Lead photo courtesy: Wikipedia
ಪತ್ರಕರ್ತ, ಹೋರಾಟಗಾರ, ಒಳ್ಳೆಯ ವ್ಯಕ್ತಿಯಾಗಿದ್ದ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು. ಆದರೆ ಸ್ವಾತಂತ್ರ್ಯ ಬಂದ ನಂತರವೂ ಹೋರಾಟದಲ್ಲೇ ಬದುಕು ಸವೆಸಿದ ಧೀಮಂತ ವ್ಯಕ್ತಿ.
ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಕೋವಿಡ್ ಹೆಮ್ಮಾರಿಯನ್ನು ಗೆದ್ದು ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿ ಇಡೀ ನಾಡಿನಲ್ಲಿ ವಿದ್ಯುತ್ ಸಂಚಾರ ಉಂಟು ಮಾಡಿದ್ದ ಸ್ವಾತಂತ್ರ್ಯ ಹೋರಾಟಗಾರ, ನೂರ ನಾಲ್ಕು ವರ್ಷ ಬಾಳಿ ಬದುಕಿದ ಶತಾಯುಷಿ ಎಚ್.ಎಸ್.ದೊರೆಸ್ವಾಮಿ ಇನ್ನಿಲ್ಲ.
ಕೋವಿಡ್ ಚಿಕಿತ್ಸೆ ನಂತರ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದ ದೊರೆಸ್ವಾಮಿ ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ. ಕಳೆದ ತಿಂಗಳಷ್ಟೇ ತಮ್ಮ 104ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದ ಅವರು ಇದ್ದಕ್ಕಿದ್ದಂತೆ ಅಗಲಿರುವುದು ಇಡೀ ನಾಡಿಗೆ ದಿಗ್ಭ್ರಮೆ ಉಂಟು ಮಾಡಿದೆ.
ದೊರೆಸ್ವಾಮಿ ಅವರು ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿಯಿಂದ ಆರೋಗ್ಯ ಸ್ವಲ್ಪ ಏರುಪೇರಾಗಿತ್ತು. ಬುಧವಾರ ಬೆಳಗ್ಗೆ ಹೊತ್ತಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ಕರೆದುಕೊಂಡು ಬಂದ ಕೆಲ ಹೊತ್ತಿನಲ್ಲಿಯೇ ದೊರೆಸ್ವಾಮಿ ಅವರಿಗೆ ಹೃದಯಾಘಾತ ಆಗಿದೆ ಎಂದು ಗೊತ್ತಾಗಿದೆ.
ದೊರೆಸ್ವಾಮಿ ನಿಧನದ ಸುದ್ದಿಯನ್ನು ಅವರ ಒಡನಾಡಿಯಾಗಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ತಮ್ಮ ಫೇಸ್ಬುಕ್ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.
ಪತ್ರಕರ್ತ, ಹೋರಾಟಗಾರ, ಒಳ್ಳೆಯ ವ್ಯಕ್ತಿಯಾಗಿದ್ದ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು. ಆದರೆ ಸ್ವಾತಂತ್ರ್ಯ ಬಂದ ನಂತರವೂ ಹೋರಾಟದಲ್ಲೇ ಬದುಕು ಸವೆಸಿದ ಧೀಮಂತ ವ್ಯಕ್ತಿ.
ಹಾರೊಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಎಂದಬುದು ದೊರೆಸ್ವಾಮಿ ಅವರ ಪೂರ್ತಿ ಹೆಸರು. 1918 ಏಪ್ರಿಲ್ 10ರಂದು ಜನಿಸಿದ್ದರು. ಊರು, ಕನಕಪುರ ತಾಲೂಕಿನ ಹಾರೋಹಳ್ಳಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರಲ್ಲದೆ, ಬ್ರಿಟಿಷರ ಕಾಲದಲ್ಲಿಯೇ ‘ಪೌರವಾಣಿ’ ವರದಿಗಾರರಾಗಿ ಕೆಲಸ ಮಾಡಿ ಆಂಗ್ಲರ ವಿರುದ್ಧ ವರದಿಗಾರಿಕೆ ಮಾಡಿ ತಮ್ಮ ಎದೆಗಾರಿಕೆ ತೋರಿದ್ದರು. ಸ್ವಾತಂತ್ರ್ಯಪೂರ್ವ ಹಾಗೂ ನಂತರದ ಇಡೀ ದೇಶದ ಇತಿಹಾಸವನ್ನೂ ಆಮೂಲಾಗ್ರವಾಗಿ ಬಲ್ಲವರಾಗಿದ್ದ ಅವರು, ರಾಮಚಂದ್ರ ಗುಹಾ ಅವರಂಥ ಇತಿಹಾಸಕಾರರನ್ನೂ ಪ್ರಭಾವಿಸಿದ್ದರು. ಈ ಕಾರಣಕ್ಕಾಗಿಯೇ ದೊರೆಸ್ವಾಮಿ ಅವರನ್ನು ಕರ್ನಾಟಕದ ಸಾಕ್ಷಿಪ್ರಜ್ಞೆ ಎಂದು ಗುಹಾ ಬಣ್ಣಿಸುತ್ತಿದ್ದರು.
ಎಚ್.ಎಸ್.ದೊರೆಸ್ವಾಮಿ ಕೇವಲ 5 ವರ್ಷದವರಿದ್ದಾಗ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡರು. ಬಳಿಕ ಅವರು ತಮ್ಮ ಅಜ್ಜನ ಆಶ್ರಯದಲ್ಲಿ ಬೆಳದರು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಬೆಂಗಳೂರಿಗೆ ಬಂದರು. ಮಹಾತ್ಮ ಗಾಂಧಿ “ಮೈ ಅರ್ಲಿ ಲೈಫ್” ಪುಸ್ತಕವು ಭಾರತೀಯ ಭಾರತದ ಸ್ವಾತಂತ್ರ್ಯ ದಿನಾಚರಣೆ ಚಳವಳಿಯಲ್ಲಿ ಸೇರಲು ಅವರ ಮೇಲೆ ಗಾಢ ಪ್ರಭಾವ ಬೀರಿತು.
ಕಾಲೇಜು ಶಿಕ್ಷಣದ ಸಮಯದಲ್ಲಿಯೇ ಅವರು ಬೆಂಗಳೂರಿನ ಕಬ್ಬನ್‌ಪೇಟೆ ಬಳಿಯ ಬನಪ್ಪ ಬೃಂದಾವನ ಸ್ವಾತಂತ್ರ್ಯ ಜಾಗೃತಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು, ಅಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ದೊರೆಸ್ವಾಮಿ ಅವರೂ ಪೆಟ್ಟು ತಿಂದಿದ್ದರು.
ತಮ್ಮ ವಿದ್ಯಾಭ್ಯಾಸದ ನಂತರ 1942 ಜೂನ್ ತಿಂಗಳಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಆದರೆ ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದರು.
ತಮ್ಮ ಸಹೋದರ ಎಚ್.ಎಸ್.ಸೀತಾರಾಮ್ ಜತೆಯಲ್ಲಿ ಸರ್ದಾರ್ ವೆಂಕಟರಾಮಯ್ಯ ಮತ್ತು ಎ.ಜಿ.ರಾಮಚಂದ್ರ ರಾವ್ ಅವರು ಬ್ರಿಟೀಷರ ವಿರುದ್ಧ ಒಟ್ಟಿಗೆ ಹೋರಾಟ ನಡೆಸಬೇಕೆಂದು ಯೋಜಿಸಿದ್ದರು. ಈ ಸಂದರ್ಭದಲ್ಲಿ ಸರಕಾರಿ ದಾಖಲೆಗಳನ್ನು ನಾಶ ಮಾಡಲು ಬಳಸಲಾದ ಟೈಮ್ ಬಾಂಬ್ ತಯಾರಿಸಲು ಅವರು ತೊಡಗಿದ್ದರು. ಬಳಿಕ ಅವರನ್ನು ಜೈಲಿಗಟ್ಟಲಾಯಿತು. 14 ತಿಂಗಳು ಜೈಲಿನಲ್ಲಿದ್ದಾಗ ಅಹಿಂಸೆ ಮತ್ತು ಸತ್ಯಾಗ್ರಹದ ಗಾಂಧಿಯವರ ಆದರ್ಶಗಳನ್ನು ಅನುಸರಿಸಲು ನಿರ್ಧರಿಸಿದರು.
ಸ್ವಾತಂತ್ರ್ಯಾ ನಂತರವೂ ತಮ್ಮ ಹೋರಾಟಗಳನ್ನು ಮುಂದುವರಿಸಿದ್ದ ದೊರೆಸ್ವಾಮಿ ಅವರು ಸರಕಾರಿ ಭೂ ಒತ್ತುವರಿ ಸೇರಿದಂತೆ ಅನೇಕ ವಿಷಯಗಳ ಕುರಿತು ಹೋರಾಟ ನಡೆಸಿದ್ದರು.