ನಮ್ಮ ದೇಶದ ಪ್ರಧಾನಮಂತ್ರಿಯಾಗಿ ಮಣ್ಣಿನಮಗ ಎಚ್.ಡಿ.ದೇವೇಗೌಡರು ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ (ಜೂನ್ 1) 25 ವರ್ಷ. ಕನ್ನಡಿಗರ ಮಟ್ಟಿಗೆ ಇದು ಐತಿಹಾಸಿಕ ದಿನ. ನಮ್ಮನ್ನು ನಾವೇ ಗೌರವಿಸಿಕೊಳ್ಳುವ ಸಂದರ್ಭ. ತನ್ನಿಮಿತ್ತ ಗೌಡರ ಜತೆಗಿನ ನನ್ನ ನೆನಪೊಂದು ಇಲ್ಲಿ ಬಿಚ್ಚಿಕೊಂಡಿದೆ.
1994ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಎಚ್.ಡಿ.ದೇವೇಗೌಡರು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಜಿಲ್ಲಾ ಕೇಂದ್ರಗಳಲ್ಲಿ ʼಜನತಾ ದರ್ಶನʼ ಆರಂಭ ಮಾಡಿದ್ದ ಸಮಯ. ನಾನು ಆಗಷ್ಟೇ ಕೋಲಾರದ ʼಸಂಚಿಕೆʼ ಪತ್ರಿಕೆ ಸೇರಿದ್ದೆ. ಲಕ್ಷ್ಮೀಪತಿ ಕೋಲಾರ ನನ್ನ ಸಂಪಾದಕರು. ಸಿ.ಎಂ.ಮುನಿಯಪ್ಪ ಪ್ರಕಾಶಕರು.
ನಿಜಕ್ಕಾದರೆ ನನಗೆ ದಿನಾಂಕ ನೆನಪಿಲ್ಲ. ಆವತ್ತು ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ದೇವೇಗೌಡರ ಜನತಾ ದರ್ಶನ ಕಾರ್ಯಕ್ರಮ ಇತ್ತು. ಇಡೀ ಸರಕಾರವೇ ಅಲ್ಲಿತ್ತು. ಮಂತ್ರಿಗಳು, ಅಧಿಕಾರಿಗಳ ಜಾತ್ರೆಯೇ ಅಲ್ಲಿ ಸೇರಿತ್ತು. ಜಿಲ್ಲೆಯ ಉಸ್ತುವಾರಿ ಮಂತ್ರಿ ಸಿ.ಭೈರೇಗೌಡರು, ಚಿಂತಾಮಣಿಯ ಕೆ.ಎಂ.ಕೃಷ್ಣಾರೆಡ್ಡಿ, ಕೋಲಾರದ ಕೆ.ಶ್ರೀನಿವಾಸಗೌಡರು (ಅಗ ಅವರು ಮೊದಲ ಬಾರಿಗೆ ದಳದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈಗ ಕಾಂಗ್ರೆಸ್‌ನಲ್ಲಿದ್ದಾರೆ.) ಆಗ ಅವಿಭಜಿತ ಕೋಲಾರ ಜಿಲ್ಲೆಯಲ್ಲಿನ 12 ವಿಧಾನಸಭೆ ಕ್ಷೇತ್ರಗಳ ಪೈಕಿ ಶಿಢ್ಲಘಟ್ಟದಲ್ಲಿ ಕಾಂಗ್ರೆಸ್‌ನ ವಿ.ಮುನಿಯಪ್ಪ ಗೆದ್ದಿದ್ದು ಬಿಟ್ಟರೆ ಉಳಿದ ಒಂದೂ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗಳು ಗೆಲವು ಸಾಧಿಸಿರಲಿಲ್ಲ. ಬಾಗೇಪಲ್ಲಿಯಲ್ಲಿ ಕಮ್ಯುನಿಸ್ಟ್ ಪಕ್ಷದಿಂದ ಜಿ.ವಿ.ಶ್ರೀರಾಮರೆಡ್ಡಿ, ಕೆಜಿಎಫ್‌ನಲ್ಲಿ ಎಸ್.ರಾಜೇಂದ್ರನ್ ಅವರು ಭಾರತೀಯ ರಿಪಬ್ಲಿಕನ್ ಪಾರ್ಟಿಯಿಂದ ಗೆದ್ದಿದ್ದರು. ಚಿಕ್ಕಬಳ್ಳಾಪುರದಲ್ಲಿ ದಳದ ಕಟ್ಟಾಳುವಾಗಿದ್ದ ಕೆ.ಬಿ.ಪಿಳ್ಳಪ್ಪನವರ ಶಿಷ್ಯ ಶಿವಾನಂದ ಪಕ್ಷೇತರರಾಗಿ ಗೆದ್ದಿದ್ದರು. ಕೊನೆಗೆ, ಇವರೆಲ್ಲರೂ ಜನತಾದಳ ಸರಕಾರಕ್ಕೆ ಬೆಂಬಲವಾಗಿಯೇ (ವಿಷಯಾಧಾರಿತ) ನಿಂತಿದ್ದು ಬೇರೆ ಮಾತು. ಅಲ್ಲಿಗೆ ಇಡೀ ಅವಭಜಿತ ಕೋಲಾರ ಜಿಲ್ಲೆ ಕಾಂಗ್ರೆಸ್ ಮುಕ್ತ ಆಗುವುದಕ್ಕೆ ಶಿಡ್ಲಘಟ್ಟ ಮಾತ್ರ ತೊಡರುಗಾಲಾಯಿತು. ಈ ಭಾಗದಲ್ಲಿ ಆಗ ಜನತಾದಳದ ಪ್ರಭಾವ ಎಷ್ಟರಮಟ್ಟಿಗೆ ಇತ್ತೆಂಬುದನ್ನು ಊಹಿಸಬಹುದು. ನೇರವಾಗಿ ಹೇಳಬಹುದಾದರೆ, ದೇವೇಗೌಡರೆಂದರೆ ಇವತ್ತು ಮೋದಿ ಬಗ್ಗೆ ಜನರಿಗೆ ಎಷ್ಟು ಕ್ರೇಜ್ ಇದೆಯೋ ಅಗ ಗೌಡರ ಬಗ್ಗೆ ಅಷ್ಟೇ ಕ್ರೇಜ್ ಇತ್ತು.
ಇದಕ್ಕೆ ಸಾಕ್ಷೀಭೂತವಾಗಿ ಕ್ರೀಡಾಂಗಣದಲ್ಲಿ ಜನ ತುಂಬಿಹೋಗಿದ್ದರು. ೯೦% ರೈತರೇ ಸೇರಿದ್ದರು. ತಾವು ರೈತರು ಎಂದು ತೋರಿಸಿಕೊಳ್ಳಲು ಅವರು ಯಾರೂ ಹಸಿರು ಟವೆಲ್ ಭುಜದ ಮೇಲೆ ಹಾಕಿಕೊಂಡಿರಲಿಲ್ಲ. ನೈಜ ರೈತರಾಗಿದ್ದರು ಮತ್ತೂ ಜನತಾದಳದ ಅಪ್ಪಟ ಬೆಂಬಲಿಗರಾಗಿದ್ದರು.
ನನಗೆ ನೆನಪಿದ್ದಂತೆ ಗೌಡರು ಸುಮಾರು ಎರಡ್ಮೂರು ಗಂಟೆ ಕಾಲ ಅರ್ಜಿಗಳನ್ನು ಸ್ವೀಕರಿಸಿದರು. ಬಹುತೇಕ ಅರ್ಜಿಗಳು ಸ್ಥಳದಲ್ಲೇ ವಿಲೇವಾರಿಯಾದವು. ಜಿಲ್ಲಾಧಿಕಾರಿ ಸಂಜಯದಾಸ್ ಗುಪ್ತ (ಇವರು ನಮ್ಮ ರಾಜ್ಯದ ಮೊತ್ತ ಮೊದಲ ಐಟಿ ಇಲಾಖೆ ಕಾರ್ಯದರ್ಶಿ ಮತ್ತೂ ಮೇಲೂರು-ಮಳ್ಳೂರು ಬಳಿ ಬೃಹತ್ ಕೃಷಿ ಮೇಳ ಆಯೋಜಿಸಿದ್ದವರು.) ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮಂಜುಳಾ ಅವರಿಬ್ಬರನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ನೂರಾರು ಅರ್ಜಿಗಳ ಮೇಲೆ ಷರಾ ಬರೆದು ಅಲ್ಲೇ ಪರಿಹಾರ ಸೂಚಿಸಿ ಆದೇಶ ಹೊರಬೀಳುವಂತೆ ಮಾಡಿದ್ದರು. ಹೀಗೆ ಇಡೀ ಸರಕಾರವೇ ಜನರ ಬಳಿ ಬಂದಿತ್ತು, ಗೌಡರು ಅದರ ರೂವಾರಿ ಆಗಿದ್ದರು.
ಇನ್ನು, ಅರ್ಜಿ ವಿಲೇವಾರಿ ಮುಗಿದ ಮೇಲೆ ಗೌಡರ ಭಾಷಣ. ಮಂತ್ರಿಗಳು, ಜಿಲ್ಲೆಯ ಎಲ್ಲ ಶಾಸಕರು (ಆಗ ಪಕ್ಷ ರಾಜಕಾರಣ ಇವತ್ತಿನಷ್ಟು ಕೆಟ್ಟು ಹೋಗಿರಲಿಲ್ಲ. ಸಿಎಂ ಬಂದರೆ ಪಕ್ಷಾತೀತವಾಗಿ ಶಾಸಕರು ಗೌರವಿಸುತ್ತಿದ್ದರು..) ಅಧಿಕಾರಿಗಳು ವೇದಿಕೆ ಮೇಲೆ ಕೂತಿದ್ದರು. ಬಹುಶಃ ಅಂಥ ಬೃಹತ್ ವೇದಿಕೆಯನ್ನು ನಾನು ಕಂಡದ್ದು ಅದೇ ಮೊದಲು. ದೇವೇಗೌಡರು ಬಿಳಿ ಜುಬ್ಬಾಪಂಚೆ ಧರಿಸಿ ಇಡೀ ಸ್ಟೇಜಿನ ಆಕರ್ಷಣೆಯಾಗಿದ್ದರು. ಆ ಕ್ರೀಡಾಂಗಣದ ಉದ್ದಗಲಕ್ಕೂ “ದೇವೇಗೌಡ ಜಿಂದಾಬಾದ್” ಘೋಷಣೆ ಮಾರ್ದನಿಸುತ್ತಿತ್ತು. ಗೌಡರು ಮಾತಿಗೆ ನಿಂತರು.
ವೇದಿಕೆ ಮೇಲೆ ನೂರರ ಲೆಕ್ಕದಲ್ಲಿ ಕೂತಿದ್ದವರೆಲ್ಲರ ಹೆಸರೇಳದೆ ಒಂದ್ಹತ್ತು ನಾಯಕರ ಹೆಸರಷ್ಟೇ ಹೇಳಿ ಭಾಷಣಕ್ಕೆ ನಿಂತರು. ಕೃಷಿ, ಕೃಷಿಕರು, ನೀರಾವರಿ ಬಿಟ್ಟರೆ ಅವರ ಮಾತು ಬೇರೆಡೆಗೆ ಹೊರಳಿಲ್ಲ. ಅವರ ಮಾತುಗಳು ಹೇಗಿದ್ದವೆಂದರೆ, ಪಕ್ಕಾ ಗುರಿ ಇಟ್ಟು ಬಿಟ್ಟ ʼಮಿಸೈಲ್ʼಗಳಂತೆ ಚೆಂಗನೆ ಹಾರುತ್ತಿದ್ದವು. ಲಕ್ಷಲಕ್ಷ ಸಂಖ್ಯೆಯಲ್ಲಿ ಸೇರಿದ್ದ ಜನ ನಿಶ್ಯಬ್ದವಾಗಿ ಗೌಡರ ಮಾತುಗಳನ್ನು ಆಲಿಸುತ್ತಿದ್ದರು. ಅದರ ಮಧ್ಯೆ ತೂರಿಬಂದಿದ್ದು ಒಂದು ಪರಿಚಿತ ಕೂಗು…
“ಗೌಡರೇ, ನೀವೇನೋ ಕೃಷಿಕರ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ, ಮಂಗಳೂರಿನ ಬಳಿ ಬರುತ್ತಿರುವ ಕೊಜೆಂಟ್ರಕ್ಸ್ ವಿದ್ಯುತ್ ಸ್ಥಾವರ ಕರ್ನಾಟಕವನ್ನು ಒತ್ತೆ ಇಟ್ಟುಕೊಂಡು ರೈತರಿಗೆ ವಿದ್ಯುತ್ ಹಕ್ಕು ನಿರಾಕರಿಸುವ ಹಾಗೆ ಕಾಣಿಸುತ್ತಿದೆ. ಸಾವಿರಾರು ರೈತರು ಭೂಮಿ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಇದಕ್ಕೆ ನಿಮ್ಮ ಸರಕಾರ ಬೆಂಬಲಿಸುತ್ತಿದೆಯಾ?”. ಇಷ್ಟು ವಿಷಯವನ್ನೂ ಜೋರಾಗಿ ಕೂಗಿ ಕೇಳಿದ್ದು ಸಿಪಿಎಂನ ಯುವ ಮುಖಂಡ ಗಾಂಧೀನಗರದ ನಾರಾಯಣಸ್ವಾಮಿ ಎಂಬ ಸಿಂಪಲ್ಲಾದ ನೈಜ ಕಾಮ್ರೇಡ್.
ಆ ಕೂಗಿನ ತೀವ್ರತೆಗೆ ತಕ್ಕಂತೆ ಗೌಡರೂ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು. ಅವರು ಘರ್ಜಿಸಿದರು ಎನ್ನಬೇಕು ಅಥವಾ ಜೋರು ದನಿಯಲ್ಲಿ ಉತ್ತರಿಸಿದರೋ ಗೊತ್ತಿಲ್ಲ. ಆದರೆ ಅವರು ಹೇಳಿದ್ದು ಅಕ್ಷಶಃ ನೆನಪಿದೆ.
