ರೇಣುಕಾಚಾರ್ಯ ಸೇರಿ ನನ್ನ ಬಗ್ಗೆ ಮಾತನಾಡಿದವರಿಗೆ ಇನ್ನೊಮ್ಮೆ ಉತ್ತರ ಕೊಡುತ್ತೇನೆ ಎಂದ ಯೋಗಿ
ಬೆಂಗಳೂರು: ನನ್ನ ಇಲಾಖೆಯಲ್ಲಿ ಇನ್ನೊಬ್ಬರು ಹಸ್ತಕ್ಷೇಪ ಮಾಡುವ ಯಾವುದೇ ಯತ್ನವನ್ನು ನಾನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಪಿ.ಯೋಗೀಶ್ವರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಬುಧವಾರದಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ವಲಯದಿಂದ ತಮ್ಮತ್ತ ಬರುತ್ತಿರುವ ಟೀಕಾಸ್ತ್ರಗಳಿಗೆ ಬೆಂಗಳೂರಿನಲ್ಲಿ ಗುರುವಾರ ಉತ್ತರ ಕೊಟ್ಟ ಯೋಗಿ, ನೇರವಾಗಿ ತಮ್ಮ ಖಾತೆಯಲ್ಲಿ ನಡೆಯುತ್ತಿರುವ ಹಸ್ತಕ್ಷೇಪದ ಬಗ್ಗೆ ಕಿಡಿಕಾರಿದರು.
ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರಿನಲ್ಲಿ ಅವರ ಪುತ್ರ ವಿಜಯೇಂದ್ರ ನಡೆಸುತ್ತಿರುವ ಹಸ್ತಕ್ಷೇಪವನ್ನು ಕಟುವಾಗಿ ಟೀಕಿಸಿದ ಅವರು, ಎಲ್ಲಿಯೂ ವಿಜಯೇಂದ್ರ ಅವರ ಹೆಸರು ಹೇಳದೇ ಕೆಂಡಾಮಂಡಲರಾದರು. ಮುಖ್ಯಮಂತ್ರಿಗಳ ಹೆಸರಿನಲ್ಲಿ ಮತ್ತೊಬ್ಬರು ಅಧಿಕಾರವನ್ನು ಚಲಾಯಿಸುವುದನ್ನು ಸಹಿಸುವ ಪ್ರಶ್ನೆ ಇಲ್ಲ ಎಂದರು.
ಈ ಬಗ್ಗೆ ಅವರು ಹೇಳಿದ್ದಿಷ್ಟು;
ನಾನು ಈಗ ಮಂತ್ರಿಯಾಗಿದ್ದೇನೆ. ನನ್ನ ಇಲಾಖೆಯಲ್ಲಿ ನನ್ನ ಮಗನನ್ನು ಅಧಿಕಾರ ಚಲಾಯಿಸಲು ನಾನು ಬಿಡುವುದಿಲ್ಲ. ಅದೇ ರೀತಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಬೇರೆಯವರು ಅಧಿಕಾರ ಚಲಾಯಿಸಬಾರದು.
ನಾನು ವೈಯಕ್ತಿಕ ಕೆಸಲದ ನಿಮಿತ್ತ ದೆಹಲಿಗೆ ಹೋಗಿದ್ದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನಾನು ಕಳೆದ 15 ದಿನಗಳ ಹಿಂದೆ ಹಾಗೂ ಒಂದು ವಾರದ ಹಿಂದೆ ದೆಹಲಿಗೆ ಹೋಗಿದ್ದಿದ್ದು ನಿಜ. ಇದಕ್ಕೆ ಇಷ್ಟು ದೊಡ್ಡ ಮಟ್ಟದ ಚರ್ಚೆ ಏಕೆ ಆಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ವೈಯಕ್ತಿಕವಾಗಿ ನನಗೆ ಕೆಲ ವಿಷಯಗಳಲ್ಲಿ ನೋವು ಉಂಟಾಗಿದೆ. ಹೀಗಾಗಿ ಪಕ್ಷದ ವರಿಷ್ಠರಿಗೆ ಹೇಳಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಕೆಲವು ವಿಷಯಗಳನ್ನು ಚರ್ಚೆ ಮಾಡಿದ್ದೇನೆ.
ಪಕ್ಷ ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ ಸಚಿವ ಸ್ಥಾನ ನೀಡಿದೆ. 2023ರ ಚುನಾವಣೆಗೆ ನಾನು ಮತ್ತೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಗೆದ್ದು ಬರಬೇಕು. ಇದಕ್ಕೆ ತಕ್ಕ ವಾತಾವರಣವನ್ನು ಪಕ್ಷ ಹಾಗೂ ಸರಕಾರದಲ್ಲಿ ಮೂಡಿಸಬೇಕು. ಪಕ್ಷದ ಚೌಕಟ್ಟಿನಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ಸಹ ತಂದಿದ್ದೇನೆ.
