ಜೂನ್ ಬಂದರೂ ಆಗದ ಅನ್ಲಾಕ್ / ಗ್ರಾಮೀಣ ಪ್ರದೇಶಗಳಲ್ಲಿ ಬ್ರೇಕ್ ಆಗದ ವೈರಸ್ ಚೈನ್
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಜಾರಿಯಾಗಿದ್ದ ಲಾಕ್ಡೌನ್ ಅನುಕೂಲವಾಗಿದ್ದು, ಮತ್ತಷ್ಟು ನಿಯಂತ್ರಿಸುವ ದೃಷ್ಟಿಯಿಂದ ಜೂನ್ 10ರ ಬೆಳಗ್ಗೆ 6 ಗಂಟೆಯಿಂದ ಜೂನ್ 14ರ ಬೆಳಗ್ಗೆ 6 ಗಂಟೆಯವರೆಗೆ ಪುನಾ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಲಾಕ್ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ.
ಈ ಮೂಲಕ ಸತತ ಮೂರನೇ ಅವಧಿಗೆ ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವರಿಸಲಾಗಿದೆ.
ಜಿಲ್ಲಾಧಿಕಾರಿ ಆರ್.ಲತಾ ಅವರು ಈ ವಿಷಯ ತಿಳಿಸಿದ್ದು, ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸಲಾಗಿದೆ. ಆದಾಗ್ಯೂ ಸಹ ಜಿಲ್ಲೆಗೆ ಅನ್ವಯವಾಗುವಂತೆ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ಮತ್ತಷ್ಟು ತಡೆಗಟ್ಟಲು ಈ ಹಿಂದೆ ಸರಕಾರವು ಹೊರಡಿಸಿರುವ ಆದೇಶಕ್ಕೆ ಪೂರಕವಾಗಿ ಇನ್ನೂ ಹೆಚ್ಚುವರಿ ಕ್ರಮ ಕೈಗೊಂಡು ಕೆಲ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ನಿರ್ದೇಶನವನ್ನು ಅನುಸರಿಸಿ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಲಾಕ್ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಲಾಕ್ಡೌನ್ ಕ್ರಮಗಳು
- ಲಾಕ್ಡೌನ್ ಅವಧಿಯಲ್ಲಿ ಮದುವೆಗಳಿಗೆ ಅವಕಾಶ ನೀಡಿದರೆ 20 ಜನರಿಗೆ ಮಾತ್ರ ಅವಕಾಶ ನೀಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಮಾಡುವುದು ಅಗತ್ಯ. ಆ ಬಗೆ ಸ್ಥಳಕ್ಕೆ ಭೇಟಿ ನೀಡಿ ವಿಡಿಯೋಗ್ರಾಫಿ ಮಾಡಲಾಗುವುದು.
- ಅಂತಾರಾಜ್ಯ ಮತ್ತು ಅಂತರ್ ಜಿಲ್ಲೆಯಲ್ಲಿ ಸೂಚಿಸಿರುವ ವ್ಯಕ್ತಿಗತ ವಾಹನ ಮತ್ತು ಸರಕು ಸಾಗಾಣಿಕೆ ವಾಹನಗಳ (ತುಂಬಿದ ಮತ್ತು ಖಾಲಿ ವಾಹನಗಳು) ಸಂಚಾರಕ್ಕೆ ಅವಕಾಶವಿಲ್ಲ. ವೈದ್ಯಕೀಯ ಸೇವೆ ಹಾಗೂ ಅತೀ ತುರ್ತು ಸೇವೆಗಳನ್ನು ಹಾಗೂ ಸರಕಾರಿ ನೌಕರರನ್ನು ಕರೆದೊಯ್ಯುವ ವಾಹನಗಳು ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಮಾತ್ರ ಹೊರತುಪಡಿಸಿ ಇತರೆ ಎಲ್ಲಾ ರೀತಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ವಾಣಿಜ್ಯ ಚಟುವಟಿಕೆಗಳಾದ ಹಣ್ಣು, ದಿನಸಿ, ತರಕಾರಿ, ತಳ್ಳುವ ಗಾಡಿಗಳು, ಹೋಟೆಲ್ʼಗಳು, ವಾಣಿಜ್ಯ ಚಟುವಟಿಕೆ, ವ್ಯಾಪಾರ ನಡೆಸುವುದನ್ನು ನಿಷೇಧಿಸಲಾಗಿದೆ, ಕೇವಲ ಹಾಲು ಸರಬರಾಜು ಮಾಡುವ ನಂದಿನಿ ಕೇಂದ್ರಗಳನ್ನು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಲಾಗಿದೆ.
- ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯ ಹತ್ತಿರ ಇರುವ ಹೋಟೆಲ್ʼಗಳಲ್ಲಿ ಪಾರ್ಸೆಲ್ ಸೇವೆ ಒದಗಿಸಲು ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ಉಳಿದ ಎಲ್ಲಾ ಹೋಟೆಲ್ʼಗಳನ್ನು ಬಂದ್ ಮಾಡಲಾಗುವುದು. ಎಲ್ಲಾ ತರಹದ ವೈದ್ಯಕೀಯ ಸೇವೆಗಳಿಗೆ (ಔಷಧಿ ಅಂಗಡಿಗಳು, ಆ್ಯಂಬುಲೆನ್ಸ್ ಸೇವೆ ಮತ್ತು ಇತ್ಯಾದಿ ತುರ್ತು ವೈದ್ಯಕೀಯ ಸೇವೆ) ವಿನಾಯಿತಿ ನೀಡಲಾಗಿರುತ್ತದೆ.
- ಕೃಷಿ ಚಟುವಟಿಕೆಗಳಿಗೆ ಸಂಬಂಧಿತ ಹಾಗೂ ವೈದ್ಯಕೀಯ ಚಟುವಟಿಕೆಗಳ ಸಂಬಂಧಿತ ಹಾಗೂ Supply chain ಹೊಂದಿರುವ ಕೈಗಾರಿಕೆಗಳ ಕಾರ್ಯ ನಿರ್ವಹಣೆಗೆ ಅನುಮತಿ, ಸಿಬ್ಬಂದಿಯು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೆಲಸ ಮಾಡಬೇಕು.
- ಜಿಲ್ಲೆಯ ಎಲ್ಲಾ ಎಪಿಎಂಸಿ ಮಾರುಕಟ್ಟೆಗಳು ಸರಕಾರದ ಆದೇಶದಲ್ಲಿ ನೀಡಿರುವಂತೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರಿಗೂ ಕೋವಿಡ್ ಮಾರ್ಗಸೂಚಿ ಪ್ರಕಾರ ತೆರೆದಿರುತ್ತವೆ. ಇಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲಿಸುವುದು. ಸ್ಯಾನಿಟೈಸರ್ ಬಳಕೆ ಕಡ್ಡಾಯ.
- ಕೃಷಿ ಪರಿಕರ ಮಾರಾಟ ಮಳಿಗೆಗಳನ್ನು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತರೆಯಬಹುದು.
- ಹೆದ್ದಾರಿಗಳಲ್ಲಿರುವ ಪೆಟ್ರೋಲ್ ಬಂಕ್ಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಬಂಕ್ಗಳನ್ನು ತೆರೆಯುವಂತಿಲ್ಲ.
ಒಂದು ವೇಳೆ ಯಾರಾದರೂ ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ವಿಪತ್ತು ನಿರ್ವಹಣೆ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.