photos courtesy: Wikipedia
ಅಪ್ಪನ ಮಾತಿಗೆ ಕಟ್ಟುಬಿದ್ದು ಪಾದ್ರಿಯಾಗಲು ಹೊರಟಿದ್ದ ಬಿಸಿರಕ್ತದ ಯುವಕನೊಬ್ಬ ಸಮಾಜವಾದಿ ನಾಯಕನಾಗಿ ಬೆಳೆದ ರೋಚಕ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ ರಾವ್ ಹವಲ್ದಾರ್ . ಅಂದಹಾಗೆ ಆ ಯುವಕ ಜಾರ್ಜ್ ಫೆರ್ನಾಂಡೀಸ್. ನಮ್ಮ ಮಂಗಳೂರಿನಲ್ಲಿ ಜನ್ಮವೆತ್ತ ಧೀಮಂತ ವ್ಯಕಿ. ಇಂದು (ಜೂನ್ 3) ಅವರ 91ನೇ ಜನ್ಮದಿನ.
ಪುತ್ರ ಜಾರ್ಜ್ ಫೆರ್ನಾಂಡೀಸ್ ಪಾದ್ರಿ ಆಗಬೇಕೆಂಬ ಮಹದಾಸೆ ತಂದೆ ಜಾನ್ ಫೆರ್ನಾಂಡಿಸ್ ಅವರದ್ದು. ಅದಕ್ಕಾಗಿ 1948ರಲ್ಲಿ ಧರ್ಮಧೀಕ್ಷೆ ಪಡೆಯುವಂತೆ ಬೆಂಗಳೂರಿಗೆ ಕಳುಹಿಸಿದ್ದರು. ಜಾರ್ಜ್ ಮನಸ್ಥಿತಿಗೆ ಸನ್ಯಾಸ ಒಗ್ಗಲಿಲ್ಲ. ಅವರೊಳಗೆ ಅದಾಗಲೇ ಸಮಾಜವಾದಿ ಚಿಂತನೆಗಳು ಮೊಳೆತಿದ್ದವು.
ಬೆಂಗಳೂರು ಬಿಟ್ಟು ಮಂಗಳೂರಿಗೆ ಬಂದ ಜಾರ್ಜ್ ಅವರನ್ನು ಅಪ್ಪ ಮನೆಗೆ ಸೇರಿಸಿಕೊಳ್ಳಲಿಲ್ಲ. ಧರ್ಮದ್ರೋಹ ಮಾಡಿರುವುದಾಗಿ ಹೊರಹಾಕಿದರು. ಮಂಗಳೂರು ಪೇಟೆಯ ಸೆಂಟ್ರಲ್ ಮೈದಾನದ ಬಳಿಯ ಉದ್ಯಾನದಲ್ಲಿ ಮಲಗಿದ್ದ ಜಾರ್ಜ್, ಸಮಾಜವಾದಿ ಧುರೀಣ ಅಮ್ಮೆಂಬಳ ಬಾಳಪ್ಪನವರ ಕಣ್ಣಿಗ ಬಿದ್ದರು. ಅಂದಿನಿಂದ ಅವರ ಬದುಕು ಹೊಸ ತಿರುವು ಪಡೆಯಿತು.
ಬಾಳಪ್ಪ ಅವರಿಗೆ ಜಾರ್ಜ್ ಪರಿಚಯವಿತ್ತು. ಮನೆಬಿಟ್ಟು ಬಂದಿದ್ದ ಈ ಯುವಕನನ್ನು ಜತೆಯಲ್ಲಿ ಕರೆದೊಯ್ದು ಬೆಳೆಸಿದರು. ಡಾ.ಕೆ.ನಾಗಪ್ಪ ಆಳ್ವ ಹಾಗೂ ಸಮಾಜವಾದಿಗಳ ಒಡನಾಟ ಸಿಕ್ಕಿತು. ಫೆಲಿಕ್ಸ್ ಪೈ ಬಜಾರಿನಲ್ಲಿ ನಡೆಯುತ್ತಿದ್ದ ಕಾರ್ಮಿಕರ ಪರ ಹೋರಾಟಗಳು ಸೆಳೆದವು. ಪತ್ರಿಕೋದ್ಯಮದತ್ತಲೂ ಆಸಕ್ತಿ ಬೆಳೆಯಿತು. ಹೋಟೆಲ್ ಕಾರ್ಮಿಕರ ಪರ ಹೋರಾಟಗಳನ್ನು ನಡೆಸುತ್ತ ಕಾರ್ಮಿಕ ನಾಯಕನಾಗಿ ಬೆಳೆಯತೊಡಗಿದರು.
ಮಂಗಳೂರಿನಿಂದ ಮುಂಬಯಿಗೆ ಬಂದರು
1950ರ ಸುಮಾರಿಗೆ ಮುಂಬಯಿಯಲ್ಲಿ ಕಾರ್ಮಿಕ ಹೋರಾಟಗಳು ಜೋರಾಗಿದ್ದವು. ಆ ಕಾಲಕ್ಕೆ ಮಂಗಳೂರು ಮೂಲದ ಪಿ.ಡಿ.ಮೆಲ್ಲೋ ಬಹುದೊಡ್ಡ ನಾಯಕನಾಗಿ ಗುರುತಿಸಿಕೊಂಡಿದ್ದರು. ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕಲು ಅಂದಿನ ಗೃಹ ಸಚಿವ ಮೊರಾರ್ಜಿ ದೇಸಾಯಿ ಅವರು ಡಿಮೆಲ್ಲೋ ಸೇರಿ ನಾಲ್ವರು ಹೋರಾಟಗಾರರನ್ನು ಗಡೀಪಾರು ಮಾಡಿಸಿದರು.
ಮಂಗಳೂರಿಗೆ ಬಂದ ಡಿಮೆಲ್ಲೊ ಇಲ್ಲಿಯೂ ಕಾರ್ಮಿಕ ಚಳುವಳಿಗಳಿಗೆ ಜೀವ ತುಂಬಿದರು. ಮೋಟಾರು ಸಾರಿಗೆ ನೌಕರರ ಸಂಘ ಕಟ್ಟಿಕೊಂಡು ಚಾಲಕರು, ನಿರ್ವಾಹಕರ ಪರವಾಗಿ ಮುಷ್ಕರ ಆರಂಭಿಸಿದರು. ಈ ವೇಳೆ ಡಿಮೆಲ್ಲೊ ಅವರಿಗೆ ಜಾರ್ಜ್ ಪರಿಚಯವಾಗಿ ಅವರೊಳಗಿದ್ದ ಶಕ್ತಿಯ ಅರಿವಾಯಿತು. ಗಡೀಪಾರು ಅವಧಿ ಮುಗಿಸಿ ಡಿಮೆಲ್ಲೊ ಮುಂಬಯಿಗೆ ತೆರಳಿದ ಬಳಿಕ ಅಮ್ಮೆಂಬಳ ಬಾಳಪ್ಪನವರು ಜಾರ್ಜ್ ಅವರನ್ನು ಡಿಮೆಲ್ಲೊ ಗರಡಿಗೆ ಕಳುಹಿಸಿಕೊಟ್ಟರು. ಡಿಮೆಲ್ಲೊ ಆಕಸ್ಮಿಕ ನಿಧನದ ಬಳಿಕ ಅವರ ಜಾಗವನ್ನು ಜಾರ್ಜ್ ತುಂಬಿದರು. ಕಾರ್ಮಿಕರ ಬೆಂಬಲದೊಂದಿಗೆ ರಾಜಕೀಯ ಪ್ರವೇಶಿಸಿ ಯಶಸ್ವಿಯಾದರು.
ಒಕ್ಕೂಟ ವ್ಯವಸ್ಥೆಯ ಆರಂಭದ ದಿನಗಳಲ್ಲಿ ಫರ್ನಾಂಡಿಸ್ ಹಲವಾರು ದಿನ ಜೈಲಿನಲ್ಲಿಯೇ ಕಳೆದರು ಮತ್ತು ಬಾಂಬೆ ಮುನ್ಸಿಪಲ್ ಕಾರ್ಪೋರೇಷನ್ಗೆ (ಬಿಎಂಸಿ) ಎರಡು ಸಲ ಕಾರ್ಪೋರೇಟರ್ ಆಗಿ ಆಯ್ಕೆಯಾದರು. ಇದು ಮುಂದೆ 1967ರಲ್ಲಿ ಸದಾಶಿವ ಕಣೋಜಿ ಪಾಟೀಲ್ ವಿರುದ್ಧದ ಸವಾಲನ್ನು ಸ್ವೀಕರಿಸಲು ಪ್ರೇರೇಪಿಸಿತು. ಪಾಟೀಲ್ ಅವರನ್ನು ಚುನಾವಣೆಯಲ್ಲಿ ಮಣಿಸಿ ರಾಜಕೀಯ ಜೀವನ ಆರಂಭಿಸಿದರು.
ರಾಷ್ಟ್ರ ರಾಜಕಾರಣದತ್ತ ಹೆಜ್ಜೆ
ಮುಂದೆ 1970ರ ದಶಕದ ಆರಂಭದಲ್ಲಿ ಫೆರ್ನಾಂಡಿಸ್ ಅವರು ಸಂಯುಕ್ತ ಸಮಾಜವಾದಿ ಪಾರ್ಟಿಯ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿ, ಜನತಾಪಕ್ಷ, ಸಮತಾ ಪಕ್ಷ ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಮೊದಲಾದ ಪಕ್ಷಗಳ ಮೂಲಕ 1967ರಿಂದ 2004ರ ವರೆಗೆ 9 ಬಾರಿ ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಪಡೆದು, ದೆಹಲಿ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದರು.
1974ರಲ್ಲಿ ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ಬಂದರು. ಮುಂಬಯಿಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾಗಿದ್ದ ಜಾರ್ಜ್ ನಿಗಿನಿಗಿ ಕೆಂಡದಂತೆ ಪ್ರಜ್ವಲಿಸುತ್ತಿದ್ದರು. 1974ರಲ್ಲಿ 20 ದಿನಗಳ ಭಾರತ ರೈಲ್ವೆ ಮುಷ್ಕರ ನಡೆಸಿದರು. ಸರಣಿ ಮುಷ್ಕರ ನಡೆಸಿದ್ದರಿಂದಾಗಿ ‘ಸ್ರ್ಟೈಕಿಂಗ್ ಜಾರ್ಜ್‘ ಎಂಬ ಹೆಸರನ್ನೂ ಪಡೆದರು. ‘ಆಲ್ ಇಂಡಿಯಾ ಲೈಲ್ವೇಮನ್ಸ್ ಫೆಡರೇಷನ್‘ನ ಅಧ್ಯಕ್ಷರಾಗಿದ್ದ ಅವರನ್ನು ಇತರೆ ಅನೇಕ ಒಕ್ಕೂಟಗಳು, ಸಂಘಟನೆಗಳು ಬೆಂಬಲಿಸಿದವು.
ಸರಕಾರವನ್ನು ಅಲ್ಲಾಡಿಸಿದ ಐತಿಹಾಸಿಕ ಘಟನೆಯಾಗಿ ಜಾಗತಿಕ ಖ್ಯಾತಿಯನ್ನು ತಂದುಕೊಟ್ಟಿತು ಮತ್ತೂ ರಾಜಕಾರಣವನ್ನು ಮಂಡಿಯೂರಿಸುವಂತೆ ಮಾಡಿತು. ಜತೆಗೆ, ತುರ್ತು ಪರಿಸ್ಥಿತಿಗೆ ಕಾರಣವಾದ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. ನಂತರದ ವರ್ಷಗಳಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದರು.
ತುರ್ತುಸ್ಥಿತಿ ವಿರೋಧಿ ಚಳವಳಿ ಕಟ್ಟುವಲ್ಲಿ ಜಾರ್ಜ್ ವಹಿಸಿದ್ದ ಪಾತ್ರ ದೊಡ್ಡದು. ತುರ್ತು ಪರಿಸ್ಥಿತಿಯಲ್ಲಿ ಅವರನ್ನು ಬರೋಡಾ ಡೈನಮೈಟ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ತುರ್ತುಪರಿಸ್ಥಿತಿ ವೇಳೆ ಭೂಗತರಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಹೋರಾಟ ನಡೆಸಿದ್ದರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಿಹಾರ್ ಜೈಲಿನಿಂದಲೇ ಬಿಹಾರದ ಮುಜಾಫರ್ ನಗರದಿಂದ ಸ್ಪರ್ಧಿಸಿ ಗೆದ್ದ ಜಾರ್ಜ್ ಫರ್ನಾಂಡಿಸ್ ಅಪ್ರತಿಮ ಜನನಾಯಕರಾಗಿ ಬೆಳೆದಿದ್ದರು.
