ಪ್ರತಿ ದಿನವೂ ಪ್ರಯಾಣ ದರ ಪರಿಷ್ಕರಣೆ ಕಾಲ ಸನ್ನಿಹಿತ
ಬೆಂಗಳೂರು: ಸತತವಾಗಿ ಡೀಸೆಲ್ ಬೆಲೆ ಏರಿಕೆ, ನೌಕರರ ಮುಷ್ಕರ ಮತ್ತು ಲಾಕ್‌ಡೌನ್ ಮೊದಲಾದ ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಂಭವ ಇದೆ.
ಈ ಕುರಿತಾಗಿ ಚರ್ಚೆ ನಡೆದಿದ್ದು, 6 ತಿಂಗಳ ಹಿಂದೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮರುಜೀವ ನೀಡಲಾಗಿದೆ. ಲಾಕ್‌ಡೌನ್ ತೆರವಾಗುತ್ತಿದ್ದಂತೆ ಬಸ್ ಪ್ರಯಾಣ ದರವನ್ನೂ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ಕೊರೋನಾ ಸಂಕಷ್ಟ, ಲಾಕ್‌ಡೌನ್, ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ದರ ಹೆಚ್ಚಳ, ಮೊದಲಾದ ಅಗತ್ಯ ವಸ್ತುಗಳ ದರ ಏರಿಕೆಯಿಂದ ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ಪ್ರಯಾಣದರ ಹೆಚ್ಚಳದ ಬಿಸಿ ತಟ್ಟಲಿದೆ. ಬಿಎಂಟಿಸಿ ರೀತಿಯಲ್ಲಿ ಬೇರೆ ಸಾರಿಗೆ ಸಂಸ್ಥೆಗಳು ಕೂಡ ಡೀಸೆಲ್ ಬೆಲೆ ಭಾರೀ ಏರಿಕೆ ಕಾರಣದಿಂದ ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಆದರೆ, ಪ್ರಯಾಣದರ ಏರಿಕೆ ಅನಿವಾರ್ಯವಾಗಿದ್ದರೂ, ಜನಸಾಮಾನ್ಯರಿಂದ ತೀವ್ರ ವಿರೋಧ ವ್ಯಕ್ತವಾಗುವ ಕಾರಣಕ್ಕೆ ತಕ್ಷಣವೇ ಟಿಕೆಟ್ ದರ ಹೆಚ್ಚಳ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಇದೇ ವೇಳೆ ನರೇಂದ್ರ ಮೋದೊ ಸರಕಾರ ತೈಲ ಬೆಲೆಗಳ ನಿಯಂತ್ರಣವನ್ನು ಸಂಪರ‍್ಣವಾಗಿ ಕೈನಿಟ್ಟಿರುವ ಪರಿಣಾಮ ಈಗ ದಿನನಿತ್ಯವೂ ದರ ಏರಿಕೆ ಆಗುತ್ತಿದೆ. ಪಂಚರಾಜ್ಯಗಳ ಚುನಾವಣೆ ಮುಗಿದ ಮೇಲೆ ಕೊನೆಪಕ್ಷ ೧೫ಕ್ಕೂ ಹೆಚ್ಚು ಸಲ ತೈಲ ಬೆಲೆ ಪರಿಷ್ಕರಣೆ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ದಿನನಿತ್ಯದ ತೈಲಬೆಲೆಯಂತೆ ದಿನದಿನವೂ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಗಳು ಆಲೋಚಿಸುತ್ತಿರುವ ಅಂಶವೂ ಬೆಳಕಿಗೆ ಬಂದಿದೆ.
ತಜ್ಞರು ಈ ನಿಟ್ಟಿನಲ್ಲಿ ಸಲಹೆ ನೀಡಿದ್ದಾರೆಂದು ಹೇಳಲಾಗಿದ್ದು, ತೈಲ ಬೆಲೆ ಏರಿಕೆಗೆ ತಕ್ಕಂತೆ ಬಸ್ ಪ್ರಯಾಣ ದರ ಏರಿಕೆ ಮಾಡದಿದ್ದರೆ ಸಾರಿಗೆ ಸಂಸ್ಥೆಗಳು ತೀವ್ರ ನಷ್ಟಕ್ಕೆ ಗುರಿಯಾಗಿ ನಾಶವಾಗುತ್ತವೆ ಎಂಬ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.
ಆದರೆ, ಈ ಸುದ್ದಿಯನ್ನು ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಅಲ್ಲಗಳೆದಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಸ್ಪಷ್ಟನೆ ಕೊಟ್ಟ ಅವರು; ಬಿಎಂಟಿಸಿ, ಕೆಎಸ್ಆರ್‌ಟಿಸಿ ಸೇರಿ ನಾಲ್ಕು ನಿಗಮಗಳಿದ್ದು, ಎಲ್ಲಿಯೂ ದರ ಏರಿಕೆ ಇಲ್ಲ ಎಂದರು. ದರ ಏರಿಕೆ ಮಾಡಲೇಬೇಕು ಎಂದು ಅಧಿಕಾರಿಗಳು ಪ್ರಸ್ತಾವನೆ ಕೊಟ್ಟಿದ್ದಾರೆ ಅಂತಲೂ ತಿಳಿಸಿದರು. ಆದರೆ, ಅಧಿಕಾರಿಗಳು ಮಾತ್ರ ಮುಗುಮ್ಮಾಗಿದ್ದು, ಪರಿಸ್ಥಿತಿ ನೋಡಿಕೊಂಡು ಟಿಕೆಟ್ ಏರಿಕೆ ಆಗಲಿದೆ ಎಂದು ಗೊತ್ತಾಗಿದೆ.