ದಲಿತ-ಬಂಡಾಯ ಸಾಹಿತ್ಯ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಸಿದ್ದಲಿಂಗಯ್ಯ ಅವರು, ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರು. ಎರಡು ಅವಧಿಗೆ ಅವರು ವಿಧಾನಪರಿಷತ್ ಸದಸ್ಯರಾಗಿದ್ದರು.
ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ದಲಿತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲ.
ಕಳೆದ ಒಂದು ತಿಂಗಳಿನಿಂದ ಕೋವಿಡ್ ಸೋಂಕಿನ ವಿರುದ್ಧ ಹೋರಾಟ ನಡೆಸಿದ ಅವರು ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ವಿಧಾನ ಪರಿಷತ್ ಮಾಜಿ ಸದಸ್ಯರೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆಗಿದ್ದ ಅವರು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾದರು.
ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಸಿದ್ದಲಿಂಗಯ್ಯ ಅವರು, ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರು. ಎರಡು ಅವಧಿಗೆ ಅವರು ವಿಧಾನಪರಿಷತ್ ಸದಸ್ಯರಾಗಿದ್ದರು.
ಆಧುನಿಕ ಹಾಗೂ ವರ್ತಮಾನ ಸಾಹಿತ್ಯ ಮತ್ತು ಕಾವ್ಯದಲ್ಲಿ ಸಮಾನತೆಯನ್ನು ಸದೃಢವಾಗಿ ಪ್ರತಿಪಾದಿಸಿದ ಅವರು, ಆ ಸಾಮಾಜಿಕ ಸಮಾನತೆಯ ಆಶಯದೊಂದಿಗೇ ನಿರ್ಗಮಿಸಿದ್ದಾರೆ.
ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ವಿಫುಲವಾಗಿ ಬರೆದಿದ್ದರು ಸಿದ್ದಲಿಂಗಯ್ಯ. ಅಲ್ಲದೆ; ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್, ವಸುದೇವ ಭೂಪಾಲ, ರಾಮ ಮನೋಹರ ಲೋಹಿಯಾ ಮೊದಲಾದ ಮಹಾನ್ ವ್ಯಕ್ತಿಗಳ ವಿಚಾರಗಳಿಂದ ಅವರು ಪ್ರಭಾವಿತರಾಗಿದ್ದರು.
ʼಹೊಲೆ ಮಾದಿಗರ ಹಾಡುʼ ಸಿದ್ದಲಿಂಗಯ್ಯ ಅವರ ಬೆಂಕಯಂಥ ಕಾವ್ಯ ಸಂಕಲನ. ಅದರಲ್ಲಿನ, ʼಇಕ್ಕರ್ಲಾ, ಒದಲ್ರಲಾ..” ಪದ್ಯವೂ ಸಮಾನತೆ ದನಿಯನ್ನು ಎತ್ತರಿಸಿದ ಧ್ಯೇಯಗೀತೆಯಾಗಿ ಬದಲಾಗಿತ್ತು. ಅದಾದ ಮೇಲೆ, ʼಮೆರವಣಿಗೆʼ, ʼಸಾವಿರಾರು ನದಿಗಳುʼ, ʼಕಪ್ಪು ಕಾಡಿನ ಹಾಡುʼ, ʼಅಲ್ಲೆಕುಂತವರೆ ನನ್ನ ಜನಗಳು ಮತ್ತು ಇತರ ಕವಿತೆಗಳುʼ ಸೇರಿಂತೆ ಇನ್ನಲವು ಕವನಗುಚ್ಛಗಳು ಅವರ ಸಮಾನತೆ ಆಶಯವನ್ನು ಅನುರಣಿಸುತ್ತಲೇ ಇವೆ.