“ಒತ್ತೆ ಇಟ್ಟುಕೊಳ್ಳೋಕೆ ಕರ್ನಾಟಕವೇನು ಅವರಪ್ಪಂದಾ? ಈ ದೇವೇಗೌಡ ಬದುಕಿರುವ ತನಕ ಅದು ಕನಸಿನ ಮಾತು. ರೈತರ ಹಿತವನ್ನು ಬಲಿಕೊಡುವ ಪ್ರಶ್ನೆಯೇ ಇಲ್ಲ. ಕೂತ್ಕೊಳ್ರಿ..” ಎಂದು ಗುಡುಗಿದರು. ಜನರ ಶಿಳ್ಳೆಗೆ ಇಡೀ ಕ್ರೀಡಾಂಗಣ ಕೆಲ ನಿಮಿಷ ಕಾಲ ಮಾರ್ದನಿಸಿಬಿಟ್ಟಿತು. ಮಾರನೇ ದಿನ ಪತ್ರಿಕೆಗಳಲ್ಲಿ ಇದೊಂದು ಬಾಕ್ಸ್‌ನಷ್ಟು ಸುದ್ದಿಯಾಯಿತೇ ವಿನಾ ಲೀಡ್ ಆಗಲಿಲ್ಲ. ಅದರ ತೀವ್ರತೆಯ ಅರಿವು ಆವತ್ತಿನ ಸುದ್ದಿಮನೆಗಳಿಗೆ ತಿಳಿಯಲಿಲ್ಲವೇನೋ.
ಹೀಗೆ, ಮೊತ್ತ ಮೊದಲಿಗೆ ನಾನು ದೇವೇಗೌಡರನ್ನು ನೋಡಿದ್ದು. ಆಗಿನಿಂದಲೂ ನನ್ನ ಮೇಲೆ ಗೌಡರ ಪ್ರಭಾವ ಇದ್ದೇಇದೆ. ಇಂಥ ಗೌಡರು ಪ್ರಧಾನಮಂತ್ರಿಯಾಗಿ ದಿಲ್ಲಿಗೆ ಹೋಗುವಷ್ಟರಲ್ಲಿ ನಾನು ಬೆಂಗಳೂರಿಗೆ ಬಂದು ʼಸಂಯುಕ್ತ ಕರ್ನಾಟಕʼ ಸೇರಿಕೊಂಡೆ. ಕನ್ನಡದಲ್ಲಿ ʼಪ್ರಜಾವಾಣಿʼ, ʼಉದಯವಾಣಿʼಯನ್ನು ಹೊರತುಪಡಿಸಿದರೆ ಉಳಿದೆಲ್ಲ ಪತ್ರಿಕೆಗಳಲ್ಲಿ ಗೌಡರ ವಿರುದ್ಧ ಸುದ್ದಿಗಳು ಹೆಚ್ಚು ಬರುತ್ತಿದ್ದವು. ಅಲ್ಲೆಲ್ಲ ರಾಮಕೃಷ್ಣ ಹೆಗಡೆ ಅವರ ಪರ ಸುದ್ದಿಗಳು ಜಾಸ್ತಿಯೇ ಪ್ರಕಟವಾಗುತ್ತಿದ್ದವು. ಪತ್ರಿಕೆಗಳು ಕೂಡ ಗೌಡರ ಪಾಲಿಗೆ ಪ್ರತಿಪಕ್ಷದಲ್ಲಿದ್ದವು ಎಂಬುದು ನನಗೆ ಬಹಳ ಕಾಲ ಅರ್ಥವಾಗಲಿಲ್ಲ.
“ಸಭೆಗೆ ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಜನರ ಆಕ್ರೋಶ” ಎಂದೂ, “ದೇವೇಗೌಡ ವಿಮಾನ ಅರ್ಧ ಗಂಟೆ ವಿಳಂಬ” ಎಂಬಂಥ ನಕಾರಾತ್ಮಕ ಸುದ್ದಿಗಳೇ ವಿಜೃಂಭಿಸುತ್ತಿದ್ದ ಸಂದರ್ಭವದು. ಅದರಲ್ಲೂ ʼಸಂಯುಕ್ತ ಕರ್ನಾಟಕʼ ಪತ್ರಿಕೆಯಲ್ಲಿ ಈ ಪರಿ ಬರವಣಿಗೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಇತ್ತು. ಆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಕೆ.ಶಾಮರಾಯರು (ಆ ಪತ್ರಿಕೆಯಲ್ಲಿ ನನಗೆ ಕೆಲಸ ಕೊಟ್ಟವರು ಅವರೇ) ದೇವೇಗೌಡರ ಪಾಲಿಗೆ ಅಕ್ಷರಶಃ ಪ್ರತಿಪಕ್ಷ ನಾಯಕರೇ ಆಗಿಬಿಟ್ಟಿದ್ದರು. ಗೌಡರ ವಿರುದ್ಧ ಸುದ್ದಿಗಳು ಹೀಗೆಯೇ ಬರಬೇಕು, ಬರಿಯಬೇಕು ಎಂದು ಅವರೇ ಸ್ವತಃ ಡಿಕ್ಟೇಟ್ ಮಾಡುತ್ತಿದ್ದರು. ಸಂಪಾದಕ ಎನ್.ವಿ.ಜೋಶಿ ಅವರಿಗೆ ʼಹೀಗೆ ಎಡಿಟೋರಿಯಲ್ ಬರೆಯಬೇಕು. ಗೌಡರ ವಿರುದ್ಧ ಇಂಥದ್ದೇ ಪಾಯಂಟ್‌ಗಳು ಇರಬೇಕು” ಎಂದು ಸೀರಿಯಸ್ಸಾಗಿ ಸೂಚಿಸಿ ಹೇಳುತ್ತಿದ್ದರು.
