ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯ ಒಂದರ ವಸತಿಗೃಹದಿಂದ ಹೊರದೂಡಲ್ಪಟ್ಟವ, ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊತ್ತ ಮೊದಲ ಸ್ವದೇಶಾಭಿಮಾನಿ. ದಾಸ್ಯರಕ್ಕಸನ ಎದೆಯನ್ನು ಮೆಟ್ಟಲು ಮಾಡಿಕೊಂಡಿದ್ದಕ್ಕೆ ತಾನು ಗಳಿಸಿದ್ದ ಬಿ.ಎ. ಪದವಿಯನ್ನೇ ಕಳೆದುಕೊಂಡ ಮೊತ್ತ ಮೊದಲ ಭಾರತೀಯ ಪದವೀಧರ, ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಬ್ರಿಟಿಷರಿಂದ ‘ಬ್ಯಾರಿಸ್ಟರ್ ಪದವಿ’ಯನ್ನೇ ನಿರಾಕರಿಸಲ್ಪಟ್ಟ ಮೊತ್ತ ಮೊದಲ ಬ್ಯಾರಿಸ್ಟರ್, ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಮೊತ್ತ ಮೊದಲ ಲೇಖಕ, ‘ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ’ ಎಂದು ಘೋಷಿಸಿದ ಮೊತ್ತ ಮೊದಲ ರಾಜಕೀಯ ಮುಂದಾಳು, ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತಾರರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊದಲ ರಾಜಕೀಯ ಕೈದಿ, ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊತ್ತ ಮೊದಲ ಸ್ವಾತಂತ್ರ್ಯ ಸೇನಾನಿ.
ಅಂದ ಹಾಗೆ, ಅವರು ಯಾರು ಅಂತೀರಾ? ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಶ್ರೀ ವೀರವಿನಾಯಕ ದಾಮೋದರ ಸಾವರ್ಕರ್.
ವಿನಾಯಕರು ಮೇ 28, 1883ರಲ್ಲಿ ಜನಿಸಿದರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತಿಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಗಿತ್ತು. ದಾಮೋದರಪಂತ ಮತ್ತು ರಾಧಾಬಾಯಿಯ ನಾಲ್ಕು ಮಕ್ಕಳಲ್ಲಿ ಒಬ್ಬರಾದ ವಿನಾಯಕರು ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ್ ಪಟ್ಟಣದ ಹತ್ತಿರದ ಭಾಗೂರು ಎಂಬಲ್ಲಿ. ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾಯಿತು. ಒಂಭತ್ತನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತನಾದರು. 1899ರಲ್ಲಿ ದೇಶವನ್ನು ಕಾಡುತ್ತಿದ್ದ ಪ್ಲೇಗ್ ಪಿಡುಗಿಗೆ ಅವರ ತಂದೆ ತುತ್ತಾದರು.
ಸಾವರ್ಕರ್ ವಿದ್ಯಾರ್ಥಿಯಾಗಿದ್ದಾಗ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದರು. ನಂತರ ಅವರು ತಿಲಕರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್ನಿನಲ್ಲಿದ್ದಾಗ “ಸ್ವತಂತ್ರ ಭಾರತ ಸಮಾಜ” (Free India Society)ವನ್ನು ಸ್ಥಾಪಿಸಿದರು. ಈ ಸಂಸ್ಥೆ ಭಾರತೀಯ ಪಂಚಾಂಗದ ಹಬ್ಬಗಳೇ ಮೊದಲಾದ ಮುಖ್ಯ ತಿಥಿಗಳನ್ನು, ಸ್ವಾತಂತ್ರ್ಯ ಸಂಗ್ರಾಮದ ಮೈಲಿಗಲ್ಲುಗಳನ್ನೂ ಆಚರಿಸುತ್ತಿತ್ತು. ಭಾರತದ ಸ್ವಾತಂತ್ರ್ಯದ ಬಗ್ಗೆ ಮಾತುಕತೆಗಳಿಗಾಗಿ ಮುಡಿಪಾಗಿದ್ದ ಈ ಸಂಸ್ಥೆಯ ಮೇಲೆ ಬ್ರಿಟಿಷ್ ಸತ್ತೆಯ ಕೆಂಗಣ್ಣು ಬೀಳಲು ತಡವಾಗಲಿಲ್ಲ.
ಹನ್ನೆರಡು- ಹದಿಮೂರನೆಯ ವಯಸ್ಸಿನಲ್ಲೇ ದೇಶ-ದಾಸ್ಯ-ಬಲಿದಾನದ ಹೆಸರನ್ನೇ ಕೇಳಿರದಿದ್ದ ಜನರನ್ನು ಒಟ್ಟುಗೂಡಿಸಿ ‘ಮಿತ್ರ ಮೇಳ’ ಕಟ್ಟಿದ ಸಾವರ್ಕರ್ ಮುಂದೆ ಅದನ್ನೇ ‘ಅಭಿನವ ಭಾರತ’ ಎಂಬ ಕ್ರಾಂತಿಕಾರಿಗಳ ಪಾಠಶಾಲೆಯನ್ನಾಗಿಸಿದರು.
1901ರಲ್ಲಿ ಯಮುನಾಬಾಯಿಯೊಂದಿಗೆ ಮದುವೆಯಾಯಿತು. 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು. ಮುಂದೆ ಬ್ರಿಟಿಷರ ನೆಲದಲ್ಲಿಯೇ ಅವರನ್ನು ಬಗ್ಗು ಬಡಿಯಬೇಕೆಂಬ ಸಂಕಲ್ಪ ಮತ್ತು 1906ರಲ್ಲಿ ಶಿಷ್ಯವೃತ್ತಿ ದೊರೆತದ್ದರಿಂದ, ಕಾನೂನುಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್ಗೆ ತೆರಳಿದರು.
ಅಲ್ಲಿ ಇಂಗ್ಲೀಷರಿಗೆ ಮಾನಸಿಕವಾಗಿ ತಮ್ಮನ್ನು ಮಾರಿಕೊಳ್ಳುತ್ತಿದ್ದ ಭಾರತೀಯರನ್ನು ಬಡಿದೆಬ್ಬಿಸಿ ಕ್ರಾಂತಿಕಾರ್ಯಕ್ಕೆ ಮುನ್ನುಡಿ ಬರೆದರು. ಅವರ ಕಾರ್ಯದಿಂದ ಪ್ರೇರೇಪಣೆಗೊಂಡ ‘ಮದನಲಾಲ್ ಧೀಂಗ್ರ’ ದಾಸ್ಯ ರಕ್ಕಸನ ಎದೆ ಮೆಟ್ಟಿ ವಿದೇಶಿ ನೆಲದ ಮೊದಲ ಬಲಿದಾನಿಯಾಗಿ ಇತಿಹಾಸ ಸೃಷ್ಟಿಸಿದ.
ಕಾಲಾಪಾನಿ ಮುಂದೆ ಸಾವರ್ಕರ್ ಪ್ರತಿಮೆ
ಸಾವರ್ಕರ್ ಸದನ್, ದಾದರ್, ಮುಂಬಯಿ
1857ರ ಸಂಗ್ರಾಮವನ್ನು ‘ಸಿಪಾಯಿದಂಗೆ’ ಎಂದೇ ಕರೆದಿದ್ದ ಬ್ರಿಟಿಷರಿಗೆ ಸವಾಲಾಗಿ ನಿಂತು ಅದು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ನಿರೂಪಿಸುವ ಪುಸ್ತಕ ಬರೆದ ಸಾವರ್ಕರ್ ಆ ಮೂಲಕ ಭಗತ್ ಸಿಂಗ್, ಆಜಾದ್, ನೇತಾಜಿಯಂತಹ ಈ ದೇಶದ ಮಹಾನ್ ನಾಯಕರುಗಳಿಗೆ ಪ್ರೇರಣೆ ನೀಡಿದರು.
ದೇಶಭಕ್ತಿಯ ಅಪರಾಧಕ್ಕಾಗಿ ಬಂಧನಕ್ಕೊಳಗಾಗಿ ಮಾರ್ಗ ಮಧ್ಯೆ ಹಡಗಿನಿಂದ ಜಿಗಿದು ತಪ್ಪಿಸಿಕೊಂಡು ಸಮುದ್ರವನ್ನೇ ಈಜಿದ ಸಾಹಸಿ ಸಾವರ್ಕರ್. ದುರದೃಷ್ಟವಶಾತ್ ಸೆರೆಸಿಕ್ಕು 50 ವರ್ಷಗಳ ಕರಿನೀರಿನ ಶಿಕ್ಷೆಗೆ ಒಳಗಾದರು. ಅಂಡಮಾನಿನ ಆ ಕ್ರೂರ ಜೈಲಿನಲ್ಲಿ ಕೈಕಾಲುಗಳಿಗೆ ಕಬ್ಬಿಣದ ಸರಪಳಿ ಕಟ್ಟಿಸಿಕೊಂಡು, ಕೊಬ್ಬರಿಯ ಗಾಣವನ್ನು ಎತ್ತಿನಂತೆ ದಿನಕ್ಕೆ ಹತ್ತು ತಾಸು ಎಳೆಯುತ್ತಾ ಸರಿಯಾದ ಆಹಾರವಿಲ್ಲದೆ ಕ್ಷಯರೋಗ ಬಡಿದವರಂತೆ ಬಿಡುಗಡೆಯ ದಾರಿಯಿಲ್ಲದೆ, ಮಾತನಾಡಲು ಮನುಷ್ಯ ಸಹವಾಸವಿಲ್ಲದೆ, ನೊಣ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಘೋರ ಶಿಕ್ಷೆ ಅನುಭವಿಸಿದರು. ಬಿಡುಗಡೆಯ ನಂತರವೂ ಧರ್ಮ-ಸಂಸ್ಕೃತಿಯ ರಕ್ಷಣೆಗೆ ಶ್ರಮಿಸುತ್ತಾ, ಮೂಢನಂಬಿಕೆ, ಅಸ್ಪೃಶ್ಯತೆಗಳ ವಿರುದ್ಧ ಸಮರ ಸಾರಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ರಿಗೆ ಪ್ರೇರಣೆ ನೀಡಿ ವಿದೇಶಕ್ಕೆ ತೆರಳಿ ಸಂಗ್ರಾಮದ ಮೂಲಕ ದಾಸ್ಯ ವಿಮೋಚನೆಯ ಮಾರ್ಗದರ್ಶನ ನೀಡಿದವರು ಸಾವರ್ಕರ್.
1920ರಲ್ಲಿ ವಿಠ್ಠಲಭಾಯಿ ಪಠೇಲ್, ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ ಮುಂತಾದ ಹಿರಿಯ ಧುರೀಣರು ಕೇಂದ್ರೀಯ ಸಂಸತ್ತಿನಲ್ಲಿ ಸಾವರ್ಕರ್ ಹಾಗೂ ಅವರ ಬಿಡುಗಡೆಗಾಗಿ ಒತ್ತಾಯಿಸಿದರು. ಮೇ 12, 1921ರಂದು ಸಾವರ್ಕರರನ್ನು ರತ್ನಗಿರಿ ಜೈಲಿಗೆ, ಮತ್ತೆ ಅಲ್ಲಿಂದ ಯೆರವಾಡ ಜೈಲಿಗೆ ಸಾಗಿಸಲಾಯಿತು. ಅವರು “ಹಿಂದುತ್ವ” ಕೃತಿ ಬರೆದದ್ದು ರತ್ನಗಿರಿಯ ಜೈಲಿನಲ್ಲಿದ್ದಾಗ. ಅವರ ಚಟುವಟಿಕೆಗಳಿಗೆ ಹಾಗೂ ತಿರುಗಾಟಕ್ಕೆ ತೀವ್ರ ನಿರ್ಬಂಧಗಳನ್ನು ಹಾಕಿ, 1924 ಜನವರಿ 6ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಹಿಂದೂ ಮಹಾಸಭೆಯ ಮೂಲಕ, ಸಾವರ್ಕರ್ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗಾಗಿ ಬಹಳ ಕಷ್ಟಪಟ್ಟರು ಎಂದು ಹೇಳಲಾಗಿದೆ. ಹಿಂದೂ ಹಬ್ಬಗಳ ಆಚರಣೆಯ ಸಂಧರ್ಭಗಳಲ್ಲಿ, ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಸಾವರ್ಕರ್ ಮುಸ್ಲಿಮರ ಹಾಗೂ ಕ್ರೈಸ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದರು ಎಂದೂ, ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಬಿ.ಆರ್.ಅಂಬೇಡ್ಕರರಿಗೆ ಸಹಾಯ ಮಾಡಿದರು ಎಂದೂ ಹೇಳಲಾಗಿದೆ.
ಅವರ ಮರಾಠಿ ಕೃತಿಗಳಲ್ಲಿ “ಕಮಲಾ”, “ನನ್ನ ಜೀವಾವಧಿ ಶಿಕ್ಷೆ”, ಅಂಡಮಾನಿನ ಜೈಲಿನಲ್ಲಿ ಭಾರತೀಯ ಕೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಲಾಪಾನಿ” (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) ಎಂಬುದು ಅವರ ಇನ್ನೊಂದು ಗಮನಾರ್ಹ ಕೃತಿ. ಭಾರತದ ಇತಿಹಾಸ ಒಂದಾದ ಮೇಲೊಂದು ಸೋಲುಗಳ ಸರಮಾಲೆ ಎಂದು ಆಗ ಪ್ರಚಲಿತವಾಗಿದ್ದ ಅಭಿಪ್ರಾಯವನ್ನು ಬದಲಾಯಿಸಲು, ಅವರು ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ “ ಬಂಗಾರದ ಆರು ಪುಟಗಳು” ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬರೆದರು. ಸೆರೆಮನೆಯಲ್ಲಿದ್ದಾಗ ಅವರು ಅನೇಕ ಪುಸ್ತಕಗಳನ್ನು ಬರೆದರು. ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕಗಳಲ್ಲಿ ಒಂದು “ಹಿಂದುತ್ವ”.
ಭಾರತ ರಾಷ್ಟ್ರ ಹಾಗೂ ಹಿಂದೂ ಧರ್ಮ ಎಂಬ ಪರಿಕಲ್ಪನೆಗಳನ್ನು ಹಿಂದೂ ರಾಷ್ಟ್ರೀಯತಾವಾದದ ದೃಷ್ಟಿಕೋನದಿಂದ ನೋಡಿದ ಈ ಪುಸ್ತಕ ಅತ್ಯಂತ ಪ್ರಭಾವಿಯಾಗಿತ್ತು. ಸಾವರ್ಕರ್ ಸ್ವತಃ ನಿರೀಶ್ವರವಾದಿಯಾಗಿದ್ದು, ಭಾರತದ ಭೂಖಂಡದಲ್ಲಿ ಬೇರು ಬಿಟ್ಟು, ಇಲ್ಲಿನ ಜೀವನದ ಪ್ರತಿಯೊಂದು ಅಂಗದಲ್ಲೂ ಹಾಸುಹೊಕ್ಕಾಗಿರುವ, ವಿಶೇಷ ಜೀವನಧರ್ಮ ಎಂದು ಹಿಂದುತ್ವದ ಪರಿಕಲ್ಪನೆಯನ್ನು ಅರ್ಥೈಸಿದ್ದಾರೆಂಬುದನ್ನು ಗಮನಿಸಬೇಕು.
ಹಿಂದುತ್ವದ ಪರಿಕಲ್ಪನೆಯನ್ನು ಸಾವರ್ಕರ್ ಮೊತ್ತ ಮೊದಲು ಜಾಹೀರು ಮಾಡಿ, ಅದರ ವಿಷಯವಾಗಿ ಬಹಳಷ್ಟು ಬರೆದರು. ಸಾವರ್ಕರ್ “ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು” ಎಂದು ವ್ಯಾಖ್ಯಿಸುತ್ತಾರೆ.
ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ನಿಷಿದ್ಧವಾದ ಆ ಕಾಲದಲ್ಲಿ, ಅದರ ವಿರುದ್ಧವಾಗಿ ಮುಂದೆ ನಿಂತು ಪ್ರವೇಶಕ್ಕೆ ದಾರಿ ಮಾಡಿಕೊಟ್ಟ, ಪತಿತ ಪಾವನ ಮಂದಿರವನ್ನು ಇಂದಿಗೂ ರತ್ನಗಿರಿಯಲ್ಲಿ ನೋಡಬಹುದು.
ಅವರ ಇತರ ಕೃತಿಗಳೆಂದರೆ “ಹಿಂದೂ ಪದಪಾದಶಾಹಿ” ಮತ್ತು “ನನ್ನ ಅಜೀವ ಸಾಗಾಟ” (My Transportation for Life). ಆಗಲೇ ಭಾರತದಲ್ಲಿ ಧಾರ್ಮಿಕ ಆಧಾರದ ಮೇಲೆ ಬಿರುಕುಗಳು ಗೋಚರವಾಗತೊಡಗಿತ್ತು. “ಮಾಪಿಳ್ಳೆಗಳ ಬಂದ್” (Muslims’ Strike) ಎಂಬ ಪುಸ್ತಕದಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಅವರು ಕಂಡ ಬ್ರಿಟಿಷರ ಹಾಗೂ ಮುಸ್ಲಿಮರ ದೌರ್ಜನ್ಯವನ್ನು ಮತ್ತು “ಗಾಂಧೀ ಗೊಂದಲ” (Gandhi’s Nonsense), ಎಂಬ ಪುಸ್ತಕದಲ್ಲಿ ಗಾಂಧಿಯವರ ರಾಜಕೀಯ ಧೋರಣೆಗಳ ಬಗ್ಗೆ ಟೀಕೆಯನ್ನೂ ಅವರು ಮಾಡಿದರು.
ಈಗಾಗಲೇ ಸಾವರ್ಕರರು ಭಾರತದ ಭವಿಷ್ಯದ ಬಗ್ಯೆ ಗಾಂಧಿಯವರ ಯೋಜನೆಗಳ ಬದ್ಧ ಟೀಕಾಕಾರರಾಗಿ ಹೋಗಿದ್ದರು. ಅವರ ಬೆಂಬಲಿಗರಷ್ಟೇ ಅಲ್ಲ, ಅವರ ಕೆಲವರು ಟೀಕಾಕಾರರು ಕೂಡ, ಮರಾಠಿ ಸಾಹಿತ್ಯದ ಅತ್ಯಂತ ಹೃದಯಸ್ಪರ್ಶೀ ಹಾಗೂ ಸ್ಪೂರ್ತಿದಾಯಕ ಕೃತಿಗಳಲ್ಲಿ ಪರಿಗಣಿಸುವ “ಸಾಗರಾ.. ಪ್ರಾಣ ತಳಮಳಲಾ..” ಮತ್ತು “ ಜಯೋಸ್ತುತೆ” (ಸ್ವಾತಂತ್ರ್ಯದ ಸ್ತುತಿ) ಎಂಬ ಮರಾಠೀ ಗೀತೆಗಳನ್ನು ಅವರು ಬರೆದರು. ಇವು ಜನಪ್ರಿಯವಾಗಿದ್ದು, ಇಂದಿಗೂ ಮಹಾರಾಷ್ಟ್ರದಲ್ಲಿ ಕೇಳಸಿಗುತ್ತವೆ.
ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ, ಅವರಿಗೆ ಪೆನ್ ಹಾಗೂ ಕಾಗದವನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲುತುಂಡುಗಳಿಂದ ಕೊರೆದರು. ಬಾಕಿ ಸೆರೆಯಾಳುಗಳು ಬಿಡುಗಡೆಯಾಗಿ ಭಾರತಕ್ಕೆ ಬರುವಾಗ ತಮ್ಮೊಂದಿಗೆ ತರುವವರೆಗೂ, ಹತ್ತು ಸಾವಿರಕ್ಕೂ ಹೆಚ್ಚಿನ ಪಂಕ್ತಿಗಳನ್ನು ವರ್ಷಾವಧಿ ನೆನಪಿಟ್ಟುಕೊಂಡಿದ್ದರು. ಹಿಂದಿ ಭಾಷೆಯ ಅನೇಕ ನವ ಪದಪುಂಜಗಳನ್ನು ಹುಟ್ಟು ಹಾಕಿದ ಖ್ಯಾತಿ ಅವರಿಗಿದೆ. ಕೆಲವು ಉದಾಹರಣೆಗಳೆಂದರೆ ದಿಗ್ದರ್ಶಕ (ಸರಿಯಾದ ದಾರಿ ತೋರಿಸುವವನು), ಸಾಪ್ತಾಹಿಕ (ವಾರಕ್ಕೊಮ್ಮೆ ಬರುವಂಥದ್ದು, ಪತ್ರಿಕೆ ಇತ್ಯಾದಿ) ಹಾಗೂ ಸಂಸದ್ (ಭಾರತದ ಪಾರ್ಲಿಮೆಂಟ್).
ಆದರೆ ಆ ಮಹಾನ್ ನಾಯಕನನ್ನು ಈ ದೇಶ, ಇಲ್ಲಿನ ಸರಕಾರ ನಡೆಸಿಕೊಂಡ ರೀತಿ ಮಾತ್ರ ಅತ್ಯಂತ ಹೇಯ. ಗಾಂಧಿ ಹತ್ಯೆಯ ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. ಮುಂದೆ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಘೋಷಿಸಿತು. 1950ರಲ್ಲಿ ಲಿಯಾಖತ್ ಅಲಿ ಭಾರತ ಭೇಟಿಗೆ ಬಂದಾಗ ಹಿಂದುತ್ವ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣಕ್ಕೆ ದೈಹಿಕವಾಗಿ ಜರ್ಜರಿತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರ್ಕರ್ರನ್ನು ಬಂಧಿಸಿ ಸರಕಾರ ಬೆಳಗಾವಿ ಜೈಲಿಗೆ ಕಳಿಸಿತು. ಬ್ರಿಟಿಷರು ವಶಪಡಿಸಿಕೊಂಡಿದ್ದ ಸಾವರ್ಕರ್ ಮನೆಯನ್ನು ಸ್ವಾತಂತ್ರ್ಯಾ ನಂತರವೂ ಹಿಂದಿರುಗಿಸುವ ಸೌಜನ್ಯವನ್ನು ಸರಕಾರ ತೋರಲಿಲ್ಲ. ಸಾವರ್ಕರ್ ಗೌರವಾರ್ಥ ಅವರ ಅಭಿಮಾನಿಗಳು ‘ಮೃತ್ಯುಂಜಯ ದಿವಸ’ ಆಚರಿಸಿತ್ತಾರೆ.
ಇಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ನಮ್ಮ ನಮನಗಳು.
ಡಾ.ಗುರುಪ್ರಸಾದ ಹವಲ್ದಾರ್
ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.