ಮೈಸೂರು ಭೂ ಅಕ್ರಮಗಳ ತನಿಖೆಗೆ ರೋಹಿಣಿ ಸಿಂಧೂರಿಯನ್ನೇ ವಿಶೇಷಾಧಿಕಾರಿ ಮಾಡಲು ಆಗ್ರಹ
ಮೈಸೂರು: ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರಿನಲ್ಲಿ ನಡೆದಿರುವ ಭೂ ಅಕ್ರಮಗಳ ಬಗ್ಗೆ ಮಾಡಿರುವ ಆದೇಶವನ್ನು ನಿಗದಿತ ಸಮಯದಲ್ಲಿ ಜಾರಿ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಅವರು ಮೈಸೂರು ನಗರದ ಆಸುಪಾಸು ಹೊಂದಿಕೊಂಡಂತೆ ನಡೆದಿರುವ ಭೂ ಅಕ್ರಮಗಳನ್ನು ಕಡತಗಳ ಸಮೇತ ಖುದ್ದು ಪರಿಶೀಲಿಸಿ ನಾಲ್ಕು ಮಹತ್ತ್ವದ ಆದೇಶಗಳನ್ನು ಮಾಡಿರುತ್ತಾರೆ. ಮೈಸೂರಿನಲ್ಲಿ ಭೂ ಅತಿಕ್ರಮ, ಭೂಗಳ್ಳ ದಂಧೆ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ಆರ್ ಟಿ ಐ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ದಾಖಲೆ ಪತ್ರಗಳ ಸಮೇತ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಇಂತಹ ಪ್ರಮುಖ ದೂರುಗಳನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಡತಗಳನ್ನು ತೀವ್ರವಾಗಿ ಪರಿಶೀಲಿಸಿ ಭೂಗಳ್ಳರಿಂದ ಆಗಿರುವ ಭೂ ಅಕ್ರಮಗಳ ಬಗ್ಗೆ ನಾಲ್ಕು ವಿವಿಧ ಗಂಭೀರ ಆದೇಶಗಳನ್ನು ಮಾಡಿರುತ್ತಾರೆ ಮತ್ತು ಹಗರಣಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಆದೇಶಗಳನ್ನು ಕೂಡಲೇ ಜಾರಿ ಮಾಡಿ ಉನ್ನತ ತನಿಖೆ ಮಾಡಿಸಬೇಕು ಎಂದು ಒತ್ತಾಯ ಮಾಡಿದರು.
ಮೈಸೂರು ನಗರದ ಅಭಿವೃದ್ಧಿಯ ಬಗ್ಗೆ ಮತ್ತು ವಸತಿಹೀನರ ಸೂರಿನ ಬಗ್ಗೆ ಕಳಕಳಿ ಹೊಂದಿದ ಓರ್ವ ಪ್ರಜೆಯಾಗಿ ಜಿಲ್ಲಾಧಿಕಾರಿಗಳು ಭೂ ಅಕ್ರಮದ ಬಗ್ಗೆ ಮಾಡಿರುವ ಆದೇಶಗಳನ್ನು ತುರ್ತು ನಿಗದಿತ ಸಮಯದೊಳಗೆ ಕ್ರಮ ವಹಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇನೆ ಎಂದವರು ತಿಳಿಸಿದರು.
ಅಲ್ಲದೆ, ಈ ಭೂ ಅಕ್ರಮಗಳನ್ನು ತನಿಖೆ ನಡೆಸಲು ರೋಹಿಣಿ ಅವರನ್ನೇ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಬೇಕು ಎಂದು ಕೂಡ ವಿಶ್ವನಾಥ್ ಒತ್ತಾಯ ಮಾಡಿದ್ದಾರೆ.
ಆಡಳಿತ ಹೇಗ್ರಿ ಮಾಡೋದು ಇಲ್ಲಿ ಕುಳಿತುಕೊಂಡು ನಮ್ಮ ನಮ್ಮ ಸ್ವಾರ್ಥಕ್ಕೆ ಗುದ್ದಾಟ ಮಾಡುತ್ತ ನಿಂತುಕೊಂಡರೆ ಹೇಗೆ? ಇದಲ್ಲ ಎಂದು ಅವರು ಪ್ರಶ್ನೆ ಮಾಡಿದರು.
Lead Photo by Nandan Mysore