ಬೆಳಗ್ಗೆ ಎದ್ದು ಪತ್ರಿಕೆ ಓದಿದರೆ, ಹನ್ನೆರಡು ಪುಟಗಳ ಪತ್ರಿಕೆಯಲ್ಲಿ ಕೊನೆಪಕ್ಷ 50% ಸುದ್ದಿಗಳು ಲೇಖನಗಳು ದೇವೇಗೌಡರ ವಿರುದ್ಧವೇ ಇರುತ್ತಿದ್ದವು. ವಿಪರ್ಯಾಸವೆಂದರೆ, ರಾಮಕೃಷ್ಣ ಹೆಗಡೆ ಮತ್ತು ಜೀವರಾಜ ಆಳ್ವ ಸುದ್ದಿಗಳು ಭರ್ತಿ ಮಿಂಚುತ್ತಿದ್ದವು. ಅಂಥ ಸುದ್ದಿಗಳನ್ನು ಕೆಲವರೇ ನಿರ್ದಿಷ್ಟವಾಗಿ ಬರೆಯುತ್ತಿದ್ದರು. ʼಸಂಯುಕ್ತ ಕರ್ನಾಟಕʼ ಪತ್ರಿಕೆ ಹೀಗೆ ನೇರವಾಗಿ ಗೌಡರ ವಿರುದ್ಧ ತೊಡೆ ತಟ್ಟಿದರೆ ಮತ್ತೊಂದು ಪತ್ರಿಕೆ ರೇಷ್ಮೆಶಾಲುವಿನಲ್ಲಿ ಕಲ್ಲುಸುತ್ತಿ ಹೊಡೆಯುವಂತೆ ನಾಜೂಕಾಗಿ ಗೌಡರ ವಿರುದ್ಧ ಹರಿಹಾಯುತ್ತಿತ್ತು. ಅಲ್ಲಿಗೆ ನಮ್ಮ ಪೀಳಿಗೆ ಪತ್ರಿಕೋದ್ಯಮಕ್ಕೆ ಬರುವಷ್ಟೋತ್ತಿಗೆ ಪೇಪರ್ ಆಫೀಸ್‌ಗಳು ಪಾರ್ಟಿ ಆಫೀಸ್‌ಗಳಾಗಿ ಬದಲಾಗುವುದಕ್ಕೆ ಹೊರಟು ನಿಂತಿದ್ದವು. ಆಮೇಲೆ ಬಿಜೆಪಿ ಪ್ರವರ್ಧಮಾನಕ್ಕೆ ಬಂದಂತೆಲ್ಲ ಈ ಪ್ರಕ್ರಿಯೆ ತೀವ್ರವಾಗಿ, ವೇಗವಾಗಿ ನಡೆಯಿತು. ಈಗಿನ ಸಂದರ್ಭದಲ್ಲಂತೂ ಪಕ್ಷದ ಕಚೇರಿಗೂ ಪಾರ್ಟಿ ಆಫೀಸ್‌ಗಳಿಗೂ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಹಿಂದೆ ರಾಜಾಶ್ರಯದಲ್ಲಿ ಪಂಡಿತರು ಇದ್ದಂತೆ, ಈಗ ರಾಜಕೀಯದ ಆಶ್ರಯದಲ್ಲಿ ಪತ್ರಿಕೋದ್ಯಮವಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ದೇವೇಗೌಡರ ಜೀವಿತ ಕಾಲದಲ್ಲಿಯೇ ಜರಕು ಹೊಡೆಯುತ್ತಿದೆ.
ಗೌಡರ ಸಂದರ್ಶನ ಮತ್ತು ನನ್ನ ವರ್ಗಾವಣೆ
ಗೌಡರ ಬಗ್ಗೆ ಮತ್ತೂ ಬರೆಯಲಿಕ್ಕೆ ಏನಿಲ್ಲ. ಎಲ್ಲರಿಗೂ ಗೊತ್ತಿದ್ದದ್ದೇ. ಆಮೇಲೆ ಕೆಲ ಸಲ ಅವರನ್ನು ಮುಖತಃ ಭೇಟಿಯಾದರೂ ಅದು ವರದಿಗಾರಿಕೆಗೆ ಮಾತ್ರ ಸೀಮಿತವಾದದ್ದು. ಆದರೆ, 1999ರ ವಿಧಾನಸಭೆ ಚುನಾವಣೆ ಹೊತ್ತು. ನಾನು ತುಮಕೂರಿನಲ್ಲಿ ʼಸಂಯುಕ್ತ ಕರ್ನಾಟಕʼ ಪತ್ರಿಕೆ ಜಿಲ್ಲಾ ವರದಿಗಾರನಾಗಿದ್ದೆ. ಶಾಮರಾಯರು ನನ್ನನ್ನು ವರ್ಗ ಮಾಡಿದ್ದರು. ಅದೇ ಹೊತ್ತಿನಲ್ಲಿ ದಿನೇಶ್ ಅಮೀನ್‌ಮಟ್ಟು ಅವರು ಆ ಜಿಲ್ಲೆಯ ʼಪ್ರಜಾವಾಣಿʼ ವರದಿಗಾರರಾಗಿದ್ದರು. ಇಂಥ ಹೊತ್ತಿನಲ್ಲಿ ನಮಗೆ ಸುದ್ದಿ ಮಿಸ್ ಆಗುವಂತಿಲ್ಲ. ಅಮೀನಮಟ್ಟರೋ ಆ ಕಾಲಕ್ಕೆ ಪಳಗಿದ ಹುಲಿ. ಸಣ್ಣ ಸುದ್ದಿಯನ್ನೂ ಅವರಲ್ಲಿ ಕೇಳಲಿಕ್ಕೆ ಭಯವಿತ್ತು. ಆದರೆ, ಮಾರ್ಗದರ್ಶನವಿತ್ತು. ಇಂಥ ವೇಳೆಯಲ್ಲೇ ಗೌಡರು ಪ್ರಚಾರಕ್ಕೆ ತುಮಕೂರಿಗೆ ಬಂದು ಇಡೀ ದೀನ ಪ್ರಚಾರ ಕೈಗೊಂಡು ಸಂಜೆ ಹೊತ್ತಿಗೆ ಸಿ.ಎನ್.ಭಾಸ್ಕರಪ್ಪ ಅವರ ಮನೆಯಲ್ಲಿದ್ದರು. ನಾನು ಆಟೋ ಹತ್ತಿ ಅವರ ಮನೆ ತಲುಪಿದ ಸಮಯಕ್ಕೆ ಹೊರಗೆ ಕಾರ್ಯಕರ್ತರು, ಮುಖಂಡರ ಜಾತ್ರೆಯೇ ಇತ್ತು. ಒಳಗೆ ಭಾಸ್ಕರಪ್ಪ ಅವರ ಭುಜದ ಕೈಹಾಕಿ ಗೌಡರು ಏನನ್ನೋ ಹೇಳುತ್ತಿದ್ದರು.
ಮನೆಯೊಳಕ್ಕೆ ಎಂಟ್ರಿ ಕೊಟ್ಟವನೇ “ನಮಸ್ಕಾರ ಸರ್” ಅಂದೆ. “ಯಾರಪ್ಪ ನೀನು” ಕೇಳಿದರು ಗೌಡರು. “ಸರ್, ಚನ್ನಕೃಷ್ಣ ಅಂತ, ಸಂಯುಕ್ತ ಕರ್ನಾಟಕ ರಿಪೋರ್ಟರ್” ಅಂದೆ. “ಐದು ನಿಮಿಷ” ಎಂದರು ಗೌಡರು. ನಾನು ತುಸು ದೂರಕ್ಕೆ ಸರಿದು ನಿಂತೆ.
ಮಾತು ಮುಗಿಸಿ ಬಂದವರೇ “ಏನ್ ಕೇಳಪ್ಪ ನಿಂದು” ಎಂದರು. ಮಾತು ಆರಂಭಿಸುವುದಕ್ಕೆ ಮೊದಲು “ಶಾಮರಾಯರು ಹೇಗಿದ್ದಾರಪ್ಪ” ಎಂದು ಕೇಳಿದರು. ನಾನು “ಚೆನ್ನಾಗಿದ್ದಾರೆ ಸರ್” ಎಂದೆ. ಒಂದು ಕಾಲದಲ್ಲಿ ತಮ್ಮ ವಿರುದ್ಧ ವಾಚಾಮಗೋಚರ ಬರೆಸುತ್ತಿದ್ದ ಶಾಮರಾಯರ ಬಗ್ಗೆ ವಿಚಾರಿಸುವಾಗ ಗೌಡರಲ್ಲಿ ಹಳೆಯ ಬೇಸರ ಇತ್ತಾ ಅನ್ನುವುದು ನನಗಂತೂ ಅರಿವಿಗೆ ಬರಲಿಲ್ಲ. ಇಪ್ಪತ್ತು ನಿಮಿಷ ಮಾತನಾಡಿದರು. “ನಿಮಗೆ ಗೆಲ್ಲಲು ತುಮಕೂರು ಜಿಲ್ಲೆಯಲ್ಲಿ ಎಷ್ಟು ಅವಕಾಶವಿದೆ. ಹೆಗಡೆ ಮತ್ತು ಬಿಜೆಪಿಯ ಅಡ್ವಾಣಿ ಅವರ ಗಾಳಿ ಜೋರಿದೆ. ಜನತಾದಳ ಒಡೆದಿದೆ.” ಎಂದು ಕೇಳಿದೆ.