ನಾನು ವಿಧಾನ ಪರಿಷತ್ ಸದಸ್ಯನಾದ ದಿನವೇ ಹೇಳಿದ್ದೆ. ರಾಜ್ಯದಲ್ಲಿ ಶುದ್ಧ ಬಿಜೆಪಿ ಸರಕಾರವಿಲ್ಲ ಎಂದು. 3 ಪಕ್ಷಗಳ ಹೊಂದಾಣಿಕೆ ಸರಕಾರವಿದೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಪುನರುಚ್ಚರುಸುತ್ತಿದ್ದೇನೆ. ರಾಜ್ಯದಲ್ಲಿ ಕೇವಲ ಬಿಜೆಪಿ ಸರಕಾರವಿಲ್ಲ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ರಾಜಕೀಯ ಪಕ್ಷಗಳ ಹೊಂದಾಣಿಕೆ ಸರಕಾರವಿದೆ. ವಿರೋಧ ಪಕ್ಷಗಳ ಜತೆ ಬಿಜೆಪಿ ಸರಕಾರ ಹೊಂದಾಣಿಕೆ ಮಾಡಿಕೊಂಡಿದೆ.
ನನಗೆ ಉತ್ತಮ ಖಾತೆ ನೀಡಿಲ್ಲವೆಂದಾಗಲಿ ಅಥವಾ ರಾಮನಗರ ಜಿಲ್ಲೆ ಉಸ್ತುವಾರಿ ನೀಡಿಲ್ಲವೆಂದು ಬೇಸರವಿಲ್ಲ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ನನಗೆ ನನ್ನದೇ ಆದ ಕೆಲವು ಚಿಂತನೆಗಳಿವೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಬೇಕು. ಈ ನಿಟ್ಟಿನಲ್ಲಿ ಕೆಲ ವಿಷಯಗಳನ್ನು ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ. ನಮ್ಮ ಎದುರಾಳಿ ಪಕ್ಷಗಳ ಜೊತೆ ನಮ್ಮ ಪಕ್ಷದವರು ಹಾಗೂ ಸರಕಾರ ಹೊಂದಾಣಿಕೆ ಮಾಡಿಕೊಂಡಿದ್ದು, ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ. ಮುಂಬರುವ ಚುನಾವಣೆಯಲ್ಲಿ ನಾನು ಗೆಲ್ಲಬೇಕು. ಹೀಗಾಗಿ, ನನ್ನ ದುಃಖವನ್ನು ತೋಡಿಕೊಂಡಿದ್ದೇನೆ.
ಜೂನ್ ಮೊದಲ ವಾರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಶಾಸಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ.
ರಾಜ್ಯದಲ್ಲಿ ಕೋವಿಡ್ʼನಿಂದ ಜನರು ಪರಿತಪಿಸುತ್ತಿದ್ದಾರೆ. ಕೊರೋನಾ ನಿವಾರಣೆ ರಾಜ್ಯ ಸರಕಾರದ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಬೇಕು. ಆದರೆ, ನಾಯಕತ್ವ ಬದಲಾವಣೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಷ್ಟೂ ಶಕ್ತಿಯೂ ನನಗಿಲ್ಲ.
ಒಂದು ವೇಳೆ ಹೈಕಮಂಡ್ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಬದಲಾಯಿಸಿದರೆ ಅದಕ್ಕೆ ನಿಮ್ಮ ಬೆಂಬಲ ಇರುತ್ತದೆಯೇ ಎಂಬ ಪ್ರಶ್ನೆಗೆ, ಆ ಸಂದರ್ಭ ಬಂದಾಗ ನೋಡೋಣ ಎನ್ನುವುದಷ್ಟೇ ನನ್ನ ಉತ್ತರ.
ಬಿಜೆಪಿ ಶಾಸಕ ರೇಣುಕಾಚಾರ್ಯ ಸೇರಿ ಕೆಲ ಶಾಸಕರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರೆಲ್ಲರಿಗೂ ಉತ್ತರ ಕೊಡುತ್ತೇನೆ. ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಕೆಲವು ವಿಷಯಗಳನ್ನು ಪಕ್ಷದ ಚೌಕಟ್ಟಿನೊಳಗೆ ನಾಲ್ಕು ಗೋಡೆಗಳ ಮದ್ಯೆ ಹಂಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರ ಮುಂದೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದೇನೆ.