾಮೀಣ ಜನರಿಗೆ ಗುಣಮಟ್ಟದ ಕೊರೊನ ಚಿಕಿತ್ಸೆ ದೊರೆಯಬೇಕು, ಸೋಂಕಿಗೆ ತುತ್ತಾದವರು ಭಯಕ್ಕೆ ಒಳಗಾಗದೇ ಸಕಾಲದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕು ನಿಯಂತ್ರಣ ವಿಚಾರದಲ್ಲಿ ಶ್ರೀ ಮಠ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಇದೇ ವೇಳೆ ಶ್ರೀಗಳು ಹೇಳಿದರು.
ಹಳ್ಳಿ ಪ್ರದೇಶದಲ್ಲಿ ಯಾರಿಗೆ ಆಗಲಿ ಸೋಂಕು ತಗುಲಿದರೆ ಅವರು ಮನೆಯಲ್ಲೇ ಕ್ವಾರಂಟೈನ್ ಆಗುವುದು ಬೇಡ. ಎಲ್ಲರೂ ಕೋವಿಡ್ ಕೇರ್ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆಯಬೇಕು ಎಂದು ಸ್ವಾಮೀಜಿ ಅವರು ಸಲಹೆ ಮಾಡಿದರು.
ಈ ಕೋವಿಡ್ ಕೇರ್ ಕೇಂದ್ರಕ್ಕೆ ಅಗತ್ಯವಾದ ಎಲ್ಲ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು. ಶ್ರೀ ಮಠದ ವತಿಯಿಂದ ಕೋವಿಡ್ ಸೋಂಕಿತರಿಗೆ ಕೋವಿಡ್ ನೀಡಲಾಗುವ ಮೆಡಿಸಿನ್ ಕಿಟ್ʼಗಳನ್ನು ಸ್ವಾಮಿಜಿಗಳವರು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಂಗಳನಾಥ ಸ್ವಾಮೀಜಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.