ರಾಜ್ಯ ರಾಜಕಾರಣಕ್ಕೆ ಶಿವಕುಮಾರ ಉದಾಸಿ ಕರೆತರುವ ಬಗ್ಗೆ ಸಿಎಂ ಉತ್ಸುಕತೆ
ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಹಾಗೂ ಕೋವಿಡ್ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.
ಕೆಲ ಹಿರಿಯರಿಗೆ, ಕೆಲ ಅದಕ್ಷರಿಗೆ ಕೊಕ್ ಕೊಡಲು ನಿರ್ಧರಿಸಿರುವ ಮೋದಿ, ಒಂದಿಷ್ಟು ಹೊಸಬರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಸಂಪುಟ ಸರ್ಜರಿಗೆ ಅವರು ಯಾವಾಗ ಡೈಂ ಫಿಕ್ಸ್ ಮಾಡಿದ್ದಾರೋ ಗೊತ್ತಿಲ್ಲ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿಪ್ರಕಾರ, ರಾಜ್ಯದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮತ್ತೂ ಹಾವೇರಿ ಸಂಸದ, ದಿವಂಗತ ಇತ್ತೀಚೆಗೆ ನಿಧನರಾದ ಶಾಸಕ ಸಿ.ಎಂ.ಉದಾಸಿ ಅವರ ಪುತ್ರ ಶಿವಕುಮಾರ ಉದಾಸಿ ಸಂಪುಟ ಸೇರಲಿದ್ದಾರೆಂಬ ಸುದ್ದಿ ಇದೆ. ಆದರೆ, ಶಿವಕುಮಾರ ಉದಾಸಿ ಅವರನ್ನು ರಾಜ್ಯ ರಾಜಕಾರಣಕ್ಕೆ ತರಲು ಸಿಎಂ ಯಡಿಯೂರಪ್ಪ ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಿವಕುಮಾರ್ ಕೇಂದ್ರ ಸಂಪುಟ ಸೇರುವ ಬಗ್ಗೆ ತುಸು ಅನುಮಾನವಿದೆ ಎನ್ನುತ್ತದೆ ಬಿಜೆಪಿ ಮೂಲವೊಂದು.
ಕೋವಿಡ್ ಸಂಕಷ್ಟದಲ್ಲಿ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸದ ಸಚಿವರ ತಲೆದಂಡ ಗ್ಯಾರಂಟಿ ಎನ್ನಲಾಗಿದೆ. ಈ ಬಗ್ಗೆ ಈಗಾಗಲೇ ಪ್ರಧಾನಿ ಅವರು ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂಬ ಸುದ್ದಿ ಇದೆ.
ಇನ್ನೊಂದೆಡೆ, ಕೇಂದ್ರ ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ಡಿ.ವಿ.ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಷಿ ಅವರ ಸ್ಥಾನಕ್ಕೆ ಧಕ್ಕೆ ಇಲ್ಲ ಎಂದು ತಿಳಿದುಬಂದಿದೆ. ಇಬ್ಬರೂ ಸಚಿವರು ಬಹಳ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೋವಿಡ್ ಸಂಕಷ್ಟದಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ.