- ಇಲಸ್ಟ್ರೇಷನ್: ಸಂತೋಷ್ ಸಸಿಹಿತ್ಲು
ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ ಎಂದು ಒಪ್ಪಿಕೊಂಡ ಮುಖ್ಯಮಂತ್ರಿ
ಹಾಸನ: ರಾಜ್ಯಕ್ಕೆ ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ. ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಹಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಎಂದಿದ್ದಾರೆ. ಕೋವಿಡ್ ನಿಯಂತ್ರಣ ಮತ್ತು ಅಭಿವೃದ್ಧಿಯತ್ತ ಮಾತ್ರ ನನ್ನ ಆದ್ಯತೆ. ಎಲ್ಲರ ಸಹಕಾರದಿಂದ ಅಭಿವೃದ್ಧಿಯತ್ತ ಗಮನ ಕೊಡುವೆ ಎಂದರು.
ರಾಜ್ಯಾದ್ಯಂತ ಪ್ರವಾಸ ಮಾಡಿ ಒಳ್ಳೇ ಕೆಲಸ ಮಾಡುವ ಪ್ರಯತ್ನ ಮಾಡುವೆ. ಅರುಣ್ ಸಿಂಗ್ ಅವರ ಹೇಳಿಕೆಯಿಂದ ನನಗೆ ಬಲ ಬಂದಿದೆ. ಎರಡು ವರ್ಷ ಯಾವುದೇ ಬದಲಾವಣೆ ಇಲ್ಲ, ನನ್ನ ನೇತೃತ್ವದಲ್ಲಿ ಒಳ್ಳೆಯ ಕೆಲಸಗಳಾಗುತ್ತವೆ. ಇದರಿಂದ ನನ್ನ ಜವಾಬ್ದಾರಿ ಜಾಸ್ತಿ ಆಗಿದೆ ಎಂದ ಅವರು, ನನ್ನ ಮೇಲೆ ಪ್ರಧಾನಿ, ಅಮಿತ್ ಶಾ ಇಟ್ಟುಕೊಂಡಿರುವ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವೆ. ಪ್ರಾಮಾಣಿಕವಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತೇನೆ ಎಂದು ಎಲ್ಲ ಗೊಂದಲಗಳಿಗೆ ತೆರೆ ಎಳೆದರು.
ಹಣಕಾಸು ಸ್ಥಿತಿ ಹದಗೆಟ್ಟಿದೆ
ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ. ಆದರೂ ಬಡವರ ಅನುಕೂಲಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಹಾಸನದ ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಕೋವಿಡ್ ಪರಿಸ್ಥಿತಿ ಸಭೆ ನಡೆಸುತ್ತೇವೆ. ಇಂದು ಹಾಸನಕ್ಕೆ ಬಂದಿದ್ದೇನೆ. ಹಾಸನ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಿದೆ ಎಂದರು ಕೋವಿಡ್‌ನಿಂದ ಜನ ಸಾವಿಗೀಡಾಗುತ್ತಿರುವುದಕ್ಕೆ ಸರ್ಕಾರವೇ ಕಾರಣ ಎಂಬ ರೇವಣ್ಣ ಹೇಳಿಕೆಗೆ ಕಿಡಿಕಾರಿದ ಸಿಎಂ, ಜವಾಬ್ದಾರಿಯುತ ಶಾಸಕರಾಗಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಅವರೂ ಕೂಡ ಶಾಸಕರಾಗಿ ಕೆಲಸ ನಿರ್ವಹಿಸಬೇಕಿದೆ. ಅವರ ಕೆಲಸ ನಿರ್ವಹಿಸದೆ ಬೇರೆಯವರ ಬಗ್ಗೆ ಬೊಟ್ಟು ತೋರಿಸಬಾರದು ಎಂದರು.
ಕೊರೊನಾ ಮೂರನೇ ಅಲೆ ಬಗ್ಗೆ ಯಾವುದೇ ಅನಾಹುತ ಆಗದಂತೆ ಸಿದ್ಧತೆ ಮಾಡುತ್ತಿದ್ದೇವೆ. ಕೋವಿಡ್ ಬಗ್ಗೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ವಿರೋಧ ಪಕ್ಷದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸುಳ್ಳು ಲೆಕ್ಕ ಕೊಡುತ್ತೇವೆ ಅಂದಿದ್ದು ಯಾರು? ಅದರಿಂದ ನಮಗೇನು ಲಾಭ ಎಂದು ಪ್ರಶ್ನಿಸಿದರು.
ಇದಾದ ಮೇಲೆ ಜಿಲ್ಲಾ ಭವನಕ್ಕೆ ತೆರಳಿದ ಸಿಎಂ, ಅಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದರು. ಆರೋಗ್ಯ ಸಚಿವ ಕೆ.ಸುಧಾಕರ್. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಎಚ್.ಡಿ.ರೇವಣ್ಣ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಸಿಎಂ ಖಡಕ್ ಸೂಚನೆಗಳನ್ನು ನೀಡಿದರು.
ಪಾಸಿಟಿವಿಟಿ ದರ ಕಡಿಮೆ ಆಗಬೇಕು. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಿ. ಎಲ್ಲ ಕಡೆ ಟ್ರಾಯಾಜಿಂಗ್ ಮಾಡಿ. ಹೊರಗಿನಿಂದ ಬಂದವರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ. ಸೋಂಕು ಪ್ರಮಾಣ ಇನ್ನು ಹೆಚ್ಚಲು ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.
ಸೋಂಕಿನಿಂದ ರಾಜ್ಯಕ್ಕೆ ಕಷ್ಟಕಾಲ ಬಂದಿದೆ. ಇದನ್ನು ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು. ರಾಜಕೀಯ ಬೆರೆಸಬಾರದು ಎಂದು ಸಿಎಂ ಕಿವಿಮಾತು ಹೇಳಿದರು.