photos courtesy: Wikipedia
ಈ ಹಣ್ಣು ಖರ್ಜೂರಕ್ಕಿಂತಲೂ ಚಿಕ್ಕ ಗಾತ್ರ ಇದೆ. ಹಣ್ಣಾದರೆ ಕಪ್ಪು ಬಣ್ಣದಾಗಿರುತ್ತದೆ. ಖರ್ಜೂರ ಹಣ್ಣಿನಲ್ಲಿ ಇರುವ ಪೌಷ್ಟಿಕಾಂಶಗಳು ಈಚಲಿನ ಹಣ್ಣಿನಲ್ಲಿ ಇವೆ. ಖರ್ಜೂರಕ್ಕಿಂತಲೂ ಈಚಲು ಹಣ್ಣು ತಿನ್ನಲು ಹೆಚ್ಚಾಗಿ ಸಿಹಿ ಆಗಿರುತ್ತದೆ.
by Ra Na Gopala Reddy
ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿಯ ದೇವಿಕುಂಟೆ, ಕೊಲಿಂಪಲ್ಲಿ ಬೆಟ್ಟಗಳಲ್ಲಿ ಹೆಚ್ಚಾಗಿ ಈಚಲು ಹಣ್ಣುಗಳು ಸಿಗುತ್ತಿದ್ದು, ತಿನ್ನಲು ಬಲು ರುಚಿಕರವಾಗಿರುತ್ತವೆ. ಆದರೆ, ಈಚೆಗೆ ಈಚಲು ಗಿಡಗಳು ಕಣ್ಮರೆಯಾಗುತ್ತಿವೆ.
30 ವರ್ಷಗಳ ಹಿಂದೆ ತಾಲ್ಲೂಕಿನ ಗೂಳೂರು ಹೋಬಳಿಯಲ್ಲಿ ಬಹುತೇಕವಾಗಿ ಬೆಟ್ಟ-ಗುಡ್ಡಗಳದೇ ಕಾರುಬಾರು. ಈ ಬೆಟ್ಟ-ಗುಡ್ಡಗಳಲ್ಲಿ ಗ್ರಾಮೀಣ ಪ್ರದೇಶಗಳ ಬೀಡು. ಇದೇ ಬೆಟ್ಟಗುಡ್ಡಗಳಲ್ಲಿ ಸಹಸ್ರಾರು ಜಾತಿಯ ಗಿಡ-ಮರಗಳು, ಔಷಧೀಯ ಸಸ್ಯಗಳು, ಸುಂದರವಾದ ಹೂವು ಹಾಗೂ ಹಣ್ಣುಗಳ ಗಿಡಮರಗಳು ವನ್ಯ ಸಂಪತ್ತು, ಹಸಿರನ್ನು ಹೊದ್ದು ಮಲಗುವ ರೀತಿಯಲ್ಲಿ ಬೆಟ್ಟ-ಗುಡ್ಡಗಳು ಕಾಣುತ್ತಿತ್ತು.
ಇತ್ತೀಚೆಗೆ ದುರಾಸೆಯಿಂದಾಗಿ ಬಹಳಷ್ಟು ಪ್ರಾಕೃತಿಕ ಸಂಪತ್ತು ಅಳವಿನಂಚಿಗೆ ತಲುಪಿವೆ. ಕೆಲ ಗಿಡ ಮರಗಳ ಪ್ರಬೇಧಗಳು ನಶಿಸಿ ಹೋಗಿವೆ. ಬೆಟ್ಟಗುಡ್ಡಗಳು ಹೆಚ್ಚಾಗಿ ಇರುವುದರಿಂದ ನಗರ ಪ್ರದೇಶಗಳ ಕೆಲ ಪ್ರಭಾವಿಗಳು ಗಣಿಗಾರಿಕೆಯನ್ನು ಮಾಡುತ್ತಾ ಕಲ್ಲುಬಂಡೆಗಳ ಕೊಳ್ಳೆ ಹೊಡೆಯುತ್ತಿದ್ದಾರೆ.
ಕೆಲವರು ರಾಜಕೀಯ ಪ್ರಭಾವ ಬಳಿಸಿ, ಅನುಮತಿ ಪಡೆದ ಜಾಗ ಹೊರತುಪಡಿಸಿ, ಅಕ್ರಮವಾಗಿ ಪಕ್ಕದ ಬೆಟ್ಟ-ಗುಡ್ಡಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಸ್ವಚ್ಛಂದವಾಗಿ ಕಾಣುತ್ತಿದ್ದ ಬೆಟ್ಟ-ಗುಡ್ಡಗಳು ಬೋಳಾಗಿವೆ. ಗಿಡ-ಮರಗಳು ಕಾಣಸಿಗದಾಗಿದೆ. ಬೋಳು ಬೆಟ್ಟಗಳಲ್ಲಿನ ಕಲ್ಲುಬಂಡೆಗಳನ್ನು ಕೇಕಿನಂತೆ ಕತ್ತರಿಸಿ, ಬೆಟ್ಟಗಳೇ ಇಲ್ಲದಂತೆ ಮಾಡುತ್ತಿದ್ದಾರೆ. ಹಸು, ಕುರಿ, ಮೇಕೆಗಳಿಗೆ ಮೇವು ಸಿಗದಂತೆ ಮಾಡುತ್ತಿರುವುದು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.
‘ತಾಲ್ಲೂಕಿನ ದೇವಿಕುಂಟೆ, ಮಾಡಪ್ಪಲ್ಲಿ, ಕೊಲಿಂಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಪಕ್ಕದಲ್ಲಿನ ಬೆಟ್ಟ-ಗುಡ್ಡಗಳಲ್ಲಿ ಇದೀಗ ಈಚಲು ಮರಗಳು ಅಪರೂಪಕ್ಕೆ ಬೆಳೆದಿವೆ. ಈ ಹಣ್ಣು ಖರ್ಜೂರಕ್ಕಿಂತಲೂ ಚಿಕ್ಕ ಗಾತ್ರ ಇದೆ. ಹಣ್ಣಾದರೆ ಕಪ್ಪು ಬಣ್ಣದಾಗಿರುತ್ತದೆ. ಖರ್ಜೂರ ಹಣ್ಣಿನಲ್ಲಿ ಇರುವ ಪೌಷ್ಟಿಕಾಂಶಗಳು ಈಚಲಿನ ಹಣ್ಣಿನಲ್ಲಿ ಇವೆ. ಖರ್ಜೂರಕ್ಕಿಂತಲೂ ಈಚಲು ಹಣ್ಣು ತಿನ್ನಲು ಹೆಚ್ಚಾಗಿ ಸಿಹಿ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈಚಲು ಹಣ್ಣು ಸಿಗುತ್ತಿರುವುದು ಸಂತೋಷ ತಂದಿದೆ’ ಎಂದು ಕೊಲಿಂಪಲ್ಲಿ ಗ್ರಾಮದ ಹಿರಿಯರಾದ ಚಿನ್ನಪ್ಪಯ್ಯ ಹೇಳುತ್ತಾರೆ.
ಹಳ್ಳಿಗರ ಖರ್ಜೂರಾ
ಖರ್ಜೂರ ಹಾಗೂ ಈಚಲು ಮರಗಳು ಒಂದೇ ರೀತಿಯಲ್ಲಿ ಕಂಡರೂ ಕೆಲವು ವೈಶಿಷ್ಟಗಳು ಇವೆ. ಈಚಲು ಜಾತಿಯ ಮರಗಳನ್ನು ಗಂಡು, ಹೆಣ್ಣು ಈಚಲು ಮರಗಳು ಇವೆ. ಈಚಲು ಮರಗಳಿಂದ ನೀರಾ ಇಳಿಸುತ್ತಾರೆ. ಇದು ಹುಳಿತು ಹೆಂಡವಾಗುತ್ತದೆ. ಈಚಲು ಮರಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಾಯಿಗಳು ಗೊಂಚಲುಗಳಾಗಿ ಬಿಟ್ಟು ಹಣ್ಣಾಗುತ್ತವೆ. ಗ್ರಾಮೀಣ ಭಾಗಗಳಲ್ಲಿ ಸಿಗುವ ಈಚಲು ಹಣ್ಣು ನೈಸರ್ಗಿಕವಾಗಿ ಸಿಗುತ್ತದೆ. ಹಣ್ಣುಗಳಲ್ಲಿ ನಾನಾ ಔಷಧೀಯ ಗುಣಗಳು ಇವೆ. ಇದನ್ನು ಬಡವರ ಖರ್ಜೂರಾ, ಹಳ್ಳಿಗರ ಖರ್ಜೂರಾ ಎಂದು ಕರೆಯುತ್ತಾರೆ ಎನ್ನುತ್ತಾರೆ ಹಿರಿಯರು.
‘ಕಿಲಕಿಲನೇ ನಗುತ್ತಿರಬೇಕಾದ ಗ್ರಾಮಗಳು ಗಳಗಳನೆ ಅಳುತ್ತಿವೆ. ಕೊರೊನಾದಂಥ ಬರೀ ಕಣ್ಣಿಗೆ ಕಾಣದ ವೈರಸ್‍ಗಳು ಹರಡಿ ಎಚ್ಚರಿಕೆಯನ್ನು ನೀಡುತ್ತಿವೆ. ಪ್ರಕೃತಿಯ ಮೇಲಿನ ಹಲ್ಲೆ, ನಾಶಗಳನ್ನು ಎಂದಿಗೂ ಸಹಿಸುವುದಿಲ್ಲ. ಚಿಕ್ಕಂದಿನಲ್ಲಿ ಈಚಲು ಹಣ್ಣು ಹೆಚ್ಚಾಗಿ ತಿನ್ನುತ್ತಿದ್ದೆವು. ಬೆಟ್ಟ-ಗುಡ್ಡಗಳಲ್ಲಿ ಗಿಡ-ಮರಗಳು, ಔಷಧೀಯ ಗಿಡಮೂಲಿಕೆಗಳು ನಾಶ ಆಗಿರುವುದರಿಂದ ಹಣ್ಣುಗಳು ಸಿಗುತ್ತಿಲ್ಲ. ಅರಣ್ಯ ಇಲಾಖೆಯವರು ಅರಣ್ಯ, ಬೆಟ್ಟ-ಗುಡ್ಡ, ಪರಿಸರದಲ್ಲಿ ನೈಸರ್ಗಿಕ ಸಂಪನ್ಮೂಲದ ಗಿಡ-ಮರಗಳನ್ನು ಉಳಿಸಿ-ಬೆಳೆಸಬೇಕು’ ಎನ್ನುತ್ತಾರೆ ಯುವ ರೈತ ಮಾಡಪ್ಪಲ್ಲಿ ನರಸಿಂಹಮೂರ್ತಿ.
ಈಚಲು ಮರಗಳನ್ನು ಉಳಿಸಿಕೊಳ್ಳಬೇಕಾಗಿದೆ. ಮೊದಲಾಗಿದ್ದರೆ ಪ್ರತಿ ಹಳ್ಳಿಯಲ್ಲಿ ಇವು ಕಾಣುತ್ತಿದ್ದವು. ಕಾಲ ಕಳೆದಂತೆ ಮರೆಯಾಗಿವೆ. ಮತ್ತೆ ತೋಟಗಾರಿಕೆ ಇಲಾಖೆ ಈಚಲು ಬೇಸಾಯಕ್ಕೆ ಪ್ರಾಮುಖ್ಯತೆ ನೀಡಿ ರೈತರಲ್ಲಿ ಅರಿವು ಮೂಡಿಸಬೇಕಾಗಿದೆ. ಬಹಳಷ್ಟು ರುಚಿಯಾದ ಈ ಹಣ್ಣಿನ ಸ್ವಾದ ಮುಂದಿನ ತಲೆಮಾರಿಗೂ ಉಳಿಯಬೇಕಾಗಿದೆ ಎನ್ನುತ್ತಾರೆ ನರಸಿಂಹಮೂರ್ತಿ.