by Ra Na Gopala Reddy Bagepalli
ಬಾಗೇಪಲ್ಲಿ: ಸಕಾಲಕ್ಕೆ ಮಳೆ ಬಾರದೆ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಾಲಕಾಲಕ್ಕೆ ಮಳೆ ಬಂದು ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಾಗೇಪಲ್ಲಿ ತಾಲೂಕು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಹೇಳಿದರು.
ಬಾಗೇಪಲ್ಲಿ ಪಟ್ಟಣದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ನಡೆದ 2021-22ನೇ ಸಾಲಿನ ಮುಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಇಲಾಖೆಯಿಂದ ದೊರೆಯುವ ಎಲ್ಲಾ ಪರಿಕರಗಳನ್ನು ರೈತರ ಅಗತ್ಯಕ್ಕನುಗುಣವಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು. ಮಳೆಯ ವಿಳಂಬವನ್ನು ಎದುರಿಸುತ್ತಿರುವ ರೈತರು ಬೀಜ ಗೊಬ್ಬರಕ್ಕಾಗಿ ತೊಂದರೆ ಅನುಭವಿಸಬಾರದು ಹಾಗೂ ಕೃಷಿ ಇಲಾಖೆ ಸೌಲಭ್ಯಗಳು ರೈತರಿಗೆ ಸರಳವಾಗಿ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಬಾಗೇಪಲ್ಲಿ ತಾಲ್ಲೂಕು ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ ಮಾತನಾಡಿ, ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆಯ ಅಭಾವವಿರುವ ಕಾರಣ ರೈತರು ಬೆಳೆಗಳಿಗೆ ಬೆಳೆವಿಮೆ ಕಡ್ಡಾಯವಾಗಿ ಮಾಡಿಸಬೇಕು. ಸಾವಯವ ಕೃಷಿಯ ಪದ್ಧತಿ ಆಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸದೃಢರಾಗಲು ಸಲಹೆ ನೀಡಿದರು. ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗುತ್ತಿದ್ದು ಆದರ ಅನುಸಾರ ರಸಗೊಬ್ಬರವನ್ನು ಬಳಕೆ ಮಾಡಬೇಕು, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗಿದದ್ದು, ಯಾವದೇ ರೀತಿ ಕೊರೆತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಬೇಕಾಗುವಷ್ಟು ರಸಗೊಬ್ಬರದ ದಾಸ್ತಾನು ಇದ್ದು, ಯಾವುದೇ ರೀತಿ ರಸಗೊಬ್ಬರದ ಕೊರತೆ ಇರುವುದಿಲ್ಲವೆಂದರು.
ಬಾಗೇಪಲ್ಲಿ ತಾಲೂಕಿನಾದ್ಯಂತ ಬಾಗೇಪಲ್ಲಿ ಕಸಬಾ, ಗೂಳೂರು, ಮಿಟ್ಟೇಮರಿ ಮತ್ತು ಚೇಳೂರು ಕೇಂದ್ರಗಳನ್ನು ತೆರೆದು ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಬಾಗೇಪಲ್ಲಿ ಪಟ್ಟಣದ ಆರಕ್ಷಕ ವೃತ್ತ ನಿರೀಕ್ಷಕ ರಾಜು, ಗೂಳೂರು ಜಿಲ್ಲಾ ಪಂಚಾಯತಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ಕೃಷಿ ಇಲಾಖೆ ಸಿಬ್ಬಂದಿಗಳಾದ ಹರೀಶ್ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.