ಅವರ ಆತ್ಮಕಥೆ ʼಊರು ಕೃರಿʼ ಎರಡು ಭಾಗಗಳಲ್ಲಿ ಹೊರಬಂದಿದೆ. ಕನ್ನಡದ ಆತ್ಯಂತ ಪ್ರಾಮಾಣಿಕ ಆತ್ಮಕಥೆಗಳಲ್ಲಿ ಇದು ಒಂದು ಎಂದು ವಿಮರ್ಶಕರು ಬರೆದಿದ್ದಾರೆ. ಇನ್ನೂ, ನಾಟಕ, ಲೇಳನ, ಗದ್ಯ ಅವರಿಂದ ಮೂಡಿಬಂದಿದೆ. ವಿಧಾನ ಪರಿಷತ್ತಿನಲ್ಲಿನ ತಮ್ಮ ಅನುಭವದ ಬಗ್ಗೆ ಬರೆದ ʼಸದನದಲ್ಲಿ ಸಿದ್ದಲಿಂಗಯ್ಯʼ ಕೂಡು ಎರಡು ಭಾಗಗಳಲ್ಲಿ ರಚನೆಯಾಗಿದ್ದು, ಹೊಸ ತಲೆಮಾರಿನ ರಾಜಕಾರಣಿಗಳಿಗೆ ಅತ್ಯುತ್ತಮ ಮಾರ್ಗದರ್ಶಿಯಾಗಿದೆ.
ಪಂಪ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಗೌರವ, ನೃಪತುಂಗ ಪ್ರಶಸ್ತಿ ಸೇರಿದಂತೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಕವಿ ಡಾ.ಸಿದ್ದಲಿಂಗಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94, 1995-2001 ರವರೆಗೆ ಎರಡುಬಾರಿ ನಾಮಕರಣಗೊಂಡಿರುವುದರ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ 2006-08 ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ʼಬಾ ನಲ್ಲೆ ಮಧುಚಂದ್ರಕೆʼ ಚಿತ್ರದ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ..’ ಗೀತೆಯನ್ನು ಬರೆದವರು ಸಿದ್ದಲಿಂಗಯ್ಯ ಅವರು. ಕನ್ನಡ ಸಿನಿಮಾ ಜಗತ್ತಿನ ಎವರ್‌ಗ್ರೀನ್ ಹಿಟ್ ಹಾಡದು. ಅಲ್ಲದೆ, ಪುಟ್ಟಣ್ಣ ಕಣಗಾಲ್ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ʼಗೆಳತಿ ಓ ಗೆಳತಿ..ʼ ಗೀತೆಯನ್ನು ಬರೆದವರೂ ಅವರೇ.
ಸಿಎಂ ಕಂಬನಿ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿದ್ದಲಿಂಗಯ್ಯ ಅವರಿಗಾಗಿ ಕಂಬಿನಿ ಮಿಡಿದ್ದಾರೆ. “ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ. ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು. ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದ ಅವರ ನಿಧನದಿಂದ, ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ” ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ.
ಕನ್ನಡ ಸಾರಸ್ವತ ಲೋಕಕ್ಕಾದ ದೊಡ್ಡ ನಷ್ಟ: ಡಿಸಿಎಂ
ರಾಜ್ಯದಲ್ಲಿ ದಲಿತ ಚಳವಳಿಯ ಆದ್ವರ್ಯು ಹಾಗೂ ದಲಿತ ಸಾಹಿತ್ಯದ ಮೇರು ಆಗಿದ್ದ ಕವಿ ಸಿದ್ದಲಿಂಗಯ್ಯ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕಾದ ಬಹುದೊಡ್ಡ ನಷ್ಟ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಶೋಕ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗಯ್ಯ ಅವರು ಕನ್ನಡದ ಅಗ್ರ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರು. ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಅವರು ರಚಿಸಿದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಆಧುನಿಕ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಹೊಂದಿವೆ ಎಂದು ಡಿಸಿಎಂ ಗುಣಗಾನ ಮಾಡಿದ್ದಾರೆ.
Comments 1