ತಮ್ಮ ಎಂದಿನ ಶೈಲಿಯಲ್ಲಿ ಎರಡೂ ಕೈಗಳನ್ನು ಮೇಲೆತ್ತಿ ಒಮ್ಮೆ ಆಕಳಿಸಿ, “ನಾವು ಗೆಲ್ಲಬೇಕೆಂದು ಹೋರಾಟ ಮಾಡುತ್ತಿದ್ದೇವೆ. ನಮ್ಮನ್ನು ಸೋಲಿಸಬೇಕೆಂದು ಅವರೂ ಹೋರಾಟ ನಡೆಸುತ್ತಿದ್ದಾರೆ.” ಎಂದರು ಅವರು. “ಅಪ್ಪಾಜಿ ಹೇಳಿದ್ದೆಲ್ಲ ನಿಮ್ಮ ಪತ್ರಿಕೆಯಲ್ಲಿ ಬರುತ್ತೇನಪ್ಪಾ?” ಎಂದು ಮಧ್ಯ ಕೇಳಿಬಿಟ್ಟರು ಭಾಸ್ಕರಪ್ಪ. ನನಗೆ ಅನಿರೀಕ್ಷಿತ ಟಾಂಗ್ ಇದು. ನಿರುತ್ತರನಾಗಿದ್ದೆ. ಯಾರೋ ಒಬ್ಬರು ಕಾಫಿ ತಂದುಕೊಟ್ಟರು. ಅದು ಮುಗಿಯುವ ಹೊತ್ತಿಗೆ ಗೌಡರ ಮುಖದಲ್ಲಿ ನಗು ಮರಳಿತ್ತು. ನಾನು ಕೋಲಾರದ ಜನತಾದರ್ಶನ ದೃಶ್ಯವನ್ನು ನೆನಪಿಸಿದೆ. ನನ್ನ ಭುಜದ ಮೇಲೆ ಕೈ ಇಟ್ಟು ಮುಖವಿಡೀ ಅರಳಿಕೊಳ್ಳುವಂತೆ ಅಗಾಧ ನಗೆ ಬೀರಿದರು. ನನಗೊಂದು ಧನ್ಯತೆ. ಉಳಿದದ್ದು ಮಾಜಿ ಪ್ರಧಾನಿಯನ್ನು ಸಂದರ್ಶಿಸಿದೆ ಎಂಬ ಸಂತೃಪ್ತಿ.
ಅಲ್ಲಿಂದ ಹೊರಟು ಬಂದ ಮೇಲೆ ಅರ್ಧ ಗಂಟೆಯಲ್ಲಿ ಇಡೀ ಸಂದರ್ಶನವನ್ನು ಮೂರು ಎ೪ ಹಾಳೆಗಳಲ್ಲಿ ತಪ್ಪಿಲ್ಲದೆ ಬರೆದು ಬೆಂಗಳೂರು ಕಚೇರಿಗೆ ಫ್ಯಾಕ್ಸ್ ಮಾಡಿದೆ. ಜತೆಗೆ, ಜಂಟಿ ಸಂಪಾದಕರಾಗಿದ್ದ ಗುಂಡಾಭಟ್ಟರಿಗೆ ಫೋನ್ ಮಾಡಿ ಹೇಳಿದೆ. “ಗೌಡರನ್ನು ಇಂಟರ್ವ್ಯೂ ಮಾಡಲಿಕ್ಕೆ ರಾಯರು ಹೇಳಿದ್ರೇನೋ?” ಎಂದು ಪ್ರಶ್ನಿಸಿದರು. “ಇಲ್ಲ ಸರ್” ಎಂದೆ. “ದಡ್ಡ” ಎಂದು ಪೋನ್ ಇಟ್ಟರು. ಬೆಳಗ್ಗೆ ಪೇಪರ್‌ನಲ್ಲಿ ಗೌಡರ ಸಂದರ್ಶನ ಪ್ರಕಟವಾಗಲಿಲ್ಲ. ಅಲ್ಲದೆ, ಅವರ ಬಹಿರಂಗ ಪ್ರಚಾರದ ರೆಗ್ಯೂಲರ್ ಸುದ್ದಿಗಳು ಬಂದಿರಲಿಲ್ಲ. ನನಗೆ ಎಡಗಣ್ಣು ಕಂಪಿಸಿದ ಹಾಗಾಯಿತು. ಕೆಲಸ ಹೋಯಿತು ಅಂದುಕೊಂಡೆ. ಮತದಾನದ ದಿನ ವಾರ್ತಾ ಇಲಾಖೆ ವ್ಯಾನಿನಲ್ಲಿ ಜಿಲ್ಲೆಯಲ್ಲ ಸುತ್ತಿದ ಮೇಲೆ ಸಂಜೆ ೫ ಗಂಟೆ ಹೊತ್ತಿಗೆ ಸುದ್ದಿ ಕಳಿಸಿ ʼಸೊಗಡುʼ ಪತ್ರಿಕೆಯಲ್ಲಿದ್ದ ಚಂದ್ರಮೌಳಿ ಜತೆ ಕಾಫಿ ಹೀರಿ ನಾನು ಮೂರು ತಿಂಗಳಿಂದ ಉಳಿದುಕೊಂಡಿದ್ದ ದ್ವಾರಕಾ ಹೋಟೆಲ್‌ಗೆ ಬಂದೆ. ಅಷ್ಟರಲ್ಲಿ ನಮ್ಮ ಇನ್ನೊಬ್ಬ ವರದಿಗಾರ ರಾಧಾಕೃಷ್ಣ ಅಂತ ಇದ್ದರು. ಅವರು ಹುಡುಕಿಕೊಂಡು ಬಂದು, “ಚನ್ನಕೃಷ್ಣ, ಗುಂಡಾಭಟ್ಟರು ನಿಮಗೆ ಕಾಲ್ ಮಾಡಲು ಹೇಳಿದ್ದಾರೆ, ಮಾಡಿ” ಎಂದು ತಿಳಿಸಿದರು.
