ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲೂ ಸ್ಥಾಪನೆಯಾಗಲಿದೆ ಖೇಲೊ ಇಂಡಿಯಾ ಕೇಂದ್ರ
ಬೆಂಗಳೂರು: ರಾಜ್ಯದಲ್ಲಿ ಚಿಕ್ಕಬಳ್ಳಾಪುರ-ಕೋಲಾರ ಸೇರಿದಂತೆ 31 ಜಿಲ್ಲೆಗಳಲ್ಲಿ ಖೇಲೊ ಇಂಡಿಯಾ ಕೇಂದ್ರಗಳ ಸ್ಥಾಪನೆ ಮಾಡಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ರಾಜ್ಯಕ್ಕೆ ಆಗಮಿಸಿದ್ದ ವೇಳೆ, ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ 31 ಜಿಲ್ಲೆಗಳಲ್ಲಿ ಖೇಲೊ ಇಂಡಿಯಾದ ಕೇಂದ್ರಗಳನ್ನು ಸ್ಥಾಪಿಸುವಂತೆ ಮನವಿ ಕೋರಿದ್ದರು. ಸಚಿವರ ಮನವಿಗೆ ಸ್ಪಂದಿಸಿರುವ ಕೇಂದ್ರವು, ಎಲ್ಲ ಜಿಲ್ಲೆಗಳಲ್ಲಿ ಖೇಲೊ ಇಂಡಿಯಾದ ಕೇಂದ್ರಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.
ಕನ್ನಡ ಕ್ರೀಡಾಪಟುಗಳಿಗೆ ಇದು ಸಂತಸದ ಸುದ್ದಿ, ಇದರ ಲಾಭವನ್ನು ಪ್ರತಿಯೊಬ್ಬ ಕ್ರೀಡಾಪಟುವು ಪಡೆದುಕೊಳ್ಳಬೇಕು ಎಂದು ಸಚಿವ ಡಾ. ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಒಂದು ಜಿಲ್ಲೆ-ಒಂದು ಕ್ರೀಡೆ ಎಂಬ ಪರಿಕಲ್ಪನೆ ಅಡಿಯಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಖೇಲೊ ಇಂಡಿಯಾ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಖೇಲೊ ಇಂಡಿಯಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಕೇಂದ್ರದ ಕ್ರೀಡಾ ಸಚಿವರು ಬೆಂಗಳೂರಿಗೆ ಆಗಮಿಸಿದ್ದಾಗ, ಸಚಿವ ಡಾ. ನಾರಾಯಣಗ ಗೌಡ ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದರು. ನಮ್ಮ ರಾಜ್ಯದ 31 ಜಿಲ್ಲೆಗಳಲ್ಲೂ ಖೇಲೊ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸುವುದುಕ್ಕೆ ಅನುದಾನ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಅಂದು ಸಚಿವರಿಗೆ ನೀಡಿದ ಭರವಸೆಯಂತೆ ಈಗ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಿ, ಅನುದಾನವನ್ನು ಒದಗಿಸಿ ಅಧಿಸೂಚನೆ ಹೊರಡಿಸಿದೆ.
ಕ್ರೀಡಾಪಟುಗಳ ಆಯ್ಕೆ ಮತ್ತು ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮಾಜಿ ಛಾಂಪಿಯನ್ ಗಳು ಈ ಕೇಂದ್ರದಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾಪಟುಗಳನ್ನು ಗುರುತಿಸಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಖೇಲೊ ಇಂಡಿಯಾ ಇವರ ಮಾರ್ಗಸೂಚನೆಯಂತೆ ತರಬೇತುದಾರರು ಕಾರ್ಯನಿರ್ವಹಿಸಬೇಕು. ಅಲ್ಲದೆ ಪ್ರತಿ ಕೇಂದ್ರದಲ್ಲಿ ಪುರುಷ ಹಾಗೂ ಮಹಿಳಾ ತರಬೇತುದಾರರು ಕಡ್ಡಾಯವಾಗಿ ಇರಬೇಕು. ಆಯ್ಕೆಯಾಗಿ ತರಬೇತಿ ಪಡೆಯುವ ಪ್ರತಿ ಕ್ರೀಡಾಪಟುವು ಖೇಲೊ ಇಂಡಿಯಾನಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು. ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಕ್ರೀಡಾ ಸೌಕರ್ಯಗಳ ಉನ್ನತೀಕರಣಕ್ಕಾಗಿ 5 ಲಕ್ಷ ರೂ ಮತ್ತು ತರಬೇತುದಾರರು ತಾಂತ್ರಿಕ ಸಿಬ್ಬಂದಿಗಳ ಗೌರವಧನಕ್ಕಾಗಿ ಮತ್ತು ಕ್ರೀಡಾ ಉಪಕರಣಗಳ ಪೂರೈಕೆಗೆ ವಾರ್ಷಿಕ 5 ಲಕ್ಷ ರೂ.ಗಳನ್ನು ನೀಡಲಿದೆ. ಈ ಯೋಜನೆಯು ಮುಂದಿನ 4 ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ.