ಗಡಿಭಾಗದ ಹಳ್ಳಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ದಂಧೆ
ಕೋವಿಡ್ ಸಂಕಷ್ಟದ ನಡುವೆ ಸ್ಮಾರ್ಟ್ ಬಿಸ್ನೆಸ್ ಮಾಡೆಲ್ ಕಂಡುಕೊಂಡ ಹಳ್ಳಿಜನ
ಬಾಗೇಪಲ್ಲಿ: ಕೋವಿಡ್ ಲಾಕ್‌ಡೌನ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂದುವರಿದಿದ್ದಾಗ್ಯೂ ಮದ್ಯ ಮಾರಾಟ ಎಗ್ಗಿಲ್ಲದೆ ಮುಂದುವರಿದಿದ್ದು, ಮುಂಗಾರು ಮಳೆಯ ನಡುವೆ ʼಎಣ್ಣೆ ಹೊಳೆʼ ಎಗ್ಗಿಲ್ಲದೆ ಹರಿಯುತ್ತಿದೆ.
ಮುಖ್ಯವಾಗಿ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು, ಚಿಂತಾಮಣಿಯಂಥ ಗಡಿ ತಾಲೂಕುಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಮೀರಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಪೊಲೀಸರು ಮತ್ತು ಅಬಕಾರಿ ದಳ ದಾಳಿ ನಡೆಸುತ್ತಿದ್ದಾಗ್ಯೂ ಮಾರಾಟ ದಂಧೆಗೆ ಕಡಿವಾಣ ಬಿದ್ದಿಲ್ಲ.
ಈಗಾಗಲೇ ಇರುವ ಲಾಕ್‌ಡೌನ್ ಮುಂದುವರಿದ ಭಾಗವಾಗಿ ನಾಳೆಯಿಂದ (ಜೂನ್ 9) ಪುನಾ ಒಂದು ವಾರ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರ ಬೆನ್ನಲ್ಲೇ ಅಕ್ರಮ ಮದ್ಯ ಮಾರಾಟಗಾರರು ಸಿಕ್ಕಿಬೀಳುತ್ತಿದ್ದಾರೆ. ಅದರೂ, ಗಡಿಭಾಗದುದ್ದಕ್ಕೂ ಮದ್ಯ ಮಾರಾಟ ಅಡ್ಡೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ.
ಸಾಮಾನ್ಯವಾಗಿ ಬಾರ್‌ಗಳಲ್ಲಿ, ವೈನ್ ಶಾಪ್‌ಗಳಲ್ಲಿ ದೊರೆಯುತ್ತಿದ್ದ ಮದ್ಯವೂ ಈಗ ಬಾಗೇಪಲ್ಲಿ ತಾಲೂಕಿನ ಗಡಿಭಾಗದಲ್ಲಿನ ಕಿರಾಣಿ ಮತ್ತು ದಿನಸಿ ಅಂಗಡಿಗಳಲ್ಲೂ ಭರ್ಜರಿಯಾಗಿ ಲಭ್ಯವಾಗುತ್ತಿದೆ!! ಇದು ಲಾಕ್‌ಡೌನ್‌ನ ಅಡ್ಡ ಪರಿಣಾಮ.
ಅಡುಗೆ ಎಣ್ಣೆ ಜತೆಗೆ ಈ ಎಣ್ಣೆಯೂ ಸಿಗುತ್ತಿದೆ!
ತಾಲೂಕಿನ ವಿವಿಧ ಗ್ರಾಮಗಳ ಕಿರಾಣಿ ಅಂಗಡಿಗಳ ಮೇಲೆ ಬಾಗೇಪಲ್ಲಿ ತಾಲೂಕು ತಹಸೀಲ್ದಾರ್ ಡಿ.ಎ.ದಿವಾಕರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ʼಅಡುಗೆ ಎಣ್ಣೆʼ ಮಾರುವ ಅಂಗಡಿಗಳಲ್ಲೂ ʼಮತ್ತೇರಿಸುವ ಎಣ್ಣೆʼ ಮಾರುತ್ತಿರುವುದು ಬಯಲಿಗೆ ಬಂದಿದೆ.
ಗೂಳೂರು ಹೋಬಳಿಯ ಜಿಲಾಜಿರ್ಲ, ಪಾತಪಾಳ್ಯ ಹೋಬಳಿಐ ಮುಗಿರೆಡ್ಡಿಪಲ್ಲಿ ಗ್ರಾಮಗಳಲ್ಲಿ ತಹಶಿಲ್ದಾರ್ ದಾಳಿ ನಡೆಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಅಕ್ರಮವಾಗಿ ವಿವಿಧ ಅಂಗಡಿಗಳಲ್ಲಿ ಮಾರಾಟವಾಗುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಅವರು ಸೀಜ್ ಮಾಡಿದ್ದಾರೆ.
“ಲಾಕ್‌ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧವಿದೆ. ಆದರೆ, ಕಿರಾಣಿ ಅಂಗಡಿಗಳ ಮಾಲೀಕರು ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳಲು ಅಕ್ರಮವಾಗಿ ತಮ್ಮ ಅಂಗಡಿಗಳಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿರುವುದು ಬಯಲಿಗೆ ಬಂದಿದೆ. ಇಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು”
– ಡಿ.ಎ.ದಿವಾಕರ್ / ತಹಸೀಲ್ದಾರ್
ನ್ಯಾಷನಲ್ ಕಾಲೇಜ್ ಸಮೀಪದಲ್ಲೇ ಮಾರಾಟ
ಕಳೆದ ಶನಿವಾರ ಸಂಜೆ ಕಾರ್ಯಾಚರಣೆ ನಡೆಸಿದ್ದ ಅಬಕಾರಿ ದಳ 80,000 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದರು. ಅಬಕಾರಿ ಇಲಾಖೆ ನಿರೀಕ್ಷಕ ಅಂಜಿನಾಮೂರ್ತಿ ನೇತೃತ್ವದಲ್ಲಿ ಈ ಆ ದಾಳಿ ನಡೆದಿತ್ತು.
ಬಾಗೇಪಲ್ಲಿ ತಾಲೂಕಿನ ಗಡಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಆಧರಿಸಿ ಹಾಗೂ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಾಗಿತ್ತು.
ವಿಪರ್ಯಾಸವೆಂದರೆ, ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜು ಸಮೀಪದಲ್ಲಿರುವ ಕೊಂಡಂವಾರಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನ ಮನೆಯಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಇಷ್ಟೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು.
ಅಲ್ಲದೇ, ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿರುವ ಕೊತ್ತಕೋಟೆ, ಕೊಲಿಂಪಲ್ಲಿ, ಪೆಸಲಪರ್ತಿ, ಮಾಮಿಡಿಕಾಯಲಪಲ್ಲಿ, ಮುಮ್ಮಡಿವಾರಪಲ್ಲಿ, ಮದಕವಾರಪಲ್ಲಿ ಮುಂತಾದ ಕಡೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಜತೆಗೆ, ಆಂಧ್ರ ಪ್ರದೇಶದ ಗೋರಂಟ್ಲ, ಪುಟ್ಟಪರ್ತಿ, ಪೆನುಕೊಂಡ ಮುಂತಾದ ಪಟ್ಟಣಗಳಿಂದ ಮದ್ಯವ್ಯಸನಿಗಳು ಹಗಲು ರಾತ್ರಿಯನ್ನದೆ ಕರ್ನಾಟಕದ ಗಡಿ ಗ್ರಾಮಗಳಿಗೆ ಎಡತಾಕುತ್ತಿದ್ದಾರೆ. ದುಪ್ಪಟ್ಟು ಬೆಲೆ ತೆತ್ತು ಮದ್ಯ ಖರೀದಿ ಮಾಡುತ್ತಿದ್ದಾರೆ. ಇನ್ನೊಂದು ರೀತಿ ಗಡಿ ಜನರಿಗೆ ಇಂಥ ಅಕ್ರಮ ಮದ್ಯ ಮಾರಾಟ ಲಾಭದಾಯಕ ಕೆಲಸವಾಗಿ ಪರಿಣಮಿಸಿದೆ.
ಕಾನೂನು ಸುವ್ಯವಸ್ಥೆ ಹದಗೆಡಲಿದೆ
ನೆರೆರಾಜ್ಯದ ಮದ್ಯವ್ಯಸನಿಗಳು ರಾಜ್ಯದ ಗಡಿ ಗ್ರಾಮಗಳಿಗೆ ಎಣ್ಣೆಗಾಗಿ ಎಡತಾಕುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯೂ ತಲೆದೋರುತ್ತಿರವ ಅಂಶವೂ ಬೆಳಕಿಗೆ ಬಂದಿದೆ. ಮುಖ್ಯವಾಗಿ ಅಂಥ ಗ್ರಾಮಗಳಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ಮಕ್ಕಳು ಆತಂಕದಿಂದ ದಿನದೂಡುತ್ತಿದ್ದಾರೆ.