ನಾನು ಅದೇ ಹೋಟೆಲ್‌ನಲ್ಲೇ ಇದ್ದ ಕಾಯಿನ್ ಬೂತ್‌ನಿಂದ ಭಟ್ಟರಿಗೆ ಕಾಲ್ ಮಾಡಿದೆ. “ಚನ್ನಕೃಷ್ಣ, ನಿನ್ನನ್ನ ರಾಯರು ಮೈಸೂರಿಗೆ ಟ್ರಾನ್ಸ್‌ಫರ್ ಮಾಡಿದ್ದಾರೆ. ನಾಳೇನೆ ಹೋಗಿ ರಿಪೋರ್ಟ್ ಮಾಡಿಕೋ” ಎಂದುಬಿಟ್ಟರು. ನಾನು ಶಾಮರಾಯರ ಪಾಲಿಗೆ ʼಮೋಸ್ಟ್ ವಾಂಟೆಡ್ʼ ಆಗಿಬಿಟ್ಟಿದ್ದೆ ಅನ್ನುವುದನ್ನು ತಿಳಿಯಲು ಅಷ್ಟು ಸಾಕಾಯಿತು. ನಾನು ಕೂಡಲೇ ಹೋಟೆಲ್ ರೂಂ ಖಾಲಿ ರಾತ್ರಿ ಹತ್ತರ ಹೊತ್ತಿಗೆ ಬೆಂಗಳೂರಿಗೆ ಬಂದೆ. ಎಂದಿನಂತೆ ನನ್ನ ಸಹಪಾಠಿ ನಟರಾಜ, ಹಿರಿಯ ಸಹೋದ್ಯೋಗಿ ಸನತ್‌ಕುಮಾರ ಬೆಳಗಲಿ ಜತೆ ಸಂಪಂಗಿರಾಮ ನಗರದ ರೂಮಿನಲ್ಲಿ ರಾತ್ರಿ ಹನ್ನೆರಡರ ತನಕ ಬೈಠಕ್ ಮಾಡಿ, ಬೆಳಗ್ಗೆ ಐದಕ್ಕೆ ಎದ್ದು ಮೈಸೂರಿಗೆ ಹೊರಟರೆ, ನಾನು ಮಧ್ಯಾಹ್ನ ಮೈಸೂರಿನ ಲ್ಯಾನ್ಸ್‌ಡೌನ್ ಬಿಲ್ಡಿಂಗ್‌ನಲ್ಲಿದ್ದ ʼಸಂಕʼ ಕಚೇರಿ ಮುಟ್ಟುವಷ್ಟೊತ್ತಿಗೆ ನನ್ನ ಟ್ರಾನ್ಸ್‌ಫರ್ ಆದೇಶಪತ್ರ ಅಲ್ಲಿಗೆ ತಲುಪಿತ್ತು. ಜಯರಾಮ ಎಂಬ ಕಚೇರಿ ಸಹಾಯಕ ದೇಶಾವರಿಯಾಗಿ ದೀರ್ಘವಾದ ನಗೆಬೀರಿ ಆ ಪತ್ರ ಕೊಟ್ಟಾಗ ನನಗೆ ತಕ್ಷಣ ನೆನಪಿಗೆ ಬಂದಿದ್ದು ತುಮಕೂರಿನ ಭಾಸ್ಕರಪ್ಪ ಅವರ ಮನೆಯಲ್ಲಿ ದೇವೇಗೌಡರು ಬೀರಿದ ನಗೆ ಮತ್ತು ನಾನು ಮಾಡಿದ ಅವರ ಸಂದರ್ಶನ. ನನ್ನ ವೃತ್ತಿಜೀವನದಲ್ಲಿ ಗೌಡರ ಅಪ್ರಕಟಿತ ಸಂದರ್ಶನವೊಂದು ಇಪ್ಪತ್ತೆರಡು ವರ್ಷವಾದರೂ ನನ್ನಲ್ಲಿ ಹೂತಿಟ್ಟ ಹೊಗೆಯಂತಿದೆ.
ಕೊನೆಯದಾಗಿ, ಆ ಹಿರಿಯರಿಗೆ ವಿನಮ್ರ ನಮನಗಳು ಹಾಗೂ ಪ್ರಧಾನಮಂತ್ರಿಗಳಾಗಿ ಪ್ರಮಾಣ ಸ್ವೀಕಾರ ಮಾಡಿದ ʼರಜತ ಮಹೋತ್ಸವʼದ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕ ಶುಭಾಶಯಗಳು.