ನಿವೃತ್ತಿಗೆ ಒಂದು ದಿನ ಮೊದಲು ಅಮಾನತುಗೊಂಡರಾ ಬಾಗೇಪಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ!
ಬೆಂಗಳೂರು: ಅಂಗನವಾಡಿ ಕೇಂದ್ರಗಳಿಗೆ ನಿಯಮಬಾಹಿರವಾಗಿ ಸಾಮಗ್ರಿಗಳನ್ನು ಖರೀದಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಸೇರಿ ಒಟ್ಟು ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಜಿಲ್ಲೆಯ ಚಿಕ್ಕಬಳ್ಳಾಪುರ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿನೂರು, ಶಿಡ್ಲಘಟ್ಟ, ಚಿಂತಾಮಣಿ ತಾಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ನಿಯಮಗಳ ಪ್ರಕಾರ ನೇರ ಖರೀದಿಗೆ ಅವಕಾಶ ಇಲ್ಲದಿದ್ದರೂ ಮಿಕ್ಸರ್ ಗ್ರೈಂಡರ್, ವಾಟರ್ ಫ್ಯೂರಿಫೈಯರ್ದಂಥ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಈ ಕಾರಣಕ್ಕಾಗಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.
ಅವರ ಜತೆಗೆ ಬಾಗೇಪಲ್ಲಿ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪ್ರಸಾದ್, ಚಿಕ್ಕಬಳ್ಳಾಪುರ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಬಿ.ನೌತಾಜ್, ಬಾಗೇಪಲ್ಲಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ವೆಂಕಟೇಶ್ ಅವರನ್ನೂ ಸಸ್ಪೆಂಡ್ ಮಾಡಿ ಸರಕಾರದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು, ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧೀನ ಕಾರ್ಯದರ್ಶಿ ಸರೋಜಮ್ಮ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಕಾಕತಾಳೀಯವೆಂದರೆ, ಬಾಗೇಪಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ನಾಳೆ (ಭಾನುವಾರ) ನಿವೃತ್ತಿ ಆಗುವವರಿದ್ದರೆಂಬ ಮಾಹಿತಿ ಸಿಕ್ಕಿದೆ. ಭಾನುವಾರ ಸರಕಾರಿ ರಜೆಯಾದ್ದರಿಂದ ಅವರ ಸೇವೆ ಶನಿವಾರವೇ ಕೊನೆಗೊಂಡಿದೆ ಎನ್ನಲಾಗಿದೆ.
ಸಾಮಗ್ರಿಗಳ ಖರೀದಿಯಲ್ಲಿ ನಿಯಮಗಳ ಉಲ್ಲಂಘನೆಯ ಜತೆಗೆ, ಸರಕಾರದ ಹಣ ದುರುಪಯೋಗ ಹಾಗೂ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು. ಈ ಕಾರಣಕ್ಕೆ ಉಪ ನಿರ್ದೇಶಕರೂ ಸೇರಿ ಉಳಿದ ಸಿಬ್ಬಂದಿಯನ್ನು ಮೇ ೨೮ರಿಂದ ಜಾರಿಗೆ ಬರುವಂತೆ ಸಂಸ್ಪೆಂಡ್ ಮಾಡಲಾಗಿದೆ. ಈ ಕುರಿತ ಆದೇಶ ಪ್ರತಿ ಸಿಕೆನ್ಯೂಸ್ ನೌಗೆ ಲಭ್ಯವಾಗಿದೆ.
ನಾರಾಯಣ ಸ್ವಾಮಿ ಅವರ ವಿರುದ್ಧ ಇಲಾಖೆ ತನಿಖೆ ಕಾಯ್ದಿರಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದ್ದು, ಅವರ ಜಾಗಕ್ಕೆ ಪ್ರಭಾರಿಯಾಗಿ ಜಿಲ್ಲಾ ನಿರೂಪಣಾಧಿಕಾರಿ ಎಸ್.ಸಿ.ಪದ್ಮರಾಜ್ ಅವರನ್ನು ನೇಮಕ ಮಾಡಲಾಗಿದೆ. ಉಳಿದವರ ಜಾಗಕ್ಕೆ ಸ್ಥಳೀಯ ಮಟ್ಟದಲ್ಲಿ ಪ್ರಭಾರಿಗಳನ್ನು ನೇಮಕ ಮಾಡಲಾಗಿದೆ.