ಅರ್ಧ ಡಜನ್‌ಗೂ ಹೆಚ್ಚು ಮೂಲನಿವಾಸಿಗಳಲ್ಲೂ ಹೆಚ್ಚಿದ ಆತಂಕ / ಬಿಜೆಪಿಯಲ್ಲಿ ಎಲ್ಲವೂ ಗುಪ್ತ್ ಗುಪ್ತ್
ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಸಿಡಿಸಿದ್ದ ಬಂಡಾಯದ ಬಾಂಬ್ ಠುಸ್ ಆಗುತ್ತಿದೆ ಎಂದು ಇತ್ತ ಮಾಧ್ಯಮಗಳನ್ನು & ಜನರನ್ನು ನಂಬಿಸಿದ್ದ ʼಬಿಜೆಪಿʼಯ ಕೆಲವರು ಭಾನುವಾರ ದೊಡ್ಡ ಶಾಕ್‌ಗೆ ಗುರಿಯಾಗಿದ್ದಾರೆ.
ಬೆಳಗ್ಗೆಯಿಂದಲೇ ರೋಹಿಣಿ ಸಿಂಧೂರಿ ವರ್ಗಾವಣೆ ಸುದ್ದಿಯ ಗುಂಗಿನಲ್ಲಿದ್ದ ಇಡೀ ರಾಜ್ಯಕ್ಕೆ 11 ಗಂಟೆ ಹೊತ್ತಿಗೆ ಸಿಎಂ ಯಡಿಯೂರಪ್ಪ ಶಾಕ್‌ನಂಥ ಸುದ್ದಿ ಕೊಟ್ಟರು. “ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ಪಕ್ಷದ ವರಿಷ್ಟರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ. ರಾಜ್ಯದಲ್ಲಿ ನಾಯಕತ್ವ ವಹಿಸಲು ಪರ್ಯಾಯ ನಾಯಕರಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ ಮಾಡಿದ್ದೇನೆ” ಎಂದು ಹೇಳಿಕೆ ನೀಡಿದರು.
“ಪಕ್ಷದ ಹೈಕಮಾಂಡ್ ಹೇಳುವವರೆಗೂ ನಾನು ಸಿಎಂ ಆಗಿರುತ್ತೇನೆ. ಪಕ್ಷದ ಪರಿಮಿತಿಯೊಳಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ” ಎಂದು ಸಿಎಂ ಹೇಳುತ್ತಿದ್ದಂತೆ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ವಲಸೆ ಬಂದು ಸಚಿವರಾದವರು ಹಾಗೂ ಸಿಎಂ ಪಾಳೆಯದಲ್ಲಿ ಬೀಡುಬಿಟ್ಟವವರೆಲ್ಲರೂ ಬೆಚ್ಚಿಬಿದ್ದಿದ್ದಾರೆ.
ಇದೆಲ್ಲ ಹೀಗಿದ್ದರೆ, ವಲಸಿಗ ಸಚಿವರಲ್ಲಿ ತೀವ್ರ ತಳಮಳ ಉಂಟಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರಿದ್ದರೆ ಮಾತ್ರ ತಮ್ಮ ಹಿತಕ್ಕೆ ಧಕೆ ಆಗುವುದಿಲ್ಲ. ಒಂದು ವೇಳೆ ಬಿಎಸ್‌ವೈ ಬದಲಾದರೆ ತಮಗೆ ಅಪಾಯ ತಪ್ಪಿದ್ದಲ್ಲ ಎಂದು ಬಲವಾಗಿ ನಂಬಿದ್ದ ವಲಸಿಗರು ಸಹಜವಾಗಿಯೇ ಭಾನುವಾರ ಸಿಎಂ ಕೊಟ್ಟ ಹೇಳಿಕೆಯಿಂದ ಶಾಕ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ, ಒಂದು ಕಾಲದಲ್ಲಿ ಬಿಜೆಪಿಗೆ ತಾವೆಲ್ಲರೂ ಬರಲು ಪರೋಕ್ಷವಾಗಿ ಕಾರಣರಾಗಿದ್ದ ಯೋಗೀಶ್ವರ್ ಅವರಿಂದ ಇವರೆಲ್ಲರೂ ಅಂತರ ಕಾಯ್ದುಕೊಂಡಿದ್ದರು.

ಇದಕ್ಕೆ ಪೂರಕವಾಗಿ ಭೈರತಿ ಬಸವರಾಜ್, ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್ ಸೇರಿದಂತೆ ಎಲ್ಲರೂ ಯಡಿಯೂರಪ್ಪ ಅವರಲ್ಲಿಯೇ ನಿಷ್ಠೆ ವ್ಯಕ್ತಪಡಿಸಿದ್ದರು. ಈಗಲೂ ಅದೇ ಮಾತನ್ನೇ ಪುನರುಚ್ಛರಿಸಿದ್ದಾರೆ. “ನಮ್ಮ ನಿಷ್ಠೆ ಯಡಿಯೂರಪ್ಪ ಅವರಿಗೆ ಹಾಗೂ ಪಕ್ಷಕ್ಕೆ” ಎಂದು ಡಾ.ಸುಧಾಕರ್ ಹೇಳಿದ್ದಾರೆ. ಸಿಎಂ ಹೇಳಿಕೆ ಹೊರಬಿದ್ದ ಸ್ವಲ್ಪಹೊತ್ತಿನಲ್ಲೇ ಅವರು ಈ ಮಾತು ಹೇಳಿದ್ದಾರೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಂತೆ, ಬಿಜೆಪಿ ಹೈಕಮಾಂಡ್ ಈಗ ನಾಯಕತ್ವದ ಬಗ್ಗೆ ಕ್ಲೈಮ್ಯಾಕ್ಸ್‌ಗೆ ಬಂದು ನಿಂತಿರುವಂತೆ ಕಾಣುತ್ತಿದೆ. ಖಾತೆ ಕ್ಯಾತೆ, ರಮೇಶ್ ಜಾರಕಿಹೊಳಿ ಪ್ರಕರಣ, ಕೋವಿಡ್ ನಿರ್ವಹಣೆಯಲ್ಲಿ ಉಂಟಾದ ಅವ್ಯವಸ್ಥೆ, ಚಾಮರಾಜ ನಗರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸೋಂಕಿತರ ಸಾವು, ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ತಿಕ್ಕಾಟ.. ಇತ್ಯಾದಿಗಳ ಕಾರಣಕ್ಕೆ ವಲಸಿಗರೂ ಸೇರಿ ಕೆಲ ಸಚಿವರ ಬಗ್ಗೆ ಬಿಜೆಪಿ ವರಿಷ್ಠರಿಗೆ ಸದಾಭಿಪ್ರಾಯ ಇಲ್ಲ.
ಇನ್ನೊಂದೆಡೆ, ಯಡಿಯೂರಪ್ಪ ಅವರು ಬದಲಾದರೆ, ಅವರ ನಿಷ್ಠರು ಸೇರಿ ಬಹತೇಕ ವಲಸಿಗರ ಖಾತೆಗಳು ಬದಲಾಗುವುದು ಖಚಿತ. ಮುಖ್ಯವಾಗಿ ಮಹತ್ವದ ಖಾತೆಗಳನ್ನು ಹೊಂದಿರುವ ವಲಸಿಗರ ಪೋರ್ಟ್ ಪೋಲಿಯೋಗಳಿಗೆ ಆಪರೇಷನ್ ಆಗುವುದು ಗ್ಯಾರಂಟಿ. ಜತೆಗೆ, ಮೂಲ ನಿವಾಸಿಗಳಲ್ಲಿ ಕೆಲವರು ಔಟ್ ಆಗುವುದು ಕಾಯಂ. ಹೀಗಾಗಿ ಸಿಎಂ ಪರ ಇವರೆಲ್ಲರೂ ಬ್ಯಾಟಿಂಗ್ ಮಾಡುತ್ತಿದ್ದಾರೆಂದು ಬಿಜೆಪಿ ಒಳಗಿನ ಪ್ರಮುಖ ಮೂಲವೊಂದು ಹೇಳುವ ಮಾತು.
ವಿಜಯೇಂದ್ರಗೆ ಎಚ್ಚರಿಕೆ ಕೊಟ್ಟ ನಡ್ಡಾ
ಇನ್ನೊಂದೆಡೆ ಮೂರು ದಿನಗಳ ಕಾಲ ದಿಲ್ಲಿಯೇ ಉಳಿದು ತಂದೆಯನ್ನು ಸೇಫ್ ಮಾಡಲು ಶತಾಯಗತಾಯ ಯತ್ನಸಿದ್ದ ಬಿ.ವೈ.ವಿಜಯೇಂದ್ರ ಅವರ ಆಪರೇಷನ್ ಫೇಲಾಯಿತಾ? ಎನ್ನುವ ಸುದ್ದಿ ಈಗ ಹಬ್ಬಿದೆ. ಮುಖ್ಯವಾಗಿ, ಅರುಣ್ ಸಿಂಗ್ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಬೇಟಿಯಾಗಿದ್ದ ವಿಜಯೇಂದ್ರರಿಗೆ ಖಡಕ್ ಕ್ಲಾಸ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.
“ನೀವಿನ್ನೂ ಯುವಕರು. ಪಕ್ಷದಲ್ಲಿ ಒಳ್ಳೆಯ ಭವಿಷ್ಯವಿದೆ. ವಯಸ್ಸಿದೆ, ಹೀಗಾಗಿ ನಿಮಗೆ ನೀವೇ ಯಾಕೆ ಡ್ಯಾಮೇಜ್ ಮಾಡಿಕೊಳ್ಳುತ್ತೀರಿ? ಇನ್ನು ಮುಂದೆ ಯಾರ ಸಚಿವರ ಖಾತೆಗಳಲ್ಲೂ ಹಸ್ತಕ್ಷೇಪ ಮಾಡಬೇಡಿ” ಎಂದು ನಡ್ಡಾ ನೇರವಾಗಿ ತಾಕೀತು ಮಾಡಿದರೆಂದು ಗೊತ್ತಾಗಿದೆ.
ಅಲ್ಲಿಗೆ ಶುಕ್ರವಾರ ತಡರಾತ್ರಿಯೇ ಬೆಂಗಳೂರಿಗೆ ವಾಪಸ್ ಬಂದ ವಿಜಯೇಂದ್ರಗೆ ವರಿಷ್ಠರು ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಹೇಳಿ ಕಳಿಸಿದ್ದಾರೆಂದು ಆ ಮೂಲ ತಿಳಿಸಿದೆ. ಇನ್ನೊಂದೆಡೆ, ಮುಂದಿನ ಮುಖ್ಯಮಂತ್ರಿ ಯಾರು? ಅವರ ಜತೆ ವಲಸಿಗರ ಹೊಂದಾಣಿಕೆ ಹೇಗೆ? ಎನ್ನುವ ಪ್ರಶ್ನೆ ಎದ್ದಿದೆ.
ಸದ್ಯಕ್ಕೆ ಸಿಕ್ಕಿರುವ ಖಚಿತ ಮೂಲಗಳ ಪ್ರಕಾರ ವಲಸಿಗರಲ್ಲಿ ʼಕೆಲವರಿಗೆʼ ಸಚಿವ ಸ್ಥಾನ ತಪ್ಪುವುದು ೧೦೦% ಗ್ಯಾರಂಟಿ!! ಈ ಪಟ್ಟಿಯಲ್ಲಿ ಬಿಜೆಪಿ ಮೂಲ ನಿವಾಸಿಗಳೂ ಇದ್ದಾರೆ.
ತವರು ಜಿಲ್ಲೆ ಉಸ್ತುವಾರಿಗೂ ಕೊಕ್
ಇದೇ ವೇಳೆ ತವರು ಜಿಲ್ಲೆಯ ಹೊಣೆ ಹೊಂದಿರುವ ಎಲ್ಲ ಸಚಿವರ ʼಉಸ್ತುವಾರಿಕೆʼ ಪಕ್ಕಾ ಬದಲಾಗುತ್ತದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅದನ್ನು ಸ್ವತಃ ಯಡಿಯೂರಪ್ಪ ಅವರೇ ತುಸು ವಿಳಂಬ ಮಾಡಿದ್ದರು. ಈಗ ನಾಯಕತ್ವ ಬದಲಾದರೆ, ತಕ್ಷಣವೇ ಕೆಲವರಿಗೆ ಸಂಪುಟದಿಂದ ಅರ್ಧಚಂದ್ರ, ಇನ್ನು ಕೆಲವರಿಗೆ ಜಿಲ್ಲಾ ಉಸ್ತುವಾರಿಗೆ ಕತ್ತರಿ ಮತ್ತೆ ಕೆಲವರಿಗೆ ಖಾತೆ ನಷ್ಟ ಆಗುವುದು ಖಚಿತ ಎಂದು ತಿಳಿದುಬಂದಿದೆ.
ಈ ಲೆಕ್ಕದಲ್ಲಿ ನೋಡಿದರೆ, ಚಿಕ್ಕಬಳ್ಳಾಪುರ ಉಸ್ತುವಾರಿ ಡಾ.ಸುಧಾಕರ್ ಕೈತಪ್ಪುವುದು ಖಚಿತ. ಆದರೆ, ಕೋಲಾರಕ್ಕೆ ಈ ಸಮಸ್ಯೆ ಇಲ್ಲ. ಅಲ್ಲಿ ಬೆಂಗಳೂರು ನಗರ ಜಿಲ್ಲೆಯ ಅರವಿಂದ ಲಿಂಬಾವಳಿ ಉಸ್ತುವಾರಿ ಹೊಂದಿದ್ದಾರೆ.

















