DG Pawan Kalyan Devikunte
ಬಾಗೇಪಲ್ಲಿ: ಅನುದಾನ ರಹಿತ ಕಾಲೇಜು ಉಪನ್ಯಾಸಕರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪಟ್ಟಣದ ವಿಕಾಸ್ ಪದವಿ ಪೂರ್ವ ಕಾಲೇಜು ಸಂಸ್ಥಾಪಕ ಹಾಗೂ ಪ್ರಾಂಶುಪಾಲ ಶಿವಣ್ಣ ಸರಕಾರಕ್ಕೆ ಮನವಿ ಮಾಡಿದ್ದಾರೆ.
ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ 50ಕ್ಕೂ ಹೆಚ್ಚು ದಿನಸಿ ಕಿಟ್ʼಗಳನ್ನು ವಿತರಣೆ ಮಾಡಿದ ನಂತರ ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಎಲ್ಲಾ ವರ್ಗದ ಜನರ ಜೀವನ ದುಸ್ತರವಾಗುವಂತೆ ಮಾಡಿಬಿಟ್ಟಿದೆ. ಉಪನ್ಯಾಸಕರ ಬದಕು ಕಷ್ಟಕರವಾಗಿದೆ. ಈ ಪರಿಸ್ಥಿತಿಯಲ್ಲಿ ಸುಮಾರು 6 ತಿಂಗಳಿನಿಂದ ಶಾಲಾ ಕಾಲೇಜುಗಳನ್ನು ಮುಚ್ಚಲು ಸರಕಾರ ಆದೇಶಿಸಿದ್ದು, ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವೇತನವನ್ನೇ ನಂಬಿ ಜೀವನ ನಡೆಸುತ್ತಿದ್ದ ಉಪನ್ಯಾಸಕರ ಬದಕು ತುಂಬಾ ದುಸ್ತರವಾಗಿದೆ. ಆದ್ದರಿಂದ ಅನುದಾನ ರಹಿತ ಉಪನ್ಯಾಸಕರಿಗೆ ಸರಕಾರ ನೆರವಿಗೆ ಬಂದು 10,000 ರೂ. ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲೂಕು ತಹಸೀಲ್ದಾರ್ ಡಿ.ಎ.ದಿವಾಕರ್, ಸಬ್ ಇನಸ್ಪೆಕ್ಟರ್ ಗೋಪಾಲ ರೆಡ್ಡಿ, ಬೈಯಪ್ಪ ರೆಡ್ಡಿ, ಟಿ.ಎನ್.ರವಿ, ಸಕೇಶ್, ಬಾಗೇಪಲ್ಲಿ ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಗಿರೀಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ನಾರಾಯಣ ಸ್ವಾಮಿ ಹಾಗೂ ವಿಕಾಸ್ ಕಾಲೇಜು ಸಿಬ್ಬಂದಿ ಹಾಜರಿದ್ದರು.