• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಕೋವಿಡ್ ಕಾಲದ ಕಣ್ಣೀರು ಮತ್ತೂ ಮತ್ತೊಮ್ಮೆ ಕಣ್ಮುಂದೆ ಕಾಣಿಸಿಕೊಂಡ ಕಮ್ಯೂನಿಸ್ಟ್‌ ಮ್ಯಾನಿಫೆಸ್ಟೋ ಎಂಬ ದುಡಿಯುವ ಜನರ ದಿವ್ಯಕೃತಿ

cknewsnow desk by cknewsnow desk
May 31, 2021
in GUEST COLUMN, STATE
Reading Time: 3 mins read
0
ಕೋವಿಡ್ ಕಾಲದ ಕಣ್ಣೀರು ಮತ್ತೂ ಮತ್ತೊಮ್ಮೆ ಕಣ್ಮುಂದೆ ಕಾಣಿಸಿಕೊಂಡ ಕಮ್ಯೂನಿಸ್ಟ್‌ ಮ್ಯಾನಿಫೆಸ್ಟೋ ಎಂಬ ದುಡಿಯುವ ಜನರ ದಿವ್ಯಕೃತಿ
921
VIEWS
FacebookTwitterWhatsuplinkedinEmail

Lead Photo by Riya Kumari from Pexels

ಕಮ್ಯೂನಿಸ್ಟ್‌ ಪ್ರಣಾಳಿಕೆಯ ಪ್ರಥಮ ಮುದ್ರಣ ಫೆಬ್ರವರಿ 21, 1848

ಕೋವಿಡ್ ಬಂದಿದೆ, ಅದು ಹೋಗುವ ಹಾಗೆ ಕಾಣುತ್ತಿಲ್ಲ. ಆದರೆ, ನೌಕರಿ ಕೇತ್ರದಲ್ಲಿ ಅದು ಸೃಷ್ಟಿಸುತ್ತಿರುವ ತಲ್ಲಣಗಳು ಅಷ್ಟಿಷ್ಟಲ್ಲ. ಕಾರ್ಪೋರೇಟ್ ಕಂಪನಿಗಳಿಗೆ ಕೋವಿಡ್ ಬಂದದ್ದೇ ಮೇಲಾಯಿತು ಎನ್ನುವ ಹಾಗಿದೆ ಪರಿಸ್ಥಿತಿ. ಆ ಕ್ಷೇತ್ರ, ಈ ಕ್ಷೇತ್ರ ಎಂಬ ತಾರತಮ್ಯವಿಲ್ಲದೆ, ಕೊರೋನದಿಂದ ತೆರೆದುಕೊಳ್ಳುತ್ತಿರುವ ಎಲ್ಲ ಅಡ್ಡದಾರಿಗಳನ್ನೂ ಉದ್ಯೋಗಧಾತರು ಯಾವ ಎಗ್ಗೂ ಇಲ್ಲದೆ ರಹದಾರಿಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇದು ಇವತ್ತಿನ ಬಹು ಅಪಾಯಕಾರಿ ಬೆಳವಣಿಗೆ. ಅದಕ್ಕೂ ಮಿಗಿಲಾಗಿ ರಾಜ್ಯ ಸರಕಾರವು ಕೋವಿಡ್ ಕತ್ತಲಲ್ಲಿ ಸದ್ದಿಲ್ಲದೆ ಕಾರ್ಮಿಕ ಕಾಯ್ದೆಗೆ ಇಷ್ಟಾನುಸಾರ ತಿದ್ದುಪಡಿ ತಂದು ಕಾರ್ಪೋರೇಟು ಕುಳಗಳಿಗೆ ಅನುಕೂಲ ಮಾಡಿಕೊಟ್ಟಿದ್ದು ಇನ್ನಷ್ಟು ಆತಂಕಕಾರಿ. ಈ ವಿಷಮ ಹೊತ್ತಿನಲ್ಲಿ ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ ಹೊರಬಂದು 172 ವರ್ಷಗಳೇ ಸಂದಿವೆ. ಖ್ಯಾತ ಕಥೆಗಾರ ಕೇಶವ ಮಳಗಿ ಅವರು ಆ ಬಗ್ಗೆ‌ ಬರೆದಿರುವ ಈ ಲೇಖನ ಪ್ರಸಕ್ತ ಸಂದರ್ಭಕ್ಕೊಂದು ಬೆಳಕು.

  • ಕಾರ್ಲ್‌ಮಾರ್ಕ್ಸ್‌ & ಏಂಜೆಲ್ಸ್

ವಸಂತ ಕಾಲದ ಕೊನೆಯ ದಿನಗಳ ಒಂದು ಹಗಲು. ಅರಳೆಯ ಮಹಾನಗರವೆಂದು ಗುರುತಿಸಲಾಗುತ್ತಿದ್ದ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಿಂದ ಇಪ್ಪತ್ಮೂರರ ಆ ತರುಣ ಪ್ರವಾಸಿಗರ ಸಗ್ಗವೆಂದು ಕರೆಯುವ ಪ್ಯಾರಿಸ್‌ಗೆ ಬಂದಿದ್ದ. ತರುಣನ ತಂದೆ ಬಟ್ಟೆ ಕಾರ್ಖಾನೆಯ ಮಾಲಿಕ, ಸಿರಿವಂತ. ಮಗನಿಗೋ ಕಾರ್ಖಾನೆಯ ಯಂತ್ರಗಳ ಸದ್ದಿಗಿಂತ ಕ್ರಾಂತಿಯ ಹೆಸರೇ ಹೆಚ್ಚು ಪ್ರಿಯ. ಅಂದು ಆಗಸ್ಟ್‌ 28, 1844. ಪ್ಯಾರಿಸ್‌ಗೆ ಆತ ಬಂದಿರುವುದು ತನಗಿಂತ ಎರಡು ವರ್ಷ ಹಿರಿಯ, ಮುಂದೆ ಜೀವಮಾನದ ಸಂಗಾತಿ, ಗೆಳೆಯನಾಗಲಿದ್ದ ಜರ್ಮನಿಯ ಯುವಕ್ರಾಂತಿಕಾರಿಯನ್ನು ಭೇಟಿಯಾಗಲು. ಇಬ್ಬರೂ ಕೆಫೆ ಡೆ ರೇಜೆನ್ಸಿಯಲ್ಲಿ ಭೇಟಿಯಾಗುವುದಾಗಿ ಪತ್ರ ವಿನಿಮಯ ಮಾಡಿಕೊಂಡಿದ್ದರು.

ಪ್ಯಾರಿಸ್‌ನ ಹೃದಯಭಾಗದಲ್ಲಿದ್ದ, ’ಲೂವ್ರ’ ವಸ್ತುಸಂಗ್ರಹಾಲಕ್ಕೆ ಕೂಗಳತೆ ದೂರದಲ್ಲಿದ್ದ ಕೆಫೆ ರೇಜೆನ್ಸಿ ತನ್ನ ಕಾಲದ ಪ್ರಖ್ಯಾತರ ಭೇಟಿಯ ಸ್ಥಳ. ಲೋಕದ ಎಲ್ಲ ಪ್ರಸಿದ್ಧರೂ ಅಲ್ಲಿಗೆ ಬಂದು ಕಾಫಿ ಕುಡಿಯುತ್ತ, ಹರಟೆ ಹೊಡೆಯುತ್ತ, ಚದುರಂಗವನ್ನು ಆಡುತ್ತ ಕಳೆಯುತ್ತಿದ್ದರು. ಬೆಂಜಮಿನ್‌ ಫ್ರಾಂಕ್ಲೆನ್‌, ವಾಲ್ಟೇರ್‌ರಿಂದ ಹಿಡಿದು ಹಾವರ್ಡ್‌ಸ್ಟೋ ಎಂಬ ನಟನವರೆಗೂ ಆ ಹೆಸರಿನ ಪಟ್ಟಿ ಬೆಳೆಯುತ್ತಿತ್ತು. ಇಬ್ಬರೂ ತರುಣರು ಲೋಕದೊಂದಿಗೆ ಚದುರಂಗದಂತೆಯೇ ಬೇರೊಂದು ಬಗೆಯ ಆಟವನು ಆಡಲು ಬಯಸಿದ್ದರು. ಚದುರಂಗದ ದಾಳಗಳಂತೆಯೇ ತಮ್ಮ ಹೊಸ ದಾಳಗಳನ್ನು ನಡೆಸ ಬಯಸಿದ್ದರು. ಚದುರಂಗದಲ್ಲಿ ರಾಜನಿಗೆ ದಿಗ್ಬಂಧನ ಹೇರುವುದರೊಂದಿಗೆ ಆಟ ಮುಗಿದರೆ, ಉಭಯ ತರುಣರ ಹೊಸ ಆಟದಲ್ಲಿ ಬಂಡವಾಳಶಾಹಿಯನ್ನು ಸ್ಥಾನಪಲ್ಲಟಗೊಳಿಸಿ, ಕಾರ್ಮಿಕವರ್ಗಕ್ಕೆ ಅಧಿಕಾರ ನೀಡುವುದು ಆಟದ ನಿಯಮವಾಗಿತ್ತು. ಅವರಿಬ್ಬರ ಗೆಳೆತನ, ಆ ಗೆಳೆತನದಿಂದ ಹುಟ್ಟಿದ ಸಿದ್ಧಾಂತಗಳು ಆಧುನಿಕ ಜಗದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ನಿಯಮಗಳನ್ನು ಎಲ್ಲ ಕಾಲಕ್ಕೂ ಬದಲಿಸಲಿದ್ದವು. ಕೈಗಾರಿಕಾ ಕ್ರಾಂತಿಯ ಬಳಿಕ, ದುಡಿಯುವ ಜನರ ಒಗ್ಗಟ್ಟಿನಿಂದ ಕಾರ್ಮಿಕ ಕ್ರಾಂತಿಯ ಮೂಲಕ ಅಸಮಾನತೆಯಿಂದ ನರಳುವ ಲೋಕಕ್ಕೆ ಸಮಾನತೆಯ ಮಂತ್ರವನು ಬೋಧಿಸಲು ಈ ಇಬ್ಬರು ತರುಣರು ಕನಸಿದ್ದರು.

ಸಿರಿವಂತ ಯುವಕನ ತಂದೆ, ಮಗ ಜವಳಿ ಉದ್ಯಮಕ್ಕೆ ಬೇಕಾದ ಆಧುನಿಕ ಶಿಕ್ಷಣ ಕಲಿಯಲು ಎಂಬ ಒತ್ತಾಸೆಯಿಂದ ಆತನನ್ನು ಕಳಿಸಿದ್ದ. ಆದರೆ, ಯುವಕನ ವಿಚಾರಗಳೇ ಬೇರೆ ಇದ್ದವು. ಮ್ಯಾಂಚಿಸ್ಟರ್‌ನಿಂದ ಬಂದ ತರುಣ ಫ್ರೆಡರಿಕ್‌ ಏಜೆಂಲ್ಸ್‌. ತಂದೆ ಬಯಸಿದಂತೆ ಜವಳಿ ತಜ್ಞನಾಗದೆ ತತ್ತ್ವಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ರಾಜಕೀಯ ಚಿಂತಕ, ಪತ್ರಕರ್ತ ಹೀಗೆ ಜಗದ ನಿಯಮ ಬದಲಿಸುವ ಮಹಾ ಮಾನವತಾವಾದಿಯಾಗಿ ಬದಲಾದ.

ಜರ್ಮನಿಯ ಪ್ರಸ್ಯ ಪ್ರಾಂತದ ಇನ್ನೊಬ್ಬ ತರುಣ ಕಾರ್ಲ್ ಮಾರ್ಕ್ಸ್‌. ಕ್ರಾಂತಿಯ ಕನಸು, ಜಗದ ಹಳೆಯ ಕಟ್ಟಳೆಗಳನ್ನು ಬದಲಿಸುವ ಅದಮ್ಯ ಉತ್ಸಾಹ. ಆ ವರೆಗೆ ಲೋಕದ ಕುರಿತು ಇದ್ದ ವಿಚಾರಗಳನ್ನು, ತತ್ತ್ವಶಾಸ್ತ್ರಗಳನ್ನು ಚಿಕಣಾಚೂರಾಗಿಸಿ ತನ್ನವನ್ನು ಹೊಸದಾಗಿ ಸೃಷ್ಟಿಸುವ ಉಮೇದು. ತಂದೆಯ ಒತ್ತಾಸೆಯಂತೆ ಕಾನೂನುಶಾಸ್ತ್ರ ಓದಿದ್ದರೂ, ಬಹುಬೇಗ ತತ್ತ್ವಶಾಸ್ತ್ರದತ್ತ ಹೊರಳಿ ತಂದೆಯ ಮುನಿಸಿಗೆ ಕಾರಣನಾದವನು. ಮ್ಯಾಂಚಿಸ್ಟರ್‌ಜವಳಿ ಉದ್ಯಮಕ್ಕೆ ಖ್ಯಾತಿಪಡೆದಿದ್ದರೆ, ಜರ್ಮನಿ ತತ್ತ್ವಶಾಸ್ತ್ರದ ಪ್ರಮೇಯಗಳಿಗೆ. ಆದರೆ, ಯುವ ಮಾರ್ಕ್ಸ್‌‌ನಿಗೆ ತನ್ನ ಹಿಂದಿನ ತತ್ತ್ವಶಾಸ್ತ್ರಜ್ಞರ ಕುರಿತು ಅಸಮಾಧಾನ! ತನ್ನ ಗುರು ಎಂದು ಕರೆದುಕೊಳ್ಳುತ್ತಿದ್ದ ಜಾರ್ಜ್ ವಿಲ್‌ಹೆಲ್ಮ್‌ ಫ್ರೆಡರಿಕ್‌ ಹೆಗೆಲನ ವಿಚಾರಗಳ ಕುರಿತೂ ತಕರಾರು.

ಹೊಸ ಚಿಂತನೆಯ ಹುಟ್ಟು: ಪ್ರಣಾಳಿಕೆಯ ಸ್ವರೂಪ

ಆಗಸ್ಟ್‌ ಮಾಸದ ಆ ದಿನ ಭೇಟಿಯಾಗಿ ಸಂವಾದ ನಡೆಸಿದ ಇಬ್ಬರೂ ತರುಣರು ತಮ್ಮ ವಿಚಾರಗಳು ಪರಸ್ಪರ ಪೂರಕವೆಂದು ಅರಿತರು. ಅಂದಿನ ಚರ್ಚೆಯಲ್ಲಿ ಅಗೋಚರ ಕ್ರಾಂತಿಯ ಬೀಜಗಳು ರೂಪಪಡೆದು ಮುಂದೆ ಹೆಮ್ಮರವಾಗಲಿದ್ದವು. ಇಬ್ಬರೂ ಕಮ್ಯೂನಿಸ್ಟ್‌ ಪ್ರಣಾಳಿಕೆ ಬರೆದಿದ್ದು ಆ ಭೇಟಿಯ ವರ್ಷಗಳ ನಂತರ! ಹರಳುಗಟ್ಟಿದ ತಮ್ಮ ವಿಚಾರಗಳಿಗೆ ಬರಹದ ರೂಪ ನೀಡುವ ಸನ್ನಿವೇಶ ಹುಡುಕಿಕೊಂಡು ಬಂದಿತು. ಲಂಡನ್‌ನಗರದಲ್ಲಿ ತಮ್ಮ ಕೇಂದ್ರವನ್ನು ಹೊಂದಿದ್ದ, ಕಲಾವಿದರು, ಬುದ್ಧಿಜೀವಿಗಳು ಸದಸ್ಯತ್ವ ಹೊಂದಿದ್ದ ’ಲೀಗ್‌ ಆಫ್‌ ದಿ ಜಸ್ಟ್‌’ (ನ್ಯಾಯಕ್ಕಾಗಿ ಒಕ್ಕೂಟ), ಈ ಜೋಡಿಯನ್ನು ಸಂಪರ್ಕಿಸಿ ತಮಗೊಂದು ಪ್ರಣಾಳಿಕೆಯನ್ನು ಬರೆದುಕೊಡುವಂತೆ ಆಗ್ರಹಿಸಿದರು. ಈ ಒಕ್ಕೂಟದ ಸದಸ್ಯರಾಗುವವರು ’ಗುಟ್ಟಿನ ಪ್ರಮಾಣ ವಚನ’ವನ್ನು ಸ್ವೀಕರಿಸಬೇಕಿತ್ತು. ಈ ಒಕ್ಕೂಟ ಅಲ್ಲಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗುತ್ತಿತ್ತು. 1839ರಲ್ಲಿ ಪ್ಯಾರಿಸ್‌ನ ವಿಫಲ ಕ್ರಾಂತಿಯಲ್ಲಿ ಪಾಲ್ಗೊಂಡಿತ್ತು. ವಿಚಾರಣೆ ಮತ್ತು ಶಿಕ್ಷೆಯ ಭಯದಿಂದ ತನ್ನ ಕಾರ್ಯಸ್ಥಾನವನ್ನು ಪ್ಯಾರಿಸ್‌ನಿಂದ ಲಂಡನ್ನಿಗೆ ಬದಲಾಯಿಸಿಕೊಂಡಿದ್ದು ಅದರ ಹೊಸ ಅವತಾರವಾಗಿತ್ತು. ತಮ್ಮ ಒಕ್ಕೂಟಕ್ಕೆ ಹೊಸ ನಾಯಕತ್ವ ವಹಿಸಿ, ಒಕ್ಕೂಟವನ್ನು ಮುನ್ನಡೆಸುವಂತೆ ಮನವೊಲಿಸಲು ಮಾರ್ಕ್ಸ್‌ ಮತ್ತು ಏಂಜೆಲ್ಸ್‌ರನ್ನು ಒಕ್ಕೂಟದ ಸದಸ್ಯರು ಸಂಪರ್ಕಿಸಿದ್ದರು. ಒಕ್ಕೂಟದ ವಿಶ್ವ ಸೋದರತೆಯ ಸದಾಶಯ ಮತ್ತು ರಹಸ್ಯ, ವಿಧ್ವಂಸಕ ಕೃತ್ಯಗಳ ಹಿಂದಿನ ಅಪಾಯ ಎರಡನ್ನೂ ಇಬ್ಬರೂ ತರುಣರು ತಕ್ಷಣವೇ ಅರಿತರು. ಮಾರ್ಕ್ಸ್‌‌ನಿಗೆ ಏಂಜೆಲ್ಸ್‌ ಕೈಗೊಂಡಿದ್ದ ಮ್ಯಾಂಚಿಸ್ಟರ್‌ ಕಾರ್ಮಿಕ ಸ್ಥಿತಿಗತಿಯ ಅಧ್ಯಯನದ ಕುರಿತು ಮೆಚ್ಚುಗೆಯಿತ್ತು. ಅಂತೆಯೇ, ಏಂಜೆಲ್ಸ್‌, ಮಾರ್ಕ್ಸ್‌ ಮಂಡಿಸುತ್ತಿದ್ದ ಐತಿಹಾಸಿಕ ಬದಲಾವಣೆಯ ಪ್ರಮೇಯಗಳು ಒಪ್ಪಿಗೆಯಾಗಿದ್ದವು. ಇಬ್ಬರಿಗೂ ರಾಜಕೀಯ ಅರಾಜಕ ಸಿದ್ಧಾಂತಗಳ ಕುರಿತು ಒಲವಿರಲಿಲ್ಲ. ಆದರೆ, ದೊರೆತ ಅವಕಾಶವನ್ನು ಬಿಟ್ಟು ಕೊಡಲೂ ಸಿದ್ಧರಿರಲಿಲ್ಲ. ಹಾಗೆಂದೇ, ಒಕ್ಕೂಟದ ಕಾರ್ಯವಿಧಾನವನ್ನು ಬದಲಿಸಿಕೊಳ್ಳಲು ಸದಸ್ಯರಿಗೆ ಸೂಚಿಸಿದರು.

ತರುಣ ಜೋಡಿ ನವೆಂಬರ್‌ 1847ರಲ್ಲಿ ಒಕ್ಕೂಟದ ಸದಸ್ಯರನ್ನು ಭೇಟಿಯಾಗಲು ಲಂಡನ್ನಿಗೆ ಹೊರಟರು. ಲೀಗ್‌ಗೆ, ‘ಕಮ್ಯೂನಿಸ್ಟ್‌ ಒಕ್ಕೂಟ’ವೆಂದು ಹೊಸ ಹೆಸರು ನೀಡಲಾಯಿತು. ತಮ್ಮ ಗುರಿ-ಉದ್ದೇಶಗಳನ್ನು ಸ್ಪಷ್ಟಪಡಿಸುವ ನಾಲ್ಕಾರು ಪುಟಗಳ ದಾಖಲೆಯನ್ನು ಸಿದ್ಧಪಡಿಸಿ ಎಂದು ಒಕ್ಕೂಟದ ಸದಸ್ಯರು ಏಂಜೆಲ್ಸ್‌ ಮತ್ತು ಮಾರ್ಕ್ಸ್‌‌ರಿಗೆ ಕೇಳಿಕೊಂಡರು. ಲಂಡನ್ನಿಗೆ ಬರುವ ಮೊದಲೇ ಏಂಜೆಲ್ಸ್‌, ಪ್ರಶ್ನೋತ್ತರದ ರೂಪದ “ಕಮ್ಯೂನಿಸಂ ತತ್ತ್ವಸಿದ್ಧಾಂತಗಳು” ಎಂಬ ನಾಲ್ಕಾರು ಪುಟದ ದಾಖಲೆಯನ್ನು ನೋಡಿದ್ದ. ಆದರೆ, ತಮ್ಮ ಮಹತ್ವಾಕಾಂಕ್ಷೆಗೆ ಈ ದಾಖಲೆ ಏನೇನೂ ಸಾಲದು ಎಂದು ಇಬ್ಬರೂ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನು ’ಕಮ್ಯೂನಿಸ್ಟ್‌ ಪ್ರಣಾಳಿಕೆ’ ಎಂದು ಕರೆದರೆ ಚೆನ್ನಿರುತ್ತದೆ, ಎಂದು ಮುಂದೆ ಏಂಜೆಲ್ಸ್‌ ತನ್ನ ಸಂಗಾತಿಗೆ ಬರೆದ.

ಕವಿ ಮಾರ್ಕ್ಸ್‌‌ನಿಗೆ ಹೊತ್ತಿಗೆಯು ಕಥೆಯನ್ನು ಕಟ್ಟಿಕೊಡುವಷ್ಟು ಸುಭಗವಾಗಿರಬೇಕು ಎಂಬ ನಿಲುವು. ಹೆಗೆಲನಿಗೆ ಸಂವಾದಿ ಚಿಂತನಾ ಪರಂಪರೆಯನ್ನು ಮಾರ್ಕ್ಸ್ ಈ ವೇಳೆಗಾಗಲೇ ರೂಢಿಸಿಕೊಂಡಿದ್ದ. ಹೆಗೆಲನ ದೃಷ್ಟಿಯಲ್ಲಿ, ಚಿಂತನೆ, ಕಲ್ಪನೆ, ದೃಷ್ಟಿಕೋನಗಳು ಲೋಕವನ್ನು ಮುನ್ನಡೆಸುವ ಶಕ್ತಿಗಳಾಗಿದ್ದವು. ಮಾರ್ಕ್ಸ್, ’ಲೋಕವನ್ನು, ಮನುಷ್ಯರು ತಮ್ಮ ಶ್ರಮದ ಮೂಲಕ ರೂಪಾಂತರಗೊಳಿಸುತ್ತಾರೆ’ ಎಂದು ಬದಲಾಯಿಸಿದ. ಅಂದರೆ, ಲೋಕ ಬದಲಾವಣೆಗೆ ತತ್ತ್ವಶಾಸ್ತ್ರವಲ್ಲ, ಬದಲಿಗೆ ಆರ್ಥಿಕತೆ ಕಾರಣ ಎಂಬುದೇ ಮಾರ್ಕ್ಸ್‌ನ ವ್ಯಾಖ್ಯಾನವಾಗಿತ್ತು. ಸೈದ್ಧಾಂತಿಕವಾಗಿ ನೋಡುವುದಾದರೆ ಇದೊಂದು ”ಐತಿಹಾಸಿಕ ಚಿಂತನಾ ಪಲ್ಲಟ’.

ಏಂಜೆಲ್ಸ್‌ನ ಸಹಯೋಗದೊಂದಿಗೆ ಮಾರ್ಕ್ಸ್‌ ಮಂಡಿಸಿದ ಆರ್ಥಿಕ ಚಿಂತನೆಗಳು ಉಸಿರು ಬಿಗಿ ಹಿಡಿವಂತೆ ಮಾಡಿದ್ದವು. “ಜಾಗತಿಕ ಮಾರುಕಟ್ಟೆಯನ್ನು ಶೋಷಿಸುವ ಬಂಡವಾಳಿಗರು ತಮ್ಮ ಉತ್ಪಾದನೆಯನ್ನು ಮಾಡುತ್ತಾರೆ. ಮತ್ತು ಅವುಗಳ ಬಳಕೆಯನ್ನು ವಿಶ್ವವ್ಯಾಪಿ ಸಂಗತಿಯನ್ನಾಗಿ ಮಾಡುತ್ತಾರೆ… ಇದರಿಂದ, ಎಲ್ಲ ಸಾಂಪ್ರದಾಯಿಕ ರಾಷ್ಟ್ರೀಯ ಕೈಗಾರಿಕೆಗಳು ನಾಶವಾಗಿವೆ, ಇಲ್ಲವೆ, ನಾಶ ಹೊಂದಲಿವೆ. ಹೊಸ ಉದ್ಯಮಗಳನ್ನು ಅವನ್ನು ಪಕ್ಕಕ್ಕೆ ನೂಕುತ್ತವೆ. ಎಲ್ಲ ಅಭಿವೃದ್ಧಿಗೊಂಡ ದೇಶಗಳು ಇನ್ನಷ್ಟು ಏಳಿಗೆ ಹೊಂದಲು ಈ ಹೊಸ ಉದ್ದಿಮೆಗಳು ಬೇಕು. ಈ ಹೊಸ ಉದ್ದಿಮೆಗಳು ಸ್ಥಳೀಯ ವಸ್ತುಪರಿಕರಗಳನ್ನು ಬಳಸವು. ಬದಲಿಗೆ, ದೂರದ ಯಾವುದೋ ಮೂಲೆಯಿಂದ ಇವುಗಳ ಕಚ್ಚಾ ವಸ್ತುಗಳು ಬರುವವು. ಇವುಗಳ ಉತ್ಪನ್ನಗಳನ್ನು ಸ್ಥಳೀಯರು ಮಾತ್ರವಲ್ಲದೆ, ವಿಶ್ವದ ಅರ್ಧ ಜನರು ಬಳಸುವರು. ಸ್ಥಳೀಯತೆ, ಸ್ವಾವಲಂಬನೆಗಳಿಂದ ಕೂಡಿದ್ದ ಉತ್ಪಾದನೆ ವಾಣಿಜ್ಯ ವ್ಯವಸ್ಥೆಯು ವಿಶ್ವವ್ಯಾಪಕವೂ, ಪರಸ್ಪರ ಅವಲಂಬಿಯೂ ಆಗಿ ಬದಲಾಗಿದೆ. ಇದು ಕೇವಲ ವಸ್ತು ಉತ್ಪಾದನೆಗಷ್ಟೇ ಸೀಮಿತಗೊಳ್ಳದೆ, ಬೌದ್ಧಿಕ ಉತ್ಪಾದನೆಗೂ ವ್ಯಾಪಿಸಿದೆ. ಒಂದು ರಾಷ್ಟ್ರದ ಬೌದ್ಧಿಕ ಉತ್ಪಾದನೆ ಎಲ್ಲ ರಾಷ್ಟ್ರಗಳ ಸಾಮಾನ್ಯ ಸ್ವತ್ತಾಗಿ ಮಾರ್ಪಟ್ಟಿದೆ… ಸ್ಥಳೀಯ ಸಾಹಿತ್ಯವು ವಿಶ್ವಸಾಹಿತ್ಯವಾಗಿ ರೂಪಾಂತರಗೊಂಡಿದೆ. “

ಮಾರ್ಕ್ಸ್‌ ಮತ್ತು ಏಂಜೆಲ್ಸ್‌ ಬರೆದ ಮೇಲಿನ ಮಾತುಗಳನ್ನು ಓದಿದಾಗ ಅವರು ಬಂಡವಾಳಶಾಹಿ ವ್ಯವಸ್ಥೆಯ ಆರಾಧಕರೆ ಆಗಿರಬೇಕು, ಎಂದು ಬೆರಗಾಗುವಂತಿದ್ದವು. ಆದರೆ, ನಿಜವಾದ ಸಾಲುಗಳು ಆಮೇಲೆ ಬರಲಿದ್ದವು. ಏಂಜೆಲ್ಸ್‌ತನ್ನ ಅಧ್ಯಯನದ ಒಳನೋಟಗಳಿಂದ ಬಂಡವಾಳಶಾಯಿಯು ಹೇಗೆ ತಾನೇ ನಿರ್ಮಿಸಿದ ವ್ಯವಸ್ಥೆಯಿಂದ ಶತ್ರುವನ್ನು ಸೃಷ್ಟಿಸಿಕೊಳ್ಳುವುದು ಎಂದು ಸೂಚಿಸಿದ್ದ. ಬಂಡವಾಳಶಾಹಿನ ವ್ಯವಸ್ಥೆಯೇ ಹುಟ್ಟು ಹಾಕಿದ ಕಾರ್ಮಿಕವರ್ಗ ಹೇಗೆ ಆ ವ್ಯವಸ್ಥೆಯನ್ನು ಕಿತ್ತೊಗೆಯುವುದು ಎಂದು ವಿವರಿಸಿದ್ದ. ತಮ್ಮ ಪ್ರಣಾಳಿಕೆ ಕೂಡ ವಿಶ್ವಸಾಹಿತ್ಯದ ಭಾಗವಾಗಬೇಕು ಎಂದು ಜೋಡಿ ಬಯಸಿತ್ತು. ಹೊತ್ತಿಗೆಯು ಇಂಗ್ಲಿಶ್‌, ಫ್ರೆಂಚ್‌, ಜರ್ಮನ್‌, ಇಟಾಲಿಯನ್‌, ಫ್ಲೆಮಿಶ್‌ಮತ್ತು ಡೇನಿಶ್‌ಭಾಷೆಗಳನ್ನು ಪ್ರಕಟಿಸುವ ಇರಾದೆಯನ್ನೂ ಹೊಂದಿತ್ತು. ಫೆಬ್ರವರಿ 1ರಂದು ಪುಸ್ತಕ ಹೊರತರುವ ನಿರೀಕ್ಷೆ ಇಟ್ಟುಕೊಂಡಿತ್ತು. ಅಂದೇ ಬಿಡುಗಡೆ ಮಾಡಲಾಗದಿದ್ದರೂ ಆ ತಿಂಗಳ ಮೂರನೆಯ ವಾರ ಪ್ರಕಟಣೆ ಸಾಧ್ಯವಾಯಿತು. ಆದರೆ, ಪುಸ್ತಕದ ರೂಪದಲ್ಲಲ್ಲ.
ಆ ಕಾಲದ ಎಲ್ಲ ಯುರೋಪಿಯನ್‌ ವೃತ್ತಪತ್ರಿಕೆಗಳಲ್ಲಿಯೂ ಧಾರಾವಾಹಿ ಅಥವ ಸರಣಿ ರೂಪದಲ್ಲಿ ಸಾಹಿತ್ಯವನ್ನು ಪ್ರಕಟಿಸುವುದು ಫ್ಯಾಶನ್‌ ಆಗಿತ್ತು. ಇದೊಂದು ಕೇವಲ 23 ಪುಟಗಳ ರಾಜಕೀಯ ಪಕ್ಷದ ಪ್ರಣಾಳಿಕೆಯಾದರೂ ಅದನ್ನೂ ಧಾರಾವಾಹಿಯಾಗಿ ಪ್ರಕಟಸಿಲಾಯಿತು! ಜತೆಗೇ, ಕಮ್ಯೂನಿಸ್ಟ್‌ ಒಕ್ಕೂಟವು ಅದನ್ನು ಕಿರುಹೊತ್ತಿಗೆಯಾಗಿಯೂ ಪ್ರಕಟಿಸಲು ಯೋಚಿಸಿತು. ಪ್ರಣಾಳಿಕೆ ಪ್ರಕಟವಾದ ನಾಲ್ಕು ವಾರಗಳಲ್ಲಿ ಯುರೋಪಿನಾದ್ಯಂತ ಕ್ರಾಂತಿಯ ದಂಗೆಗಳು ಆರಂಭವಾದವು! ಮಾರ್ಕ್ಸ್‌, ಕ್ರಾಂತಿಯ ಮೂಲಸ್ಥಳವೆಂಬಂತಿದ್ದ ಪ್ಯಾರಿಸ್‌ಗೆ ಮರಳಿದ. ಜರ್ಮನಿ ಮತ್ತು ಪ್ಯಾರಿಸ್‌ಗಳಲ್ಲಿ ಉಭಯ ಗೆಳೆಯರು ಸಭೆಗಳನ್ನು ಸಂಘಟಿಸಿ ಕ್ರಾಂತಿಗೆ ಪೂರಕ ಪರಿಸರ ನಿರ್ಮಿಸಲು ಪ್ರಯತ್ನಿಸತೊಡಗಿದರು. ಅಲ್ಲಲ್ಲಿ, ಜನಾಂದೋಲನಗಳಿದ್ದರೂ ಅವು ಪ್ರಣಾಳಿಕೆಯಿಂದ ಪ್ರೇರೇಪಣೆಗೊಂಡು ನಡೆದುವಾಗಿರಲಿಲ್ಲ! ಅವರ ಕೆಲಸವು ‘ಹೊಳೆಯಲ್ಲಿ ತೊಳೆದ ಹುಣಸೆ’ಯಂತೆ ಕಾಣತೊಡಗಿತು. ಹಾಗೆ ನೋಡಿದರೆ, ಕಮ್ಯೂನಿಸ್ಟ್‌ ಪ್ರಣಾಳಿಕೆಯ ಕುರಿತು ಯಾರೊಬ್ಬರೂ ಅಭಿಪ್ರಾಯವನ್ನೇ ವ್ಯಕ್ತಪಡಿಸಿರಲಿಲ್ಲ! ಪೊಲೀಸ್‌ ದಬ್ಬಾಳಿಕೆ ಮತ್ತು ಸೆನ್ಸಾರ್‌ನಿಂದಾಗಿ ಪರಿಷ್ಕೃತ ಹೊಸ ಆವೃತ್ತಿ ಪ್ರಕಟಿಸುವುದೂ ಕಷ್ಟವಾಯಿತು. ಹೀಗಾಗಿ, ಹೊಸದಾಗಿ ರಚನೆಗೊಂಡಿದ್ದ ಕಮ್ಯೂನಿಸ್ಟ್‌ ಲೀಗ್‌ ಭೂಗತ ಸಂಘಟನೆಯಾಗಬೇಕಾಯಿತು. ಪ್ರಕಟವಾಗಿ ಒಂದು ದಶಕದವರೆಗೆ ಪ್ರಣಾಳಿಕೆಯ ಪ್ರಭಾವ ಏನೆಂಬುದೇ ಗೊತ್ತಾಗಲಿಲ್ಲ. ಅಷ್ಟೇಕೆ, 1853ರಿಂದ 1863ರವರೆಗೆ ಕೇವಲ ಒಂದು ಸಲ ಮಾತ್ರ ಮರುಮುದ್ರಣ ಕಂಡಿತು.
*

ಆದರೆ, ಕಾಲದ ಇತಿಹಾಸ ಚಕ್ರ ಬದಲಾದಂತೆ ಈ ಪ್ರಣಾಳಿಕೆ ಪಡೆದುಕೊಳ್ಳತೊಡಗಿದ ಮಹತ್ವ ಅದ್ವಿತೀಯ. ಮುದ್ರಣ ಇತಿಹಾಸದಲ್ಲಿ, ಬೈಬಲ್‌ ಮತ್ತು ಇತರ ಧಾರ್ಮಿಕ ಗ್ರಂಥಗಳ ಬೇರೆ ಭಾಷೆಗಳ ಅನುವಾದ ಮತ್ತು ಪ್ರಕಟಣೆಗೆ ಹೋಲಿಸಿದರೆ, ಕಮ್ಯೂನಿಸ್ಟ್‌ ಪ್ರಣಾಳಿಕೆ ಅವುಗಳನ್ನು ಹಿಂದಿಕ್ಕಿ ನಾಗಾಲೋಟದಲಿ ಓಡುವುದು. ವಿಶ್ವದ ಲಿಪಿ ಇರುವ ಬಹುತೇಕ ಭಾಷೆಗಳಿಗೆ ಅನುವಾದಗೊಂಡ, ಪ್ರಕಟಗೊಂಡ ಕೃತಿಗಳಲ್ಲಿ ಕಮ್ಯೂನಿಸ್ಟ್‌ ಪ್ರಣಾಳಿಕೆ ಮುಂಚೂಣಿಯಲ್ಲಿರುತ್ತದೆ.

ವರ್ಗ, ವರ್ಣ, ಧರ್ಮ, ದೇಶ, ಖಂಡಗಳ ಭೇದಭಾವವಿಲ್ಲದ, ತರಮತದ ಬಿಸಿಯುಸಿರು ಸುಳಿಯದ ಈ ಕಿರುಹೊತ್ತಿಗೆಯನ್ನು ತಮ್ಮದನ್ನಾಗಿಸಿಕೊಳ್ಳಲು ಜನರು ಪಡೆದಿರಬೇಕಾದ ಒಂದೇ ಅರ್ಹತೆ: ದುಡಿವ ಜನರ ಸಂಕೋಲೆಗಳನು ಕಳಚುವ ಸ್ವಾತಂತ್ರವನು ಬಾಚಿ ತಬ್ಬುವುದು.

ದೊರಕಿದ ಹೊಸ ಶ್ರದ್ಧಾವಂತ ಓದುಗರು!

ಕಾರ್ಲ್‌‌ ಮಾರ್ಕ್ಸ್ (1883) ಮತ್ತು ಏಂಜೆಲ್ಸ್‌ ನಿಧನವಾಗಿ (1895) ದಶಕಗಳ ಬಳಿಕ ಕಮ್ಯೂನಿಸ್ಟ್‌ ಪ್ರಣಾಳಿಕೆಯ ಅಕ್ಷರ, ಅಕ್ಷರವನ್ನೂ ಓದಿ, ಮನನ ಮಾಡಿಕೊಂಡು, ಅದರ ಅನುಷ್ಠಾನಕ್ಕೆ ಸಿದ್ಧನಾದ ಪುರುಷನೊಬ್ಬ ಜೂರಿಚ್‌ನಲ್ಲಿ ಕಾಣಿಸಿಕೊಂಡ. ನಿಜವೆಂದರೆ, ತನ್ನ ತಾಯ್ನೆಲದ ಅರಸ ಜ಼ಾರ್‌ನ ಆಡಳಿತವನ್ನು ವಿರೋಧಿಸಿ, ದೇಶಭ್ರಷ್ಟಗೊಂಡು ಆತ ಸದ್ಯ ಜೂರಿಚ್‌ನಲ್ಲಿ ನೆಲೆಸಿ ಕ್ರಾಂತಿಯ ಸಂಘಟನೆಗೆ ಪೂರಕ ಕೆಲಸದಲ್ಲಿ ನಿರತನಾಗಿದ್ದ. ಮಾರ್ಕ್ಸ್ ಮತ್ತು ಏಂಜೆಲ್ಸ್‌ರ ಉಳಿದ ಕೃತಿಗಳಂತೆಯೇ ʼಪ್ರಣಾಳಿಕೆ’ ಕೂಡ ಆತನ ಆದ್ಯತೆಯ ಓದಾಗಿತ್ತು. ಇತಿಹಾಸದಲ್ಲಿ, ಮೊದಲಬಾರಿಗೆ ಮಾರ್ಕ್ಸ್‌ವಾದವನ್ನು ಆಧಾರವಾಗಿಟ್ಟು ಕೊಂಡು ಕಾರ್ಮಿಕವರ್ಗದ ಅಧಿಕಾರ ಸ್ಥಾಪಿಸುವ ಕುರಿತು ಚಿಂತನೆ ನಡೆಸಿದ್ದ ಈ ಕ್ರಾಂತಿಕಾರಿ ಮ್ಯಾನಿಫೆಸ್ಟೋದ ಸೊಬಗಿಗೆ ಮಾರು ಹೋಗಿದ್ದ. ವ್ಲಾದಿಮೀರ್‌ ಉಲ್ಯಾನೋವ್‌ (ಲೆನಿನ್‌ ಎಂಬ ಹೆಸರಿನಿಂದಲೇ ಪ್ರಖ್ಯಾತ), ಮಾರ್ಕ್ಸ್‌ವಾದವನ್ನು, ಕಮ್ಯೂನಿಸ್ಟ್‌ ಪ್ರಣಾಳಿಕೆಯ ಆಶಯವನ್ನು ತನ್ನ ನೆಲದ ವಸ್ತುಸ್ಥಿತಿಗೆ ಅನುವಾಗುವಂತೆ ವಿಸ್ತರಿಸಿ, ಅನುಷ್ಠಾನಗೊಳಿಸಲು ಯತ್ನಿಸಿದ ಶ್ರದ್ಧಾವಂತ ಓದುಗ. ತನ್ನ ನೆಲದ ಓದುಗರಿಗೆ ಈ ವಿಚಾರಗಳು ತಲುಪಲಿ ಎಂದು ತಕ್ಷಣವೇ ಅದರ ರಶ್ಯನ್‌ ಭಾಷೆಯ ಅನುವಾದದಲ್ಲೂ ತೊಡಗಿಕೊಂಡ. ಮುಂದೆ, ಅಕ್ಟೋಬರ್‌ ಕ್ರಾಂತಿಯ ಮೂಲಕ 1917ರಲ್ಲಿ ರಶ್ಯಾದಲ್ಲಿ ನಡೆದಿದ್ದು ಇತಿಹಾಸ. ಪ್ರಣಾಳಿಕೆ ಲೆನಿನ್‌ರಂಥ ಕ್ರಾಂತಿಕಾರಿಗಳನ್ನಲ್ಲದೆ, ’ಡಡಾಯಿಸಂ’ ಮುಂಚೂಣಿಯಲ್ಲಿದ್ದ ಕಲಾವಿದರನ್ನೂ ಆಕರ್ಷಿಸಿತು.

ಬತ್ತ ಬೆಳೆಯುವ ರೈತನ ಮಗನಾಗಿದ್ದ ಮಾವೊ ತ್ಸೆ ತುಂಗ್ ಕನ್ಫೂಷಿಯಸ್‌ ಶಾಲೆಯ ಬಾಯಿಪಾಠದ ಶಿಕ್ಷಣಪದ್ಧತಿಯಿಂದ ಬೇಸರಗೊಂಡು ಶಿಕ್ಷಣಕ್ಕೆ ವಿದಾಯ ಹೇಳಿ, ಚೀನಿ ಕಾದಂಬರಿ, ಪಾಶ್ಚಾತ್ಯ ಸಾಹಿತ್ಯ, ವೃತ್ತಪತ್ರಿಕೆಗಳನ್ನು ಓದುವುದರಲ್ಲಿ ಸುಖ ಕಂಡವನು. ಬೀಜಿಂಗ್‌ಗೆ ಸ್ಥಳಾಂತರಗೊಂಡಾಗ ಕ್ರಾಂತಿಕಾರಿಗಳು, ಬಂಡಾಯಗಾರರು ಸಂಗಾತಿಗಳಾದರು. ಆದರೆ, ಮಾವೋಗೆ ಲೆನಿನ್‌ನಂತೆ ಇಂಗ್ಲಿಶ್‌, ಜರ್ಮನ್‌ ಇತರ ಭಾಷೆಗಳ ಪರಿಚಯವಿರಲಿಲ್ಲ. 1903, 1908ರ ಸುಮಾರಿಗೆ ಪ್ರಣಾಳಿಕೆಯ ಚೂರುಪಾರು ಅನುವಾದ ಸಿಕ್ಕಿದ್ದವಾದರೂ ಪೂರ್ಣಪ್ರಮಾಣದ ಚೀನಿ ಅನುವಾದ ಲಭ್ಯವಾದುದು 1920ರ ಸುಮಾರಿಗೆ. ಮ್ಯಾನಿಫೆಸ್ಟೋದ ಪೂರ್ಣ ಓದು ಅತೃಪ್ತಿಯನ್ನೇ ನೀಡಲು ಕಾರಣ, ಅದಾಗಲೇ ಎಂಬತ್ತು ವರ್ಷಗಳ ಹಳೆಯ ಪಠ್ಯವಾಗಿತ್ತು. ಚೀನಾದ ಭೂಗೋಳಿಕತೆ, ಸಂಸ್ಕೃತಿಗೆ ವಿಚಾರಗಳು ಹೊಂದಿಕೆ ಆಗುವಂತಿರಲಿಲ್ಲ. ಆದರೆ, ಸತ್ವದಲ್ಲಿ ಮಾತ್ರ, ಎಲ್ಲವೂ ಸರಿಯಾಗಿಯೇ ಇತ್ತು. ಮಾವೋ ಅದನ್ನು ತನ್ನ ನೆಲಕ್ಕೆ ಒಗ್ಗಿಸಿ, ತನ್ನದೇ ಅನುಷ್ಠಾನ ವಿಧಾನಗಳನ್ನು ಕಂಡುಕೊಂಡ.

ಪ್ರಣಾಳಿಕೆಯ ಸತ್ವಕ್ಕೆ ಮಾರುಹೋದ ಇನ್ನೊಬ್ಬ ಶ್ರದ್ಧಾವಂತ ಓದುಗ: ಹೊ ಚಿ ಮಿನ್‌. ಉಗಿ ಹಡಗಿನಲ್ಲಿ ಕೆಲಸ ಮಾಡುತ್ತ ಇಡೀ ವಿಶ್ವವನು ಸುತ್ತಿದ್ದ ತರುಣ ಹೊ ಚಿ ಮಿನ್‌ ಪ್ಯಾರಿಸ್‌ನಲ್ಲಿ ತನ್ನ ರಾಜಕೀಯ ವಿಚಾರಗಳ ತಾಲೀಮು ನಡೆಸಿದ. ವಿಯೆಟ್ನಾಂ ಫ್ರೆಂಚರ ವಸಾಹತುವಾಗಿದ್ದರಿಂದ ಫ್ರೆಂಚ್‌ ಭಾಷೆಯಲ್ಲಿಯೇ ಮ್ಯಾನಿಫೆಸ್ಟೋ ಓದಿದ. ಮೊದಲ ಯುದ್ಧ ಮುಗಿಯುವ ವೇಳೆಗೆ ಮಾರ್ಕ್ಸ್‌ವಾದಿಯಾಗಿ ಬದಲಾಗಿದ್ದ! ಮ್ಯಾನಿಫೆಸ್ಟೋದಿಂದ ಪ್ರಭಾವಿತನಾಗಿ ವಿಯೆಟ್ನಾಂ ಸ್ವತಂತ್ರ ದೇಶವಾಗುವುದನ್ನು ಕನಸಿ, ಘೋಷಣಾಪತ್ರವನ್ನು ಬರೆದ. ಕ್ರಾಂತಿಯ ಕನಸನ್ನು ಸಾಕಾರಗೊಳಿಸಿ ತೋರಿಸಿದ.

ಹವಾನಾ ಸಿಗಾರ್‌ನ ಕ್ರಾಂತಿಕಾರಿ, ಕ್ಯೂಬಾದ ಫಿಡೆಲ್ ಕಾಸ್ಟ್ರೋ 1952ರ ಸುಮಾರಿಗೆ ತನ್ನ ಹರೆಯದಲ್ಲಿ ಕಮ್ಯೂನಿಸ್ಟ್‌ ಪ್ರಣಾಳಿಕೆ ಓದಿದ್ದಾಗಿ ಹೇಳಿಕೊಂಡಿದ್ದಾನೆ. ’ಎಂಥ ನುಡಿಗಟ್ಟು! ಎಂಥ ಸತ್ಯಗಳು!’ ಎಂಬ ಉದ್ಗಾರವೂ ಕಾಸ್ಟ್ರೋನದೆ! ಆತ ತನ್ನ ಗೆಳೆಯ ಚೇ ಗವೆರ ಮತ್ತಿತರ ಸಂಗಾತಿಗಳೊಂದಿಗೆ ಕ್ಯೂಬಾದಲ್ಲಿ ಸಾಧಿಸಿದ್ದನ್ನು ಎಲ್ಲರೂ ಬಲ್ಲರು. 2016ರಲ್ಲಿ ಕಾಸ್ಟ್ರೋನ ಮರಣದೊಂದಿಗೆ ಕಮ್ಯೂನಿಸ್ಟ್‌ ಪ್ರಣಾಳಿಕೆಯ ಶ್ರದ್ಧಾವಂತ ಓದುಗನ ಕೊನೆಯ ಕೊಂಡಿ ಕಳಚಿತು.

ಆದರೇನು? ಕಾಲದ ವಿಸ್ಮೃತಿಯಲ್ಲಿ ಧೂಳು ಕುಳಿತ ಈ ಪುಸ್ತಕವನ್ನು ಹೊಸ ತಲೆಮಾರಿನ ತರುಣರು (ಮಾರ್ಕ್ಸ್, ಏಂಜೆಲ್ಸ್‌, ಲೆನಿನ್‌, ಮಾವೋ, ಹೊ ಚಿ ಮಿನ್‌, ಫಿಡೆಲ್‌ ಕಾಸ್ಟ್ರೋರಂತೆಯೇ) ಒಂದುದಿನ ಹೊರ ತೆಗೆಯುವರು. ಅದರ ಮೇಲಿನ ಧೂಳನ್ನು ಮೆಲ್ಲನೆ ಒರೆಸಿ, ಒಂದೊಂದೇ ಅಕ್ಕರವನು ಓದತೊಡಗುವರು.

ಆಗ: ಹೊಸ ನೆಲ, ಹೊಸ ಶೂಲ ಕೆಂಪು ಕೆಂಪು..’

Photos courtesy: Wikipedia


ಕೇಶವ ಮಳಗಿ
ಕನ್ನಡದ ವರ್ತಮಾನ ಕಾಲದ ಬಹುಮುಖ್ಯ ಕಥೆಗಾರರು. ಟಾಲ್‌ಸ್ಟಾಯ್‌ ಮತ್ತು ಗಾರ್ಕಿ ಅವರಿಂದ ಪ್ರಭಾವಿತರಾದವರು. ಮುಖ್ಯವಾಗಿ ರಶ್ಯನ್‌ ಸಾಹಿತ್ಯದ ಬಗ್ಗೆ ಬಲವಾದ ಒಲವುಳ್ಳವರು. ಸಮಾಜಕ್ಕೆ ಸದಾ ಕಾಲ ಸಲ್ಲುವ ಬರಹಗಾರ. ‘ಕಡಲ ತೆರೆಗೆ ದಂಡೆ’, ‘ಮಾಗಿ ಮೂವತ್ತೈದು’, ‘ವೆನ್ನೆಲ ದೊರೆಸಾನಿ’, ‘ಹೊಳೆ ಬದಿಯ ಬೆಳಗು’ ಕಥಾ ಸಂಕಲನಗಳು ಹಾಗೂ ‘ಕುಂಕುಮ ಭೂಮಿ’, ‘ಅಂಗಧ ಧರೆ’ ಕಾದಂಬರಿಗಳು, ‘ಬೋರಿಸ್ ಪಾಸ್ತರ್‌ನಾಕ್: ವಾಚಿಕೆ’, “ನೀಲಿ ಕಡಲ ಹಕ್ಕಿ’ (ಕತೆಗಳು), ‘ಮದನೋತ್ಸವ’ (ಕಾದಂಬರಿ), ‘ಸಂಕಥನ’ (ಫ್ರೆಂಚ್ ಸಾಹಿತ್ಯ, ಸಮಾಜ, ಸಂಸ್ಕೃತಿ, ಸಾಹಿತ್ಯ ವಿಮರ್ಶೆ), ‘ಕಡಲಾಚೆಯ ಚೆಲುವೆ’ (ಫ್ರೆಂಚ್ ಕಥೆಗಳು), ಆಲ್ಬರ್ಟ್‌ ಕಾಮು (ತರುಣ ವಾಚಿಕೆ) ಇವು ಅನುವಾದಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಮಹತ್ತ್ವದ ಪ್ರಶಸ್ತಿಗಳು ಮಳಗಿ ಅವರನ್ನು ಅರಸಿ ಬಂದಿವೆ.
Tags: communist manifestocovid19fidel castrofriedrich engelsho chi minhindiaindia fights coronakarl marxkarnatakamavo jadangvladimir leninWorldworld fights corona
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ದಾಖಲೆ ಸಲ್ಲಿಸಲು ಪೂರೈಕೆ ಕಂಪನಿಗಳ ಮೀನಾ-ಮೇಷ; ತಯಾರಿಕೆ ಕಂಪನಿಗಳಿಂದಲೇ ನೇರವಾಗಿ ವ್ಯಾಕ್ಸಿನ್  ಖರೀದಿಗೆ ಮುಂದಾದ ಸರಕಾರ

ದಾಖಲೆ ಸಲ್ಲಿಸಲು ಪೂರೈಕೆ ಕಂಪನಿಗಳ ಮೀನಾ-ಮೇಷ; ತಯಾರಿಕೆ ಕಂಪನಿಗಳಿಂದಲೇ ನೇರವಾಗಿ ವ್ಯಾಕ್ಸಿನ್ ಖರೀದಿಗೆ ಮುಂದಾದ ಸರಕಾರ

Leave a Reply Cancel reply

Your email address will not be published. Required fields are marked *

Recommended

ಸುಂದರಲಾಲ ಬಹುಗುಣ: ಗಿರಿಶಿಖರ, ಮಣ್ಣು, ನೀರು, ಕಾಡುಮೇಡಿನ ಮೇಲೆ ಎಣಿ ಇಲ್ಲದ ಪ್ರೀತಿ ಮೂಡಿಸಿದ ಹಿರಿಯಜ್ಜ, ಹೃದಯದಿಂದ ಹಸಿರನ್ನು ನೋಡಿದ ದಾರ್ಶನಿಕ

ಸುಂದರಲಾಲ ಬಹುಗುಣ: ಗಿರಿಶಿಖರ, ಮಣ್ಣು, ನೀರು, ಕಾಡುಮೇಡಿನ ಮೇಲೆ ಎಣಿ ಇಲ್ಲದ ಪ್ರೀತಿ ಮೂಡಿಸಿದ ಹಿರಿಯಜ್ಜ, ಹೃದಯದಿಂದ ಹಸಿರನ್ನು ನೋಡಿದ ದಾರ್ಶನಿಕ

4 years ago
ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

ಸ್ಥಳ, ಸಮಯ, ದಿನ ಫಿಕ್ಸ್‌ ಮಾಡಿ: ಡಿಸಿಎಂ ಡಿಕೆಶಿ ಬಹಿರಂಗ ಚರ್ಚೆ ಸವಾಲ್ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