ಜೂನ್ 21ರಿಂದಲೇ 18 ವರ್ಷ ಮೇಲ್ಪಟ್ಟ ದೇಶದ ಎಲ್ಲ ನಾಗರೀಕರಿಗೂ ಕೇಂದ್ರದಿಂದಲೇ ಉಚಿತ ವ್ಯಾಕ್ಸಿನ್
ನವದೆಹಲಿ/ಬೆಂಗಳೂರು: ಇದೇ ಜೂನ್ 21ರಿಂದ ದೇಶ ಪ್ರತಿಯೊಬ್ಬ ನಾಗರೀಕರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಗ್ಗೆ ಇದ್ದ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.
ಗುರುವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಶತಮಾನದ ಮಹಾಮಾರಿ ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಸಿಕೀಕರಣವೇ ಮಹಾಮದ್ದು. ಇದೊಂದೇ ಏಕೈಕ ಪರಿಹಾರ. ದೇಶದ 130 ಕೋಟಿ ಜನರಿಗೂ ತ್ವರಿತಗತಿಯಲ್ಲಿ ಲಸಿಕೆ ಕೊಡಲಾಗುವುದು ಎಂದು ಘೋಷಿಸಿದರು.
ಲಸಿಕೆ ತಯಾರಿಕೆ ಕಂಪನಿಗಳಿಂದ ಕೇಂದ್ರ ಸರಕಾರವೇ ನೇರವಾಗಿ ಲಸಿಕೆ ಖರೀದಿ ಮಾಡಿ, ಅದನ್ನು ಉಚಿತವಾಗಿ ಎಲ್ಲ ರಾಜ್ಯಗಳಿಗೂ ಹಂಚಿಕೆ ಮಾಡಲಿದೆ. ಅಲ್ಲದೆ, ಜೂನ್ 21ರಿಂದಲೇ ಲಸಿಕೆ ನೀಡಿಕೆ ಬಗ್ಗೆ ಪ್ರತ್ಯೇಕ ಎಸ್‌ಒಪಿಯನ್ನು ಜಾರಿಗೆ ತರಲಿದೆ ಎಂದು ಪಿಎಂ ಹೇಳಿದರು.
ಕಳೆದ ಹಲವು ದಿನಗಳಿಂದ ಲಸಿಕೆ ಕೊರತೆ ಎದುರಿಸುತ್ತ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಕರ್ನಾಟಕ ಸರಕಾರ ಮೋದಿ ಅವರ ಮಾತಿನಿಂದ ಕುಣಿದು ಕುಪ್ಪಳಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅವರ ಸಂಪುಟದ ಎಲ್ಲ ಸಚಿವರು, ಬಿಜೆಪಿ ನಾಯಕರು ಪ್ರಧಾನಿಯವರ ಫ್ರೀ ಲಸಿಕೆ ಆಫರ್ ಘೋಷಣೆಯನ್ನು ಭರ್ಜರಿಯಾಗಿ ಸ್ವಾಗತಿಸಿ ಅಭಿನಂದನೆ ಹೊಳೆಯನ್ನೇ ಹರಿಸುತ್ತಿದ್ದಾರೆ.
‘ಕೊರೋನಾ ಸಾಂಕ್ರಾಮಿಕದ ವಿರುದ್ಧ ದೇಶವು ಹೋರಾಡುತ್ತಿದ್ದು, ಇಂದು ಪ್ರಧಾನಿ ಮೋದಿ ಅವರು ಪ್ರಕಟಿಸಿರುವ ನಿರ್ಧಾರಗಳನ್ನು ಸ್ವಾಗತಿಸುತ್ತೇನೆ. ಕೇಂದ್ರೀಕೃತ ಉಚಿತ ಲಸಿಕೆ ವ್ಯವಸ್ಥೆಯಿಂದ ಲಸಿಕೆ ವಿತರಣೆಗೆ ಇನ್ನಷ್ಟು ವೇಗ ದೊರೆಯಲಿದೆ. ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ ಬಡವರ ಹಸಿವು ನೀಗಿಸಲಿದೆ ಎಂದು ಮುಖ್ಯಮಂತ್ರಿಗಳು ಟ್ವಿಟರ್‌ನಲ್ಲೇ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಲಸಿಕೆ ಖರೀದಿಗೆ ಮುಂದಾಗಿದ್ದ ರಾಜ್ಯ ಸರಕಾರ ಇನ್ಮೇಲೆ ಲಸಿಕೆ ಖರೀದಿಗೆ ಬ್ರೇಕ್ ಹಾಕುವ ಸುಳಿವು ನೀಡಿದೆ. ಬೆಂಗಳೂರಿನಲ್ಲಿ ಮಾತನಾಡಿದ ರಾಜ್ಯ ಕೋವಿಡ್ ಉಸ್ತುವಾರಿಯೂ ಆಗಿರುವ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಈ ಕ್ಷಣದಿಂದಲೇ ಲಸಿಕೆ ಖರೀದಿ ಬಗ್ಗೆ ಮರು ಪರಿಶೀಲನೆ ನಡೆಸುವ ಮಾತು ಹೇಳಿದ್ದಾರೆ.
ನರೇಂದ್ರ ಮೋದಿ ಅವರು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರವೇ ವ್ಯಾಕ್ಸಿನ್ ಪೂರೈಕೆ ಮಾಡಲಿದೆ ಎಂದು ಘೋಷಣೆ ಮಾಡಿದ್ದಾರೆ. ಪ್ರಧಾನಿ ಅವರಿಗೆ ಅಭಿನಂದನೆಗಳು. ಇನ್ನು ಮುಂದೆ ರಾಜ್ಯವು ನೇರವಾಗಿ ಲಸಿಕೆ ಖರೀದಿ ಮಾಡಲ್ಲ. ಈಗಾಗಲೇ 3 ಕೋಟಿ ಲಸಿಕೆ ಖರೀದಿಗೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇನ್ನೂ 2 ಕೋಟಿ ಲಸಿಕೆ ಪಡೆಯುವ ಬಗ್ಗೆ ಪ್ರಯತ್ನ ನಡೆದಿತ್ತು. ಈಗ ಎಲ್ಲವನ್ನೂ ಮರು ಪರಾಮರ್ಶೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ ಡಿಸಿಎಂ.