1977ರಲ್ಲಿ ತುರ್ತುಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಅವರು ಕೈಗಾರಿಕಾ ಸಚಿವರಾದರು. ಕೈಗಾರಿಕಾ ಸಚಿವರಾದ ಮೇಲೆ ವಿದೇಶಿ ಮಾಲೀಕತ್ವ ನಿಯಂತ್ರಣ ನಿಯಮಗಳಿಗೆ ಬದ್ಧರಾಗದಿದ್ದರೆ ಕೋಕಾ–ಕೋಲಾ ಮತ್ತು ಐಬಿಎಂ ಕಂಪನಿಗಳು ದೇಶ ತೊರೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಪರಿಣಾಮವಾಗಿ ಇವೆರಡೂ ಭಾರತ ಬಿಟ್ಟು ಹೋಗಬೇಕಾಯಿತು.
ಆರ್ಎಸ್ಎಸ್ನ ಕಟು ಟೀಕಾಕಾರರಾಗಿದ್ದ ಜಾರ್ಜ್ 1998ರಲ್ಲಿ ಅಟಲ್ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದದಲ್ಲಿ ರಕ್ಷಣಾ ಸಚಿವರಾದರು. ಅವರು ರಕ್ಷಣಾ ಸಚಿವರಾಗಿದ್ದಾಗಲೇ ಭಾರತವು 1998ರಲ್ಲಿ ಪೋಖ್ರಾಣ್ನಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನೂ ನಡೆಸಿತು. 1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಅವರೇ ರಕ್ಷಣಾ ಸಚಿವರಾಗಿದ್ದರು. ರಕ್ಷಣಾ ಸಚಿವರಾಗಿ ಜಾರ್ಜ್ ಯೋಧರ ಮೆಚ್ಚುಗೆ ಸಂಪಾದಿಸಿದ್ದರು. ಆದರೆ ಅವರ ವಿರುದ್ಧ ಅವ್ಯವಹಾರದ ಆರೋಪಗಳೂ ಕೇಳಿ ಬಂದಿದ್ದವು.
ಕೊಂಕಣ ರೈಲ್ವೆ ಮತ್ತು ಸೀಬರ್ಡ್
ಕೊಂಕಣ್ ರೈಲ್ವೆ, ಕಾರವಾರದ ಸೀ ಬರ್ಡ್ ಸೇರಿದಂತೆ ಹಲವು ಮಹತ್ತ್ವದ ಯೋಜನೆಗಳ ರೂವಾರಿ ಆಗಿದ್ದರು. ಜಾರ್ಜ್ ಫೆರ್ನಾಂಡಿಸ್ ಅವರ ಕನಸಿನ ಕೂಸಾದ ಕೊಂಕಣ ರೈಲ್ವೆ ನಿಗಮ ಈಗ ಹೆಮ್ಮರವಾಗಿ ಬೆಳೆದಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕವನ್ನು ಬೆಸೆಯುವ 741 ಕಿ.ಮೀ. ಉದ್ದದ ಕೊಂಕಣ ರೈಲ್ವೆ ಮಾರ್ಗದಲ್ಲಿ ಈಗ ನಿತ್ಯವೂ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಪ್ರತಿದಿನ ಈ ಮಾರ್ಗದಲ್ಲಿ 25 ರೈಲುಗಳು ಸಂಚರಿಸುತ್ತಿವೆ.
ಕೊಂಕಣ ರೈಲ್ವೆ ಮಾರ್ಗ ನಿರ್ಮಿಸುವ ಮೊದಲು ಮಂಗಳೂರಿನ ಜನರು ರೈಲಿನಲ್ಲಿ ಮುಂಬಯಿಗೆ ಪ್ರಯಾಣಿಸಬೇಕಿದ್ದರೆ ಬೆಂಗಳೂರು ಅಥವಾ ಬೆಳಗಾವಿ ಮಾರ್ಗದಿಂದ ಹೋಗಬೇಕಿತ್ತು. ಇದರಿಂದ ತೀವ್ರವಾದ ತೊಂದರೆ ಆಗುತ್ತಿತ್ತು. ಸಮಸ್ಯೆಯ ಆಳವನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಜಾರ್ಜ್, ಮುಂಬಯಿ– ಮಂಗಳೂರು ನಡುವೆ ನೇರ ರೈಲು ಸಂಪರ್ಕದ ಕುರಿತು ಚಿಂತನೆ ನಡೆಸುತ್ತಿದ್ದ ಹಿರಿಯ ಸಂಸದರ ಜೊತೆ ಸೇರಿಕೊಂಡಿದ್ದರು.
‘1989–90ರ ಅವಧಿಯಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಜಾರ್ಜ್ ಅವರು ರೈಲ್ವೆ ಸಚಿವರಾಗಿದ್ದರು. ಆಗಲೇ ಅವರು ಮುಂಬಯಿ– ಮಂಗಳೂರು ನಡುವೆ ನೇರ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವವನ್ನು ಸಂಸತ್ತಿನ ಮುಂದೆ ಇಟ್ಟಿದ್ದರು. ಆದರೆ, ಕರಾವಳಿಯುದ್ದಕ್ಕೂ ಹಾದು ಹೋಗಿರುವ ಈ ಮಾರ್ಗದ ನಿರ್ಮಾಣಕ್ಕೆ ಹೆಚ್ಚಿನ ಹಣ ಅಗತ್ಯ ಎಂಬ ಕಾರಣವನ್ನು ಮುಂದಿಟ್ಟ ಬಹುಸಂಖ್ಯೆಯ ಸಂಸದರು ಈ ಯೋಜನೆಯನ್ನು ವಿರೋಧಿಸಿದ್ದರು.’
ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲೇಬೇಕೆಂಬ ಹಟಕ್ಕೆ ಬಿದ್ದ ಜಾರ್ಜ್, ‘ಕೊಂಕಣ ರೈಲ್ವೆ ನಿಗಮ ಸ್ಥಾಪಿಸೋಣ. ಜನರ ಹಣ ಪಡೆದು ಯೋಜನೆ ಪೂರ್ಣಗೊಳಿಸೋಣʼ ಎಂಬ ಪ್ರಸ್ತಾವವನ್ನು ಅವರು ವಿ.ಪಿ.ಸಿಂಗ್ ಮುಂದಿಟ್ಟರು. ಅದಕ್ಕೆ ಸಿಂಗ್ ಒಪ್ಪಿದರು. ತಕ್ಷಣದಿಂದಲೇ ಕೊಂಕಣ ರೈಲ್ವೆ ನಿಗಮ ಕಾರ್ಯಾರಂಭ ಮಾಡಿತು. ಇಲ್ಲವಾದರೆ ಈ ಯೋಜನೆ ಇಂದಿಗೂ ಕನಸಾಗಿಯೇ ಉಳಿಯುತ್ತಿತ್ತು.
ಮೂರು ರಾಜ್ಯಗಳ ಕಡಲ ತಡಿಯಲ್ಲಿ ಹಾದುಹೋಗುವ ಕೊಂಕಣ ರೈಲ್ವೆ ಮಾರ್ಗದಲ್ಲಿ 92 ಸುರಂಗಗಳಿವೆ. 179 ಪ್ರಮುಖ ಸೇತುವೆಗಳ ಮೇಲೆ ಈ ಮಾರ್ಗ ಹಾದುಹೋಗಿದೆ. ಹಿರಿಯ ರೈಲ್ವೆ ತಜ್ಞ ಇ.ಶ್ರೀಧರನ್ ನೇತೃತ್ವದಲ್ಲಿ ಕಾರ್ಯಾರಂಭ ಮಾಡಿದ ಕೊಂಕಣ ರೈಲ್ವೆ ನಿಗಮ, 1998ರಲ್ಲಿ ಯೋಜನೆಯನ್ನು ಪೂರ್ಣಗೊಳಿಸಿತು. ಈಗ ನಿತ್ಯ ಎರಡು ಲಕ್ಷಕ್ಕೂ ಹೆಚ್ಚು ಜನರು ಈ ಮಾರ್ಗವನ್ನು ಬಳಸುತ್ತಿದ್ದಾರೆ
ಏಷ್ಯಾದಲ್ಲಿಯೇ ದೊಡ್ಡ ನೌಕಾನೆಲೆ ಸೀಬರ್ಡ್ ಮಂಜೂರಾಗಿ ಅಡಿಗಲ್ಲು ಸಮಾರಂಭ ನೆರವೇರಿತ್ತು. ಭೂಮಿ ಬಿಟ್ಟು ಕೊಡಲು ರೈತರು ಮಾತ್ರವಲ್ಲ ಕರ್ನಾಟಕ ಸರಕಾರವೂ ಒಪ್ಪಿರಲಿಲ್ಲ. ಪರಿಹಾರದ ಮೊತ್ತವನ್ನು ರಕ್ಷಣಾ ಇಲಾಖೆ ಕೊಡಬೇಕೋ, ರಾಜ್ಯ ಸರಕಾರ ಕೊಡಬೇಕೋ ಎಂಬುದು ಚರ್ಚೆಯ ವಿಷಯವಲ್ಲವಾದರೂ ಇದರ ಹಿಂದೆ ರಾಜಕಾರಣ ಇತ್ತು. ನೌಕಾನೆಲೆ ಬಂದರೆ ರಾಜ್ಯದ ಕರಾವಳಿ ಮತ್ತು ಉತ್ತರ ಕರ್ನಾಟಕದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ, ಅಭಿವೃದ್ಧಿಯಾಗುತ್ತದೆ ಎಂಬುದು ಕೇಂದ್ರದ ವಾದವಾಗಿತ್ತು. ನಮಗೆ ಆ ಅಭಿವೃದ್ಧಿ ಬೇಕಾಗಿಲ್ಲ ಎಂದು ಕರ್ನಾಟಕ ಹೇಳಿತ್ತು. ಅದೇ ವೇಳೆ ಆಂಧ್ರವು ಈ ನೌಕಾನೆಲೆ ಯೋಜನೆಯನ್ನು ಸ್ವಾಗತಿಸಲು ಸಿದ್ಧವಾಗಿತ್ತು. ಆಗ ಜಾರ್ಜ್ ಫೆರ್ನಾಂಡಿಸ್ ರಕ್ಷಣಾ ಮಂತ್ರಿಗಳಾದರು. ಕರ್ನಾಟಕದ ಕೈತಪ್ಪಿ ಹೋಗಲಿರುವ ನೌಕಾನೆಲೆಯ ಅಗತ್ಯವನ್ನು ತಿಳಿಸಿ ಹೇಳಲು ಮತ್ತೆ ಉ.ಕ., ಕರಾವಳಿಗೆ ಬಂದರು. ಜೆ.ಎಚ್ ಪಟೇಲ್ ಮುಖ್ಯಮಂತ್ರಿಗಳಾಗಿದ್ದರು. ಸಾರ್ವಜನಿಕರ ಎದುರು ನೌಕಾನೆಲೆಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಬೇಕಾದ ಅಗತ್ಯವನ್ನು ಜಾರ್ಜ್ ವಿವರಿಸಿದರು. ಈ ಯೋಜನೆ ಅಗತ್ಯ ಕುರಿತು ಹೇಳಿ ಜನರ ಮನವೊಲಿಸಿ ಏಷ್ಯಾದಲ್ಲಿಯೇ ದೊಡ್ಡ ನೌಕಾನೆಲೆ ಸೀಬರ್ಡ್ ಸ್ಥಾಪನೆಯಾಗುವಂತೆ ಮಾಡಿದರು, ಜಾರ್ಜ್ ಮತ್ತು ಪಟೇಲರು ಅತ್ಯುತ್ತಮ ಗೆಳೆಯರಾಗಿದ್ದರು. ಇದರಿಂದ ನಮ್ಮ ರಾಜ್ಯಕ್ಕೆ ಬಹಳ ಒಳ್ಳೆಯದೇ ಆಯಿತು.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜಾರ್ಜ್ ಅವರು, “ನನಗೆ ಮತ್ತೊಂದು ಜನ್ಮವಿದ್ದರೆ ನಾನು ವಿಯೆಟ್ನಾಮಿಯಾಗಿ ಹುಟ್ಟಬೇಕು, ವಿಯೆಟ್ನಾಂ ಜನರಲ್ಲಿ ಶಿಸ್ತಿದೆ, ಹಿಡಿದ ಕೆಲಸ ಮಾಡಬೇಕೆಂಬ ಛಲ ಅವರಲ್ಲಿದೆ” ಎಂದಿದ್ದರು. ಅಂದರೆ, ಇದ್ದದ್ದನ್ನು ಇದ್ದ ಹಾಗೆ ಅವರು ಹೇಳುತ್ತಿದ್ದರು.
ಕೊಂಕಣಿ, ತುಳು, ಹಿಂದಿ, ಇಂಗ್ಲೀಷ್, ಮರಾಠಿ, ತಮಿಳು, ಉರ್ದು, ಲ್ಯಾಟಿನ್ ಭಾಷೆಯಲ್ಲಿ ಪರಿಣತರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಬಂಗಾಳಿ ಕವಿ, ಕಾದಂಬರಿಕಾರ, ಮಾಜಿ ಕೇಂದ್ರ ಸಚಿವ ಕಬೀರ್ ಅವರ ಪುತ್ರಿ ಲೈಲಾ ಕಬೀರ್ ಅವರನ್ನು ವಿವಾಹವಾಗಿದ್ದರು. ಜಾರ್ಜ್, ಲೈಲಾ ದಂಪತಿಗೆ ಸಿಯಾನ್ ಫೆರ್ನಾಂಡಿಸ್ ಎಂಬ ಪುತ್ರ ಜನಿಸಿದ್ದ. 1984ರಲ್ಲಿ ಲೈಲಾ ಅವರಿಂದ ವಿಚ್ಛೇದನ ಪಡೆದಿದ್ದರು.
ಕೈಕೊಟ್ಟ ನಿತೀಶ್ ಕುಮಾರ್
2009ರಲ್ಲಿ ಅದೇ ಲೋಕಸಭಾ ಚುಣಾವಣೆ ಕಣಕ್ಕೆ ಇಳಿಯಲು ಅವರೇ ಬೆಳೆಸಿದ ಶಿಷ್ಯ, ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಒಪ್ಪಲಿಲ್ಲ. ರಾಜ್ಯಸಭೆಗೆ ಆರಿಸಿ ಕಳುಹಿಸುತ್ತೇವೆ ಎಂಬ ಜೆಡಿಯುನ ಕೊಡುಗೆಯನ್ನು ಆಕ್ರೋಶದಿಂದಲೇ ತಿರಸ್ಕರಿಸಿದ್ದರು. ‘ಸಮಾಜವಾದಿಗಳು ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸುವುದಿಲ್ಲ’ ಎಂದು ಹೇಳಿದ್ದರು.
ಲೋಕಸಭೆ ಟಿಕೆಟ್ ನಿರಾಕರಿಸಿದ ನಿತೀಶ್ ನಿರ್ಧಾರದಿಂದ ವ್ಯಗ್ರಗೊಂಡ ಜಾರ್ಜ್, ಪಕ್ಷೇತರನಾಗಿ ಮುಜಾಫರ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ, ಠೇವಣಿ ಉಳಿಸಿಕೊಳ್ಳುವುದಕ್ಕೂ ಅವರಿಗೆ ಸಾಧ್ಯವಾಗಲಿಲ್ಲ. ಇದೊಂದು ವಿಪರ್ಯಾಸ. ಆ ಸಂದರ್ಭದಲ್ಲಿ ಜಾರ್ಜ್ ಬಹಳ ನೋವಿಗೆ ತುತ್ತಾಗಿದ್ದರು.
ಧೀಮಂತ ರಾಜಕಾರಣಿಯಾಗಿದ್ದ ಜಾರ್ಜ್ ಫರ್ನಾಂಡಿಸ್ ತಮ್ಮ ಜೀವಿತದ ಕೊನೆಯ ಅವಧಿಯಲ್ಲಿ, ಅಂದರೆ; 2010ರಲ್ಲಿ ಅಲ್ಜೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು. ದೀರ್ಘ ಕಾಲದ ಅನಾರೋಗ್ಯದಿಂದ 2019 ಜನವರಿ 29ರಂದು ನಿಧನರಾದರು,
ಜೀವನದುದ್ದಕ್ಕೂ ಸಮಾಜವಾದಿಯಾಗಿಯೇ ಇದ್ದಂತವರು ಜಾರ್ಜ್ ಫರ್ನಾಂಡಿಸ್. ಸರಳ ವ್ಯಕ್ತಿತ್ವದವರು, ಆಡಂಬರದ ಜೀವನ ಶೈಲಿ ಕಾಣದವರು. ದೇಶ ಕಂಡಂತಹ ಅಪ್ರತಿಮ ಕಾರ್ಮಿಕ ನಾಯಕನಾಗಿ, ಶ್ರೇಷ್ಠ ರಾಜಕಾರಣಿಯಾಗಿದ್ದ ಅವರ ದಿಲ್ಲಿ ಮನೆಗೆ ಗೇಟ್ ಕೂಡ ಇರಲಿಲ್ಲ.
ಡಾ.ಗುರುಪ್ರಸಾದ ಹವಲ್ದಾರ್
ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.