ಈ ತಿಂಗಳಲ್ಲಿಯೇ ಕೇಂದ್ರದಿಂದ 58 ಲಕ್ಷ ಡೋಸ್ ಕೋವಿಡ್ ಲಸಿಕೆ ಬರಲಿದೆ. ಖಾಸಗಿ ಕ್ಷೇತ್ರದಿಂದಲೂ 20 ಲಕ್ಷ ಡೋಸ್ ಲಭ್ಯವಾಗುತ್ತಿದೆ. ಜೂನ್ ತಿಂಗಳೊಂದರಲ್ಲೇ ರಾಜ್ಯಕ್ಕೆ ಒಟ್ಟು 80 ಲಕ್ಷ ಡೋಸ್ ಲಸಿಕೆ ಸಿಗಲಿದೆ. ಈ ಲೆಕ್ಕದ ಪ್ರಕಾರ ಪ್ರತೀ ದಿನ 6 ಲಕ್ಷ ಜನರಿಗೆ ಲಸಿಕೆ ನೀಡಲು ಸಾಧ್ಯವಿದೆ. ಇದರೊಟ್ಟಿಗೆ ಕೇಂದ್ರವೂ ಲಸಿಕೆ ನೀಡಲಿದೆ. ಹೀಗಾಗಿ ನಮ್ಮಲ್ಲಿ ಉಂಟಾಗಿದ್ದ ಲಸಿಕೆ ಕೊರತೆ ಸಂಪೂರ್ಣ ನೀಗಲಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ಅಲ್ಲಿಗೆ ರಾಜ್ಯದಲ್ಲಿ ಉಂಟಾಗಿದ್ದ ಲಸಿಕೆ ಹಾಹಾಕಾರಕ್ಕೆ ಪ್ರಧಾನಿ ಮೋದಿ ಪರಿಹಾರ ಸೂಚಿಸಿದಂತೆ ಆಗಿದ್ದು, ರಾಜ್ಯ ಸರಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಇನ್ನೆರಡು ವಾರಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ತಾಲೂಕು-ಜಿಲ್ಲಾ ಆಸ್ಪತ್ರೆಗಳಲ್ಲಿ ಭಾರೀ ಪ್ರಮಾಣದ ಲಸಿಕೆ ಅಭಿಯಾನಗಳು ಶುರುವಾಗಲಿವೆ. ಅಲ್ಲದೆ, ಮೈದಾನಗಳಲ್ಲಿ, ಕಾಲೇಜು ಕ್ಯಾಂಪಸ್‌ಗಳಲ್ಲಿ, ವಿವಿಗಳಲ್ಲಿ, ಖಾರ್ಖಾನೆಗಳಲ್ಲ.. ಸಾಧ್ಯವಾದಷ್ಟು ಕಡೆ ವ್ಯಾಕ್ಸಿನೇಷನ್ ಪರ್ವ ಆರಂಭವಾಗಲಿದೆ ಎಂದು ಉನ್ನತ ಮೂಲಗಳು ಸಿಕೆನ್ಯೂಸ್ ನೌ ಗೆ ತಿಳಿಸಿವೆ.
ಜಾಗತಿಕ ಟೆಂಡರ್ ರದ್ದಾಗಿತ್ತು
ಲಸಿಕೆ ಹಾಹಾಕಾರದ ನಡುವೆಯೇ ಜಾಗತಿಕ ಇ- ಟೆಂಡರ್ ಅರ್ಜಿ ಹಾಕಿಕೊಂಡಿದ್ದ ಎರಡು ಕಂಪನಿಗಳು ಕೈ ಎತ್ತಿದ್ದವು. ಸಕಾಲಕ್ಕೆ ಅಗತ್ಯ ದಾಖಲೆಗಳನ್ನು ನೀಡದ ಕಾರಣಕ್ಕೆ ರಾಜ್ಯ ಸರಕಾರವೇ ನೇರವಾಗಿ ತಯಾರಿಕಾ ಕಂಪನಿಗಳಿಂದಲೇ ಲಸಿಕೆ ಖರೀದಿಸಲು ಮುಂದಾಗಿತ್ತು. ಡಿಸಿಎಂ ಅಶ್ವತ್ಥನಾರಾಯಣ ಅವರು ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿ ಮಾಡಲಾಗುವುದು ಎಂದು ಹೇಳಿದ್ದರು ಕೂಡ.
ಮೇ 15ರಂದು ಕರೆಯಲಾಗಿದ್ದ ಜಾಗತಿಕ ಟೆಂಡರ್‌ನಲ್ಲಿ ಮುಂಬಯಿ ಮೂಲದ ʼಬುಲಕ್ ಎಂಆರ್‌ಓ ಇಂಡಸ್ಟ್ರೀಯಲ್ ಸಪ್ಲೈʼ ಹಾಗೂ ಬೆಂಗಳೂರು ಮೂಲದ ʼತುಳಸಿ ಸಿಸ್ಟಮ್ಸ್ʼ ಕಂಪನಿಗಳು ಲಸಿಕೆ ಪೂರೈಕೆ ಮಾಡುವುದಾಗಿ ಮುಂದೆ ಬಂದು ಗ್ಲೋಬಲ್ ಟೆಂಡರ್‌ಗೆ ಅರ್ಜಿ ಹಾಕಿಕೊಂಡಿದ್ದವು. ಆದರೆ, ಹಣಕಾಸು ದಾಖಲೆಗಳೂ ಸೇರಿ ಮಹತ್ತ್ವದ ʼಪೂರೈಕೆ ಖಾತರಿʼ / ಲಸಿಕೆ ಬಗೆಗಿನ ʼತಾಂತ್ರಿಕ ದಾಖಲೆʼಗಳನ್ನು ಸಲ್ಲಿಸಲು ವಿಫಲವಾಗಿದ್ದವು. ರಷ್ಯಾ ಮೂಲದ ʼಸ್ಪಟ್ನಿಕ್ʼ ಲಸಿಕೆ ತಯಾರಿಸುವ ಮಾಸ್ಕೋದ ಗಮಲೆಯಾ ಸಂಸೋಧನಾ ಸಂಸ್ಥೆ ಜತೆ ಈ ಕಂಪನಿಗಳು ಮಾಡಿಕೊಂಡಿದ್ದ ಒಪ್ಪಂದದ ದಾಖಲೆಗಳನ್ನೂ ಸರಕಾರಕ್ಕೆ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಮತ್ತಷ್ಟು ತೀವ್ರ ಲಸಿಕೆ ಸಂಕಷ್ಟಕ್ಕೆ ಸಿಲುಕಿತ್ತು. ಹೆಚ್ಚುತ್ತಿದ್ದ ಬೇಡಿಕೆ ಪೂರೈಸಲಾಗದೆ ಲಸಿಕೆ ಸಿಗಬಹುದಾದ ಎಲ್ಲ ಕಂಪನಿಗಳ ಬಾಗಿಲನ್ನೂ ತಟ್ಟಿತ್ತು.
ಈ ಬಿಕ್ಕಟ್ಟುಗಳ ನಡುವೆ ಮೋದಿ ಅವರು ಎಲ್ಲ ರಾಜ್ಯಗಳೂ ಸೇರಿ ಕರ್ನಾಟಕಕ್ಕೂ ಸಿಹಿ ಸುದ್ದಿಯನ್ನೇ ನೀಡಿದ್ದಾರೆ. ಡಿಸೆಂಬರ್ ಒಳಗಾಗಿ ರಾಜ್ಯದ ಪ್ರತಿಯೊಬ್ಬ ನಾಗರೀಕನಿಗೂ ಲಸಿಕೆ ಕೊಡಲೇಬೆಂಬ ರಾಜ್ಯ ಸರಕಾರದ ಗುರಿಗೆ ಅವರು ಬಲ ತುಂಬಿದಂತೆ ಆಗಿದೆ.
ಮುಂದುವರಿದು ಮೋದಿ ಹೇಳಿದ್ದೇನು?
ಸದ್ಯಕ್ಕೆ ನಮ್ಮ ದೇಶದಲ್ಲಿ ಅತ್ಯಂತ ವೇಗವಾಗಿ ಲಸಿಕೆಗಳು ತಯಾರಾಗುತ್ತಿವೆ ಎಂದಿರುವ ಮೋದಿ ಅವರು, ಇಡೀ ಜಗತ್ತೇ ನಮ್ಮನ್ನು ನೋಡಿ ನಿಬ್ಬೆರಗಾಗುತ್ತಿದೆ. ವಿಜ್ಞಾನಿಗಳು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಎಂದಿದ್ದಾರೆ.
ಇನ್ನು ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪ್ರಮಾಣದಲ್ಲಿ ಸೋಂಕು ತಗುಕುವ ಅಪಾವಿದೆ. ತಜ್ಞರು ಹೇಳಿದ್ದಾರೆ, ಹಾಗಂತ ಅವರ ಹೇಳಿಕೆಯಿಂದ ಜನರು ಆತಂಕಪಡುವುದು ಬೇಡ. ಈಗ ಮಕ್ಕಳಿಗಾಗಿ ವ್ಯಾಕ್ಸಿನ್ ತಯಾರಿಕೆ ಮಾಡಲಾಗುತ್ತಿದ್ದು, ಅದು ಪ್ರಯೋಗದ ಹಂತದಲ್ಲಿವೆ. ಮೂಗಿನಲ್ಲಿ ಸ್ಪ್ರೇ ಮಾಡುವ ಲಸಿಕೆಯನ್ನು ಸಂಶೋಧಿಸಲಾಗುತ್ತಿದೆ.